ಚನ್ನಪಟ್ಟಣದ ಉಪಚುನಾವಣಾ ಕಾವು ಜೋರಾಗಿದೆ. ಅಖಾಡದಲ್ಲಿ ಘಟಾನುಘಟಿಗಳ ಪ್ರಚಾರ ಜೋರಾಗಿದೆ. ಒಕ್ಕಲಿಗರ ಬಾಹುಳ್ಯ ಕ್ಷೇತ್ರದಲ್ಲಿ ತಮ್ಮ ಸಮುದಾಯದ ಮತ ಸೆಳೆಯಲು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಕೂಡ ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ. ಶತಾಯಗತಾಯ ಮೊಮ್ಮಗನನ್ನು ಗೆಲ್ಲಿಸಿಕೊಂಡೇ ಬರಬೇಕು ಎಂದು ಪ್ರತಿಜ್ಞೆ ಮಾಡಿದ್ದಾರೆ. ಚನ್ನಪಟ್ಟಣದ ಜನ ದ್ರೋಹ ಮಾಡಲ್ಲ. ನಿಖಿಲ್‌ರನ್ನ ಚುನಾವಣೆಯಲ್ಲಿ ಗೆಲ್ಲಿಸಿ ವಿಧಾನಸೌಧಕ್ಕೆ ಕರೆತಂದು ಕೂರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿರೋ ದೇವೇಗೌಡ 92ನೇ ವಯಸ್ಸಿನಲ್ಲಿಯೂ ಉತ್ಸಾಹದಿಂದ ಓಡಾಡುತ್ತಿದ್ದಾರೆ. ದೇವೇಗೌಡರ ಎಂಟ್ರಿ ಆದ ಕೂಡಲೇ ಕಾಂಗ್ರೆಸ್ ನಾಯಕರ ಕೌಂಟರುಗಳೆಲ್ಲವೂ ದೇವೇಗೌಡರ ಸುತ್ತುತ್ತಲೇ ಸುತ್ತುತ್ತಿವೆ. ಇದು ದೇವೇಗೌಡರ ತಾಕತ್ತು ಎಂದರೂ ಆಶ್ಚರ್ಯವಿಲ್ಲ.
ಅಂದಹಾಗೆ ದೇವೇಗೌಡರು ತಮ್ಮ ಸಾಧನೆಗಳ ಪಟ್ಟಿಯನ್ನೂ ಕೊಟ್ಟಿದ್ದಾರೆ. ಕೆಎಂಎಫ್, ಇಗ್ಗಲೂರು ಡ್ಯಾಂ, ಮಹಿಳೆಯರಿಗೆ ಮೀಸಲಾತಿ ತಂದಿದ್ದು, ವಿಠ್ಠಲೇನಹಳ್ಳಿ ಗೋಲಿಬಾರ್ ಆದಾಗ ತಾವು ರೈತರಿಗಾಗಿ ನಡೆಸಿದ ಹೋರಾಟ.. ಎಲ್ಲವನ್ನೂ ಪಟ್ಟಿದ್ದಾರೆ.
