ರಾಜ್ಯ ರಾಜಕೀಯದ, ಚುನಾವಣೆಯಲ್ಲಿ ಎರಡು ಅಧ್ಯಾಯಗಳಿರುತ್ತವೆ. ಅದರಲ್ಲೂ ಒಕ್ಕಲಿಗರ ಪ್ರಾಬಲ್ಯ ಇರುವ ಪ್ರದೇಶಗಳಲ್ಲಿ. ದೇವೇಗೌಡರು ಬರುವ ಮುನ್ನ.. ದೇವೇಗೌಡರು ಎಂಟ್ರಿ ಕೊಟ್ಟ ನಂತರ..
ಚನ್ನಪಟ್ಟಣದ ಪರಿಸ್ಥಿತಿಯೂ ಹಾಗೆಯೇ ಇದೆ.
ನೀವು ಟೀಕಿಸಬಹುದು. ರಾಜಕೀಯ ವಿರೋಧಿಗಳು ಹಾರಾಡಬಹುದು. ಕೂಗಾಡಬಹುದು. ಗೆದ್ದರೂ ಗೆಲ್ಲಬಹುದು. ಆದರೆ ದೇವೇಗೌಡರ ಎಂಟ್ರಿ ಆದ ಮೇಲೆ ಗೇಮ್ ಚೇಂಜ್ ಆಗುತ್ತೆ ಎನ್ನುವುದನ್ನು ನಿರಾಕರಿಸಲು ಸಾಧ್ಯವಿಲ್ಲ. ನನಗೀಗ 92 ವರ್ಷ. ಈ ವಯಸ್ಸಿನಲ್ಲೂ ಪ್ರಚಾರಕ್ಕೆ ಬಂದಿದ್ದೇನೆ. ದೇವೇಗೌಡರ ಕೈ ನಡುಗುತ್ತವೆ. ಅವರು ಪ್ರಚಾರಕ್ಕೆ ಬರುತ್ತಾರಾ ಎಂದೆಲ್ಲ ಕನ್ವರ್ಟೆಡ್ ಕಾಂಗ್ರೆಸ್ಸಿಗ ಜಂಟಲ್‌ಮ್ಯಾನ್ ಯೋಗೇಶ್ವರ ಕೇಳುತ್ತಾರೆ. (ಯೋಗೇಶ್ವರ್ ಎಂದು ಹೆಸರು ಹೇಳಲ್ಲ) ನಾನು ಪ್ರಚಾರಕ್ಕೆ ಬರುತ್ತೇನೆ. ಹನ್ನೊಂದನೇ ತಾರೀಖಿನವರೆಗೂ ಪ್ರಚಾರಕ್ಕೆ ಬರುತ್ತೇನೆ. ನಾನು ಆಂಬುಲೆನ್ಸಿನಲ್ಲಿ ಬಂದಿಲ್ಲ.. ನೀವೇ ನೋಡಿದ್ದೀರಲ್ಲ.. ಎಂದೆಲ್ಲ ಮಾತನಾಡಿ ಪ್ರಚಾರ ಮಾಡುತ್ತಿದ್ದರೆ, ಟೆನ್ಷನ್ ಆಗಿರುವುದು ಕಾಂಗ್ರೆಸ್ಸಿಗರು.
ದೇವೇಗೌಡರೇ ಏಕೆ ನೀವು ನಿಮ್ಮ ಮೊಮ್ಮಗನನ್ನು ನಿಲ್ಲಿಸಿದ್ದೀರಿ ಎಂದು ಯಾರಾದರೂ ಕೇಳಬಹುದು. ಯಾವ ಕನ್ನರ್ಟಡ್ ಕಾಂಗ್ರೆಸ್ ನಾಯಕ ಇದ್ದಾರೋ, ಅವರನ್ನು ಬಿಜೆಪಿಯಿಂದಲಾದರೂ ನಿಲ್ಲಿ ಜೆಡಿಎಸ್ ನಿಂದಲಾದರೂ ನಿಲ್ಲಿ ಎಂದು ಹೇಳಿದ್ದು ನಾವು. ಅವರು ಅತ್ತ ಬಿಜೆಪಿಗೂ ನಿಷ್ಠರಾಗಿ ಇರಲಿಲ್ಲ. ನಮ್ಮ ಮಾತೂ ಕೇಳಲಿಲ್ಲ. ಈ ಕುತಂತ್ರಕ್ಕೆ ಸಡ್ಡು ಹೊಡೆಯೋಕೆ ನಿಖಿಲ್ ಸರಿಯಾದ ಅಭ್ಯರ್ಥಿ ಎಂದು ಎಲ್ಲರೂ ಹೇಳಿದ ಕಾರಣ ನಿಖಿಲ್ ನಿಂತಿದ್ದಾನೆ ಎಂದಿದ್ದಾರೆ ದೇವೇಗೌಡ.
