ಬಾಕ್ಸಾಫೀಸ್ ಸುಲ್ತಾನ. ಇದು ದರ್ಶನ್ ಅವರಿಗೆ ಅಭಿಮಾನಿಗಳು ಕರೆಯೋ ಹೆಸರು. ದರ್ಶನ್ ಅವರ ಫ್ಲಾಪ್ ಚಿತ್ರ ಕೂಡಾ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತದೆ. ಹೀಗಿರುವಾಗ ಕಾಟೇರ ಸೂಪರ್ ಸಕ್ಸಸ್ ಆಗಿದೆ. ಬಾಕ್ಸಾಫೀಸ್ʻನ್ನ ಚಿಂದಿ ಉಡಾಯಿಸ್ತಾ ಇದೆ. ಓಪನಿಂಗ್ ಡೇಗಿಂತ ಹೆಚ್ಚು ಕಲೆಕ್ಷನ್ ಆಗುತ್ತಿರುವುದು ಸತ್ಯ. ಆದರೆ ಕಾಟೇರ ಬಾಕ್ಸಾಫೀಸ್ ಲೆಕ್ಕ ಎಂದು ವೈರಲ್ ಆಗುತ್ತಿರುವ ಸುದ್ದಿ, ಪೋಸ್ಟರ್ʻಗಳು ಸುಳ್ಳಾ.. ಫೇಕ್ ಲೆಕ್ಕ ಕೊಡ್ತಿದ್ದಾರಾ.. ಹೀಗೊಂದು ಅನುಮಾನಕ್ಕೆ ಕಾರಣವಾಗಿರುವುದು ಸ್ವತಃ ನಿರ್ಮಾಪಕರೇ ಕೊಟ್ಟಿರುವ ಲೆಕ್ಕ.
‘ಕಾಟೇರ’ ಸಿನಿಮಾವು ಮೊದಲ ದಿನ 19.79 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದರೆ, ಎರಡನೇ ದಿನ 17.35 ಕೋಟಿ ರೂಪಾಯಿ ಗಳಿಸಿತ್ತು. ಆದರೆ ಮೂರನೇ ದಿನ 20.94 ಕೋಟಿ ರೂಪಾಯಿ ಗಳಿಸಿ, ಅತೀ ಹೆಚ್ಚು ಕಲೆಕ್ಷನ್ ಮಾಡಿದ ದಾಖಲೆ ಬರೆದಿದೆ. ಒಟ್ಟು ಮೊದಲ ಮೂರು ದಿನಗಳಿಗೆ ‘ಕಾಟೇರ’ ಸಿನಿಮಾವು 58.80 ಕೋಟಿ ರೂ. ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ಮಾಡಿದೆ. ಹೀಗೊಂದು ಲೆಕ್ಕಾಚಾರದ ಪೋಸ್ಟರುಗಳು ಅಡ್ಡಾಡುತ್ತಿವೆ. ಎಲ್ಲ ಕಡೆಯೂ ವೈರಲ್ ಆಗುತ್ತಿದೆ. ಆದರೆ ಇದು ನಿಜಾನಾ ಎಂದರೆ, ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್ ಬೇರೆಯದೇ ಉತ್ತರ ಕೊಟ್ಟಿದ್ದಾರೆ.
ಹಾಗೇ ಆಗಲಿ ಅಂತ ಭಗವಂತನಲ್ಲಿ ಪ್ರಾರ್ಥನೆ ಮಾಡಿಕೊಂಡು ಸುಮ್ಮನೆ ಇದ್ದೇನೆ. ಚೆನ್ನಾಗಿ ಕಲೆಕ್ಷನ್ ಆಗುತ್ತಿದೆ. ನಾನು ಲೆಕ್ಕ ನೋಡೋಕೆ ಹೋಗಿಲ್ಲ. ಅದನ್ನು ಕೊನೆಯಲ್ಲಿ ಮಾಡ್ತೀನಿ. ಆಮೇಲೆ ಹೇಳ್ತೀನಿ ಎಂದಿರೋ ವೆಂಕಟೇಶ್ ಇದುವರೆಗೆ ತಮ್ಮ ಯಾವ ಚಿತ್ರಗಳ ಲಾಭ ಎಷ್ಟಾಯ್ತು..? ಲಾಸ್ ಎಷ್ಟಾಯ್ತು ಅನ್ನೋ ಲೆಕ್ಕ ಕೊಟ್ಟಿಲ್ಲ. ಬಜೆಟ್ ಬಗ್ಗೆಯೂ ಯಾವತ್ತೂ ಹೇಳಿಕೊಂಡವರಲ್ಲ. ಅದನ್ನೇ ಹೇಳಿದ್ದಾರೆ ರಾಕ್ ʻಲೈನ್ ವೆಂಕಟೇಶ್.
ಸದ್ಯಕ್ಕೆ ಕಾಟೇರ ಚಿತ್ರದ ಕಲೆಕ್ಷನ್ ಇಷ್ಟಾಯ್ತು.. ಅಷ್ಟಾಯ್ತು ಎಂಬ ಪೋಸ್ಟರುಗಳೇನೋ ಹರಿದಾಡುತ್ತಿವೆ. ಅವುಗಳನ್ನು ರಾಕ್ʻಲೈನ್ ವೆಂಕಟೇಶ್ ನಿಜ ಎಂದೂ ಹೇಳಿಲ್ಲ. ಸುಳ್ಳು ಎಂದೂ ಹೇಳಿಲ್ಲ.
