ರಾಜ್ಯ ರಾಜಕಾರಣದಲ್ಲಿ ಎಲ್ಲವೂ ಚೇಂಜ್ ಆಗುತ್ತಿದೆ. ಜೆಡಿಎಸ್ ಮತ್ತು ಬಿಜೆಪಿ ಮಧ್ಯೆ ಮೈತ್ರಿ ಮಾತುಕತೆ ಜೋರಾಗಿಯೇ ನಡೆಯುತ್ತಿದೆ. ಇದೀಗ ದೇವೇಗೌಡರು ದೆಹಲಿಗೆ ಹೋಗಿ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಬಂದಿದ್ದಾರೆ. ದಿಲ್ಲಿ ಬಿಜೆಪಿ ಮೂಲಗಳು ಮತ್ತು ದೇವೇಗೌಡರ ಆಪ್ತ ವಲಯ ಒಪ್ಪಿಕೊಂಡಿರುವ ಪ್ರಕಾರ, ಸೆಪ್ಟೆಂಬರ್ 4ಕ್ಕೆ ದಿಲ್ಲಿಗೆ ಹೋಗಿದ್ದ ದೇವೇಗೌಡರು ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಇಬ್ಬರ ಜೊತೆಗೂ ಕೂಡ ಅಧಿಕೃತ ಮಾತುಕತೆ ನಡೆಸಿ ಬಂದಿದ್ದಾರೆ.
ಈಗಾಗಲೇ ಕುಮಾರಸ್ವಾಮಿ ಅವರ ಜೊತೆ ಒಂದು ಸುತ್ತಿನ ಮಾತುಕತೆ ನಡೆದಿತ್ತು. ಮೇ ತಿಂಗಳಲ್ಲಿ ನಡೆದ ಆ ಮಾತುಕತೆ ವರ್ಕೌಟ್ ಆಗಿರಲಿಲ್ಲ. ಏಕೆಂದರೆ ಅಮಿತ್ ಶಾ ಅವರು ಬಿಜೆಪಿ ಜೊತೆ ಜೆಡಿಎಸ್ ವಿಲೀನ ಆಗಲಿ ಎಂದು ಹೇಳಿದ್ದರು. ಇಲ್ಲ ಅದು ಸಾಧ್ಯವಾಗುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿ ಬಂದಿದ್ದರು. ಮೂಲಗಳು ಹೇಳುತ್ತಿರುವ ಪ್ರಕಾರ, ಅಮಿತ್ ಶಾ- ಕುಮಾರಸ್ವಾಮಿ ಭೇಟಿ ಆದ ಮೇಲೆ ಸ್ವತಃ ಪ್ರಧಾನಿ ಮೋದಿ ಅವರು ದೇವೇಗೌಡರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದರು. ಈಗ ಅಮಿತ್ ಶಾ ಮತ್ತು ಜೆ.ಪಿ. ನಡ್ಡಾ ಜೊತೆಗಿನ ಮಾತುಕತೆಯಲ್ಲಿ ದೇವೇಗೌಡರಿಗೆ 4 ಸೀಟು ಬಿಟ್ಟು ಕೊಡಲು ತಯಾರಿದ್ದೇವೆ ಎಂದು ಬಿಜೆಪಿಗರು ಹೇಳಿದ್ದಾರೆ. ಹಾಸನ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಬಿಟ್ಟು ಕೊಡಲು ಬಿಜೆಪಿ ತಯಾರಿದ್ದು, ಇನ್ನೊಂದು ಸೀಟು ಯಾವುದು ಎನ್ನುವುದು ತೀರ್ಮಾನ ಆಗಿಲ್ಲ. ಸೆಪ್ಟೆಂಬರ್ 10ರಂದು ನಾಯಕರ ಜೊತೆ ಒಂದು ಸುತ್ತಿನ ಚರ್ಚೆಯ ನಂತರ ದೇವೇಗೌಡರು ಕುಮಾರಸ್ವಾಮಿ ಜೊತೆ ಇನ್ನೊಂದು ಸುತ್ತಿನ ಚರ್ಚೆ ನಡೆಸಿ ಮೈತ್ರಿಗೆ ಅಂತಿಮ ಸ್ವರೂಪ ಕೊಡೋಣ ಎಂದು ಹೇಳಿ ಬಂದಿದ್ದಾರೆ.
ಈಗಾಗಲೇ ದೇವೇಗೌಡರು ಮೋದಿಯವರ ಜೊತೆ ಎಲ್ಲವನ್ನೂ ಮಾತುಕತೆ ನಡೆಸಿದ್ದು, ರಾಜ್ಯ ರಾಜಕೀಯದ ಚಿತ್ರಣ ಕೊಟ್ಟಿದ್ದಾರಂತೆ. ಅಮಿತ್ ಶಾ ಮಾತುಕತೆಗಿಂತ ಮುಂಚೆ ಪ್ರಧಾನಿ ಮೋದಿ ಸ್ವತಃ ದೇವೇಗೌಡರ ಜೊತೆಗೆ ಸ್ಥಳೀಯ ರಾಜಕೀಯ ಸ್ಥಿತಿಯ ಬಗ್ಗೆ ಸುದೀರ್ಘ ದೂರವಾಣಿ ಚರ್ಚೆ ನಡೆಸಿದ್ದಾರೆ. ಅದಾದ ಮೇಲೆಯೇ ಗೌಡರು ದಿಲ್ಲಿಗೆ ಹೋಗಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ದೇವೇಗೌಡರು ಬಿಜೆಪಿ ಜೊತೆ ಹೋಗಲು ಏನು ಕಾರಣ?