ನಾನು ಚನ್ನಪಟ್ಟಣ ಕ್ಷೇತ್ರಕ್ಕೆ ಏನು ಮಾಡಿದೆ ಅಂತ ಹೇಳಲ್ಲ. ಆದರೆ ಕೆಲಸದ ಪಟ್ಟಿ ಮಾಡಿ. ನಿಖಿಲ್ ಕುಮಾರಸ್ವಾಮಿ ಪರವಾಗಿ ಕೈಚಾಚಲು ಬಂದಿದ್ದೇನೆ ಎಂದಿರುವ ದೇವೇಗೌಡರು
ಹೈನುಗಾರಿಕೆಗೆ ಈ ಕ್ಷೇತ್ರದಲ್ಲಿ ಶಕ್ತಿ ಕೊಟ್ಟಿದ್ದು ಇದೇ ದೇವೇಗೌಡ. ನಾನು ಅಮುಲ್ ಸಂಸ್ಥೆ ಕಾರ್ಯಕ್ರಮದಲ್ಲಿ, ಕುರಿಯನ್ ಅವರಿಗೆ ಒಂದು ಮಿಲ್ಕ್ ಫೆಡರೇಷನ್ ರಾಜ್ಯದಲ್ಲಿ ಸ್ಥಾಪನೆ ಮಾಡಿ ಅಂತ ಕೇಳಿದೆ. ಆದರೆ ಅವರು ಆಗಲ್ಲ ಎಂದರು. ದೇಶಕ್ಕೊಂದೇ ತಾಜ್ ಮಹಲ್ ಇದೆ. ಹಾಗೆಯೇ ಒಂದು ಸಂಸ್ಥೆ ಮಾತ್ರ ಕಟ್ಟಲು ಸಾಧ್ಯ ಎಂದಿದ್ದರು. ಆದರೆ ಸವಾಲಾಗಿ ರಾಜ್ಯದಲ್ಲಿ ಮಿಲ್ಕ್ ಫೆಡರೇಶನ್ ಆಗಿದೆ. ಇದರ ಹಿಂದೆ ನನ್ನ ಪರಿಶ್ರಮ ಎಷ್ಟಿದೆ ಎಂದು ಹೇಳೋದಿಲ್ಲ ಎಂದಿರುವ ದೇವೇಗೌಡ ನಾನು ಇಗ್ಗಲೂರು ಡ್ಯಾಮ್ ನಾನು ಕಟ್ಟಿದೆ. ಆದರೆ ಅವರಾರೋ ಭಗಿರಥ, ನಾನು ನೀರು ತಂದೆ ಎನ್ನುತ್ತಾರೆ. ಇದು ಈ ರೈತನ ಮಗನ ಕೆಲಸ. ನಿಮ್ಮ ಮಣ್ಣಿನ ಮಗ ಮಾಡಿದ ಕೆಲಸ ಎಂದಿದ್ದಾರೆ.
ನಿಮಗೆ ಮೀಸಲಾತಿ ತಂದ ವ್ಯಕ್ತಿ ಇದ್ದರೆ ಅದು ದೇವೇಗೌಡ. 1995 ರಲ್ಲಿ ಮಹಿಳೆಯರಿಗೆ ಮೀಸಲಾತಿ ಕಾನೂನು ತಂದು ನಿಮ್ಮ ಮುಂದೆ ನಿಂತಿದ್ದೇನೆ. ಈಗಿರುವ ಸರ್ಕಾರ, ಒಂದು ಸರ್ಕಾರನಾ ? ನಿಮ್ಮ ಆತ್ಮಕ್ಕೆ ಪ್ರಶ್ನೆ ಹಾಕಿಕೊಳ್ಳಿ. ಇದನ್ನ ಸರ್ಕಾರ ಅಂತಾ ಕರೆಯುತ್ತೀರಾ ಎಂದಿರುವ ದೇವೇಗೌಡ ಮುಂದಿನ ಗುರಿ ಈ ಸರ್ಕಾರದ ಪತನ.
ಈ ಸರ್ಕಾರ ಪತನವಾಗುವವರೆಗೂ ಈ ದೇವೇಗೌಡ ವಿಶ್ರಾಂತಿ ಪಡೆಯುವುದಿಲ್ಲ ಎಂದು ಗುಡುಗಿದ್ದಾರೆ. . ಇನ್ನು ನಾಲ್ಕಾರು ವರುಷ ಬದುಕಿರುತ್ತೇನೆ. ಕೊನೆ ಉಸಿರು ಇರೋವರೆಗೆ ಹೋರಾಟ ಮಾಡುತ್ತೇನೆ ಎಂದಿದ್ದಾರಷ್ಟೇ ಅಲ್ಲ, ಪ್ರಧಾನಿ ನರೇಂದ್ರ ಮೋದಿಯವರ ಕೈಯ್ಯಲ್ಲೇ ಮೇಕೆದಾಟು ಯೋಜನೆ ಆರಂಭ ಮಾಡಿಸುತ್ತೇನೆ ಎಂದೂ ಹೇಳಿದ್ದಾರೆ.



