ಧರ್ಮಸ್ಥಳದಲ್ಲಿನ ತಲೆಬುರುಡೆ ಕೇಸ್ ತನಿಖೆ ದಿನಕ್ಕೊಂದು ತಿರುವು ಪಡೆಯುತ್ತಿದೆ. ಆದರೆ.. ತನಿಖೆಯಲ್ಲಿ ಅಂತಹ ಮಹತ್ವದ ಸಾಕ್ಷಿಯನೇನೂ ಸಿಕ್ಕಿಲ್ಲ. ಈ ತಲೆಬುರುಡೆ ಕೇಸ್ ತನಿಖೆ ಅಂದರೆ ಭೂಮಿ ಅಗೆಯುವ ಕೆಲಸ ಶುರು ಆಗಿದ್ದು ನಾಗರಪಂಚಮಿಯಂದು. ಆದರೆ.. ಅಂದಿನಿಂದ ಯಾವುದೇ ಪ್ರಬಲವಾದ ಸಾಕ್ಷಿ ಸಿಕ್ಕಿಲ್ಲ. 13 + 3 + 1 ಜಾಗಗಳಲ್ಲಿ ಅಗೆದರೂ ಏನೂ ಆಗಿಲ್ಲ. ಸಿಕ್ಕಿರುವ ಎರಡು ಅಸ್ಥಿಪಂಜರಗಳಲ್ಲಿ ಒಂದು ಐವತ್ತು ವರ್ಷಗಳ ಹಿಂದೆ ಹೂತಿದ್ದಾದರೆ,, ಮತ್ತೊಂದು ಏಳೆಂಟು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯದ್ದು. ಅನಾಮಿಕ ಹೇಳಿದ್ದು ಸುಳ್ಳಾಗುತ್ತಲೇ ಇದೆ. ಈ ಮಧ್ಯೆ ಜಿಪಿಆರ್ ಬಂದಿದೆ.
ಮೊದಲು ಸೌಜನ್ಯ ಪ್ರಕರಣದಲ್ಲಿ ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬ ಹಾಗೂ ಕ್ಷೇತ್ರದ ಬಗ್ಗೆ ಅಪಪ್ರಚಾರ ಆಯ್ತು. ಈಗ ನೂರಾರು ಶವ ಹೂತಿದ್ದಾರೆ ಎಂಬ ಆರೋಪದಲ್ಲಿ ತನಿಖೆ ನಡೆಯುತ್ತಿದ. ಅದು ಒಂದು ಹಂತಕ್ಕೆ ಬರುತ್ತಿದ್ದಂತೆಯೇ.. ನಾನೂ ನೋಡಿದ್ದೇನೆ.. ನಾನೂ ಹೂತು ಹಾಕಿದ್ದೇನೆ ಎಂದು ಕೆಲವರು ಬರುತ್ತಲೇ ಇದ್ದಾರೆ. ಅವರು ಅತ್ತ ಸಾಕ್ಷಿಯನ್ನೂ ಕೊಡುತ್ತಿಲ್ಲ. ಇತ್ತ ಆರೋಪಗಳನ್ನು ಬಿಡುತ್ತಿಲ್ಲ. ಭಕ್ತರು ಕೆರಳಿರುವುದೇ ಈ ಕಾರಣಕ್ಕೆ.
ಆರಂಭದಲ್ಲಿ ಇದೂ ಒಂದು ತನಿಖೆ ಆಗಲಿ ಬಿಡು ಎಂದುಕೊಂಡರೆ.. ಇದು ಇಲ್ಲಿಗೇ ಮುಗಿಯುವಂಥದ್ದಲ್ಲ ಎಂದು ಅರಿವಾಗಿದೆ. ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಸಮೀರ್ ಮೊದಲಾದವರು ಯಾವತ್ತಿಗೂ ಸಾಕ್ಷಿ ಕೊಡಲ್ಲ. ಕೋರ್ಟಿಗೂ ಕೊಡಲ್ಲ. ಪೊಲೀಸರಿಗೂ ಕೊಡಲ್ಲ. ಅವರಿಗೆ ಒಂದಷ್ಟು ಜನ ಕುಮ್ಮಕ್ಕು ನೀಡುತ್ತಲೇ ಇರುತ್ತಾರೆ. ಇದನ್ನು ಇಲ್ಲಿಗೇ ನಿಲ್ಲಿಸಬೇಕು ಎಮದು ಕೆರಳಿದ್ದಾರೆ ಭಕ್ತರು.
