ಒಂದ್ ಕಡೆ ಜಾತಿಗೊಬ್ಬರು ಡಿಸಿಎಂ ಆಗಲಿ ಎಂದು ಸಿದ್ದರಾಮಯ್ಯ ಬಣದ ನಾಯಕರು ಹೊಡೆದಾಡುತ್ತಿದ್ದಾರೆ. ಜಮೀರ್ ಅಹ್ಮದ್, ಸತೀಶ್ ಜಾರಕಿಹೊಳಿ, ಎಂಬಿ ಪಾಟೀಲ್, ಕೆಎನ್ ರಾಜಣ್ಣ, ಹೆಚ್.ಸಿ.ಮಹದೇವಪ್ಪ.. ಮೊದಲಾದವರೆಲ್ಲ ಸಿದ್ದು ಬಣದವರು. ಡಿಕೆಶಿ ಒಬ್ಬರೇ ಯಾಕೆ ಡಿಸಿಎಂ ಎಂದು ಪ್ರಶ್ನೆ ಮಾಡಿದ್ದರ ಬೆನ್ನಲ್ಲೇ, ಸಿಎಂ ಎದುರೇ ಸಿಎಂ ಬದಲಾವಣೆಯಾಗಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಒಕ್ಕಲಿಗರ ಸ್ವಾಮೀಜಿಗಳಲ್ಲಿ ಆದಿ ಚುಂಚನಗಿರಿ ಮಠಕ್ಕೆ ಇರುವ ಪ್ರಾಮುಖ್ಯತೆ ದೊಡ್ಡದು ನಿಜ. ಆದರೆ, ಕೆಂಗೇರಿ ಆದಿಚುಂಚನಗಿರಿ ಶಾಖಾ ಮಠಕ್ಕೂ ಮಹತ್ವ ಇದೆ. ಆ ಮಠದ ಚಂದ್ರಶೇಖರ ಸ್ವಾಮೀಜಿಯವರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರಲ್ಲೇ ಒಕ್ಕಲಿಗ ನಾಯಕ ಡಿ.ಕೆ. ಶಿವಕುಮಾರ್ ಅವರನ್ನು ಸಿಎಂ ಮಾಡುವಂತೆ ಒತ್ತಾಯ ಮಾಡಿದ್ದಾರೆ. ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಿ ಸರ್ಕಾರ ಅಧಿಕಾರಕ್ಕೆ ತರಲು ನಿಮ್ಮೊಂದಿಗೆ ಶ್ರಮಿಸಿದ ಡಿ.ಕೆ. ಶಿವಕುಮಾರ್ ಮಾತ್ರ ಈವರೆಗೆ ಸಿಎಂ ಆಗಿಲ್ಲ. ಸಿದ್ದರಾಮಯ್ಯ ದಯವಿಟ್ಟು ಡಿಕೆಶಿಗೆ ಅಧಿಕಾರ ಬಿಟ್ಟು ಕೊಡಬೇಕು. ಸಿದ್ದರಾಮಯ್ಯ ಅವರು ಮನಸ್ಸು ಮಾಡಿದ್ರೆ ಮಾತ್ರ ಇದು ಆಗುತ್ತದೆ. ವೇದಿಕೆಯಲ್ಲಿಯೇ ಸಿಎಂ ಸಿದ್ದರಾಮಯ್ಯಗೆ ನಾನು ಮತ್ತೊಮ್ಮೆ ನಮಸ್ಕಾರ ಮಾಡ್ತೀನಿ. ನೀವು ಡಿ.ಕೆ. ಶಿವಕುಮಾರ್ ಅವರನ್ನು ದಯವಿಟ್ಟು ಮುಖ್ಯಮಂತ್ರಿ ಮಾಡಿ ಎಂದು ಮನವಿ ಮಾಡಿದ್ದಾರೆ ಚಂದ್ರಶೇಖರ ಸ್ವಾಮೀಜಿ.
