ಮೆರೆಯುತ್ತಿದ್ದಾಗ.. ಎಲ್ಲವೂ ಸರಿ ಇದ್ದಾಗ.. ಎಲ್ಲರೂ ಇರುತ್ತಾರೆ. ನೀನೇ ಇಂದ್ರ ಚಂದ್ರ ಎಂದು ಹೊಗಳುತ್ತಾರೆ. ಆದರೆ.. ಕಷ್ಟ ಕಾಲದಲ್ಲಿ.. ಯಾರೂ ಇರಲ್ಲ. ಅದರಲ್ಲಿಯೂ ನೆರವಿಗೆ ಹೋದರೆ ತಾವೂ ಕಷ್ಟಕ್ಕೆ ಸಿಲುಕಬಹುದು ಎಂದು ಅರಿವಾದೊಡನೆ.. ದೂರ ಹೋಗಿ ಬಿಡ್ತಾರೆ. ಈಗ ದರ್ಶನ್ ಅವರಿಗೆ ಆಗಿರುವುದೂ ಅದೇ. ಪತ್ನಿ ವಿಜಯಲಕ್ಷ್ಮಿ ಅವರ ನಂತರ ಈಗ ಅಮ್ಮ ತಮ್ಮ ಕೂಡಾ ಜೊತೆ ಸೇರಿದ್ದಾರೆ.
ಕೊಲೆ ಕೇಸ್‌ನಲ್ಲಿ ದರ್ಶನ್ ಸಿಲುಕಿದಾಗಿನಿಂದಲೂ ಮೌನಕ್ಕೆ ಜಾರಿದ್ದ ಅಮ್ಮ ಮತ್ತು ತಮ್ಮ ಕೊನೆಗೂ ಮಗನಿಗೆ ಸಾಂತ್ವನ ಹೇಳಿದ್ದಾರೆ. ತಾಯಿ ಮೀನಾ ತೂಗುದೀಪ ಹಾಗೂ ತಮ್ಮ ದಿನಕರ್ ತೂಗುದೀಪ ಇಬ್ಬರೂ ದರ್ಶನ್ ಪ್ರಕರಣದಲ್ಲಿ ಅಂತರ ಕಾಯ್ದುಕೊಂಡಿದ್ದರು. ಇದು ದರ್ಶನ್ ಮತ್ತವರ ಕುಟುಂಬದ ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬ ಮಾತಿಗೆ ಕಾರಣವಾಗಿತ್ತು. ದರ್ಶನ್ ಅವರ ತಮ್ಮ ದಿನಕರ್ ಅವರಾಗಲೀ, ತಾಯಿ ಮೀನಾ ಅವರಾಗಲೀ ದರ್ಶನ್ ಜೊತೆಯಲ್ಲಿ ಇಲ್ಲ. ದರ್ಶನ್ ಜೊತೆ ಯಾವುದೇ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ. ದರ್ಶನ್ ಚಿತ್ರರಂಗದಲ್ಲಿ 25ನೇ ವರ್ಷದ ಬೆಳ್ಳಿಹಬ್ಬ ಆಚರಿಸಿದಾಗಲೂ ತಾಯಿ ಮೀನಾ, ತಮ್ಮ ತೂಗುದೀಪ್ ಬಂದಿರಲಿಲ್ಲ.
ಯಾವ ಮಗನೇ ಆಗಲಿ.. ತಾಯಿ ಇಲ್ಲದೆ ಏನೂ ಮಾಡಕ್ಕಾಗಲ್ಲ. ತೂಗುದೀಪ ಶ್ರೀನಿವಾಸ್ ಅವರಿಗೆ ಒಂದು ಕಿಡ್ನಿಯನ್ನು ಕೊಟ್ಟಿದ್ದ ಮೀನಾ ಅವರು, ಈಗಲೂ ಒಂದು ಕಿಡ್ನಿಯಲ್ಲಿಯೇ ಬದುಕುತ್ತಿದ್ದಾರೆ. ಅಂತಹ ಕಷ್ಟದಲ್ಲಿ ಮಕ್ಕಳನ್ನು ಸಾಕಿದ ತಾಯಿ ಮೀನಾ ಅವರು ದರ್ಶನ್ ಅವರ ವೈಭವದ ದಿನಗಳಲ್ಲಿ ದೂರವಾಗಿದ್ದರು. ಇನ್ನು ತಮ್ಮ ದಿನಕರ್ ಅವರೂ ಅಷ್ಟೆ, ಈಗಿನ ದರ್ಶನ್ ಗೆಲುವಿನಲ್ಲಿ ದಿನಕರ್ ಅವರ ಪಾಲೂ ಇದೆ. ಆದರೆ, ಜೊತೆಯಲ್ಲಿಯೇ ಇದ್ದ ದಿನಕರ್ ಮತ್ತು ಅವರ ಪತ್ನಿ.. ದರ್ಶನ್ ಅವರಿಂದ ದೂರ ಸರಿದಿದ್ದರು.
