ವಿಷ್ಣುವಿನ ದಶಾವತಾರಗಳ ಬಗ್ಗೆ ಗೊತ್ತು. ಶಿವ ಪಾರ್ವತಿಯರ ರೂಪಾಂತರಗಳ ಬಗ್ಗೆಯೂ ಕೇಳಿ ಗೊತ್ತು. ಆದರೆ ಕಾಳಿಯ ಅವತಾರಗಳ ಬಗ್ಗೆ ಗೊತ್ತಿದೆಯೇ..? ಕಾಳಿಯನ್ನು ಒಂದೊಂದು ಕಡೆ ಒಂದೊಂದು ಹೆಸರಲ್ಲಿ ಪೂಜೆ ಮಾಡ್ತಾರೆ. ಇದು ಆ ಕಥೆಯೂ ಅಲ್ಲ. ಕಾಳಿಯ ದಶಾವತಾರಗಳ ಕಥೆ. ಕಾಳಿಯ 10 ಅವತಾರಗಳೆಂದರೆ.. ಕಾಳಿ, ತಾರಾ, ತ್ರಿಪುರ ಸುಂದರಿ, ಭುವನೇಶ್ವರಿ, ಭೈರವಿ, ಛಿನ್ನಮಸ್ತಾ ದೇವಿ, ಧೂಮಾವತಿ, ಬಾಗಲಮುಖಿ, ಮಾತಂಗಿ, ಕಮಲಾತ್ಮಿಕಾ ಬರುತ್ತಾರೆ.
ಕಾಳಿ ಮಾತೆ ದುರ್ಗೆಯ ಅವತಾರ. ಈಕೆಯ ರೂಪವೇ ಅಘೋರ. ಕಪ್ಪು ಚರ್ಮ, ಹರಡಿಕೊಂಡ ಕೂದಲು. ತಲೆಬುರುಡೆಗಳ ಹಾರವೇ ಆಕೆಗೆ ಅಲಂಕಾರ. ಈಕೆಯನ್ನು ವಿನಾಶಕಿಯಾಗಿ, ಉಗ್ರ ದೇವತೆಯಾಗಿ ಅಷ್ಟೇ ಅಲ್ಲ, ಸಮೃದ್ಧಿ, ಶಾಂತಿಯ ಸಂಕೇತವೂ ಹೌದು. ಅಂತಹ ಕಾಳಿಯದ್ದು 10 ಅವತಾರಗಳಿವೆ.
ತಾಂತ್ರಿಕ ಲಕ್ಷ್ಮಿ ಕಮಲಾತ್ಮಿಕ : ಕೆಲವೊಮ್ಮೆ “ತಾಂತ್ರಿಕ ಲಕ್ಷ್ಮಿ” ಎಂದು ಕರೆಯಲ್ಪಡುವ ಕಮಲಾತ್ಮಿಕ, ಕಮಲಪೀಠದಲ್ಲಿರುವ ದೇವತೆ. ಚಿನ್ನದ ಮೈಬಣ್ಣ, ಸೊಂಪಾದ ಕಪ್ಪು ಕೂದಲು, ಶಾಂತವಾಗಿರುವ ಕಣ್ಣುಗಳಲ್ಲಿ ದಯೆ, ಕಾರುಣ್ಯ ಇರುತ್ತದೆ. ಕೆಂಪು ಮತ್ತು ಗುಲಾಬಿ ವಸ್ತ್ರಧಾರಿ. ನಾಲ್ಕು ಕೈಗಳಿವೆ. ಎರಡು ಕೈ ಅಭಯ ನೀಡಿದರೆ, ಇನ್ನೆರಡು ಕೈ ರಕ್ಷಣೆ ನೀಡುತ್ತದೆ.
