ಧರ್ಮಸ್ಥಳದಲ್ಲಿ ಜಸ್ಟಿಸ್ ಫಾರ್ ಸೌಜನ್ಯ ಹೆಸರಿನಲ್ಲಿ ಧರ್ಮಸ್ಥಳ, ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಅಟ್ಯಾಕ್ ಮಾಡ್ತಿದ್ದ ಬುರುಡೆ ಗ್ಯಾಂಗ್ ಇದ್ದಕ್ಕಿದ್ದಂತೆ ಉಲ್ಟಾ ಹೊಡೆದಿದೆ. ಮೊಬೈಲಿನಲ್ಲಿ ಸಾಕ್ಷಿಗಳಿವೆ, ಪ್ರತ್ಯಕ್ಷದರ್ಶಿಗಳಿದ್ದಾರೆ.. ಎಂದೆಲ್ಲ ಬುರುಡೆ ಬಿಡ್ತಾ ಇದ್ದ ಗ್ಯಾಂಗ್.. ಈಗ ಇದಕ್ಕಿದ್ದಂತೆ ಮೂಲ ಪ್ರಕರಣವನ್ನೇ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದೆ. ‘ಬುರುಡೆ ಗ್ಯಾಂಗ್’, ಇದೀಗ ದೂರುದಾರ ಚಿನ್ನಯ್ಯ ಹೇಳಿಕೆ ಮೇರೆಗೆ ದಾಖಲಾಗಿದ್ದ ಪ್ರಕರಣವನ್ನೇ ರದ್ದು ಮಾಡಬೇಕು ಎನ್ನುವುದು ಬುರುಡೆ ಗ್ಯಾಂಗ್ ವಾದ. ಇಷ್ಟಕ್ಕೂ ಈ ಕೇಸಿನಲ್ಲಿ ಬುರುಡೆ ಗ್ಯಾಂಗ್ ಕೊಟ್ಟಿರುವ ಕಾರಣಗಳೂ ಅಷ್ಟೇ ಇಂಟ್ರೆಸ್ಟಿಂಗ್.
ಬುರುಡೆ ಗ್ಯಾಂಗ್ ವಾದ ಏನು..?
ಎಸ್‌ಐಟಿಯವರು ಖುದ್ದಾಗಿ ಬಂದು ನೋಟಿಸ್ ನೀಡಿಲ್ಲ. ವಾಟ್ಸ್ ಆ್ಯಪ್, ಇ ಮೇಲ್‌ನಲ್ಲಿ ಮಾತ್ರ ನೋಟಿಸ್ ನೀಡಿದ್ದಾರೆ. ಈಗಾಗಲೇ ಹಲವು ಬಾರಿ ವಿಚಾರಣೆಗೆ ಕರೆದಿದ್ದರು. ಸುಮಾರು 100 ಗಂಟೆಗೂ ಹೆಚ್ಚಿನ ಕಾಲ ನಮ್ಮನ್ನು ವಿಚಾರಣೆ ಮಾಡಿದ್ದಾರೆ. ದೂರಿಗೆ ಸಂಬಂಧಿಸಿ 164 ಹೇಳಿಕೆಗಳಲ್ಲಿ ತಮ್ಮ ವಿರುದ್ಧ ಆರೋಪಗಳಿಲ್ಲ. ಆದರೂ ನೋಟಿಸ್ ನೀಡಿದ್ದಾರೆ ಎಂದು ವಾದಿಸಿದ್ದಾರೆ.
ಅರ್ಜಿ ಸಲ್ಲಿಸಿರುವುದು ಯಾರು.?
ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ.ಜಯಂತ್ ಹಾಗೂ ವಿಠಲ ಗೌಡ ಅರ್ಜಿ ಸಲ್ಲಿಸಿದ್ದು, ಇವರ ಪರವಾಗಿ ವಕೀಲ ಬಾಲನ್ ಅವರ ಮೂಲಕ ಅರ್ಜಿ ಸಲ್ಲಿಸಲಾಗಿದೆ. ದಕ್ಷಿಣ ಕನ್ನಡದ ಬೆಳ್ತಂಗಡಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೂಲ ಎಫ್‌ಐಆರ್ (0039) ರದ್ದುಪಡಿಸಿ, ಎಸ್‌ಐಟಿ ಅ.24ರಂದು ವಿಚಾರಣೆಗೆ ಹಾಜರಾಗುವಂತೆ ನೀಡಲಾಗಿರುವ ನೋಟಿಸ್ ಅನ್ನೂ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಬುರುಡೆ ಗ್ಯಾಂಗಿನಿಂದಲೇ ಶುರುವಾಗಿದ್ದ ಕೇಸ್..!
