ವಿಷ್ಣುವರ್ಧನ್.. 200 ಚಿತ್ರಗಳಲ್ಲಿ ನಟಿಸಿದ್ದ ವಿಷ್ಣುವರ್ಧನ್ ಅಷ್ಟು ಸುಲಭವಾಗಿ ಯಾರನ್ನೂ ಮೆಚ್ಚಿಕೊಳ್ಳುತ್ತಿರಲಿಲ್ಲ. ವಿಷ್ಣು ಅವರನ್ನು ಮೆಚ್ಚಿಸುವುದು.. ದೇವರನ್ನು ಪ್ರತ್ಯಕ್ಷ ಮಾಡಿಕೊಳ್ಳೋದು ಎರಡೂ ಒಂದೇ ಎಂಬಂತಿತ್ತು. ಅಂತಹ ವಿಷ್ಣು ಅವರನ್ನು ಮೆಚ್ಚಿಸಿದ ನಿರ್ದೇಶಕರಲ್ಲಿ ಒಬ್ಬರು ದಿನೇಶ್ ಬಾಬು.
ದಿನೇಶ್ ಬಾಬು ಅವರ ಚಿತ್ರಗಳ್ಯಾವುದೂ ಬಾಕ್ಸಾಫೀಸ್ ಧಾಂಧೂಂ ಮಾಡಿಲ್ಲ. ಆದರೆ.. ವಿಷ್ಣು ಅವರೊಳಗಿದ್ದ ಕಲಾವಿದನಿಗೆ ಚಾಲೆಂಜ್ ಹಾಕಿದ್ದವು. ವಿಷ್ಣು ಅವರಂತೆಯೇ ಮಾತು ಕಡಿಮೆ. ಅದಕ್ಕಾಗಿಯೂ ಇಷ್ವವಾಗಿರಬಹುದು. ಇನ್ನು ದಿನೇಶ್ ಬಾಬು ಅವರ ಜೊತೆ ಸುಪ್ರಭಾತ, ಲಾಲಿ, ನಿಶ್ಯಬ್ಧ, ಪ್ರೇಮೋತ್ಸವ, ದೀಪಾವಳಿ, ಬಳ್ಳಾರಿ ನಾಗ, ಸ್ಕೂಲ್ ಮಾಸ್ಟರ್ ಸಿನಿಮಾಗಳನ್ನು ಮಾಡಿದ್ದಾರೆ. ಸುಪ್ರಭಾತ ಚಿತ್ರದಲ್ಲಿ.. ತೊದಲು ರೋಗದಿಂದ ಬಳಲುವ ವ್ಯಕ್ತಿಯಾಗಿ, ಲಾಲಿಯಲ್ಲಿ ಸಾಕಿ ಬೆಳೆಸಿದ ಮಗಳು ಎಲ್ಲಿ ದೂರವಾಗುತ್ತಾಳೋ ಎಂದು ಪರಿತಪಿಸುವ ತಂದೆಯಾಗಿ.. ನಿಶ್ಯಬ್ಧ ಚಿತ್ರಗಳಲ್ಲಿ ನಾಯಿಗಳ ಜೊತೆ.. ಸಿನಿಮಾ ಮಾಡಿದ್ದಾರೆ. ಆದರೆ.. ಈ ಮೂರು ಬಿಟ್ಟರೆ… ವಿಷ್ಣು ಮತ್ತು ದಿನೇಶ್ ಬಾಬು ಚಿತ್ರಗಳು ಅತ್ತ ವಿಷ್ಣು ಚಿತ್ರವೂ ಆಗದೆ.. ಇತ್ತ ದಿನೇಶ್ ಬಾಬು ಚಿತ್ರವೂ ಆಗದೆ ಸೊರಗಿವೆ. ಇಂತಹ ದಿನೇಶ್ ಬಾಬು ಅವರಿಗೀಗ ದೊಡ್ಡ ಆಫರ್ ಹುಡುಕಿಕೊಂಡು ಬಂದಿದೆ.