ಮಾತಂಗಿ ದೇವಿ : ಮಾತಂಗ ಕನ್ಯಾ ನಮಸಾಸ್ಮರಾಮಿ ಅನ್ನೋ ಶ್ಲೋಕ ಕೇಳಿದ್ದೀರಲ್ಲ. ಆ ಮಾತಂಗಿಯೂ ಕಾಳಿಯ ಇನ್ನೊಂದು ಅವತಾರ. ಮಾತಂಗಿ ಎಂದರೆ ಅರ್ಥ ಕಪ್ಪು ಮೈಬಣ್ಣ ಎನ್ನುವುದು. ಆದರೆ ಮಾತಂಗಿ ಪಚ್ಚೆ ಹಸಿರು ಮೈಬಣ್ಣದವಳು. ಕದಡಿದ ಕಪ್ಪು ಕೂದಲು, ಪ್ರಶಾಂತ ಕಣ್ಣುಗಳಿರುವ ಮಾತಂಗಿ ದೇವಿ ಕೆಂಪು ವಸ್ತ್ರಗಳನ್ನು ಧರಿಸುತ್ತಾಳೆ. ಸರ್ವಾಲಂಕಾರಭೂಷಿತೆಯಾಗಿರುವ ಮಾತಂಗಿ ದೇವಿ ರಾಜ ಸಿಂಹಾಸನದ ಮೇಲೆ ಕುಳಿತಿದ್ದು, ನಾಲ್ಕು ಕೈಗಳಲ್ಲಿ ಕತ್ತಿ, ತಲೆಬುರುಡೆ ಮತ್ತು ವೀಣೆಯನ್ನು ಹಿಡಿದಿದ್ದಾಳೆ.
ಬಾಗಲಮುಖಿ : ಹೊಳೆಯುವ ಚಿನ್ನದ ಮೈಬಣ್ಣದ ಬಾಗಲಮುಖಿ, ಮೂರು ಕಣ್ಣುಗಳಿವೆ. ಪ್ರಕಾಶಮಯವಾದ ಶಾಂತ ಸ್ವರೂಪಿಣಿ ಬಾಗಲಮುಖಿ ಹಳದಿ ಉಡುಪು ಮತ್ತು ಆಭರಣಗಳಿಂದ ಅಲಂಕರಿಸಲ್ಪಟ್ಟಿದ್ದಾಳೆ. ಮದನಾಸುರ ಎಂಬ ರಾಕ್ಷಸನನ್ನು ನಾಲಿಗೆಯಿಂದ ಹಿಡಿದು ನಿಗ್ರಹಿಸುವ ಬಾಗಲಮುಖಿ ಗಧಾಧಾರಿಣಿ.
ತಾಯಿ ಧೂಮ್ರಾವತಿ : ಧೂಮಾವತಿ ಧೂಮ್ರವರ್ಣದ ಮೈಬಣ್ಣದವಳು. ಸುಕ್ಕುಗಟ್ಟಿದ ಚರ್ಮ, ಒಣ ಬಾಯಿ ಮತ್ತು ಕೆಲವು ಮುರಿದ ಹಲ್ಲುಗಳಿರುವ ಧೂಮ್ರಾವತಿ ಶ್ವೇತ ವಸ್ತ್ರಧಾರಿಣಿ. ದುಃಖ, ಕೋಪ, ಭಯ, ಬಳಲಿಕೆ, ಚಡಪಡಿಕೆ, ಹಸಿವು ಮತ್ತು ಬಾಯಾರಿಕೆಗಳನ್ನು ಸಂಕೇತಿಸುವ ಧೂಮ್ರಾವತಿ ಒಂದು ಕೈಯಲ್ಲಿ ಆಶೀರ್ವಾದ ನೀಡುತ್ತಾಳೆ. ಇನ್ನೊಂದು ಕೈಲಿ ಬಟ್ಟಲು ಹಿಡಿದಿದ್ದಾಳೆ.
