ರಾಮಾಯಣ. ಇದು ಜಗತ್ತಿನ ಪುರಾತನ ಮಹಾಕಾವ್ಯಗಳಲ್ಲಿ ಒಂದು. ಹಿಂದೂ ಧರ್ಮದ ಪವಿತ್ರಗ್ರಂಥವೂ ಹೌದು. ರಾಮಾಯಣದ ವಿಶೇಷತೆ ಎಂದರೆ, ಅಲ್ಲಿ ಶ್ರೀರಾಮಚಂದ್ರ ಎನ್ನುವ ಮರ್ಯಾದಾ ಪುರುಷೋತ್ತಮನಿದ್ದಾನೆ. ಸೀತೆ ಎಂಬ ಆದರ್ಶ ಸತಿ ಇದ್ದಾಳೆ. ಭರತ, ಲಕ್ಷ್ಮಣ, ಶತ್ರುಘ್ನರೆಂದ ಅಪರೂಪದ ಸಹೋದರರ ಬಾಂಧವ್ಯ ಇದೆ. ಮಾತೃ ವಾತ್ಸಲ್ಯಕ್ಕೆ ಕೌಸಲ್ಯೆ, ಸುಮಿತ್ರೆ, ಮಾತೃತ್ವ ಮರೆತ ಕೈಕೇಯಿ, ಮಲತಾಯಿಯಂತಹ ಮಂಥರೆ, ಅಸಹಾಯಕ ದಶರಥನಿದ್ದಾರೆ. ಅವರು ಈಗಿನ ಕಾಲಕ್ಕೂ ಸಲ್ಲುವ ಪಾತ್ರಗಳು. ಭಕ್ತಿಗೆ ಹನುಮಂತ, ದುಷ್ಟತನದ ಪರಮನೀಚ ವಾಲಿ, ಶಕ್ತಿ ಇದ್ದರೂ ಅಸಹಾಯಕನಾಗಿರುವ ಸುಗ್ರೀವ, ಭಕ್ತ ಮಹಾಗ್ರೇಸರ ಹನುಮಂತ.. ಎಲ್ಲರ ಜೊತೆಗೆ ದುಷ್ಟನಾದರೂ ನೈತಿಕತೆಯ ಗಡಿ ಹಾಕಿಕೊಂಡಿರುವ ರಾವಣನಿದ್ದಾನೆ.
ಹೌದು, ತಂಗಿಗಾದ ಅವಮಾನಕ್ಕೆ ಸೀತೆಯನ್ನು ಅಪಹರಣ ಮಾಡುವ ರಾವಣ, ಒಬ್ಬೊಬ್ಬರ ಪಾಲಿಗೆ ಒಂದೊಂದು ರೀತಿ. ಆತ ಮಹಾಬ್ರಾಹ್ಮಣ. ಆದರೆ ಚಕ್ರವರ್ತಿ. ಸೀತೆಯನ್ನು ಅಪಹರಿಸಿದ್ದರೂ, ಮಟ್ಟದವನು. ಅದಕ್ಕೆ ಆತನಿಗೆ ಇದ್ದ ಶಾಪವೂ ಒಂದು ಕಾರಣವಂತೆ. ಇನ್ನು ರಾವಣ, ವಿಷ್ಣುವಿನ ದ್ವಾರಪಾಲಕನಾಗಿದ್ದ ವಿಜಯ. ಅಂತಿಮವಾಗಿ ರಾಮನಿಂದಲೇ ಹತನಾಗುವ ರಾವಣನ ಕಥೆ ಕೇವಲ ಹಿಂದೂ ಧರ್ಮದಲ್ಲಷ್ಟೇ ಅಲ್ಲ, ಜೈನ, ಬೌದ್ಧ, ಮುಸ್ಲಿಂ ಸೇರಿದಂತೆ ಹಲವು ಧರ್ಮಗಳಲ್ಲಿ ವಿವಿಧ ಪ್ರಕಾರಗಳಲ್ಲಿ ಇದೆ. ಕೆಲವು ರಾಮಾಯಣಗಳಲ್ಲಿ ರಾವಣನನ್ನು ಕೊಲ್ಲೋದು ಲಕ್ಷ್ಮಣನಾದರೆ, ಕೆಲವು ರಾಮಾಯಣಗಳಲ್ಲಿ ಆಂಜನೇಯ ಹತ್ಯೆ ಮಾಡುತ್ತೇನೆ. ಹೀಗೆಲ್ಲ ಇರುವ ರಾಮಾಯಣದಲ್ಲಿ ರಾವಣನ ಪಾತ್ರ ಮಾಡ್ತಿದ್ದಾರೆ ರಾಕಿಂಗ್ ಸ್ಟಾರ್ ಯಶ್.
