ಕನ್ನಡದ ನಟರು ಕಾಂಟ್ರವರ್ಸಿ ಎಂದರೆ ದೂರ. ಅವರದ್ದು ಕೇವಲ ದುಡ್ಡಿನ ಲೆಕ್ಕಾಚಾರ. ಹಣ ಬರುತ್ತದೆ ಎಂದರೆ.. ಅಷ್ಟರಮಟ್ಟಿಗೆ ಆಕ್ಟಿವ್ ಆಗಿರುತ್ತಾರೆ. ಉಳಿದಂತೆ ಕನ್ನಡ ವಿಷಯವನ್ನೋ.. ನೀರಿನ ವಿಷಯವನ್ನೋ.. ಅಷ್ಟೇ ಏಕೆ.. ಭಾಷೆಯ ವಿಷಯವನ್ನೇ ಆಗಲಿ.. ಅಭಿಮಾನಿಗಳು ಆಗ್ರಹಿಸಿ, ಆಕ್ರೋಶ ವ್ಯಕ್ತಪಡಿಸಿ.. ಗೋಳಾಡಿದ ಮೇಲೆ.. ತಿಪ್ಪೆ ಸಾರಿಸುವಂತ ಹೇಳಿಕೆ ಬರುತ್ತವೆ. ಧರ್ಮದ ವಿಷಯವಂತೂ ಬಿಡಿ.. ಮಾತನ್ನೇ ಆಡಲ್ಲ. ಹೀಗಿರುವಾಗಲೇ ತೆಲುಗು ನಟ ಹಾಗೂ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ತೋರಿಸಿರುವ ಧೈರ್ಯಕ್ಕೆ ಎಲ್ಲ ಕಡೆ ಶಹಬ್ಬಾಸ್ʻಗಿರಿ ದೊರೆಯುತ್ತಿದೆ. ನಾಳೆ ಧರ್ಮಸ್ಥಳಕ್ಕೆ ಪವನ್ ಕಲ್ಯಾಣ್ ಎಂಟ್ರಿ ಕೊಡ್ತಿದ್ದಾರೆ.
ಧರ್ಮಸ್ಥಳ ಈಗ ಅಂತಾರಾಷ್ಟ್ರೀಯ ವಿವಾದಾತ್ಮಕ ಕೇಂದ್ರ. ಧರ್ಮಸ್ಥಳದ ಮೇಲೆ, ವೀರೇಂದ್ರ ಹೆಗ್ಗಡೆಯವರ ಮೇಲೆ ಹೊರಿಸಿದ್ದ ಬಹುತೇಕ ಆರೋಪಗಳೆಲ್ಲ ಸೃಷ್ಟಿಸಿದ್ದು ಎಂದು ಸಾಬೀತಾಗುತ್ತಿವೆ. ಧರ್ಮಸ್ಥಳದ ಹೆಸರು, ಖ್ಯಾತಿ ಕೆಡಿಸುವ ಸಲುವಾಗಿಯೇ ನಡೆದಿದ್ದ ಸಂಚು ಎಂಬ ವಿಷಯವೂ ಬಹಿರಂಗವಾಗುತ್ತಿದೆ. ರಾಜಕೀಯ ನಾಯಕರು ಅದರಲ್ಲಿಯೂ ಬಿಜೆಪಿ, ಜೆಡಿಎಸ್ ನಾಯಕರು ಧರ್ಮಸ್ಥಳದ ಪರ ನಿಂತಿದ್ದಾರೆ. ಕ್ಷೇತ್ರಕ್ಕೆ ಹೋಗಿ ಸಮಾವೇಶವನ್ನೂ ಮಾಡಿದ್ದಾರೆ. ಆದರೆ.. ಚಿತ್ರರಂಗದವರೇ ಇನ್ನೂ ತಮ್ಮ ನಿಲುವು ಏನು ಎಂದು ಹೇಳಿಲ್ಲ.ಆದರೆ ಪವನ್ ಕಲ್ಯಾಣ್ ವಿಭಿನ್ನ ಹಾದಿ ತುಳಿದಿದ್ದಾರೆ. ಸೆಪ್ಟೆಂಬರ್ 11 ರಂದು ಅಂದರೆ ನಾಳೆ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ.