ಎಲ್ಲರಿಗೂ ಗೊತ್ತಿರುವಂತೆಯೇ, ‘ಕಾಟೇರ’ ಯಾವುದೇ ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ಇದು ತೆರೆಕಂಡಿರುವುದು ಕನ್ನಡ ಭಾಷೆಯಲ್ಲಿ ಮಾತ್ರ. ಹೊರರಾಜ್ಯ, ವಿದೇಶಗಳಲ್ಲಿಯೂ ಕೂಡ ಕನ್ನಡ ವರ್ಷನ್ ಅನ್ನೇ ಪ್ರದರ್ಶನ ಮಾಡಲಾಗುತ್ತಿದೆ. ಹಾಗಾಗಿ, ಇದು ದೊಡ್ಡ ದಾಖಲೆಯಾಗಿದೆ. ಕನ್ನಡದಲ್ಲಿ ತೆರೆಕಂಡ ಸಿನಿಮಾವೊಂದು ಮೂರೇ ದಿನಕ್ಕೆ 58.80 ಕೋಟಿ ರೂ. ಕಮಾಯಿ ಮಾಡಿರುವುದು ಹೊಸ ದಾಖಲೆ.
ನಟ ದರ್ಶನ್ ತಮ್ಮ ಹಿಂದಿನ ಚಿತ್ರಗಳಿಗಿಂತ ವಿಭಿನ್ನವಾಗಿ ಕಾಣಿಸಿಕೊಂಡಿರುವ ಸಿನಿಮಾ. ಚಿತ್ರದ ಕಥೆ ಮತ್ತು ನಿರ್ದೇಶನ ಗಟ್ಟಿಯಾಗಿದ್ದು, ಕಥೆಗಾರ ಜಡೇಶ್ ಕುಮಾರ್ ಹಾಗೂ ತರುಣ್ ಸುಧೀರ್ ಅವರಿಗೆ ದೊಡ್ಡ ಮಟ್ಟದ ಡಿಮ್ಯಾಂಡ್ ಸೃಷ್ಟಿಯಾಗುತ್ತಿದೆ.
ಕಾಟೇರ ಚಿತ್ರದ ಅಸಲಿ ಕಲೆಕ್ಷನ್ ಎಷ್ಟು..?
ಪೋಸ್ಟರುಗಳು ಏನೇ ಹೇಳುತ್ತಿದ್ದರೂ ಅದನ್ನು ಅನುಮಾನದಿಂದ ನೋಡುವಂತೆ ಮಾಡಿರುವುದು ಉತ್ಪ್ರೇಕ್ಷೆಯ ಲೆಕ್ಕಾಚಾರಗಳು. ೬೦ ಕೋಟಿಯಂತೂ ಆಗಿಲ್ಲ. ಇಷ್ಟಕ್ಕೂ ಸಿನಿಮಾ ಹಿಟ್ ಆಗಿರುವಾಗ ಅದನ್ನು ಇನ್ನಷ್ಟು ಉತ್ಪ್ರೇಕ್ಷೆ ಮಾಡಿ ಹೇಳಿಕೊಳ್ಳೋ ಉಸಾಬರಿ ಯಾಕೆ? ವಾಸ್ತವ ಗೊತ್ತಾದಾಗ ಇವರು ಹೇಳೊದೆಲ್ಲ ಫೇಕ್ ಎನ್ನುವಂತಾಗುವುದಿಲ್ಲವೇ.
ಪಕ್ಕಾ ಲೆಕ್ಕದ ಪ್ರಕಾರ ಓಪನಿಂಗ್ ಡೇ ಕಲೆಕ್ಷನ್ ೧೨ರಿಂದ ೧೩ ಕೋಟಿ ಇದೆ. ಎರಡನೇ ದಿನದ ಕಲೆಕ್ಷನ್ ಸ್ವಲ್ಪ ಡಲ್ ಆಯಿತು ಎನ್ನುವ ಲೆಕ್ಕಾಚಾರ ಇದ್ದರೂ ಕಲೆಕ್ಷನ್ ೮ ರಿಂದ ೯ ಕೋಟಿ ಆಗಿದೆ. ೩ನೇ ದಿನದ ಕಲೆಕ್ಷನ್ ಮತ್ತೊಮ್ಮೆ ೧೨ ಕೋಟಿಯ ಗಡಿ ದಾಟಿದ್ದು ಒಟ್ಟಾರೆ ಕಲೆಕ್ಷನ್ ೪೦ ಕೋಟಿಯ ಆಸುಪಾಸು ಇದೆ ಎನ್ನುವುದು ಒಂದು ಅಂದಾಜು.
ಅಂದಹಾಗೆ ಕಾಟೇರ ರಿಲೀಸ್ ಆಗಿರುವುದು ಕೇವಲ ಕನ್ನಡದಲ್ಲಿ. ಕರ್ನಾಟಕ ಹಾಗೂ ಪಕ್ಕದ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಮಾತ್ರ. ಇಷ್ಟಾಗಿಯೂ ಕಲೆಕ್ಷನ್ ಲೆಕ್ಕ ಅಧಿಕೃತ ಅಲ್ಲ.



