ಪ್ರತಿಯೊಬ್ಬ ಯಶಸ್ವೀ ಪುರುಷನ ಬೆನ್ನ ಹಿಂದೆ ಒಬ್ಬ ಮಹಿಳೆ ಇರುತ್ತಾರೆ ಎನ್ನುವುದು ನಂಬಿಕೆ. ಆ ನಂಬಿಕೆಗೆ ತಕ್ಕಂತೆ ಮಾಜಿ ಪ್ರಧಾನಿ ದೇವೇಗೌಡರ ಯಶಸ್ಸಿನ ಹಿಂದಿರುವ ಶಕ್ತಿ ಚೆನ್ನಮ್ಮ. ಚೆನ್ನಮ್ಮನವರನ್ನು ತಮಗೆ ಸಿಕ್ಕ ಗೌರವ, ಪ್ರಶಸ್ತಿಯನ್ನೆಲ್ಲ ಪತ್ನಿಗೆ ಅರ್ಪಿಸಿದ್ದಾರೆ. ಹೆಚ್‌ಡಿ ದೇವೇಗೌಡ ಅಭಿನಂದನಾ ಸಮಿತಿ ದೇವೇಗೌಡರಿಗೆ ʻಗಂಗಾ ಸಾಮ್ರಾಟ ಶ್ರೀಪುರುಷ ಪ್ರಶಸ್ತಿʼ ನೀಡಿ ಗೌರವಿಸಿದೆ. 93 ಸಾರ್ಥಕ ವಸಂತಗಳನ್ನು ಪೂರೈಸಿರುವ ಹೆಚ್ ಡಿ ದೇವೇಗೌಡ ಅವರಿಗೆ ಆದಿಚುಂಚನಗಿರಿ ಮಠದ ಶ್ರೀ, ಸುತ್ತೂರು ಶ್ರೀಗಳು, ಮಾದಾರ ಚನ್ನಯ್ಯ ಶ್ರೀಗಳು, ನಂಜಾವಧೂತ ಶ್ರೀಗಳು ದೇವೇಗೌಡರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಈ ವೇಳೆ ಮಾತನಾಡಿದ ದೇವೇಗೌಡ ತಮಗೆ ಸಿಕ್ಕ ಈ ಗೌರವ, ಪ್ರಶಸ್ತಿ, ಸಾಧನೆಯ ಹಿಂದೆ ಪತ್ನಿ ಚೆನ್ನಮ್ಮನವರ ಕಾಣಿಕೆ ದೊಡ್ಡದು ಎಂದಿದ್ದಾರೆ.
ತಮಗೆ ನೀಡಲಾದ ಈ ಪ್ರಶಸ್ತಿಗೆ ಸಮಸ್ತ ಕನ್ನಡಿಗರ ಪ್ರೀತಿ, ವಿಶ್ವಾಸ ಕಾರಣ ಹಾಗೂ ನನ್ನ ಬದುಕಿನುದ್ದಕ್ಕೂ ನನ್ನ ಪಾಲಿನ ಶಕ್ತಿಯಾಗಿ ಉಳಿದಿರುವ ನನ್ನ ಶ್ರೀಮತಿ ಚನ್ನಮ್ಮ ಅವರಿಗೆ ನನ್ನ ಯಶಸ್ಸಿನ ಶ್ರೇಯಸ್ಸು ಸಲ್ಲಬೇಕು ಎಂದಿದ್ದಾರೆ. ಇದೇ ವೇಳೆ ನಮ್ಮ ಹಿಂದಿನ ಗುರುಗಳೊಂದಿಗೆ ಒಂದು ಹಂತದಲ್ಲಿ ಸ್ವಲ್ಪ ವ್ಯತ್ಯಾಸವಾಗಿತ್ತು. ಅವರ ಜೊತೆ ಸಂತ್ಯಾಂಶವನ್ನೆಲ್ಲಾ ಹೇಳಿದ್ದೇನೆ. ಆದರೆ ಎಲ್ಲಾ ಸಂಧರ್ಭದಲ್ಲಿಯೂ ನನಗೆ ಶಕ್ತಿ ತುಂಬಿದ್ದಾರೆ ಎಂದು ಹೇಳಿದ ದೇವೇಗೌಡರು, ಬಾಲಗಂಗಾಧರ ನಾಥ ಸ್ವಾಮಿಗಳ ಜೊತೆ ವೈಮನಸ್ಯ ಇದ್ದದ್ದನ್ನು ಒಪ್ಪಿಕೊಂಡಿದ್ದಾರೆ.
