ಧರ್ಮಸ್ಥಳ ತಲೆಬುರುಡೆ ಕೇಸ್ ಮತ್ತು ಸೌಜನ್ಯ ಹೋರಾಟದ ಕೇಸ್ ಮುಗಿಯದ ಮೆಗಾ ಧಾರಾವಾಹಿಯಂತೆ ನಡೆಯುತ್ತಲೇ ಇವೆ. ಜಸ್ಟಿಸ್ ಫಾರ್ ಸೌಜನ್ಯ, ತಲೆಬುರುಡೆ, ನೂರಾರು ಶವ ಹೂತಿಟ್ಟ ಪ್ರಕರಣದ ತನಿಖೆ ಎಲ್ಲವೂ ಒಂದು ಹಂತದಲ್ಲಿ ಸುಸ್ತು ಹೊಡೆಯುತ್ತಿರುವಾಗಲೇ ಗಿರೀಶ್ ಮಟ್ಟಣ್ಣವರ್ ಮತ್ತು ಎಂಡಿ ಸಮೀರ್ ವಿರುದ್ಧದ ತನಿಖೆಗೆ ಒಂದು ಮೇಜರ್ ಸ್ಟೆಪ್ ಸಿಕ್ಕಿದೆ.
ಸಮೀರ್ ಕೇಸ್ ಏನು..?
ಧರ್ಮಸ್ಥಳದ ಸೌಜನ್ಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ಸುದ್ದಿ ಬಿತ್ತರಿಸಿದ್ದ ಯೂಟ್ಯೂಬರ್ ಎಂಡಿ ಸಮೀರ್ ವಿರುದ್ಧ ಬಳ್ಳಾರಿಯ ಕೌಲ್ ಬಜಾರ್ ಠಾಣೆ ಪೊಲೀಸರು ದಾಖಲಿಸಿರುವ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್‌ನ ಬೆಂಗಳೂರು ಪೀಠವು ಧಾರವಾಡಕ್ಕೆ ವರ್ಗಾಯಿಸಿದೆ. ಯೂಟ್ಯೂಬರ್ ಸಮೀರ್ ‘ಊರಿನ ದೊಡ್ಡವರೇ ಕೊಲೆ ಮಾಡಿದವರಾ?’ ಎಂಬ ತಲೆಬರಹದ ವಿಡಿಯೋವನ್ನು ತನ್ನ ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಆ ವಿಡಿಯೊವನ್ನು ಕೋಟ್ಯಂತರ ಜನರು ವೀಕ್ಷಣೆ ಮಾಡಿದ್ದರು. ಆ ಕೇಸಿನ ವಿಚಾರಣೆ ಇದು.
ಸಮೀರ್‌ಗೆ ನೋಟಿಸ್ ನೀಡಿ ವಿಚಾರಣೆಗೆ ಕರೆದಾಗ, ವಿಚಾರಣಾಧಿಕಾರಿಯನ್ನೇ ಹೈಕೋರ್ಟಿನಲ್ಲಿ ಪ್ರಶ್ನೆ ಮಾಡಲಾಗಿತ್ತು.ಆಮೇಲೆ ತಮ್ಮ ವಿರುದ್ಧದ ಎಫ್‌ಐಆರ್ ರದ್ದು ಮಾಡೋಕೆ ಕೋರಿಕೆ ಸಲ್ಲಿಸಲಾಗಿತ್ತು. ಇದೀಗ ಪ್ರಕರಣದ ವಿಚಾರಣೆ ಧಾರವಾಡ ಹೈಕೋರ್ಟ್ ಪೀಠಕ್ಕೆ ವರ್ಗವಾಗಿದೆ. ತನಿಖೆ ಶುರು ಮಾಡಬೇಕೋ.. ಬೇಡವೋ.. ತನಿಖೆ ಮಾಡುವುದಾದರೆ ಯಾರು ಮಾಡಬೇಕು ಎಂಬ ಕುರಿತು ನಡೆಯುತ್ತಿರುವ ಕೇಸ್ ಇದು.
