ನಿರ್ಮಾಪಕ, ವಿತರಕ ಶಿಲ್ಪಾ ಶ್ರೀನಿವಾಸ್ ಅವರ ಪುತ್ರ ಭರತ್ ‘ಮೆಜೆಸ್ಟಿಕ್ 2’ ಮೂಲಕ ಹೀರೋ ಆಗಿ ಪರಿಚಯವಾಗುತ್ತಿದ್ದಾರೆ. ಮೆಜೆಸ್ಟಿಕ್ ಚಿತ್ರದ ಸೀಕ್ವೆಲ್ ಎನ್ನಲಾಗುತ್ತಿರುವ ಈ ಚಿತ್ರದಲ್ಲಿ ದರ್ಶನ್ ಅವರಿಂದಲೇ ಟ್ರೆಂಡ್ ಆದ ಸಾಂಗ್ ಒಂದು ಬರುತ್ತಿದೆ. ‘ಶೆಡ್ಡಿಗೆ ಹೋಗಣ ಬಾ, ಕುಂಟೆಬಿಲ್ಲೆ ಆಡೋಣ ಬಾ..’
ಈ ಟ್ರೆಂಡ್ ಶುರುವಾಗಿದ್ದು ರಿಪಬ್ಲಿಕ್ ಕನ್ನಡ ಟಿವಿಯ ಜಯಪ್ರಕಾಶ್ ಶೆಟ್ಟರಿಂದ. ಪವಿತ್ರಾ ಗೌಡ ಅವರ ತಮ್ಮ ಜೈಲಿಗೆ ಹೋಗೋವಾಗ ಮೀಡಿಯಾದವರಿಗೆ ನಿಮಗೇನೂ ಮಾಡಕ್ಕೆ ಬೇರೆ ಕೆಲ್ಸ ಇಲ್ವಾ ಎಂದು ಪ್ರಶ್ನಿಸಿದ್ದಕ್ಕೆ, ತಿರುಗೇಟು ಕೊಟ್ಟು ಹೇಳಿದ್ದ ಡೈಲಾಗ್ ಇದು.
‘ಶೆಡ್ಡಿಗೆ ಹೋಗಣ ಬಾ, ಕುಂಟೆಬಿಲ್ಲೆ ಆಡೋಣ ಬಾ..’
ಆಮೇಲೆ ಅದು ಟ್ರೆಂಡ್ ಆಗಿದ್ದು, ರೀಲ್ಸ್ ಆಗಿ ಮೆರೆದಿದ್ದು.. ಗೊತ್ತೇ ಇದೆ. ಈಗ ಅದು ಸಿನಿಮಾಗೂ ಬಂದಿದೆ.
ಇದೀಗ ಅದನ್ನೇ ಇಟ್ಟುಕೊಂಡು ತಮ್ಮ ಸಿನಿಮಾಗೆ ಹಾಡು ಬರೆಸಿದೆ ‘ಮೆಜೆಸ್ಟಿಕ್ 2’ ಟೀಮ್. ಈ ಚಿತ್ರದಲ್ಲಿ ಹೀರೋ ನಟ ದರ್ಶನ್ ಅವರ ದೊಡ್ಡ ಅಭಿಮಾನಿ. ಅವರ ಮೇಲಿನ ಅಭಿಮಾನದಿಂದಲೇ ಈ ಹಾಡನ್ನು ಮಾಡಲಾಗಿದೆಯಂತೆ. ಈಗಿನ ಟ್ರೆಂಡ್‌ಗೆ ತಕ್ಕಂತೆ ನಿರ್ದೇಶಕ ರಾಮು ಅವರೇ ಸಾಹಿತ್ಯವನ್ನು ಬರೆದಿದ್ದಾರಂತೆ. ಈ ಹಾಡನ್ನು ಗಾಯಕಿ ಮೇಘನಾ ಹಳ್ಳಿಹಾಳ ಹಾಡಿದ್ದಾರೆ.
ಸಂತೋಷ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದು, ಚಿತ್ರೀಕರಣ ನಡೆಯುತ್ತಿದೆ.
ಅಮ್ಮಾ ಎಂಟರ್‌ಪ್ರೈಸಸ್ ಮೂಲಕ ಚಿತ್ರದುರ್ಗದ ಎಚ್ ಆನಂದಪ್ಪ ‘ಮೆಜೆಸ್ಟಿಕ್ 2’ ಸಿನಿಮಾಕ್ಕೆ ಹಣ ಹಾಕಿದ್ದಾರೆ. ರೌಡಿಸಂ ಕಥಾಹಂದರ ಹೊಂದಿರುವ ‘ಮೆಜೆಸ್ಟಿಕ್ 2’ ಚಿತ್ರದಲ್ಲಿ ನಾಯಕಿಯಾಗಿ ನಟಿ ಸಂಹಿತಾ ವಿನ್ಯಾ ಕಾಣಿಸಿಕೊಂಡಿದ್ದು, ಹೀರೋ ತಾಯಿ ಪಾತ್ರದಲ್ಲಿ ಶ್ರುತಿ ನಟಿಸುತ್ತಿದ್ದಾರೆ.



