ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆದ ಸಿನಿಮಾಗಳೆಲ್ಲ ಸೂಪರ್ ಹಿಟ್, ಬ್ಲಾಕ್ ಬಸ್ಟರ್ ಎಂಬ ನಂಬಿಕೆಯೇ ಇರುತ್ತಿತ್ತು. ಆದರೆ, ಅದು ಉಲ್ಟಾ ಆಗಿದೆ. ಅಥವಾ ಒಂದು ಲೆಕ್ಕಕ್ಕೆ ಮಾತ್ರ ಸಕ್ಸಸ್ ಆಗಿದೆ. ಅಂತಿಮ ಫಲಿತಾಂಶ ನಿರ್ಮಾಪಕರು ನಿರೀಕ್ಷೆ ಮಾಡಿದಂತೆ ಆಗಿಲ್ಲ. ಇದು ಅಭಿಮಾನಿಗಳ ನಂಬಿಕೆ, ಭರವಸೆಯ ಲೆಕ್ಕಾಚಾರ ಅಲ್ಲ, ಅದನ್ನ ಮೀರಿದ ಲೆಕ್ಕವನ್ನು ನೋಡುವುದಾದರೆ ಅಭಿಮಾನಿಗಳು ಹೇಳಿ ಕೊಳ್ಳುತ್ತಿರುವುದು ಬೇರೆ, ವಾಸ್ತವ ಬೇರೆ. ಅಭಿಮಾನಿಗಳು ಹಾಕಿಕೊಳ್ಳೋ ಪೋಸ್ಟಿಂದ ನಿರ್ಮಾಪಕರಿಗೆ ಕಾಸು ವಾಪಸ್ ಬರಲ್ಲ.
ದಿ ಡೆವಿಲ್ : ಡಿಸೆಂಬರ್ 11ರಂದು ರಿಲೀಸ್ ಆದ ಡೆವಿಲ್ ಸಿನಿಮಾ ಕುರಿತಂತೆ ಭರ್ಜರಿ ನಿರೀಕ್ಷೆಗಳಿದ್ದವು. ಇನ್ನೊಂದು ಸಾರಥಿ ಆಗುವ ಭರವಸೆ ಹುಟ್ಟಿತ್ತು. ಮಿಲನ, ತಾರಕ್‌ನಂತರ ಸಿನಿಮಾ ಕೊಟ್ಟಿದ್ದ ಪ್ರಕಾಶ್ ಮೇಲೆ ನಂಬಿಕೆಯೂ ಇತ್ತು. ಆದರೆ ಆ ನಿರೀಕ್ಷೆ ಗೆಲ್ಲಲಿಲ್ಲ. ಚಿತ್ರಕ್ಕೆ ದರ್ಶನ್ ಅಭಿಮಾನಿಗಳು ಭರ್ಜರಿ ಓಪನಿಂಗ್ ಕೊಟ್ಟರು. ಆದರೆ, ಆ ಓಪನಿಂಗ್ ಕೊಟ್ಟಿದ್ದನ್ನು ಡೆವಿಲ್ ಉಳಿಸಿಕೊಳ್ಳಲಿಲ್ಲ. ಯಾವುದೇ ನಟನ ಸಿನಿಮಾಗಳಾದರೂ ಅಷ್ಟೇ.
ದರ್ಶನ್, ಕನ್ನಡದಲ್ಲಿ ಅತೀ ಹೆಚ್ಚು ಫ್ಯಾನ್ಸ್ ಇರುವ ನಟ ಅನ್ನೋದ್ರಲ್ಲಿ ಅನುಮಾನ ಇಲ್ಲ. ಡೆವಿಲ್ ಚಿತ್ರದ ಬಿಡುಗಡೆ ವೇಳೆಯೂ ಅದು ಸಾಬೀತಾಯ್ತು. ಆದರೆ, ಚಿತ್ರದಲ್ಲಿ ಹೇಳಿಕೊಳ್ಳುವಂತಹ ಕಥೆ, ಚಿತ್ರಕಥೆ, ಹಾಡು, ಮೇಕಿಂಗ್ ಯಾವುದೂ ಇಲ್ಲದೆ ಡೆವಿಲ್ ಸೊರಗಿತು. ಚಿತ್ರದ ನಿರ್ಮಾಪಕರೂ ಆಗಿರುವ ನಿರ್ದೇಶಕರಿಗೆ ಆಗಿರುವ ನಷ್ಟ ಕೋಟಿಗಳ ಲೆಕ್ಕದಲ್ಲಿದೆ. ಅದು ಡಬಲ್ ಡಿಜಿಟ್ ಕೋಟಿ ಲೆಕ್ಕ. ಚಿತ್ರದ ಒಟಿಟಿ, ಡಿಜಿಟಲ್, ಡಬ್ಬಿಂಗ್.. ಇತ್ಯಾದಿಗಳನ್ನು ಬಿಡುಗಡೆಗೂ ಮೊದಲೇ ಮಾರಿದ್ದರೆ ನಿರ್ಮಾಪಕರು ಸೇಫ್ ಆಗುತ್ತಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಕಾಲ ಮಿಂಚಿ ಹೋಗಿದೆ.
