ದರ್ಶನ್ ಕೊಲೆ ಕೇಸಿನಲ್ಲಿ ಜೈಲು ಸೇರಿದ ನಂತರ ತಳಮಳಗೊಂಡಿರುವ ಅಭಿಮಾನಿಗಳು ದರ್ಶನ್ ಬಿಡುಗಡೆಗಾಗಿ ಪ್ರಾರ್ಥನೆ ಮಾಡ್ತಿದ್ಧಾರೆ. ಕೊಲೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವ ದರ್ಶನ್ ಅಭಿಮಾನಿಗಳನ್ನು ಒಪ್ಪಿಕೊಳ್ಳೋದು ಕಷ್ಟವಾದರೂ.. ಅಭಿಮಾನಿಗಳು ಮಾತ್ರ ಡೋಂಟ್ ಕೇರ್ ಮನಸ್ಥಿತಿಯವರು. ಅಭಿಮಾನಿಗಳು ದರ್ಶನ್ ಬಿಡುಗಡೆಗೆ ಪ್ರಾರ್ಥಿಸಿ ಮೈಸೂರಿನ ಚಾಮುಂಡೇಶ್ವರಿ, ನಂಜನಗೂಡು ನಂಜುಂಡೇಶ್ವರ, ತಿರುಪತಿ ತಿಮ್ಮಪ್ಪ, ಸಿಗಂಧೂರು ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಹರಕೆ ಹೊತ್ತಿದ್ದೂ ಆಗಿದೆ. ಹಲವು ಜ್ಯೋತಿಷಿಗಳೂ ಭವಿಷ್ಯ ಹೇಳಿದ್ದಾರೆ. ಆದರೆ.. ಇದು ದಸರೀಘಟ್ಟದ ಚೌಡೇಶ್ವರಿ ದೇವಿಯ ಭವಿಷ್ಯ.
ದಸರೀಘಟ್ಟ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಆದಿಚುಂಚನಗಿರಿ ಶಾಖಾ ಮಠದ ಸಮೀಪ ಇದೆ. ದಸರೀಘಟ್ಟ ಚೌಡೇಶ್ವರಿ ದೇವಿಯು ವಲ್ಮಿಕ ಅಂದರೆ ಹುತ್ತದ ರೂಪದಲ್ಲಿದ್ದು, ಆರು ಅಡಿ ಎತ್ತರದಲ್ಲಿಅಮ್ಮನವರ ಆಕೃತಿಯನ್ನು ಶುದ್ಧ ಆವೆಮಣ್ಣು, ನಾರಿಕೇಳ, ಶಂಖ ಇತ್ಯಾದಿ ಪ್ರಾಕೃತಿಕ ದ್ರವ್ಯಗಳಿಂದ ನಿರ್ಮಾಣ ಮಾಡಲಾಗಿದೆ. ಈ ದೇವಸ್ಥಾನದಲ್ಲಿ ದೇವಿಯು ಭವಿಷ್ಯ ನುಡಿಯುತ್ತಾಳೆ ಎನ್ನುವುದು ಭಕ್ತರ ನಂಬಿಕೆ. ಮಣೆಯ ಮೇಲೆ ಹಾಕಲಾಗಿರುವ ಅಕ್ಕಿ ಅಥವಾ ರಾಗಿ ಹಿಟ್ಟಿನ ಮೇಲೆ ಕಳಶದಿಂದ ಭವಿಷ್ಯ ಬರೆಯುತ್ತಾಳೆ. ಅಂತಹ ಚೌಡೇಶ್ವರಿಯ ಎದುರು ದರ್ಶನ್ ಭಕ್ತರು ಭವಿಷ್ಯ ಕೇಳಿದ್ದಾರೆ.
ಹಿಂದೆ ನಡೆದಿದ್ದು, ಇಂದು, ಮುಂದೆ ನಡೆಯುವ ಆಗುಹೋಗುಗಳನ್ನು ಬರೆದು ಹೇಳುವ ಮಹಾಶಕ್ತಿ ಈ ತಾಯಿಗಿದೆ. ಚೌಡೇಶ್ವರಿಯ ಉತ್ಸವದ ಮೂರ್ತಿಯ ಪೀಠವನ್ನು ಇಬ್ಬರು ವ್ಯಕ್ತಿಗಳು ಹಿಡಿದು ಕೊಳ್ಳುತ್ತಾರೆ. ಮುಂಭಾಗದ ಮಣೆಯ ಮೇಲೆ ಅಕ್ಕಿ ಅಥವಾ ರಾಗಿ ಹಿಟ್ಟನ್ನು ಹಾಕಿದರೆ ಅದರ ಮೇಲೆ ದೇವಿ ಕಳಸದಲ್ಲಿ ಬರೆಯುತ್ತಾಳೆ. ದೇಶದ ನಾನಾ ಭಾಗಗಳಿಂದ ಭಕ್ತರು ತಮ್ಮ ಕಷ್ಟಗಳನ್ನು ಕೇಳಿಕೊಂಡು ಇಲ್ಲಿ ಬರುತ್ತಾರೆ.