ಕನ್ನಡದವರಿಗೆ ರಾವಣ ಎಂದರೆ ನೆನಪಾಗುವುದು ಮತ್ತದೇ ಡಾ.ರಾಜ್ ಕುಮಾರ್. ಶ್ರೀರಾಮ ಚಂದ್ರ ಎಂದರೂ ಡಾ.ರಾಜ್ ಕುಮಾರ್ ನೆನಪಾಗುತ್ತಾರೆ. ಇನ್ನು ಡಾ.ರಾಜ್ ರಾವಣನಾಗಿ ಭೂಕೈಲಾಸ, ದಶಾವತಾರ ಚಿತ್ರಗಳಲ್ಲಿ ನಟಿಸಿ ಗೆದ್ದಿದ್ದಾರೆ. ಇನ್ನು ರಂಗಭೂಮಿಯಲ್ಲಿ ಪ್ರಚಂಡ ರಾವಣನಾಗಿ ದೊಡ್ಡ ಹೆಸರು ಮಾಡಿದವರು ವಜ್ರಮುನಿ. ಇತ್ತೀಚೆಗೆ ಹಿಂದಿಯಲ್ಲಿ ಆದಿಪುರುಷ್ ಸಿನಿಮಾ ಬಂದಿತ್ತು. ಅಲ್ಲಿ ಸೈಫ್ ಅಲಿ ಖಾನ್ ರಾವಣನಾಗಿದ್ದರು. ರಾವಣನ ಪಾತ್ರವನ್ನು ಕಾಮಿಡಿ ಮಾಡಿಬಿಟ್ಟಿದ್ದರು. ಅದನ್ನು ಮೀರಿಸುವ ದೊಡ್ಡ ಜವಾಬ್ದಾರಿ ಯಶ್ ಅವರ ಮೇಲಿದೆ.
ರಾವಣನ ಪಾತ್ರಕ್ಕೆ ಬೇಕಾದ ಗತ್ತು, ಗಾಂಭೀರ್ಯ, ದೇಹದಾರ್ಢ್ಯತೆ, ಭಾಷೆಯ ಮೇಲಿನ ಹಿಡಿತ ಎಲ್ಲವೂ ಯಶ್ ಅವರಲ್ಲಿದೆ. ಅಂದಹಾಗೆ ಯಶ್ ಈ ಪಾತ್ರವನ್ನು ಒಪ್ಪಿಕೊಂಡಿದ್ದಕ್ಕೂ ಕಾರಣ ಇದೆ.