ಕಾರಣಗಳು ಹಲವಾರಿವೆ. ಒಂದಲ್ಲ.. ಎರಡಲ್ಲ.. ಮೊದಲನೆಯದಾಗಿ ಹೇಳಬೇಕೆಂದರೆ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಂಡ ಹೀನಾಯ ಸೋಲು. ರಾಜ್ಯದಲ್ಲಿ ಡಿ.ಕೆ. ಶಿವಕುಮಾರ ದಿನದಿಂದ ದಿನಕ್ಕೆ ಪ್ರಬಲ ಆಗುತ್ತಿರುವಾಗ ದೇವೇಗೌಡರಿಗೆ ಕೂಡ ಈ ವಿಪರೀತ ಪರಿಸ್ಥಿತಿಯಲ್ಲಿ ಈಜಬೇಕಾದರೆ ಕಾಂಗ್ರೆಸ್ ಅಥವಾ ಬಿಜೆಪಿಯಂತಹ ದೊಡ್ಡ ದೋಣಿಯ ಆಸರೆ ಅನಿವಾರ್ಯ. ಏಕೆಂದರೆ ಕಾಂಗ್ರೆಸ್ ಇದ್ದಕ್ಕಿದ್ದಂತೆ ಬಲಶಾಲಿಯಾಗಿ ತೋರುತ್ತಿದ್ದು, ಬಿಜೆಪಿ ಮತ್ತು ಜೆಡಿಎಸ್ ಎರಡನ್ನೂ ಆಪೋಶನ ತೆಗೆದುಕೊಳ್ಳುವ ಹಾದಿಯಲ್ಲಿದೆ. ಒಂದಾಗದಿದ್ದರೆ ಉಳಿಗಾಲವಿಲ್ಲ ಎನ್ನುವುದು ಜೆಡಿಎಸ್ ಮತ್ತು ಬಿಜೆಪಿ ಎರಡಕ್ಕೂ ಅರ್ಥವಾಗಿದೆ. ಕಾಂಗ್ರೆಸ್ ಅಂತೂ ಸಿದ್ದು ಮತ್ತು ಡಿಕೆಶಿ ನೇತೃತ್ವ ಇರುವಾಗ ಹತ್ತಿರ ಸೇರಿಸಿಕೊಳ್ಳುವುದಿಲ್ಲ. ಹೀಗಾಗಿ ಬಿಜೆಪಿ ಜೊತೆಗೆ ಹೋಗುವುದೇ ಜಾಣತನ ಎಂಬ ನಿರ್ಧಾರಕ್ಕೆ ದೇವೇಗೌಡರು ಬಂದಿದ್ದಾರೆ ಎನ್ನುವುದು ಸದ್ಯದ ವಿಶ್ಲೇಷಣೆ.
ಇನ್ನು ದೆಹಲಿ ಮಟ್ಟದಲ್ಲಿ ದೇವೇಗೌಡರ ಆಪ್ತರಾದ ಲಾಲು, ಮುಲಾಯಂ, ಸುರ್ಜಿತ್, ಯೆಚೂರಿ ಮೊದಲಾದ ನಾಯಕರೂ ಹಾಗೂ ಇದೀಗ ಕಾಂಗ್ರೆಸ್ ಮಿತ್ರರಾಗಿರುವ ಲಾಲು, ಮಮತಾ, ಅಖಿಲೇಶ್, ನಿತೀಶ್ ಕುಮಾರರಿಗೆ ಕೂಡಾ ಈಗ ದೇವೇಗೌಡರು ಬೇಕಿಲ್ಲ. ಏಕೆಂದರೆ ಅವರಿಗೆ ದೇವೇಗೌಡರಿಂದ ಸದ್ಯಕ್ಕೆ ಲಾಭ ಇಲ್ಲ. ನಷ್ಟವೇ ಹೆಚ್ಚು. ಲಾಭ ಇದ್ದ ಕಡೆ ವಾಲುವುದೇ ರಾಜಕೀಯ.
ಇನ್ನೊಂದು ಕಡೆ ಬಿಜೆಪಿ ಕೂಡ ಹಳೇ ಮೈಸೂರು ಭಾಗದ 8 ಕ್ಷೇತ್ರಗಳಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳದೆ ಚುನಾವಣೆಗೆ ಹೋದರೆ ಕಾಂಗ್ರೆಸ್ಗೆ ಲಾಭ ಆಗುತ್ತದೆ ಎಂಬ ಕಾರಣದಿಂದ ಕರ್ನಾಟಕದ ನಾಯಕರ ವಿರೋಧದ ಹೊರತಾಗಿಯೂ ಜೆಡಿಎಸ್ ಜೊತೆ ಹೋಗುವ ತೀರ್ಮಾನವನ್ನು ಮೋದಿ ಮತ್ತು ಅಮಿತ್ ಶಾ ತೆಗೆದುಕೊಂಡಿದ್ದಾರೆ ಅನ್ನಿಸುತ್ತದೆ.
ಅಂದಹಾಗೆ ಇಷ್ಟೆಲ್ಲ ಆಗಿಯೂ ಬಿಜೆಪಿಗೂ ಅನಿವಾರ್ಯತೆ ಇದೆ. ರಾಜ್ಯದಲ್ಲಿ ಯಡಿಯೂರಪ್ಪ ನಿರ್ಗಮನದ ನಂತರ ಬಿಜೆಪಿ ನಾಯಕರು ಒಬ್ಬರನ್ನೊಬ್ಬರು ನಂಬದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮೋದಿ ಮತ್ತು ಅಮಿತ್ ಶಾ ದೇವೇಗೌಡರನ್ನೇ ನಂಬುವ ಪರಿಸ್ಥಿತಿ ತಲೆದೋರಿದೆ.



