ಸಮೀರ್. ಈತನ ಹೆಸರು ತೀರಾ ಇತ್ತೀಚಿನವರೆಗೆ ಆತನ ಕುಟುಂಬ, ಸ್ನೇಹಿತರ ಬಳಗ ಬಿಟ್ಟರೆ ಮಿಕ್ಕವರಿಗೆ ಗೊತ್ತಿರಲಿಕ್ಕಿಲ್ಲ. ಆದರೆ.. ಈತ ಈಗ ಇಡೀ ರಾಜ್ಯಾದ್ಯಂತ ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ಪಡೆದಿದ್ದಾನೆ. ದೂತ ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಪ್ರಸಿದ್ಧಿಗೆ ಬಂದ ಈತನನ್ನು ಅರೆಸ್ಟ್ ಮಾಡಲು ಪೊಲೀಸರು ಮುಂದಾಗಿದ್ದರೆ, ಜಾಮೀನು ಕೊಡಿಸಲು ರಾಜ್ಯದ ಕೆಲವು ಸಂಘಟನೆ, ವಕೀಲರು, ಧುರೀಣರು ಕ್ಯೂನಲ್ಲಿ ನಿಂತಿದ್ದಾರೆ. ಸಿಎಸ್ ದ್ವಾರಕನಾಥ್ ಅವರಂತಹ ಹಿರಿಯರೇ ಈತನನ್ನು ಹೀರೋ ಎನ್ನುತ್ತಾರೆ. ಈತನ ಬೆನ್ನ ಹಿಂದೆ ರಾಜ್ಯದ ಕೆಲವು ಎಡಪಂಥದ ಸಂಘಟನೆಗಳು ಟೊಂಕಕಟ್ಟಿ ನಿಂತಿವೆ. ಕೆಲವು ಕಾಂಗ್ರೆಸ್ ನಾಯಕರಿಗೆ ಈತ ಪ್ರಿಯವಾಗಿ ಕಾಣಿಸುತ್ತಿದ್ದರೆ, ಎಡಪಕ್ಷದ ಕಾರ್ಯಕರ್ತರು, ಕಮ್ಯುನಿಸ್ಟರ ಪಾಲಿಗೆ ಈತ ಡಾರ್ಲಿಂಗ್.
ಇಷ್ಟಕ್ಕೂ ಈತ ಯಾರು..?
ಪೂರ್ತಿ ಹೆಸರು ಎಂಡಿ ಸಮೀರ್. ಮಹೇಶ್ ಶೆಟ್ಟಿ ತಿಮ್ಮರೋಡಿ, ಗಿರೀಶ್ ಮಟ್ಟಣ್ಣನವರ್ ಜೊತೆ ಗುರುತಿಸಿಕೊಂಡಿರುವ ಸಮೀರ್, ದೂತ ಯೂಟ್ಯೂಬ್ ಚಾನೆಲ್ ನಡೆಸುತ್ತಾನೆ. ದೂತ ಯೂಟ್ಯೂಬ್ ಚಾನಲ್ ಜೊತೆಗೆ ಸಮೀರ್ ಎಂ.ಡಿ. ಎಂಬ ಮತ್ತೊಂದು ಚಾನಲ್ನಲ್ಲೂ ಈತ ಯೂಟ್ಯೂಬ್ ವಿಡಿಯೋಗಳನ್ನು ಅಪ್ ಲೋಡ್ ಮಾಡಿದ್ದಾನೆ. ಈ ಚಾನಲ್ನಲ್ಲಿಯೂ ಧರ್ಮಸ್ಥಳದ ಬಗ್ಗೆಯೂ ವಿಡಿಯೋಗಳನ್ನು ಮಾಡಿದ್ದಾನೆ. ಈತನ ದೂತ ಯೂಟ್ಯೂಬ್ ಚಾನಲ್ ಗೆ 1.25 ಮಿಲಿಯನ್ ಸಬ್ ಸ್ಕ್ರೈಬರ್ ಗಳಿದ್ದಾರೆ. ಅಂದರೆ ಒಂದೂಕಾಲು ಕೋಟಿ ಜನ ಸಬ್‌ಸ್ಕ್ರೈಬರ್ಸ್. ಈತ ಇದುವರೆಗೂ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿರುವ ವಿಡಿಯೋಗಳ ಸಂಖ್ಯೆ 20 ದಾಟಿದೆ, ಅಷ್ಟೇ.
