ದೇವೇಗೌಡರು ಸಾಮಾನ್ಯವಾಗಿ ಎಚ್ಚರಿಕೆ ಕೊಡುವ ಮಾತನಾಡುವವರಲ್ಲ. ಆದರೆ.. ಇತ್ತೀಚೆಗೆ ದೇವೇಗೌಡರು ಕುಮಾರಸ್ವಾಮಿಯವರನ್ನು ಕರೆದು, ಈಗಲೇ ಸರಿ ಮಾಡ್ಕೋ.. ಇಲ್ಲ ಅಂದ್ರೆ ಕಷ್ಟ ಎಂದು ಕಿವಿ ಮಾತು ಹೇಳಿದ್ದಾರಂತೆ. ಅದಕ್ಕೆ ಕಾರಣವಾಗಿರೋದು ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಜೆಡಿಎಸ ಪಕ್ಷ ಸಂಘಟನಾ ಯಾತ್ರೆ. ಸದಸ್ಯತ್ವ ಅಭಿಯಾನವೇನೋ ನಡೆಯುತ್ತಿದೆ. 10 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಸೇರ್ಪಡೆಯಾಗಿದ್ದಾರೆ. ಆದರೆ.. ಸಮಸ್ಯೆಯಾಗಿರುವುದು ಹಿರಿಯರ ಅನುಪಸ್ಥಿತಿ.
ಜೆಡಿಎಸ್ ಪಕ್ಷದಲ್ಲಿರುವ ಹಿರಿಯರಾದ ಸಿಎಸ್ ಪುಟ್ಟರಾಜು ಉತ್ಸಾಹ ತೋರಿಸುತ್ತಿಲ್ಲ. ಜಿಟಿ ದೇವೇಗೌಡರಂತೂ ಕಣ್ಣಿಗೇ ಕಾಣುತ್ತಿಲ್ಲ. ಜಿಟಿಡಿಯವರ ಪುತ್ರ ಹರೀಶ್ ಗೌಡ, ನಿಖಿಲ್ ಜೊತೆ ಇದ್ದಾರಾದರೂ.. ಅದು ಜಿಟಿ ದೇವೇಗೌಡರು ಇದ್ದ ಹಾಗಲ್ಲ. ದೇವೇಗೌಡರ ನಂತರ ಕುಮಾರಸ್ವಾಮಿ ಪಕ್ಷವನ್ನು ಹೇಗೆ ಮುನ್ನಡೆಸಿದರೋ, ಅದೇ ರೀತಿ ನಿಖಿಲ್ ಕೂಡ ಮುನ್ನಡೆಸುತ್ತಾರೆ ಎಂದು ಹರೀಶ್ ಗೌಡರೇ ಹೇಳ್ತಿದ್ದಾರೆ. ಆದರೆ.. ವಾಸ್ತವದಲ್ಲಿ ಹಾಗಾಗುತ್ತಿಲ್ಲ.
ದೇವೇಗೌಡರ ಎಂಟ್ರಿ..!
ಮೊಮ್ಮಗನ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದಿರುವ ದೇವೇಗೌಡರು ಆಘಾತದಲ್ಲೇ ಇದ್ದಾರೆ. ಏಕೆಂದರೆ ದೇವೇಗೌಡರ ನಿರೀಕ್ಷೆಯಂತೆ ಆಗುತ್ತಿಲ್ಲ. ಯಾಕೆ ಎಂದು ಹುಡುಕಿದಾಗ ಕಂಡಿರುವುದು ಕುಮಾರಸ್ವಾಮಿ. ಕುಮಾರಸ್ವಾಮಿ, ಕೇಂದ್ರ ಸಚಿವರಾಗಿದ್ದರೂ.. ವಾರಕ್ಕೊಮ್ಮೆ ಬಂದು ಹೋಗುತ್ತಾರೆ. ವಿಶೇಷವಾಗಿ ಶುಕ್ರವಾರವನ್ನೇ ಆಯ್ಕೆ ಮಾಡಿಕೊಂಡಿರುವ ಕುಮಾರಸ್ವಾಮಿ, ಬೆಂಗಳೂರಿಗೆ ಬಂದು ಹೋಗುತ್ತಿದ್ದಾರೆ. ಸುದ್ದಿಗೋಷ್ಠಿ ಮಾಡುತ್ತಾರೆ. ಆದರೆ.. ಒಬ್ಬರೇ ಒಬ್ಬ ಹಿರಿಯ ನಾಯಕರನ್ನು ಭೇಟಿ ಮಾಡುತ್ತಿಲ್ಲ.
