ಹೇಗಾದರೂ ಮಾಡುತ್ತೇವೆ. ಏನಾದರೂ ಮಾಡುತ್ತೇವೆ. ಸ್ವಲ್ಪ ಲೇಟ್ ಆಗಬಹುದು. ಆದರೆ 10 ಕೆಜಿ ಅಕ್ಕಿ ಕೊಟ್ಟೇ ಕೊಡ್ತೇವೆ ಎಂದು ಹೇಳಿಕೆ ಕೊಟ್ಟಿದ್ದಾರೆ ಸಿಎಂ ಸಿದ್ದರಾಮಯ್ಯ. ಒಂದು ಕಡೆ ಅಕ್ಕಿ ಹೋರಾಟ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಕಾಂಗ್ರೆಸ್ ವಿರುದ್ಧ ಬಿಜೆಪಿ, ಬಿಜೆಪಿ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸುತ್ತಿವೆ. ಮತ್ತೊಂದೆಡೆ ಪಂಜಾಬ್ 1 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡೋಕೆ ಒಪ್ಪಿದೆಯಂತೆ. ಆದರೆ ಉಳಿದ ಅಕ್ಕಿಗೆ.. ಅದು ಸಾಕಾಗುವುದಿಲ್ಲ.
ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿದೆ. ಎಂದಿನಂತೆ 5 ಕೆಜಿಯಂತೆ ವಿತರಣೆ ಮಾಡುತ್ತಿದೆ. ದೇಶಾದ್ಯಂತ 80 ಕೋಟಿ ಜನಕ್ಕೆ ನೀಡಿದಂತೆಯೇ ರಾಜ್ಯಕ್ಕೂ ಕೊಡುತ್ತಿದೆ. ಈ ಅಕ್ಕಿಗೆ ರಾಜ್ಯ ಸರ್ಕಾರ ಹಣ ಕೊಡುವುದಿಲ್ಲ. ಆ 5 ಕೆಜಿ ಅಕ್ಕಿಗೆ ಯಾವ ಸಮಸ್ಯೆಯೂ ಇಲ್ಲ. ಕೇಂದ್ರ ಸರ್ಕಾರದಿಂದಲೂ ಇಲ್ಲ. ರಾಜ್ಯದಿಂದಲೂ ಇಲ್ಲ. ಸಮಸ್ಯೆ ಇರುವುದು ನಂತರದ್ದಲ್ಲಿ.
ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ಕೊಡುವುದಕ್ಕೆ ಮೊದಲು ಒಪ್ಪಿತ್ತು. ನಂತರ ನಿರಾಕರಣೆ ಮಾಡಿತು. ನಾವು ಹಣ ಕೊಡುವುದಕ್ಕೆ ಸಿದ್ಧರಿದ್ದೆವು. ಅವರು ರಾಜಕೀಯ ಮಾಡಿದ್ರು. ಕೆಜಿಗೆ 36ರೂ.ನಂತೆ ಹಣ ಕೊಡುತ್ತಿದ್ದೆವು. ಆದರೆ ಬಿಜೆಪಿಯವರು ಕೊಡ್ತಿಲ್ಲ ಎನ್ನುವುದು ಕಾಂಗ್ರೆಸ್ ವಾದ.