ಕೆಂಪೇಗೌಡ. ಬೆಂಗಳೂರನ್ನು ಕಟ್ಟಿ ಬೆಳೆಸಿದ ಧರ್ಮಬೀರು. ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಕೆಂಪೇಗೌಡರನ್ನು ಬೆಂಗಳೂರಿಗರು ಮರೆಯುವಂತಿಲ್ಲ. ಆದರೆ.. ಕೆಂಪೇಗೌಡರ ಬಗ್ಗೆ ಕಥೆ, ಕಾದಂಬರಿಗಳಷ್ಟೇ ಅಲ್ಲ, ಸಿನಿಮಾಗಳ ಕೊರತೆಯೂ ಇದೆ. ಕೆಲವು ಸಿನಿಮಾಗಳಲ್ಲಿ ಕೆಂಪೇಗೌಡರ ಪ್ರಸ್ತಾಪ, ದೃಶ್ಯಗಳು ಬಂದು ಹೋಗುತ್ತವೆಯೇ ಹೊರತು, ಕೆಂಪೇಗೌಡರ ಬದುಕೇ ಸಿನಿಮಾ ಆಗಿಲ್ಲ. ಹಲವರು ಸುದ್ದಿ ಮಾಡಿದರೇ ಹೊರತು, ಸಿನಿಮಾ ಆಗಿಲ್ಲ.
ಇದೀಗ ಖ್ಯಾತ ನಿರ್ದೇಶಕ ದಿನೇಶ್ ಬಾಬು ಧರ್ಮಬೀರು ಕೆಂಪೇಗೌಡ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ದಿನೇಶ್ ಬಾಬು ಮೂಲತಃ ಮಲಯಾಳಿ. ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರಗಳಲ್ಲಿ ಕ್ಯಾಮೆರಾಮನ್ ಆಗಿ ಫೇಮಸ್ ಆಗಿದ್ದವರು. ಕನ್ನಡದಲ್ಲಿ ೫೦ಕ್ಕೂ ಹೆಚ್ಚು ಸಿನಿಮಾ ನಿರ್ದೇಶಿಸಿದವರು. ವಿಷ್ಣುವರ್ಧನ್ ಅವರ ಅಚ್ಚುಮೆಚ್ಚಿನ ನಿರ್ದೇಶಕರಲ್ಲಿ ಒಬ್ಬರಾಗಿದ್ದರು. ದಿನೇಶ್ ಬಾಬು ಅವರ ಮಾಸ್ಟರ್ ಪೀಸ್ʻಗಳಲ್ಲಿ ವಿಷ್ಣು ಚಿತ್ರಗಳು ಹೆಚ್ಚು.
ಇದೆಲ್ಲದರ ಜೊತೆ ಇತರೆ ಸ್ಟಾರ್ ನಟರ ಜೊತೆಯಲ್ಲೂ ಸಿನಿಮಾ ಮಾಡಿದ್ಧಾರೆ. ಇದು ಸಾಧ್ಯ (ಶಂಕರ್ ನಾಗ್), ಹೆಂಡ್ತಿಗೇಳ್ಬೇಡಿ, ಎರಡನೇ ಮದುವೆ (ಅನಂತನಾಗ್), ಇನ್ಸ್ʻಪೆಕ್ಟರ್ ವಿಕ್ರಂ (ಶಿವ ರಾಜ್‌ಕುಮಾರ್) ಅಮೃತವರ್ಷಿಣಿ (ರಮೇಶ್, ಸುಹಾಸಿನಿ), ಅಭಿ (ಪುನೀತ್), ಹಾಲಿವುಡ್ (ಉಪೇಂದ್ರ), ಪಾಂಡುರಂಗವಿಠಲ (ರವಿಚಂದ್ರನ್), ಮಿ.ಗರಗಸ (ಕೋಮಲ್).. ಹೀಗೆ ಕನ್ನಡದ ಬಹುತೇಕ ನಟರಿಗೆ ನಿರ್ದೇಶನ ಮಾಡಿದ್ದಾರೆ. ಆದರೆ.. ದಿನೇಶ್ ಬಾಬು ಅವರಿಗೂ ಐತಿಹಾಸಿಕ ಸಿನಿಮಾಗಳ ನಿರ್ದೇಶನ ಇದೇ ಮೊದಲು.
ಅಂದಹಾಗೆ ಈ ಧರ್ಮಬೀರು ಕೆಂಪೇಗೌಡ ಚಿತ್ರಕ್ಕೆ ದಿನೇಶ್ ಬಾಬು ಡೈರೆಕ್ಟರ್. ಪ್ರೊಡ್ಯೂಸರ್ ಡಾ.ಕಿರಣ್ ತೋಟಂಬೈಲ್. ಚೇತನ್ ರಾಜ್ ಪ್ರೊಡಕ್ಷನ್ ಹೆಡ್ ಆಗಿರುವ ಚಿತ್ರಕ್ಕೆ ಹೀರೋ ಸೇರಿದಂತೆ ಉಳಿದ ಕಲಾವಿದರು ಹಾಗೂ ತಂತ್ರಜ್ಞರ ಆಯ್ಕೆ ಇನ್ನೂ ಆಗಬೇಕಿದೆ.