ಸೀನಿಯರ್ ಲೀಡರುಗಳ ಸಮಸ್ಯೆ ಏನು ಕೇಳ್ಕೋ.. ಅವರ ಮಾತಿಗೆ ಕಿವಿ ಕೊಡು. ಬಗೆಹರಿಸಿಕೊಡು. ಈಗ ಇರುವುದೇ 18 ಶಾಸಕರು. ಅವರನ್ನೂ ಸರಿಯಾಗಿ ಇಟ್ಟುಕೊಳ್ಳದಿದ್ದರೆ ಹೇಗೆ.. ಪಕ್ಷವನ್ನು ಸಂಘಟಿಸುವ ರೀತಿ ಇದಲ್ಲ. ನಿಖಿಲ್‌ನನ್ನು ರಾಜ್ಯಾಧ್ಯಕ್ಷ ಮಾಡೋಕೆ ಹೊರಟಿದ್ದೀಯ.. ಹಾಗೆ ಮಾಡುವಾಗ ಪಕ್ಷದ ಹಿರಿಯರನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಹೇಗೆ.. ನಾಳೆ ಅವರು ಹೇಗೆ ಕೆಲಸ ಮಾಡ್ತಾರೆ.. ಸರಿಯಾಗಿ ಮಾತನಾಡಿಸುವುದಕ್ಕೂ ಆಗದಷ್ಟು ಕೆಲಸ ಇದೆಯೇ.. ಹಠದಿಂದ ರಾಜಕೀಯ ಮಾಡೋದು ಎದುರಾಳಿಗಳ ಜೊತೆ. ಪಕ್ಷದಲ್ಲೇ ಇರುವ, ನಮ್ಮವರೊಂದಿಗೆ ಅಲ್ಲ. ಈಗೋ ಸೈಡಿಗೆ ಇಟ್ಟು, ಅವರೆಲ್ಲರನ್ನೂ ಸರಿ ಪಡಿಸಿಕೋ.. ಇಲ್ಲದೇ ಹೋದರೆ.. ಪಕ್ಷಕ್ಕೆ ಯಾವುದೇ ಮಾನ್ಯತೆ ಇರುವುದಿಲ್ಲ ಎಂದು ಬುದ್ದಿ ಹೇಳಿದ್ದಾರೆ. ಕುಮಾರಸ್ವಾಮಿ ಎಲ್ಲ ಮಾತಿಗೂ ಆಯ್ತು.. ಆಯ್ತು ಎಂದು ತಲೆ ಆಡಿಸಿದ್ದಾರೆ. ಆದರೆ.. ಕುಮಾರಸ್ವಾಮಿಗೆ ದೇವೇಗೌಡರು ಈ ಬುದ್ದಿವಾದ ಹೇಳ್ತಿರೋದು ಇದೇ ಮೊದಲಲ್ಲ. ಈ ಹಿಂದೆಯೂ ಬುದ್ದಿ ಹೇಳಿದ್ದಾಗಿದೆ. ಆದರೆ.. ಕುಮಾರಸ್ವಾಮಿ ಕೇಳಿದಂತ ಮಾಡಿ.. ಸೈಡಿಗೆ ಹೋಗುತ್ತಿದ್ದಾರೆ. ಅದೇ ದೊಡ್ಡ ಸಮಸ್ಯೆ. ಮುಂದೊಂದು ದಿನ ಕುಮಾರಸ್ವಾಮಿಗೆ ಬೇಕು ಎಂದರೂ ಒಬ್ಬರೇ ಒಬ್ಬ ಆತ್ಮೀಯರು ಸಿಕ್ಕೋದಿಲ್ಲ. ಇದು ಒಳ್ಳೆಯ ನಡೆ ಅಲ್ಲ. ಕುಮಾರಸ್ವಾಮಿ ಅವರ ವ್ಯಕ್ತಿತ್ವ ಕಂಪ್ಲೀಟ್ ಚೇಂಜ್ ಆಗಿದೆ ಅಂತಾರೆ ಜೆಡಿಎಸ್ಸಿನಲ್ಲಿರುವ ಹಿರಿಯ ನಾಯಕರು.
ಅವರ ಪ್ರಕಾರ.. ನಿಖಿಲ್ ಜೆಡಿಎಸ್ ಅಧ್ಯಕ್ಷರಾಗುವುದು ಖಚಿತ. ಅದಾದ ನಂತರ ಈಗ ಜೆಡಿಎಸ್ಸಿನಲ್ಲಿರುವ 18 ಶಾಸಕರಲ್ಲಿ ಅರ್ಧಕ್ಕರ್ಧ ಶಾಸಕರು ಪಕ್ಷ ಬಿಡುವುದೂ ಖಚಿತ. ಉಳಿಸಿಕೊಳ್ಳೋಕೆ ಸಮಯ ಮೀರಿದೆ ಅಂತಾರೆ.



