ಧರ್ಮಸ್ಥಳ ಪ್ರಕರಣದ ತನಿಖೆಯು ವೇಗ ಪಡೆದುಕೊಂಡಿದೆ. ಹೂತಿಟ್ಟ ಶವಗಳನ್ನು ಪತ್ತೆ ಹಚ್ಚಲು ನೇತ್ರಾವತಿ ಸ್ನಾನಘಟ್ಟದ ಬಳಿ ಎಸ್‌ಐಟಿ ಫೀಲ್ಡ್ಗೆ ಇಳಿದಿದೆ. ಧರ್ಮಸ್ಥಳ ಶವಗಳ ಹೂತಿಟ್ಟ ಪ್ರಕರಣ ಸಂಬಂಧ ದೂರುದಾರ ಸದ್ಯ 13 ಸ್ಥಳಗಳನ್ನು ಗುರುತು ಮಾಡಿದ್ದಾನೆ.
ಎಲ್ಲೆಲ್ಲಿ ಪರಿಶೀಲನೆ ಮತ್ತು ಹುಡುಕಾಟ..?
ನೇತ್ರಾವತಿ ಸ್ನಾನಘಟ್ಟದ ಎಡಭಾಗದಲ್ಲಿರುವ ಅರಣ್ಯ ಸ್ಥಳ, ಬಳಿಕ ನೇತ್ರಾವತಿ ಸೇತುವೆ ಹಾಗೂ ಸ್ನಾನಘಟ್ಟದ ಮಧ್ಯಭಾಗದ ಕಾಡಿನಲ್ಲಿ ಸ್ಥಳ ಪರಿಶೀಲಿಸಿ, ಮೂರನೇ ಸ್ಥಳವಾಗಿ ನೇತ್ರಾವತಿ ಸ್ನಾನಘಟ್ಟದ ಬಲ ಭಾಗದ ಅಜಿಕುರಿ ರಸ್ತೆಯಲ್ಲಿ ಸ್ಥಳ ಪರಿಶೀಲನೆ ಮಾಡಿದೆ. ನೇತ್ರಾವತಿ ಸ್ನಾನಘಟ್ಟ ಹಾಗೂ ಸಮೀಪದ ಕಾಡಿನಲ್ಲಿ ಒಳಗೆ 1 ಕಿ.ಮೀ. ವ್ಯಾಪ್ತಿಯಲ್ಲಿ ಸುಮಾರು 2 ಗಂಟೆಗಳ ಕಾಲ ಸ್ಥಳ ಮಹಜರು ನಡೆಸಲಾಗಿದೆ. ಒಟ್ಟು 13 ಸ್ಥಳಗಳನ್ನು ಅನಾಮಿಕ ಗುರುತಿಸಿದ್ದು, ಅಲ್ಲಿನ್ನೂ ಅಗೆಯುವ ಕೆಲಸ ಶುರುವಾಗಿಲ್ಲ.
ಜಿಪಿಎಸ್ ಆಧರಿಸಿ ಮಾರ್ಕಿಂಗ್..!
ಅನಾಮಿಕ ತೋರಿಸಿದ ಸ್ಥಳಗಳನ್ನೆಲ್ಲ ಲಿಸ್ಟ್ ಮಾಡಿರುವ ಎಸ್‌ಐಟಿ, ಪ್ರತಿ ಜಾಗವನ್ನೂ ಕೆಂಪು ರಿಬ್ಬನ್ ಕಟ್ಟಿ, ನಿರ್ದಿಷ್ಟ ಸಂಖ್ಯೆಯ ಗುರುತು ಮಾಡಿದ್ದಾರೆ. ಎಲ್ಲ ಪ್ರದೇಶಗಳೂ ಧರ್ಮಸ್ಥಳದ ಒಂದು ಕಿ.ಮೀ. ವ್ಯಾಪ್ತಿಯ ಒಳಗೇ ಇವೆ. 13 ಜಾಗಗಳ ಪೈಕಿ, 8 ಸ್ಥಳಗಳು ನೇತ್ರಾವದಿ ನದಿಯ ದಂಡೆಯ ಸಮೀಪವೇ ಇದೆ. 4 ಸ್ಥಳಗಳು ಸ್ನಾನಘಟ್ಟದ ಆಚೆ ಇವೆ. ಒಂದು ಜಾಗ ಕಿರು ಅಣೆಕಟ್ಟೆಯ ಸಮೀಪ ಇದೆ.