ಹಲವು ನಟರ, ನಿರ್ದೇಶಕರ ಸಿನಿಮಾಗಳನ್ನು ಪ್ರಮೋಟ್ ಮಾಡುತ್ತಿದ್ದ ದರ್ಶನ್, ತಮ್ಮನ ಸಿನಿಮಾವನ್ನೇ ದೂರ ಇಟ್ಟಿದ್ದರು. ದರ್ಶನ್ ಅವರ ಇತ್ತೀಚಿನ ಸಾಧನೆ, ಸಂಭ್ರಮಗಳಲ್ಲಿ ತಾಯಿಯೂ ಇರಲಿಲ್ಲ. ತಮ್ಮನೂ ಇರಲಿಲ್ಲ. ಕೊನೆಗೆ ಪತ್ನಿಯೂ ಇರಲಿಲ್ಲ.
ಈಗ ಕೊನೆಗೂ ತಾಯಿ ಮತ್ತು ತಮ್ಮ ದರ್ಶನ್ ಅವರನ್ನು ಜೈಲಿನಲ್ಲಿ ಭೇಟಿ ಮಾಡಿದ್ದಾರೆ. ಸಾಂತ್ವನ ಹೇಳಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಜೊತೆಗೆ ಮೀನಾ ತೂಗುದೀಪ ಹಾಗೂ ದಿನಕರ್ ತೂಗುದೀಪ ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ತಾಯಿ ಮೀನಾ ಅವರಂತೂ ದರ್ಶನ್ʻನನ್ನು ನೋಡಿ ಕಣ್ಣೀರಿಟ್ಟರಂತೆ. ತಾಯಿ ಕಣ್ಣೀರು ಹಾಕಲು ಶುರುಮಾಡಿದಾಗ ದರ್ಶನ್ ಕೂಡಾ ಗಳಗಳನೆ ಅತ್ತುಬಿಟ್ಟರಂತೆ.
ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿಯೇ 10 ದಿನಗಳಾಗಿವೆ. ಅರೆಸ್ಟ್ ಆಗಿದ್ದು ಜೂನ್ 11ರಂದು. ದರ್ಶನ್ʻರನ್ನು ನೋಡಲು ಅಭಿಮಾನಿಗಳು ಜೈಲಿನ ಸುತ್ತಲೂ ಆಗಮಿಸುತ್ತಲೇ ಇದ್ದಾರೆ. ಒಂದು ಕಡೆ ಮಾಧ್ಯಮಗಳು ಮತ್ತೊಂದು ಕಡೆ ಅಭಿಮಾನಿಗಳು. ಹೀಗಾಗಿ ಮೀನಾ ಮತ್ತು ದಿನಕರ್ ಅವರನ್ನು ಮಾಧ್ಯಮಗಳ ಕಣ್ಣು ತಪ್ಪಿಸಿ ಕರೆದೊಯ್ಯಲಾಗಿದೆ.
ಅಂದಹಾಗೆ ದರ್ಶನ್ ಅವರು ಇದರಿಂದ ಕಲಿಯಬೇಕಾಗಿರುವ ಪಾಠ ಎಂದರೆ, ಕುಟುಂಬವನ್ನು ಪ್ರೀತಿಸಬೇಕು, ಜೊತೆಯಲ್ಲಿ ಇರಬೇಕು ಎನ್ನುವುದಷ್ಟೆ. ದರ್ಶನ್ ಅವರಿಗಾಗಿ ವಕೀಲರನ್ನು ಭೇಟಿ ಮಾಡಲು, ಹಿರಿಯ ವಕೀಲರನ್ನು ಒಪ್ಪಿಸಲು ಓಡಾಟ ನಡೆಸಿದ್ದು ಪತ್ನಿ ವಿಜಯಲಕ್ಷ್ಮಿ ಮತ್ತು ತಮ್ಮ ದಿನಕರ್ ಅವರೇ ಹೊರತು, ಯಾವ ನಟರೂ ಅಲ್ಲ.