ಬಳ್ಳಾರಿಯಲ್ಲಿ ಪ್ರಕರಣ ದಾಖಲಾಗಿರುವುದರಿಂದ ಅರ್ಜಿಯನ್ನು ಧಾರವಾಡ ಪೀಠಕ್ಕೆ ವರ್ಗಾಯಿಸುವುದಕ್ಕೆ ಯಾವುದೇ ಆಕ್ಷೇಪವಿಲ್ಲ. ಆದರೆ, ಎಫ್‌ಐಆರ್‌ಗೆ ತಡೆ ನೀಡಿ ಮಧ್ಯಂತರ ರಕ್ಷಣೆ ಒದಗಿಸಿರುವುದನ್ನು ಮುಂದುವರಿಸಬೇಕು ಎಂದು ವಾದಿಸಿದ್ದಾರೆ ಸಮೀರ್ ಪರ ವಕೀಲರು. ಎಫ್‌ಐಆರ್ʻಗೆ ಸ್ಟೇ ಕೊಟ್ಟಿರೋದ್ರಿಂದ ಆ ವಿಚಾರಣೆ ಸದ್ಯಕ್ಕೆ ಇಲ್ಲ. ಹೀಗಾಗಿ ಪ್ರಕರಣದ ವಿಚಾರಣೆ ಧಾರವಾಡ ಪೀಠಕ್ಕೆ ವರ್ಗವಾಗಿದೆ. ಅಲ್ಲಿ ಪ್ರಕ್ರಿಯೆಗಳು ಮೊದಲಿನಿಂದ ಶುರುವಾಗಿ.. ವಿಚಾರಣೆ ಆಗಬೇಕಿದೆ. ಅಲ್ಲಿ ಪ್ರಕರಣದ ಎಫ್‌ಐಆರ್ʻಗೆ ತಡೆ ನೀಡಿದ್ದನ್ನು ಎತ್ತಿ ಹಿಡಿದರೆ.. ಆಗ ಪೊಲೀಸರು ಸಮೀರ್ ವಿಚಾರಣೆಯನ್ನೇ ಮಾಡುವುದಕ್ಕೆ ಸಾಧ್ಯವಿಲ್ಲ. ತಡೆ ನೀಡಿದ್ದು ತಪ್ಪು ಎಂದರೆ.. ಆಗ ಮಾತ್ರ ವಿಚಾರಣೆ ನಡೆಸಬಹುದು.
ಮಟ್ಟಣ್ಣನವರ್ ಕೇಸ್ ಏನು..?
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ ಸಾಮೂಹಿಕ ವಿವಾಹಗಳ ಕುರಿತು ಹಾಗೂ ಅಲ್ಲಿ ಮದುವೆಯಾಗುವ ಹೆಣ್ಣು ಮಕ್ಕಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇರೆಗೆ ಮಟ್ಟಣ್ಣವರ್ ವಿರುದ್ಧ ಕೇಸ್ ಇದೆ. ಭಾಷಣವೊಂದರಲ್ಲಿ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹವಾಗುವ ಪ್ರತಿ ಹೆಣ್ಣು ಮಕ್ಕಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತದೆ. ಅತ್ಯಾಚಾರ ನಡೆಯುತ್ತದೆ. ಮೊದಲು ಅವರಿಗೆ.. ಆಮೇಲೆ ತಾಳಿ ಕಟ್ಟಿದವರಿಗೆ ಎಂದು ಹೇಳಿಕೆ ನೀಡಿದ್ದರು.
ಬೆಂಗಳೂರಿನ ರಾಜಾಜಿನಗರದ ಸಾಮಾಜಿಕ ಕಾರ್ಯಕರ್ತೆ ಕಾವೇರಿ ಕೇದಾರನಾಥ ಎಂಬುವವರು ಕೋರ್ಟಿನ ಮೊರೆ ಹೋಗಿದ್ದರು. ನ್ಯಾಯಾಲಯ ಅರ್ಜಿಯನ್ನು ವಿಚಾರಣೆಗೆ ಪುರಸ್ಕರಿಸಿ, ಅರ್ಜಿದಾರರು ಸಲ್ಲಿಸಿರುವ ದೂರು ಆಧರಿಸಿ ಗಿರೀಶ್ ಮಟ್ಟಣ್ಣನವರ್ ವಿರುದ್ಧ 3 ವಾರಗಳಲ್ಲಿ ತನಿಖೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗಕ್ಕೆ ನಿರ್ದೇಶನ ನೀಡಿದೆ. ಅಂದಹಾಗೆ ಮಹಿಳಾ ಆಯೋಗದ ಅಧ್ಯಕ್ಷರು ನಾಗಲಕ್ಷ್ಮಿ.