ಮಾರ್ಕ್ : ಮ್ಯಾಕ್ಸ್ ಹಿಟ್ ಆಗಿದ್ದ ಹಿನ್ನೆಲೆಯಲ್ಲಿ ಬಂದ ಸಿನಿಮಾ ಮಾರ್ಕ್. ಸುದೀಪ್-ವಿಜಯ್ ಕಾರ್ತಿಕೇಯನ್-ಸತ್ಯಜ್ಯೋತಿ ಫಿಲಮ್ಸ್ ಜೋಡಿಯಲ್ಲಿ ಬಂದ ಮಾರ್ಕ್, ಅಭಿಮಾನಿಗಳ ನಿರೀಕ್ಷೆಯನ್ನು ಮಾತ್ರವೇ ರೀಚ್ ಆಗಿದೆ. ಸಿನಿಮಾ ಗೆಲ್ಲಬೇಕೆಂದರೆ ಅಭಿಮಾನಿಗಳಲ್ಲದವರೂ ಸಿನಿಮಾ ನೋಡಬೇಕು. ಹಾಗೆ ಆಗಿಲ್ಲ. ಸಿನಿಮಾ ರಿಲೀಸ್ ಆಗಿ ವಾರವೂ ಆಗಿಲ್ಲ. ಈಗಲೇ ಹೇಳುವುದು ಕಷ್ಟವಾದರೂ, ಸಿನಿಮಾ ಮ್ಯಾಕ್ಸ್ ಮ್ಯಾಜಿಕ್ ರಿಪೀಟ್ ಮಾಡಲಿಲ್ಲ ಎನ್ನುವುದಂತೂ ಸತ್ಯ. ಚಿತ್ರದ ಡಿಜಿಟಲ್ ರೈಟ್ಸ್, ಟಿವಿ ರೈಟ್ಸ್ ಇತ್ಯಾದಿ ಒಳ್ಳೆಯ ಮೊತ್ತಕ್ಕೆ ಸೇಲ್ ಆಗಿವೆ. ಹಾಗಾಗಿ ಸೇಫ್.
45 : 45. ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ನಟಿಸಿದ್ದ ಚಿತ್ರ. ಅರ್ಜುನ್ ಜನ್ಯ ನಿರ್ದೇಶನದ ಮೊದಲ ಸಿನಿಮಾ ಎಂಬುದೆಲ್ಲ ಓಕೆ. ಆದರೆ ಇಡೀ ಚಿತ್ರತಂಡ ಯಾವುದನ್ನು ತಮ್ಮ ಸಿನಿಮಾದ ಹೈಲೈಟ್ ಎಂದು ಹೇಳಿಕೊಂಡಿತ್ತೋ.. ಅದೇ ಚಿತ್ರದಲ್ಲಿ ಮೈನಸ್. ಗ್ರಾಫಿಕ್ಸ್ ಆನಿಮೇಷನ್ ನಿರೀಕ್ಷಿತ ಮಟ್ಟಕ್ಕೆ ತಲುಪಿಲ್ಲ. ಚಿತ್ರದ ಕಥೆ, ಸಂಭಾಷಣೆ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿವೆ. ಚಿತ್ರದಲ್ಲಿ ಮೂರ್ ಮೂರು ಸ್ಟಾರ್ಸ್ ಇದ್ದರೂ, ಚಿತ್ರಕ್ಕೆ ಅದ್ಭುತ ಓಪನಿಂಗ್ ಸಿಗಲೇ ಇಲ್ಲ.
ಈ ನಡುವೆ ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ ದಿಢೀರ್ ಸುದ್ದಿಗೋಷ್ಟಿ, ಅಲ್ಲಿ ಹೇಳಿಕೊಂಡ ಮಾತುಗಳು ಸಿನಿಮಾ ಗೆದ್ದಿದೆಯೋ.. ಇಲ್ಲವೋ.. ಎಂಬ ಬಗ್ಗೆ ಸ್ಪಷ್ಟ ಚಿತ್ರಣವನ್ನಂತೂ ಕೊಟ್ಟಿವೆ. ಆದರೆ 45 ಸಿನಿಮಾ ಸೋತಿಲ್ಲ. ಏಕೆಂದರೆ ಚಿತ್ರದ ನೆಗೆಟಿವ್ ಪ್ರಚಾರ ಮಾಡಬಾರದು ನಿರ್ಮಾಪಕರು ಕೋರ್ಟಿಂದ ಆದೇಶ ತಂದಿದ್ದಾರೆ. ಹಾಗಾಗಿ ಏನೂ ಹೇಳೋದಕ್ಕೆ ಆಗಲ್ಲ. ಸಿನಿಮಾಗೆ ಸುಮಾರು 40 ಕೋಟಿ ಬಂಡವಾಳ ಹೂಡಿದ್ದರಂತೆ. ಬಂಡವಾಳದ ಶೇ.10ರಷ್ಟು ಕೂಡಾ ಸದ್ಯಕ್ಕೆ ರಿಕವರ್ ಆಗಿಲ್ಲ.