ಈ ಮಾತಿಗೆ ವೇದಿಕೆಯಲ್ಲಿಯೇ ಇದ್ದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ನಿರ್ಮಾಲನಂದನಾಥ ಸ್ವಾಮೀಜಿಯವರಾಗಲೀ, ಬೇರೆ ಬೇರೆ ಒಕ್ಕಲಿಗ ಮಠದ ಸ್ವಾಮಿಗಳಾಗಲೀ ಬೆಂಬಲವನ್ನೂ ಕೊಟ್ಟಿಲ್ಲ. ನಿರಾಕರಣೆಯನ್ನೂ ಮಾಡಿಲ್ಲ. ಆದರೆ ಸಿದ್ದರಾಮಯ್ಯ ಬಣದ ಸಚಿವರು ತೀವ್ರವಾಗಿ ವಿರೋಧಿಸಿದ್ದಾರೆ.


‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವ ಮಾತೇ ಇಲ್ಲ. ಈ ಐದು ವರ್ಷ ಮಾತ್ರವಲ್ಲ ಇನ್ನೂ ಹತ್ತು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಹೇಳಿರುವ ಸ್ವಾಮೀಜಿಗಳು ಅವರ ಸ್ಥಾನ ಬಿಟ್ಟುಕೊಡುತ್ತಾರಾ.ಸ್ವಾಮೀಜಿಗೆ ಕೇಳಿ ನೋಡಿ. ನಾನೇ ಸ್ವಾಮೀಜಿ ಆಗುತ್ತೇನೆ. ನಾಳೆಯಿಂದ ನಾನು ಕಾವಿ ಬಟ್ಟೆ ಹಾಕಿಕೊಳ್ಳುತ್ತೇನೆ. ಅವರು ತಮ್ಮ ಸ್ಥಾನ ಬಿಟ್ಟುಕೊಡುತ್ತಾರಾ.‘ಅವರೂ (ಸ್ವಾಮೀಜಿ) ಬಿಟ್ಟು ಕೊಡಲ್ಲ. ಇವರೂ (ಸಿದ್ದರಾಮಯ್ಯ) ಸಹ ಬಿಟ್ಟುಕೊಡಲ್ಲ. ಸ್ವಾಮೀಜಿ ಯಾವ ಉದ್ದೇಶದಿಂದ ಹೇಳಿದ್ದಾರೋ ಗೊತ್ತಿಲ್ಲ. ಸದುದ್ದೇಶದಿಂದ ಹೇಳಿದ್ದಾರೆಯೇ ಅಥವಾ ದುರುದ್ದೇಶದಿಂದ ಹೇಳಿದ್ದಾರೋ ಗೊತ್ತಿಲ್ಲ. ಎಲ್ಲರಿಗೂ ವಾಕ್ ಸ್ವಾತಂತ್ರ್ಯವಿದೆ. ಹೀಗಾಗಿ ಮಾತನಾಡುತ್ತಾರೆ. ಆದರೆ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ.
ದಿನೇಶ್ ಗುಂಡೂರಾವ್, ಸಚಿವ :
ಸಿಎಂ ಹುದ್ದೆ ಬದಲು ವಿಷಯ ಪಕ್ಷದ ವಿಚಾರ. ಇವೆಲ್ಲ ಚರ್ಚೆ ಬೇಡ. ಬೇರೆಯವರು ಈ ಬಗ್ಗೆ ಯಾಕೆ ಮಾತಾಡಬೇಕು?