ಟಾಕ್ಸಿಕ್ ಚಿತ್ರದ ವಿಎಫ್‌ಎಕ್ಸ್ ಕೆಲಸಕ್ಕಾಗಿ ಲಾಸ್ ಏಂಜಲೀಸ್ʻಗೆ ಹೋಗಿದ್ದಾಗ ನಮಿತ್ ಮಲ್ಹೋತ್ರಾ ಅವರನ್ನು ಭೇಟಿಯಾದರಂತೆ ಯಶ್. ಅವರೊಂದಿಗೆ ಮಾತನಾಡುತ್ತಿದ್ದಾಗ ರಾಮಾಯಣದ ಪ್ಲಾನ್ ಹೇಳಿದರು. ನಮ್ಮಿಬ್ಬರ ಆಲೋಚನೆ, ಗುರಿ ಎರಡೂ ಮ್ಯಾಚ್ ಆಗುತ್ತಿದ್ದವು. ಅವರು ಹಿಂಜರಿಕೆಯಿಂದಲೇ ರಾವಣನ ಪಾತ್ರ ಮಾಡಬಹುದಾ ಎಂದರು. ನನಗೆ ಭಾರತೀಯತೆಯನ್ನು ಜಗತ್ತಿಗೆ ಹೇಳುವುದು ಮುಖ್ಯ. ಸ್ಟಾರ್ʻಡಂ ಅಲ್ಲ. ಅಲ್ಲದೆ ರಾವಣನ ಪಾತ್ರವೇ ಎಕ್ಸೈಟಿಂಗ್. ಹೀಗಾಗಿ ಒಪ್ಪಿಕೊಂಡೆ ಎಂದಿದ್ದಾರೆ.
ಅತ್ಯಂತ ನೇರವಾಗಿ ರಾಮಾಯಣದಲ್ಲಿ ರಾವಣನ ಪಾತ್ರದಲ್ಲಿ ನಟಿಸುತ್ತಿರುವುದು ಸತ್ಯ ಹಾಗೂ ಯಶ್ ಸ್ವತಃ ನಿರ್ಮಾಣದಲ್ಲಿ ಕೈಜೋಡಿಸಿರುವುದೂ ಸತ್ಯ ಎಂದಿದ್ದಾರೆ. ರಾಮಾಯಣ ಚಿತ್ರದಲ್ಲಿ ನಟಿಸೋಕೆ ನನಗೆ ಆಫರ್ ಕೊಟ್ಟರು. ನಟನಾಗಿ ರಾವಣ ಪಾತ್ರ ಕೊಡುವ ಥ್ರಿಲ್, ಎಕ್ಸೈಟ್‌ಮೆಂಟ್ ಬೇರೆಯದು. ಭಾರತದ ಕಥೆಯನ್ನು ಜಗತ್ತಿನ ಎದುರು ಹೇಳುವ ಅನುಭವವೇ ಬೇರೆ ಎನ್ನುವ ಯಶ್ ರಾಮಾಯಣ ಕಥೆ ಸಿಕ್ಕಿದ್ದನ್ನೂ ಹೇಳಿಕೊಂಡಿದ್ದಾರೆ.
‘ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ’ ಅನ್ನೋ ಯೂಟ್ಯೂಬ್ ಚಾನೆಲ್ಲಿಗೆ ಪುಟ್ಟದೊಂದು ಸಂದರ್ಶನ ನೀಡಿರುವ ಯಶ್,
ಅಪರೂಪಕ್ಕೆ ಮಾತನಾಡಿದ್ದಾರೆ. ಆದರೆ ಎಲ್ಲ ವಿಷಯಗಳ ಬಗ್ಗೆಯೂ ಹೇಳಿದ್ದಾರೆ. ರಾಧಿಕಾ ಪಂಡಿತ್, ಟಾಕ್ಸಿಕ್, ರಾಮಾಯಣ, ರಾವಣ, ಕೆಜಿಎಫ್-೩.. ಈಗೆ ಎಲ್ಲ ಕಥೆಯನ್ನೂ ಹೇಳಿಕೊಂಡಿದ್ದಾರೆ. ಅದರಲ್ಲಿ ವಿಶೇಷ ಎನಿಸಿರುವುದು ರಾಮಾಯಣದ ಬಗ್ಗೆ ಹೇಳಿರುವುದು. ಒಂದೆಡೆ ಟಾಕ್ಸಿಕ್ ಚಿತ್ರದಲ್ಲಿ ನಟಿಸುತ್ತಲೇ, ಮತ್ತೊಂದೆಡೆ ರಾಮಾಯಣದ ರಾವಣನಾಗಿಯೂ ನಟಿಸಲಿದ್ದಾರಂತೆ ಯಶ್.



