ನಟ ದರ್ಶನ್ ಅಭಿನಯದ ಕಾಟೇರ ಚಿತ್ರ ರಿಲೀಸ್ ಆಗೋಕೆ ಸಿದ್ಧವಾಗಿದೆ. ಇದೀಗ ದರ್ಶನ್ ಅವರ ಸಿನಿಮಾ ಪ್ರಚಾರವೂ ಅದ್ಧೂರಿಯಾಗಿ ನಡೆಯುತ್ತಿದೆ. ಕ್ರಾಂತಿ ಚಿತ್ರವನ್ನೂ ಕಾಟೇರ ಚಿತ್ರವನ್ನೂ ಒಂದಕ್ಕೊಂದು ಹೋಲಿಸುವಂತಿಲ್ಲ. ಆದರೆ ಹೋಲಿಸಲೇಬೇಕು. ಏಕೆಂದರೆ ಕ್ರಾಂತಿ ಸಿನಿಮಾ ಬಿಡುಗಡೆ ಹೊತ್ತಿಗೆ ದರ್ಶನ್ ಮೀಡಿಯಾದವರನ್ನೆಲ್ಲ ಎದುರು ಹಾಕಿಕೊಂಡಿದ್ದರು. ಸಿನಿಮಾ ಬಗ್ಗೆ ಪ್ರಚಾರ ಮಾಡಿದ್ದು ಅಭಿಮಾನಿಗಳು ಮಾತ್ರ. ಸಿನಿಮಾ ಕೂಡಾ ಕ್ವಾಲಿಟಿ ಇಲ್ಲದ ಕಾರಣ ಭರ್ಜರಿ ಓಪನಿಂಗ್ ಸಿಕ್ಕರೂ ಅದೆಲ್ಲ ಒಂದೇ ಶೋಗೆ ಮುಗಿದು ಹೋಗಿತ್ತು. ಇನ್ನು ಕ್ರಾಂತಿ ಚಿತ್ರದ ಕಾರ್ಯಕ್ರಮಗಳಿಗೂ ಅಷ್ಟೇ.. ದರ್ಶನ್ ಏಕಾಂಗಿಯಾಗಿಯೇ ನಿಂತಿದ್ದರು. ಜೊತೆಗಿದ್ದದ್ದು ಕ್ರಾಂತಿ ತಂಡ ಮಾತ್ರ.
ಆದರೆ ಕ್ರಾಂತಿಯದ್ದು ಮುಗಿದ ಅಧ್ಯಾಯ. ರಾಕ್ʻಲೈನ್ ವೆಂಕಟೇಶ್ ತಮ್ಮ ಬ್ಯಾನರಿನಲ್ಲಿ ದರ್ಶನ್ ಸಿನಿಮಾ ಮಾಡೋ ಹೊತ್ತಿಗೆ ಪ್ಯಾಚಪ್ ಮಾಡಿದ್ಧಾರೆ. ಮೀಡಿಯಾದವರಿಗೆ ದರ್ಶನ್ ಕ್ಷಮೆ ಕೇಳಿದ್ಧಾರೆ. ದರ್ಶನ್ ಸುದ್ದಿಗಳು ಎಲ್ಲೆಡೆ ಬರುತ್ತಿವೆ. ಆದರೆ ದರ್ಶನ್ ಸಿನಿಮಾ ಬರ್ತಿದೆ ಅನ್ನೋದನ್ನು ಮೊದಲು ಪ್ರೀತಿಯಿಂದ ಮಾಡ್ತಿದ್ದಂತೆ ಈಗ ಮೀಡಿಯಾಗಳು ಮಾಡ್ತಿಲ್ಲ ಅನ್ನೋದಂತೂ ನಿಜ. ಒಟ್ಟಿನಲ್ಲಿ ದರ್ಶನ್ ಸುದ್ದಿಗಳಂತೂ ಬರುತ್ತಿವೆ. ಅಲ್ಲದೆ ದರ್ಶನ್ ಚಿತ್ರದ ಪ್ರಚಾರಕ್ಕೆ ದೊಡ್ಡ ದೊಡ್ಡವರು ಬರುತ್ತಿದ್ಧಾರೆ.
ಡಿಸೆಂಬರ್ 29ಕ್ಕೆ ವರ್ಷದ ಕೊನೆಯ ಚಿತ್ರವಾಗಿ ಬಿಡುಗಡೆಯಾಗಲಿರೋ ಕಾಟೇರ ಚಿತ್ರದ ಟ್ರೇಲರ್ ಇಂದು ಸಂಜೆ 5 ಗಂಟೆಯ ನಂತರ ಆಗಲಿದೆ. ಹುಬ್ಬಳ್ಳಿಯ ರೈಲ್ವೇ ಗ್ರೌಂಡ್ʻನಲ್ಲಿ ಟ್ರೇಲರ್ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ವಿಶೇಷವೆಂದರೆ ಸಿಎಂ ಸಿದ್ಧರಾಮಯ್ಯ ಮುಖ್ಯ ಅತಿಥಿಯಾಗಿ ಭಾಗವಹಿಸುವ ನಿರೀಕ್ಷೆ ಇದೆ. ದರ್ಶನ್ ಚಿತ್ರಕ್ಕೆ ಇದು ದೊಡ್ಡ ಮಟ್ಟದ ಪ್ರಚಾರವೇ ಸರಿ.
ದರ್ಶನ್ ಅವರಷ್ಟೇ ಅಲ್ಲದೆ ಅಭಿಷೇಕ್ ಅಂಬರೀಷ್, ಧನ್ವೀರ್, ಯಶಸ್ ಸೂರ್ಯ, ಚಿಕ್ಕಣ್ಣ ಸೇರಿದಂತೆ ಇಡೀ ಚಿತ್ರತಂಡ ಹುಬ್ಬಳ್ಳಿಯಲ್ಲಿ ಕಾಟೇರ ಕ್ರೇಜ್ʻಗೆ ಸಾಕ್ಷಿಯಾಗಲಿದ್ದಾರೆ. ಮಾಲಾಶ್ರೀ ಮಗಳು ಆರಾಧನಾ ಇದೇ ಮೊದಲ ಬಾರಿಗೆ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಮಾಲಾಶ್ರೀ ಫ್ಯಾನ್ಸ್ ಕ್ರೇಜ್ ಭಲೇ ಜೋರು.
ಕಾಟೇರ ಚಿತ್ರವನ್ನು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಇದು ನನ್ನ ಹೆಮ್ಮೆಯ ಸಿನಿಮಾ ಎಂದು ಹೇಳಿಕೊಂಡಿದ್ಧಾರೆ. ತರುಣ್ ಸುಧೀರ್ ಮತ್ತು ದರ್ಶನ್ ರಾಬರ್ಟ್ ಚಿತ್ರದ ನಂತರ ಮತ್ತೆ ಒಂದಾಗಿರುವ ಸಿನಿಮಾ ಇದು. ನಿರೀಕ್ಷೆಯಂತೂ ದೊಡ್ಡದಾಗಿದೆ.