ಚೆಲುವರಾಯಸ್ವಾಮಿ, ಸಚಿವ :
ಮುಖ್ಯಮಂತ್ರಿ ಒಂದು ವರ್ಷಕ್ಕೋ, ಎರಡು ವರ್ಷಕ್ಕೊ ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಮುಖ್ಯಮಂತ್ರಿ ಬದಲಾವಣೆ ಹೇಳಿಕೆ ಶ್ರೀಗಳ ವೈಯಕ್ತಿಕ ಅಭಿಪ್ರಾಯವಾಗಿದೆ. ಯಾವ ಶಾಸಕರು ಸಿಎಂ ಬದಲಾವಣೆ ಹೇಳಿಕೆ ಕೊಟ್ಟರೂ ಅದು ಅವರವರ ವೈಯಕ್ತಿಕ ವಿಚಾರವಾಗಿದೆ. ರಾಜ್ಯದಲ್ಲಿ ನಾವು 136 ಶಾಸಕರಿದ್ದೇವೆ, ಹೈಕಮಾಂಡ್ ಇದೆ. ಯಾವ ಸಮಯದಲ್ಲಿ ಯಾರು ಸಿಎಂ, ಯಾರು ಮಂತ್ರಿ ಆಗಬೇಕು, ಆ ಸಮಯದಲ್ಲಿ ಆಗುತ್ತಾರೆ.
ಡಾ.ಶಾಮನೂರು ಶಿವಶಂಕರಪ್ಪ, ಸಚಿವ
ಸ್ವಾಮೀಜಿಗಳು ಹೇಳಿದ ತಕ್ಷಣ ಮುಖ್ಯಮಂತ್ರಿ ಬದಲಾವಣೆ ಮಾಡುವುದಿಲ್ಲ. ಸಿಎಂ ಬದಲಾವಣೆ ವಿಚಾರದಲ್ಲಿ ನಮ್ಮ ಪಕ್ಷದ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ. ಸಿದ್ದರಾಮಯ್ಯ ಉತ್ತಮವಾಗಿ ಕೆಲಸ ಮಾಡಿಲ್ಲ ಅಂತಾ ಹೇಳಿದ್ದು ಯಾರು? ಯಾರೇನೇ ಹೇಳಿದರೂ ಹೈಕಮಾಂಡ್ ಮುಂದೆ ಏನೂ ನಡೆಯಲ್ಲ.
ಈ ಬಗ್ಗೆ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರೂ, ಹೈಕಮಾಂಡ್ ತೀರ್ಮಾನ ಅಂತಿಮ ಎಂದಿದ್ದಾರೆ. ಸಭೆ ಮುಗಿದ ಬೆನ್ನಲ್ಲೇ ದೆಹಲಿಗೆ ಇಬ್ಬರೂ ಒಂದೇ ವಿಮಾನದಲ್ಲಿ ಅಕ್ಕಪಕ್ಕ ಕುಳಿತು ಪ್ರಯಾಣಿಸಿದ್ದಾರೆ. ಒಂದೇ ಹೋಟೆಲ್ಲಿನಲ್ಲಿ ವಾಸ್ತವ್ಯವನ್ನೂ ಮಾಡಿದ್ದಾರೆ.
ವಿರೋಧ ಏಕೆ?
ಲೋಕಸಭೆ ಚುನಾವಣೆಗೂ ಮುನ್ನ ಹೆಚ್ಚುವರಿ ಡಿಸಿಎಂ ಚರ್ಚೆಯನ್ನು ಸಿದ್ದು ಆಪ್ತ ಬಣದ ಸಚಿವ ಕೆ ಎನ್ ರಾಜಣ್ಣ ಮುನ್ನಲೆಗೆ ತಂದರು. ಇದಕ್ಕೆ ಧ್ವನಿ ಗೂಡಿಸಿದ್ದು ಡಾ. ಜಿ ಪರಮೇಶ್ವರ್, ಸತೀಶ್ ಜಾರಕಿಹೊಳಿ, ಎಂಬಿ ಪಾಟೀಲ್ ರಂತಹ ಘಟಾನುಘಟಿಗಳು. ಇದಕ್ಕೆ ಅವರು ಕೊಟ್ಟ ಸಮರ್ಥನೆ ಸಮುದಾಯವಾರು ಮತಗಳಿಗೆ ಅನುಕೂಲ ಎಂಬುವುದು. ಆದರೆ, ಅಲರ್ಟ್ ಆದ ಡಿಕೆ ಶಿವಕುಮಾರ್ ಹೈಕಮಾಂಡ್ ಮನವೋಲಿಸಿ ಸಿದ್ದು ಬಣಕ್ಕೆ ವಾರ್ನಿಂಗ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಈಗ ಚುನಾವಣೆ ಮುಗಿದಿದೆ.