ರಾಜ್ಯ ರಾಜಕೀಯದಲ್ಲಿ ಅದರಲ್ಲಿಯೂ ಜೆಡಿಎಸ್ʻನಲ್ಲಿ ಇರುವ ನಾಯಕರಲ್ಲಿ ಒಂದು ಅಘೋಷಿತ ನಿರ್ಧಾರ ಸ್ಥಳೀಯ ನಾಯಕರಲ್ಲಿದೆ. ಅವರು ಕುಮಾರಸ್ವಾಮಿ, ನಿಖಿಲ್ ಅಥವಾ ಪಕ್ಷದ ಇನ್ಯಾವ ನಾಯಕರನ್ನೇ ಆಗಲಿ, ವಿರೋಧಿಸ್ತಾರೆ. ಆದರೆ ದೇವೇಗೌಡರನ್ನಲ್ಲ. ದೇವೇಗೌಡರು ಎಂಟ್ರಿ ಕೊಟ್ಟ ಮೇಲೆ ಜೆಡಿಎಸ್ʻನಲ್ಲಿರುವ ನಾಯಕರ ಪರಿಚಯವೂ ಇಲ್ಲದ ಸ್ಥಳೀಯ ಕಾರ್ಯಕರ್ತರು ಉತ್ಸಾಹದಿಂದ ಎಲೆಕ್ಷನ್ನಿಗೆ ಧುಮುಕುತ್ತಾರ. ಚನ್ನಪಟ್ಟಣ ಗೇಮ್ ಆಗಿರುವುದು ಇದೇ ಕಾರಣಕ್ಕೆ.
ಹೀಗಾಗಿಯೇ.. ಸಿದ್ದರಾಮಯ್ಯ, ಡಿಕೆ ಬ್ರದರ್ಸ್ ಸ್ವಲ್ಪ ಟೆನ್ಷನ್ ಆದಂತೆ ಕಾಣುತ್ತಿದೆ. ಹಾಗಂತ ಡಿಕೆ ಸೋದರರನ್ನು ಕಡೆಗಣಿಸುವ ಹಾಗಿಲ್ಲ. 2019ರಲ್ಲಿ ಕುಮಾರಸ್ವಾಮಿಯೇ ಎರಡು ಸುತ್ತುಗಳಲ್ಲಿ ಹಿನ್ನಡೆ ಅನುಭವಿಸಿದ್ದರು. ಚನ್ನಪಟ್ಟಣ ವಿಧಾನಸಭೆ ಕ್ಷೇತ್ರ ಕಳೆದ 15 ವರ್ಷದಲ್ಲಿ ರಾಜಕೀಯ ಮೇಲಾಟಗಳಿಂದಾಗಿಯೇ ಮೂರು ಉಪಚುನಾವಣೆಗಳನ್ನು ಕಾಣುತ್ತಿರುವ ಅಪರೂಪದ ಕ್ಷೇತ್ರವಾಗಿ ಗುರುತಿಸಲ್ಪಡುತ್ತಿದೆ. 2009, 2011 ಹಾಗೂ 2024 ರ ಈ ಅವಧಿಯಲ್ಲಿ ಉಪ ಚುನಾವಣೆಗಳು ನಡೆದರೆ, 2008, 2013 ಹಾಗೂ 2023 ರಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆಗಳು ನಡೆದಿದ್ದು, ಇಷ್ಟು ಚುನಾವಣೆಗಳನ್ನು ಕ್ಷೇತ್ರ ಎದುರಿಸಲು ರಾಜಕೀಯ ಮೇಲಾಟಗಳು ಕಾರಣವೇ ಹೊರತು ಬೇರಾವ ಕಾರಣಗಳಿಲ್ಲ ಎಂಬುದು ಸತ್ಯ.