ಛಿನ್ನಮಸ್ತಾದೇವಿ : ಈ ದೇವಿಗೆ ತಲೆ ಇಲ್ಲ. ಈಕೆಯ ತಲೆಯನ್ನು ಈಕೆಯೇ ಕತ್ತರಿಸಿಕೊಂಡು ಕೈಲಿ ಹಿಡಿದಿದ್ದಾಳೆ. ರಾಜಸಿಕ ಮತ್ತು ತಾಮಸಿಕ ಸಂಕೇತಿಸುವ ಜಯ ಮತ್ತು ವಿಜಯವನ್ನು ತೃಪ್ತಿಪಡಿಸುವುದಕ್ಕಾಗಿ ತಲೆಯನ್ನೇ ತ್ಯಾಗ ಮಾಡಿದ ಕಾಳಿಯ ಅವತಾರ ಈಕೆ. ಕತ್ತರಿಸಿದ ತಲೆ, ಕೆದರಿದ ಕೂದಲು ಮತ್ತು ನಾಲ್ಕು ಕೈಗಳಿರುವ ಛಿನ್ನಮಸ್ತಾದೇವಿ ಎರಡು ಕೈಗಳಲ್ಲಿ ಖಡ್ಗವನ್ನು ಕತ್ತರಿಸಿದ ತಲೆಯನ್ನು ಹಿಡಿದುಕೊಂಡಿದ್ದಾಳೆ ಮತ್ತು ಇನ್ನೆರಡು ಕೈಯಲ್ಲಿ ಕುಣಿಕೆ ಮತ್ತು ಬಟ್ಟಲನ್ನು ಹಿಡಿದುಕೊಂಡಿರುತ್ತಾಳೆ. ಜನನ, ಮರಣ ಮತ್ತು ಪುನರ್ಜನ್ಮದ ಚಕ್ರದ ದೇವತೆ ಈ ಛಿನ್ನಮಸ್ತಾದೇವಿ.
ಭೈರವನ ಪ್ರತಿರೂಪ ಭೈರವಿ : ಭಗವಾನ್ ಶಿವನ ಪ್ರಬಲ ರೂಪವಾದ ಭೈರವನ ಸ್ತ್ರೀ ರೂಪ ಭೈರವಿ. ಕಣ್ಣುಗಳಲ್ಲಿ ಕುದಿಯುವ ಕೋಪ, ಕೆಂಪು ಮೈಬಣ್ಣದ ದೇವಿಗೆ ಅರ್ಧಚಂದ್ರನೇ ಅಲಂಕಾರ. ಕೆದರಿದ ಕೂದಲನ್ನು ಹೊಂದಿರುವ ಭೈರವಿ ನಿರ್ಭಯತೆಯ ಪರಿವರ್ತಕ ಶಕ್ತಿ. ಭಯವನ್ನು ಎದುರಿಸಲು ಮತ್ತು ಎಲ್ಲಾ ರೀತಿಯಾದ ಪರೀಕ್ಷೆಗಳಿಂದ ಉತ್ತಮವಾಗಿ ಕಾಣಿಸಿಕೊಳ್ಳಲು ಈಕೆ ಪ್ರೇರಣೆ ನೀಡುತ್ತಾಳೆ.
ಭುವನೇಶ್ವರಿ : ಬ್ರಹ್ಮಾಂಡದ ಶಕ್ತಿಯ ಪೋಷಣೆಯ ರೂಪ ಭುವನೇಶ್ವರಿ. ಮೂರು ಕಣ್ಣುಗಳನ್ನು ಹೊಂದಿರುವ ಈಕೆ ನೋಡುವುದಕ್ಕೆ ಸುಂದರಿ. ತಾಯಿ ಭವನೇಶ್ವರಿಯು ಹಳದಿ ಮತ್ತು ಕೆಂಪು ಬಣ್ಣದ ವಸ್ತ್ರಧಾರಿಣಿಯಾದ ಭುವನೇಶ್ವರಿ ಸರ್ವಾಲಂಕಾರ ಆಭರಣಭೂಷಿತೆ.