ಆ ತಲೆಬುರುಡೆ ಕೇಸ್ ಕೂಡಾ ತನಿಖೆ..!
ಪ್ರಕರಣದ ಬಗ್ಗೆ ದೂರು ಕೊಡುವಾಗ ಅನಾಮಿಕ, ಒಂದು ತಲೆಬುರುಡೆಯನ್ನೂ ತೆಗೆದುಕೊಂಡು ಹೋಗಿದ್ದ. ಅದನ್ನು ಹೂತಿಟ್ಟ ಜಾಗದಿಂದಲೇ ತೆಗೆದಿದ್ದೇನೆ ಎಂದು ಹೇಳಿದ್ದ. ಅದೂ ಕೂಡಾ ಅಪರಾಧವೇ. ಆದರೆ, ಪೊಲೀಸರನ್ನು ನಂಬಿಸುವುದಕ್ಕಾಗಿ ಹೀಗೆ ಮಾಡಿದ್ದೇನೆ ಎನ್ನುವುದು ಅನಾಮಿಕನ ವಾದ. ಆದರೆ ಪೊಲೀಸರು ಕೂಡಾ ಅದನ್ನು ಕಾನೂನು ಪ್ರಕಾರವೇ ತನಿಖೆ ಮಾಡಬೇಕು. ಎಸ್‌ಐಟಿ ವಿಚಾರಣೆ ವೇಳೆ ದೂರುದಾರ, ತಲೆ ಬುರುಡೆಯನ್ನು ನೇತ್ರಾವತಿ ಸ್ನಾನಘಟ್ಟದ ಬಳಿಯಿಂದ ಹೊರತೆಗೆದಿರುವುದಾಗಿ ತಿಳಿಸಿದ್ದ. ಈ ಹಿನ್ನೆಲೆ ಎಸ್‌ಐಟಿ ತಂಡವು ವಿಧಿ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು, ಕಂದಾಯ ಇಲಾಖೆ, ಅರಣ್ಯ ಇಲಾಖೆ ಮತ್ತು ಸರ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಬಳಿಕ ಸ್ಥಳ ಮಹಜರು ಆರಂಭಿಸಿದ್ದಾರೆ. ದೂರುದಾರ ಎಲ್ಲಿಂದ ತಲೆಬುರುಡೆ ತೆಗೆದಿದ್ದೇನೆ ಎಂದು ಹೇಳಿದ್ದಾನೋ.. ಅಲ್ಲಿಯ ಮಣ್ಣನ್ನು ಸಂಗ್ರಹ ಮಾಡಿದ್ದಾರೆ. ಆ ಮಣ್ಣು, ದೂರುದಾರ ಕೊಟ್ಟಿರುವ ತಲೆಬುರುಡೆಯಲ್ಲಿರುವ ಮಣ್ಣಿಗೆ ಮತ್ತು ಅನಾಮಿಕ ತೋರಿಸಿದ ಪ್ರದೇಶದ ಮಣ್ಣಿಗೆ ತಾಳೆಯಾಗಬೇಕು. ಆನಂತರ ಮುಂದಿನ ಪ್ರಕ್ರಿಯೆ ಶುರುವಾಗಲಿದೆ.
ಪ್ರತಿ ಹಂತದಲ್ಲೂ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಕಮಾಂಡೋ ಭದ್ರತೆ ಪಡೆದುಕೊಳ್ಳಲಾಗಿದೆ. ಮಾಧ್ಯಮಗಳು ಹಾಗೂ ಕ್ಯಾಮೆರಾದವರನ್ನು ಕನಿಷ್ಠ 200 ಮೀಟರ್ ದೂರದಲ್ಲಿಯೇ ನಿಯಂತ್ರಿಸಲಾಗಿದೆ.