ಇಬ್ಬರು ಅಭಿಮಾನಿಗಳು ದೇವಿಯ ಕಳಸದ ಮುಂದೆ ದರ್ಶನ್ ಬಿಡುಗಡೆ ಆಕ್ತಾರ ಎಂದು ಪ್ರಶ್ನೆ ಕೇಳಿದ್ದಾರೆ. ಕೊಲೆ ಪ್ರಕರಣದಲ್ಲಿ ದರ್ಶನ್ ಪಾತ್ರವಿದೆಯೋ ಇಲ್ಲೋ ಗೊತ್ತಿಲ್ಲ. ನಮಗೆ ಅವರು ಹೊರಗಡೆ ಬರಬೇಕು ಅನ್ನುವ ಆಸೆ ಇದೆ. ಯಾವಾಗ ಅವರು ಹೊರಬರುತ್ತಾರೆ ಎಂದು ಕೇಳಿದ್ದೆವು. ಅದಕ್ಕೆ ದೇವಿ ಏನೂ ಕೂಡ ಉತ್ತರ ನೀಡುತ್ತಿಲ್ಲ. ಎಷ್ಟು ದಿವಸ ಆಗುತ್ತದೆ ಎಂದು ನಾವು ಕೇಳಿದೆವು ಅದಕ್ಕೆ ದೇವಿ ಇನ್ನೂ ಸಮಯಬೇಕು. ಈಗಲೇ ಹೇಳಲು ಆಗಲ್ಲ ಎಂದು ಹೇಳುತ್ತಿದ್ದಾಳೆ. ಕೊನೆಯದಾಗಿ ಕೇಳಿದಾಗ ಇನ್ನೂ ಕಾಲಾವಕಾಶ ಇದೆ ಎಂದು ಹೇಳಿದ್ದಾಳೆ. ನೋಡಬೇಕು ಮುಂದೆ ಎಂದು ಅಭಿಮಾನಿ ಉತ್ತರಿಸಿದ್ದಾರೆ. ಅಭಿಮಾನಗಳ ಪ್ರಶ್ನೆಗೆ ದೇವಿ ಕಳಸದಲ್ಲಿ ಬರೆದಿದ್ದು, ಕಷ್ಟ ಇದೆ ಎಂದು ಉತ್ತರಿಸಿದ್ದಾಳೆ.
ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಅಪಹರಣ ಮಾಡಿಕೊಂಡು ಬಂದು ಪಟ್ಟಣಗೆರೆ ಶೆಡ್ ನಲ್ಲಿ ವಿಕೃತವಾಗಿ ಕೊಲೆ ಮಾಡಿರುವ ಆರೋಪದ ಮೇಲೆ ನಟ ದರ್ಶನ್ ಆತನ ಆತ್ಮೀಯ ಗೆಳತಿ ಪವಿತ್ರಾ ಗೌಡ ಸೇರಿ ಒಟ್ಟು 17 ಮಂದಿ ಸದ್ಯ ಜೈಲಿನಲ್ಲಿದ್ದಾರೆ. ಚಾರ್ಜ್‌ಶೀಟ್ ಸಲ್ಲಿಸಲು ಇನ್ನೂ ಸಮಯವಿದೆ. ಅದೂವರೆಗೆ ದರ್ಶನ್ ಅವರಿಗೆ ಜಾಮೀನೂ ಕೂಡಾ ಕಷ್ಟ ಎನ್ನಲಾಗಿದೆ.
ಚೌಡೇಶ್ವರಿ ದೇವಿ ಹೇಳಿದ್ದು ಬಹುತೇಕ ನಿಜವಾಗಿದೆ. ಹೀಗಾಗಿ ಚೌಡೇಶ್ವರಿ ದೇವಿಯ ಭವಿಷ್ಯ ಕೇಳಿದ ಅಭಿಮಾನಿಗಳು ಮತ್ತಷ್ಟು ಚಿಂತಾಕ್ರಾಂತರಾಗಿದ್ಧಾರೆ.