ಮೂಲಗಳ ಪ್ರಕಾರ ಲೋಕಸಭೆ ಚುನಾವಣೆ ನಂತರ ಸಿಎಂ ಬದಲಾವಣೆ ಎಂಬ ಮಾತಿಗೆ ಮತ್ತೆ ಜೀವ ಕೊಟ್ಟಿದೆ ಸ್ವಾಮೀಜಿಗಳ ಹೇಳಿಕೆ. ಈ ಮಾತನ್ನು ಹೈಕಮಾಂಡ್ ನಾಯಕರಾರೂ ಬಹಿರಂಗವಾಗಿ ಹೇಳಿಲ್ಲ. ಆದರೆ, ೨೦೨೩ರ ಎಲೆಕ್ಷನ್ ನಂತರ ಈ ಸುದ್ದಿ ಚಾಲ್ತಿಯಲ್ಲಿದೆ.
ಆದರೆ ಒಂದಂತೂ ಸ್ಪಷ್ಟ. ಡಿಕೆ ಶಿವಕುಮಾರ್ ಅವರಿಗೆ ಸಿಎಂ ಪುಟ್ಟ ಸುಲಭಕ್ಕೆ ಸಿಕ್ಕಲ್ಲ. ಈ ಹಿಂದೆ ದೇವೇಗೌಡರು, ರಾಮಕೃಷ್ಣ ಹೆಗಡೆ ಸಿಎಂ ಆಗಿದ್ದಾಗ ವಿಧಾನಸೌಧಕ್ಕೆ ಮುತ್ತಿಗೆ ಹಾಕಿಸಿದ್ದರು. ಸಿಎಂ ಪಟ್ಟಕ್ಕೆ ತಾವು ಪ್ರಬಲ ಪೈಪೋಟಿ ಎಂದು ಸಾಬೀತು ಮಾಡಿದ್ದರು. ಇಲ್ಲದೆ ಹೋದಲ್ಲಿ ದೇವೇಗೌಡ ರಾಜಕೀಯದ ಮುಖ್ಯವಾಹಿನಿಗೆ ಬರುವುದಕ್ಕೆ ಸಾಧ್ಯವೇ ಇರುತ್ತಿರಲಿಲ್ಲ ಎನ್ನುತ್ತಾರೆ ರಾಜಕೀಯ ತಜ್ಞರು. ಸಿದ್ದರಾಮಯ್ಯ ಪ್ರಬಲ ತಂತ್ರಗಾರಿಕೆಯಲ್ಲೂ ಗೆದ್ದಿರುವ ನಾಯಕ. ಈಗ ಕೂಡಾ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂದರೆ, ಸ್ಟ್ರೀಟ್ ಫೈಟ್ ಅನಿವಾರ್ಯ. ಆದರೆ, ಬೀದಿಗೆ ಬಂದು ಬಡಿದಾಡದೇ ಹೋದಲ್ಲಿ.. ಕಷ್ಟ. ಆದರೆ ಡಿಕೆ ಶಿವಕುಮಾರ್ ಯಾವತ್ತೂ ಪಕ್ಷ ಹಾಕಿದ ಶಿಸ್ತಿನ ಗೆರೆ ದಾಟಿದವರಲ್ಲ. ಇದು ಡಿಕೆ ಶಿವಕುಮಾರ್ ಅವರಿಗೆ ತೊಡಕಾದರೆ ಆಶ್ಚರ್ಯವೂ ಇಲ್ಲ. ನಿರ್ಧಾರ ಮಾಡುವುದು ಕಾಲಚಕ್ರ.