ಮೊದಲು ಒಪ್ಪಿದ್ದ ಕೇಂದ್ರ ಅರ್ಥಾತ್ ಎಫ್‍ಸಿಐ ಆಮೇಲೆ ನಿರಾಕರಣೆ ಮಾಡಿದ್ದೇಕೆ ಎನ್ನುವುದಕ್ಕೆ ಕೇಂದ್ರ ಕಾರಣ ಕೊಟ್ಟಿದೆ. ದೇಶದೆಲ್ಲೆಡೆ ಬೆಲೆ ಏರಿಕೆ ಆಗುತ್ತಿರುವಾಗ ನಾವು ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿಯನ್ನು ರಿಲೀಸ್ ಮಾಡಬೇಕು. ಹಾಗೆ ಮಾಡದಿದ್ದರೆ ಇಡೀ ದೇಶದಲ್ಲಿ ಅಕ್ಕಿ ಬೆಲೆ ಏರಿಕೆಯಾಗಲಿದೆ. ಈ ಬಗ್ಗೆ ನಾವು ಮೊದಲೇ ತೀರ್ಮಾನ ತೆಗೆದುಕೊಂಡಿದ್ದೆವು. ಮಾಹಿತಿ ಇಲ್ಲದ ಅಧಿಕಾರಿಯಿಂದಾಗಿ ಇಷ್ಟೆಲ್ಲ ಎಡವಟ್ಟಾಗಿದೆ. ಬೆಲೆ ಏರಿಕೆ ನಿಯಂತ್ರಣಕ್ಕೆ ಮಾರುಕಟ್ಟೆಗೆ ಅಕ್ಕಿ ಕೊಡುವುದು ಅನಿವಾರ್ಯ ಎನ್ನುವುದು ಕೇಂದ್ರದ ವಾದ. ಜೊತೆಗೆ ಪ್ರವಾಹ/ಬರದಂತಹ ಸಂದರ್ಭಗಳಿಗಾಗಿಯೇ ಅಕ್ಕಿ ರಿಸರ್ವ್ ಆಗಿರುತ್ತದೆ. ಅದನ್ನು ಮುಟ್ಟುವಂತಿಲ್ಲ. ನೀವು ಮುಕ್ತ ಮಾರುಕಟ್ಟೆಯಲ್ಲಿಯೇ ತೆಗೆದುಕೊಳ್ಳಿ ಎನ್ನುತ್ತಿದೆ ಕೇಂದ್ರ ಸರ್ಕಾರ. ಅಂದಹಾಗೆ ಮುಕ್ತ ಮಾರುಕಟ್ಟೆಯಲ್ಲಿ ರಾಜ್ಯ ಸರ್ಕಾರವೂ ಅಕ್ಕಿ ಖರೀದಿ ಮಾಡಬಹುದು. ಆದರೆ ಸಾಲ ಹೇಳುವಂತಿರಲ್ಲ, ಅಷ್ಟೆ. ಆದರೆ ರಾಜ್ಯದಲ್ಲಿ ಹಣಕ್ಕೆ ಕೊರತೆ ಖಂಡಿತಾ ಇಲ್ಲ.
ಈ ಮಧ್ಯೆ ಆಹಾರ ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಕೇಂದ್ರದ ಸಚಿವರೊಂದಿಗೆ ಸಂಪರ್ಕದಲ್ಲಿದ್ದಾರೆ. ದೆಹಲಿಗೆ ತೆರಳುತ್ತಿರುವ ಸಿದ್ದರಾಮಯ್ಯ ಕೂಡಾ ಅಮಿತ್ ಶಾ ಜೊತೆ ಮಾತುಕತೆ ನಡೆಸಲಿದ್ದಾರೆ. ಎಲ್ಲವೂ ಸುಸೂತ್ರವಾಗಿ ಆದರೆ, ಪರಿಹಾರ ಸಿಕ್ಕರೆ ಜುಲೈ 1ಕ್ಕೆ ಅಕ್ಕಿ ಸಿಗಲಿದೆ. 10 ಕೆಜಿ ಫ್ರೀಯಾಗಿ ಸಿಗಲಿದೆ. ಆದರೆ.. ಸಿದ್ದರಾಮಯ್ಯ ಪ್ರಕಾರ ವಿಳಂಬವಾಗಬಹುದು. ಆದರೆ ತಪ್ಪಿಸುವ ಮಾತೇ ಇಲ್ಲ. ಎಲ್ಲ ಬಿಪಿಎಲ್ ಕಾರ್ಡುದಾರರಿಗೆ ಖಂಡಿತಾ 10 ಕೆಜಿ ಅಕ್ಕಿ ಉಚಿತವಾಗಿ ಸಿಗಲಿದೆ.