ಎಸ್‌ಐಟಿ ರಚನೆ ಆಗಿದ್ದೇ ಚಿನ್ನಯ್ಯ ದೂರು ನೀಡಿದ ನಂತರ. ಚಿನ್ನಯ್ಯನನ್ನು ಕರೆತಂದಿದ್ದು ತಿಮ್ಮರೋಡಿ, ಮಟ್ಟೆಣ್ಣವರ್, ಟಿ ಜಯಂತ್ ಹಾಗೂ ವಿಠ್ಠಲ್ ಗೌಡ. ಮೊದ ಮೊದಲು ತಮಗೂ ಚಿನ್ನಯ್ಯನಿಗೂ ಸಂಬಂಧ ಇಲ್ಲ ಎಂದು ವಾದಿಸಿದ್ದವರು, ಯಾವಾಗ ಚಿನ್ನಯ್ಯ ಉಲ್ಟಾ ಹೊಡೆದನೋ.. ಚಿನ್ನಯ್ಯನ ವಿರುದ್ಧವೂ ವಿಡಿಯೋ ಹರಿಬಿಟ್ಟಿದ್ದರು. ತಿಮರೋಡಿ.. ಪೊಲೀಸರ ಪ್ರಕಾರ ಈಗ ಧರ್ಮಸ್ಥಳದಲ್ಲಿ ಇಲ್ಲ. ನಾಪತ್ತೆಯಾಗಿದ್ದಾನೆ.
ಕಾರಣ ಏನಿರಬಹುದು..?
ಪ್ರಕರಣದ ಟರ್ನಿಂಗ್ ಪಾಯಿಂಟ್ ಎಂಬಂತೆ ಬುರುಡೆ ತಂದ ಚಿನ್ನಯ್ಯ ತಪ್ಪೊಪ್ಪಿಕೊಂಡಿದ್ದರಿಂದ ಇಡೀ ಬುರುಡೆ ಗ್ಯಾಂಗ್ ಸಂಕಷ್ಟಕ್ಕೆ ಸಿಲುಕಿತ್ತು. ಸುಜಾತಾ ಭಟ್ ಪ್ರಕರಣದಲ್ಲಿ ಸತ್ಯ ಬೆಳಕಿಗೆ ಬಂದು ಮುಖಭಂಗ ಆಗಿತ್ತು. ಪ್ರಕರಣದಲ್ಲಿ ಹುರುಳಿಲ್ಲದೆ ಸುಳ್ಳು ದೂರು, ಸಾಕ್ಷ್ಯ ಸೃಷ್ಟಿ ಹಿನ್ನೆಲೆಯಲ್ಲಿ ತಮ್ಮ ಬಂಧನ ಆಗುವುದನ್ನು ತಪ್ಪಿಸಿಕೊಳ್ಳಲು ಬುರುಡೆ ಗ್ಯಾಂಗ್ ಈ ಪ್ರಯತ್ನ ಮಾಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಅ.24ರಂದು ಗಿರೀಶ್ ಮಟ್ಟಣ್ಣವರ್‌ಗೆ ಎಸ್‌ಐಟಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಈ ವಿಚಾರಣೆಗೆ ಹಾಜರಾದಲ್ಲಿ ಬಂಧನ ಸಾಧ್ಯತೆ ಹೆಚ್ಚಿರುವ ಕಾರಣದಿಂದ ಇದೀಗ ಬುರುಡೆ ಗ್ಯಾಂಗ್ ಪ್ರಕರಣವನ್ನೇ ರದ್ದುಪಡಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದೆ.
ಚಾರ್ಜ್‌ಶೀಟ್ ಕಥೆ ಏನು..?
ಪ್ರಕರಣಕ್ಕೆ ಸಂಬಂಧಪಟ್ಟಂತೆ ಷಡ್ಯಂತ್ರಗಾರರನ್ನೂ ಬಿಡುವುದಿಲ್ಲ ಎಂದು ಸರ್ಕಾರವೇನೋ ಹೇಳಿತ್ತು. ಆದರೆ.. ಷಡ್ಯಂತ್ರ ಮಾಡಿದ್ದಾರೆ ಎಂದು ಆರೋಪ ಹೊತ್ತವರನ್ನು ವಿಚಾರಣೆಗೂ ಕರೆಯಲು ಸಾಧ್ಯವಾಗಿಲ್ಲ. ಆದರೂ.. ಚಾರ್ಜ್ ಶೀಟ್ ರೆಡಿಯಾಗಿದೆ ಎನ್ನುತ್ತಿದೆ. ಹೇಗೆ ಎನ್ನುವುದು ಅರ್ಥವಾಗುತ್ತಿಲ್ಲ. ಅಷ್ಟೇ.