ತ್ರಿಪುರ ಸುಂದರಿ : ಕಾಳಿ ದೇವಿಯ ಅತ್ಯಂತ ಸುಂದರ ರೂಪವೇ ಈ ತ್ರಿಪುರ ಸುಂದರಿ. ಸಿಂಹಾಸನದ ಮೇಲೆ ಕುಳಿತಿರುವಂತೆ ಚಿತ್ರಿಸಿರುವ ತ್ರಿಪುರ ಸುಂದರಿ . ಕೆಂಪು ಅಥವಾ ಗುಲಾಬಿ ಬಣ್ಣದ ಸೀರೆ ಧರಿಸಿರುತ್ತಾಳೆ. 4 ತೋಳುಗಳಲ್ಲಿ ಕುಣಿಕೆ, ಬಿಲ್ಲು, ಹೂಬಾಣ, ಫಸಲು ಹಿಡಿದಿರುತ್ತಾಳೆ. ಬಾಂಧವ್ಯ, ಆಸೆ, ಸಮೃದ್ಧಿಯ ಸಂಕೇತ ತ್ರಿಪುರ ಸುಂದರಿ.
ತಾರಾ : ಸಮುದ್ರ ಮಂಥನದ ಸಂದರ್ಭದಲ್ಲಿ ವಿಷವನ್ನು ಸೇವಿಸಿದ ನಂತರ ಶಿವನನ್ನು ತನ್ನ ಮಗುವಿನಂತೆ ಕಾಪಾಡಲು ಮತ್ತು ಪೋಷಿಸಲು ಅವಳು ತಾಯಿಯಾಗಿ ಕಾಣಿಸಿಕೊಂವಳು ತಾರಾ. ತಾರಾ ದೇವಿಯು ನೀಲಿ ಮೈಬಣ್ಣವನ್ನು ಹೊಂದಿದ್ದಾಳೆ ಮತ್ತು ಅವಳು ತನ್ನ ತಲೆಯ ಮೇಲೆ ಕಿರೀಟವನ್ನು ಧರಿಸಿದ್ದಾಳೆ ಮತ್ತು ಅವಳ ಕುತ್ತಿಗೆಗೆ ಹಾವನ್ನು ಸುತ್ತಿಕೊಂಡಿದ್ದಾಳೆ. ಅವಳು ಉಗ್ರತೆ ಮತ್ತು ದಯೆಯ ನಡುವಿನ ಸಮತೋಲನವನ್ನು ಸಾಕಾರಗೊಳಿಸುತ್ತಾಳೆ.
ಕಾಳಿ : ಸಮಯ ಮತ್ತು ರೂಪಾಂತರದ ಉಗ್ರ ದೇವತೆ. ಕಾಳಿ ಬ್ರಹ್ಮಾಂಡದ ಕೆಟ್ಟ ಶಕ್ತಿಯನ್ನು ನಾಶಪಡಿಸುವವಳಾಗಿದ್ದಾಳೆ. ಅವಳು ಕಪ್ಪು ಮೈಬಣ್ಣ ಮತ್ತು ಮೂರು ಕಣ್ಣುಗಳನ್ನು ಹೊಂದಿದ್ದಾಳೆ. ಆಕೆಯ ಮೂರು ಕಣ್ಣುಗಳು ಭೂತ, ವರ್ತಮಾನ ಮತ್ತು ಭವಿಷ್ಯವನ್ನು ಪ್ರತಿನಿಧಿಸುತ್ತದೆ. ಕಾಳಿಯು ಕೋರೆಹಲ್ಲು ತರಹದ ಹಲ್ಲುಗಳನ್ನು, ಕೆದರಿದ ಕೂದಲು ಮತ್ತು ನಾಲ್ಕು ಕೈಗಳನ್ನು, ಕೈಯಲ್ಲಿ ತಲೆಬುರುಡವನ್ನು ಮತ್ತು ತೊಟ್ಟಿಕ್ಕುವ ರಕ್ತವನ್ನು ಸಂಗ್ರಹಿಸಲು ಬಟ್ಟಲನ್ನು ಹಿಡಿದುಕೊಂಡಿದ್ದಾಳೆ.