ರಾಜ್ಯದ ಹಲವೆಡೆ ಪ್ರತಿಭಟನೆ ಶುರುವಾಗಿವೆ. ಸೈಲೆಂಟ್ ಆಗಿದ್ದ ಕೆಲವು ರಾಜಕೀಯ ನಾಯಕರು ಮಾತನಾಡುತ್ತಿದ್ದಾರೆ. ಜೈನ ಮುನಿಗಳು ಬಹಿರಂಗವಾಗಿ ವೀರೇಂದ್ರ ಹೆಗ್ಗಡೆ ಬೆಂಬಲಕ್ಕೆ ನಿಂತಿದ್ದಾರೆ. ಕೆಲವು ವಿರಕ್ತ ಮಠಗಳ ಲಿಂಗಾಯತ ಸ್ವಾಮಿಗಳು ನಿಧಾನವಾಗಿ ಅಖಾಡಕ್ಕೆ ಇಳಿಯುತ್ತಿದ್ದಾರೆ. ಮಂಡ್ಯ, ತುಮಕೂರು, ಧಾರವಾಡ ಸೇರಿದಂತೆ ಹಲವು ಕಡೆ ಭಕ್ತರೇ ಸ್ವಯಂ ಪ್ರತಿಭಟನೆ ಮಾಡಿದ್ಧಾರೆ.
ಮಂಡ್ಯದಲ್ಲಿ ಸಿಲ್ವರ್ ಜ್ಯೂಬಿಲಿ ಉದ್ಯಾನವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಭಕ್ತರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದೆ. ಅನಾಮಿಕ ದೂರುದಾರನನ್ನು ಬಳಸಿಕೊಂಡು ಕ್ಷೇತ್ರದ ಬಗ್ಗೆ ದಿನಕ್ಕೊಂದು ರೀತಿಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಮಾಹಿತಿ ಬಿತ್ತರಿಸಲಾಗುತ್ತಿದೆ. ಇದು ಭಕ್ತರಿಗೆ ನೋವುಂಟು ಮಾಡುತ್ತಿದ್ದು, ಈ ಷಡ್ಯಂತ್ರವನ್ನು ನಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ ಭಕ್ತರು.
ಧಾರವಾಡದಲ್ಲಿ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ಪ್ರತಿಭಟನೆ ನಡೆಸಿದ್ದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಮಹಿಳಾ ಸಂಘಗಳ ಸದಸ್ಯರು, ಎಸ್‌ಡಿಎಂ ಸಮೂಹ ಸಂಸ್ಥೆಗಳ ಸಿಬ್ಬಂದಿ ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಭಕ್ತರು ಕಲಾಭವನದ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಮೆರವಣಿಗೆ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಸೀನಪ್ಪ ಶೆಟ್ಟಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದ್ದು, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ರಾಮನಗರದಲ್ಲಿಯೂ ಧರ್ಮಸ್ಥಳ ಭಕ್ತಾಭಿಮಾನ ವೇದಿಕೆ ಪ್ರತಿಭಟನೆ ನಡೆಸಿದೆ. ಇನ್ನು ಈ ವಾರದ ಕೊನೆಗೆ ಭಾನುವಾರ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆಸಲಾಗುತ್ತಿದೆ. ಅದೂ ಧರ್ಮಸ್ಥಳದ ಸಮೀಪವೇ.