ಮೂರು ಉಪ ಚುನಾವಣೆಗಳ ಪೈಕಿ ಎರಡು ಉಪ ಚುನಾವಣೆಗಳು ಎರಡು ವರ್ಷಗಳ ಅಂತರದಲ್ಲಿ ನಡೆದರೆ ಮೂರನೇ ಉಪ ಚುನಾವಣೆ ಹದಿಮೂರು ವರ್ಷಗಳ ಬಳಿಕ ನಡೆಯುತ್ತಿದೆ. ವಿಶೇಷತೆ ಏನೆಂದರೆ ಈ ಮೂರರಲ್ಲೂ ಅಭ್ಯರ್ಥಿಯಾಗಿ ಕಾಣಿಸಿಕೊಳ್ಳುತ್ತಿರುವುದು ಸಿ.ಪಿ.ಯೋಗೇಶ್ವರ್. ಒಮ್ಮೊಮ್ಮೆಯೂ ಒಂದೊಂದು ಪಕ್ಷದ ಅಭ್ಯರ್ಥಿ.
ಚನ್ನಪಟ್ಟಣದಲ್ಲಿ ಇರೋದು ಸುಮಾರು 2.30 ಲಕ್ಷ ಮತದಾರರು. ಇವರಲ್ಲಿ 1 ಲಕ್ಷಕ್ಕೂ ಹೆಚ್ಚು ಒಕ್ಕಲಿಗರಿದ್ದಾರೆ. ಒಕ್ಕಲಿಗರನ್ನು ಹೊರತು ಪಡಿಸಿದರೆ 40 ಸಾವಿರಷ್ಟು ದಲಿತ, 30 ಸಾವಿರ ಅಲ್ಪಸಂಖ್ಯಾತ (ಮುಸ್ಲಿಂ), ಕುರುಬರು 7 ಸಾವಿರ, ಬೆಸ್ತರು ಮತ್ತು ತಿಗುಳರು ತಲಾ 10 ಸಾವಿರ, ಇತರೆ ಹಿಂದುಳಿದ ವರ್ಗಗಳು 25 ಸಾವಿರ, , ಲಿಂಗಾಯತರು, ಬ್ರಾಹ್ಮಣರು ಹಾಗೂ ಇನ್ನಿತರ ಮುಂದುವರಿದ ಸಮುದಾಯಗಳಲ್ಲಿ5 ಸಾವಿರದಷ್ಟು ಮತಗಳು ಇವೆ.
ವಿಶೇಷವಾಗಿ ಮುಸ್ಲಿಂ ಪ್ರಾಬಲ್ಯದ ಮತಗಟ್ಟೆಗಳಲ್ಲಿ ಕುಮಾರಸ್ವಾಮಿಯೇ ಹಿನ್ನಡೆ ಅನುಭವಿಸಿದ್ದರು.
ಇಷ್ಟು ಮತಗಳಲ್ಲಿ ಯೋಗೇಶ್ವರ್ ಅವರ ಶಕ್ತಿ 50ರಿಂದ 60 ಸಾವಿರ ಮತದಾರರು. ಇನ್ನು ಕಾಂಗ್ರೆಸ್ಸಿನಿಂದ 30 ರಿಂದ 40 ಸಾವಿರ ಮತ ಸಿಕ್ಕರೂ ಯೋಗೇಶ್ವರ್ ಗೆಲುವು ಸಲೀಸು. ಆದರೆ ದೇವೇಗೌಡರ ಎಂಟ್ರಿ ಆದ ಮೇಲೆ ಯೋಗೇಶ್ವರ್ ಮತ್ತು ಕಾಂಗ್ರೆಸ್ಸಿನ ಮತಬುಟ್ಟಿಯಿಂದ 10ರಿಂದ 20 ಸಾವಿರ ಮತಗಳು ಎಗರುತ್ತವೆ ಎನ್ನುವುದು ನಿರೀಕ್ಷೆ. ಇವು ನಿರೀಕ್ಷೆಗಳಷ್ಟೇ. ಗೇಮ್ ಆಡೋದು ಡಿಕೆ ಬ್ರದರ್ಸ್. ಅಷ್ಟು ಸುಲಭ ಇರಲ್ಲ.