ಪ್ರಕಾಶ್ ರೈ, ಅಹಿಂಸಾ ಚೇತನ್ ಕೂಡಾ ಸೈಲೆಂಟ್..!
ಎಲ್ಲ ನಟರೂ ಸೈಲೆಂಟ್ ಆಗಿರುವಾಗ ಇವರಿಬ್ಬರ ಹೆಸರೇ ಏಕೆ ಎಂದರೆ. ಇವರಿಬ್ಬರೂ ಧರ್ಮಸ್ಥಳದಲ್ಲಿ ಏನೋ ಆಗಿದೆ ಎಂಬ ಪುಕಾರುಗಳ ಪರ ಧ್ವನಿ ಎತ್ತಿದ್ದ ಖ್ಯಾತಿ ಹೊಂದಿರುವವರು. ಸುಜಾತಾ ಭಟ್ ಪ್ರಕರಣ ಬಂದಾಗ ಬೆಂಬಲ ಘೋಷಿಸಿದ್ದ ಪ್ರಕಾಶ್ ರೈ, ಬಿಬಿಸಿ ವಿಡಿಯೋ ಟ್ವೀಟ್ ಮಾಡಿದ್ದರು. ಆಧರೆ, ಅದು ಸುಳ್ಳು ಎಂದಾಗ ಮಾತ್ರ ಸೈಲೆಂಟ್. ತಾನು ಅಂಥಾದ್ದೊಂದು ವಿಷಯಕ್ಕೆ ಮಾತೇ ಆಡಿಲ್ಲ ಎಂಬಂತೆ ಇದ್ದಾರೆ.
ಇನ್ನು ನಟ ಚೇತನ್ ಅಹಿಂಸಾ ಕೂಡಾ ಆ ವಿಷಯವನ್ನು ಸೈಡಿಗಿಟ್ಟೇ ಮಾತನಾಡುತ್ತಿದ್ದಾರೆ. ಹೀಗಿರುವಾಗಲೇ ತೆಲುಗು ನಟ, ಆಂಧ್ರಪ್ರದೇಶ ಉಪಮುಖ್ಯಮಂತ್ರಿಯೂ ಆಗಿರುವ ಪವನ್ ಕಲ್ಯಾಣ್, ಧರ್ಮಸ್ಥಳಕ್ಕೆ ಬರುತ್ತಿದ್ದಾರೆ. ಧರ್ಮಸ್ಥಳ ಪ್ರಕರಣವು ಮಗ್ಗುಲು ಬದಲಾಯಿಸಿದೆ. ಧರ್ಮಸ್ಥಳದ ವಿರುದ್ಧ ಷಡ್ಯಂತ್ರದ ಒಂದೊಂದೇ ಅಂಶಗಳು, ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಧರ್ಮಸ್ಥಳದ ವಿರುದ್ಧ ಆರೋಪ ಮಾಡಿದವರನ್ನು ಪೊಲೀಸರು ತನಿಖೆ ಮಾಡುತ್ತಿರುವ ಹೊತ್ತಿನಲ್ಲಿ ಪವನ್ ಕಲ್ಯಾಣ್, ಧರ್ಮಸ್ಥಳದ ಪರವಾಗಿ ನಿಲುವು ಪ್ರಕಟಿಸಲೆಂದು ಧರ್ಮಸ್ಥಳಕ್ಕೆ ಬರುತ್ತಿದ್ದಾರೆ. ಪವನ್ ಕಲ್ಯಾಣ್ ಅವರ ನಿರ್ಧಾರಕ್ಕೆ ಧರ್ಮಸ್ಥಳ ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.
ಸಂಜೆ ಐದು ಗಂಟೆ ವೇಳೆಗೆ ಪವನ್ ಕಲ್ಯಾಣ್ ಧರ್ಮಸ್ಥಳಕ್ಕೆ ಆಗಮಿಸಲಿದ್ದು, ದೇವಾಲಯದಲ್ಲಿ ವಿಶೇಷ ಪೂಜೆ ಮಾಡಿಸಲಿದ್ದಾರೆ. ನಂತರ ದೇವಾಲಯದ ಮುಂಭಾಗ ಆರತಿ ಸೇವೆ ಮಾಡಿ, ಆನಂತರ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಸಹ ಭೇಟಿ ಮಾಡಲಿದ್ದಾರೆ.