ನನ್ನ ಅಭಿಮಾನಿಗಳು ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ನನಗೇನು ಹೇಳಬೇಕು ಎಂದೇ ಗೊತ್ತಾಗ್ತಿಲ್ಲ. ಎಲ್ಲಾ ಸ್ವಾಮೀಜಿಗಳು, ಗುರುಗಳೂ ಇದ್ದಾರೆ. ಜೀವನದ ಕೊನೆಯ ಹಂತದಲ್ಲಿ ಅದೊಂದೇ ಈ ಆತ್ಮಕ್ಕೆ ಸಮಾಧಾನ. 65 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ನನಗೆ ಪ್ರತಿಯೊಂದು ಸಮಾಜವೂ ಸಹಕಾರ ಕೊಟ್ಟಿದೆ. ಸೋಲು, ಗೆಲುವು ರಾಜಕೀಯದಲ್ಲಿ ಸಹಜ. 16 ಎಂಪಿ ಸ್ಥಾನವನ್ನ ನಾವು ಗೆದ್ದಿದ್ದೆವು. ಸಾಮಾನ್ಯ ರೈತನ ಮಗ ಆ ಮಟ್ಟಕ್ಕೆ ಹೋಗಬೇಕಿದ್ರೆ, ಎಲ್ಲಾ ಸಮಾಜ ನನಗೆ ಆಶೀರ್ವಾದ ಮಾಡಿದೆ. ಅವರೆಲ್ಲರಿಗೂ ನಾನು ಋಣಿಯಾಗಿದ್ದೇನೆ. ಅಂಬೇಡ್ಕರ್‌ನಗರದಲ್ಲಿ ರಂಗೋಲಿ ಹಾಕಿ ಆರತಿ ಎತ್ತಿದ್ದರು. ಕೆಲವರು ಐದು ರುಪಾಯಿ ಸಹ ಕೊಟ್ಟಿದ್ದರು. 16 ಪಾರ್ಲಿಮೆಂಟ್ ಸೀಟ್ ಬರಲು ಎಲ್ಲರೂ ಸಹಕಾರ ನೀಡಿದ್ದಾರೆ ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಪ್ರಧಾನಿ ಮೋದಿಯನ್ನೂ ಹೊಗಳಿದ ದೇವೇಗೌಡ 93 ವರ್ಷ ನನಗೆ, ನನಗೇನ್ ಶಕ್ತಿ ಇದೆ. ಆದರೆ ಒಂದು ಮಾತು ಹೇಳ್ತೇನೆ. ಪ್ರಧಾನಿಯನ್ನ ಹೊಗಳಲು ನಾನು ಬಂದಿಲ್ಲ. ಮೋದಿಗೆ ಎಲ್ಲರನ್ನೂ ಕನ್ವಿನ್ಸ್ ಮಾಡುವ ಶಕ್ತಿ ಇದೆ ಎನ್ನುವ ಮೂಲಕ ಮೋದಿಯನ್ನೂ ಹೊಗಳಿದ್ದಾರೆ. ಇದೇ ವೇಳೆ ಎಚ್.ಡಿ. ದೇವೇಗೌಡ ಕುರಿತಾದ ‘ಬದುಕು ಮತ್ತು ಸಾಧನೆ’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಅಲ್ಲದೆ, 93 ಸಾಧಕರಿಗೆ ಎಚ್.ಡಿ. ದೇವೇಗೌಡ ಪ್ರಶಸ್ತಿ ನೀಡಿ, ಸನ್ಮಾನಿಸಲಾಯಿತು.
ಸುತ್ತೂರು ಮಠದ ಪೀಠಾಧ್ಯಕ್ಷ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಪೀಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ, ಸೌಮ್ಯನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಡಾ. ನಿಶ್ಚಲಾನಂದನಾಥ ಸ್ವಾಮೀಜಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಉಪಸ್ಥಿತರಿದ್ದರು.