ಸಮೀರ್ ಎಂಡಿ, ಬಳ್ಳಾರಿಯ ಕೌಲಬಜಾರ್ ಹುಡುಗ. ತಾಯಿ ಬಳ್ಳಾರಿಯವರು. ತಂದೆ ಆಂಧ್ರಪ್ರದೇಶದವರು. ಒಬ್ಬ ಅಕ್ಕ ಇದ್ದಾರೆ. ತಂದೆ ಈಗ ಇಲ್ಲ. 8ನೇ ಕ್ಲಾಸ್ ವರೆಗೆ ಬಳ್ಳಾರಿಯಲ್ಲೇ ಓದಿದ್ದ ಸಮೀರ್, ನಂತರ ಬೆಂಗಳೂರಿಗೆ ಶಿಫ್ಟ್ ಆಗಿ, ಬೆಂಗಳೂರಿನಲ್ಲಿ ಬಿಸಿಎವರೆಗೆ ವ್ಯಾಸಾಂಗ ಮಾಡಿದ್ದಾನೆ. ಕಾಲೇಜು ಮುಗಿಸಿದ ಸಮೀರ್, ಎಂಟ್ರಿ ಕೊಟ್ಟಿದ್ದು ಯೂಟ್ಯೂಬ್ ಪ್ರಪಂಚಕ್ಕೆ. ಆರಂಭದಲ್ಲಿ ಕೆಲವು ಬೆಟ್ಟಿಂಗ್ ಆಪ್ ಪ್ರಮೋಟ್ ಮಾಡಿದ್ದ ಸಮೀರ್, ದೂತ ಯೂಟ್ಯೂಬಿನ ಮೂಲಕ ಜಗತ್ ಪ್ರಸಿದ್ಧನಾದ. ಮನೆ ಇರುವುದು ಬನ್ನೇರುಘಟ್ಟದಲ್ಲಿ.
ಬಳ್ಳಾರಿಯ ಕೌಲ್‌ಬಜಾರ್‌ನಲ್ಲಿ ಮನೆ ಇದೆ. ಆದರೆ, ಮನೆ ಪ್ಲಾಸ್ಟಿಂಗ್ ಆಗಿಲ್ಲ. ಯಾರೂ ವಾಸವಿಲ್ಲ. ಈಗ ಕನೆಕ್ಟ್ ಆಗಿರುವ ಸಂಘಟನೆಗಳನ್ನು ಬಿಟ್ಟರೆ, ಮಿಕ್ಕ ಸಂಘಟನೆಗಳ ಜೊತೆ ಸಂಪರ್ಕದಲ್ಲಿರುವ ಬಗ್ಗೆ ಮಾಹಿತಿ ಇಲ್ಲ. ದೂತ ಯೂಟ್ಯೂಬ್ ಚಾನೆಲ್ಲಿನಲ್ಲಿ ಅಪ್ ಲೋಡ್ ಆಗಿದ್ದ ಧರ್ಮಸ್ಥಳದ ವಿಡಿಯೋ ಅನಿರೀಕ್ಷಿತ ಹಾಗೂ ಅಸಹಜ ವ್ಯೂವ್ಸ್ ಪಡೆಯುವ ಮೂಲಕ ಪ್ರಸಿದ್ಧಿಗೆ ಬಂದ ಸಮೀರ್, ರಾಜ್ಯದಲ್ಲಿ ಸಂಘಟನೆಗಳ ಜೊತೆ ಗುರುತಿಸಿಕೊಂಡಿದ್ದು ಅದಾದ ನಂತರವೇ. ಸಮೀರ್.. ಆಪ್ತರು, ಗೆಳೆಯರ ಬಗ್ಗೆ ಮಾಹಿತಿ ಸಿಗುತ್ತಿಲ್ಲ. ಈಗ ಈತನಿಗೆ ಅರೆಸ್ಟ್ ವಾರೆಂಟ್ ಬಂದ ನಂತರ, ಮನೆಯ ಅಕ್ಕಪಕ್ಕದವರನ್ನು ಮಾತನಾಡಿಸಿದರೆ.. ಅವರ ಪಾಲಿಗೂ ಈತ ನಿಗೂಢ ವ್ಯಕ್ತಿಯೇ. ಅಕ್ಕಪಕ್ಕದವರಿಗೂ ಈತ ಗೊತ್ತಾಗಿದ್ದು ಯೂಟ್ಯೂಬ್ ಸ್ಟಾರ್ ಆದ ಬಳಿಕವೇ.
ಸದ್ಯಕ್ಕೆ ಸಮೀರ್ ವಿರುದ್ಧ ರಾಜ್ಯದ ಹಲವಾರು ಠಾಣೆಗಳಲ್ಲಿ ಕೇಸುಗಳಿವೆ. ವಿಧಾನಸಭೆಯಲ್ಲಿಯೂ ಈತನ ವಿಡಿಯೋ ಸದ್ದು ಮಾಡಿದೆ. ಈತನ ವಿಡಿಯೋದಿಂದಾಗಿ ಧರ್ಮಸ್ಥಳದತ್ತ ಬಿಬಿಸಿ, ಅಲ್‌ಜಜೀರಾ ಚಾನೆಲ್ಲುಗಳು ಕಣ್ಣು ಬೀರಿವೆ. ಜರ್ಮನಿ, ಅಮೆರಿಕ ಸೇರಿದಂತೆ ವಿದೇಶಿ ಮಾಧ್ಯಮಗಳಲ್ಲಿಯೂ ಚರ್ಚೆಯಾಗಿದೆ. ವೀರೇಂದ್ರ ಹೆಗ್ಗಡೆಯವರನ್ನು ನಕಲಿ ದೇವಮಾನವ, ವೀರೇಂದ್ರ ಜೈನ್ ಎಂದು ಕರೆಯುವ ಸಮೀರ್, ವಿಚಿತ್ರ ಶೈಲಿಯಲ್ಲಿ ಸ್ಟೋರಿ ನರೇಟ್ ಮಾಡಿ ಫೇಮಸ್ ಆಗಿದ್ದಾನೆ.



