ದರ್ಶನ್ ಅಭಿಮಾನಿಗಳ ಅತಿರೇಕದ ವರ್ತನೆ ಇದೇ ಮೊದಲಲ್ಲ. ದರ್ಶನ್ ಬಗ್ಗೆ ನೆಗೆಟಿವ್ ಹೇಳಿಕೆ ಕೊಟ್ಟವರನ್ನಷ್ಟೇ ಅಲ್ಲ, ದರ್ಶನ್ ಬಗ್ಗೆ ಏನೊಂದು ಮಾತನಾಡದೆ ಇದ್ದರೂ ದರ್ಶನ್ ಫ್ಯಾನ್ಸ್ ಅಟ್ಯಾಕ್ ಮಾಡ್ತಾರೆ. ಸೋಷಿಯಲ್ ಮೀಡಿಯಾಗಳಲ್ಲಿ ʻದರ್ಶನ್ ಭಾಷೆʼಯಲ್ಲೇ ಅಭಿಮಾನ ಮೆರೆಯುತ್ತಾರೆ. ಕೇಳಿಸಿಕೊಂಡವನು ಕಿವಿಗೆ ತೀರ್ಥ ಬಿಟ್ಟುಕೊಂಡರೂ ಶುದ್ಧವಾಗುವುದಿಲ್ಲ. ಸದ್ಯಕ್ಕೆ ದರ್ಶನ್ & ಗ್ಯಾಂಗ್ ಪ್ರಕರಣ ಹೊರಬಿದ್ದಾಗಿನಿಂದ ಪ್ರಥಮ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಯುದ್ಧವೇ ಶುರುವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಪ್ರಥಮ್, ದರ್ಶನ್ ಫ್ಯಾನ್ಸ್ ಕಾಟಕ್ಕೆ ಬೇಸತ್ತು ಪೊಲೀಸರ ಮೊರೆ ಹೋಗಿದ್ದರು. ಕೆಲವರ ಮೇಲೆ ಕ್ರಮ ಕೂಡಾ ತೆಗೆದುಕೊಳ್ಳಲಾಗಿತ್ತು. ಬಹಿರಂಗವಾಗಿ ಕ್ಷಮೆ ಕೇಳಿದವರೂ ಇದ್ದರು. ಹಾಗಂತ ಈಗಲೂ ದರ್ಶನ್ ಫ್ಯಾನ್ಸ್ ಕಾಟ ನಿಂತಿಲ್ಲ. ಪೊಲೀಸರ ಕ್ರಮವೂ ನಿಂತಿಲ್ಲ. ಆದರೆ, ಅದೇ ದರ್ಶನ್ ಫಾನ್ಸ್ ಪೊಲೀಸ್ ಠಾಣೆಗೆ ಬಂದಾಗ ಪ್ರಥಮ್ ಕಾಲಿಗೆ ಬೀಳ್ತಿದ್ದಾರಂತೆ.
ಇದನ್ನು ಖುದ್ದು ಪ್ರಥಮ್ ಪೋಸ್ಟ್ ಮಾಡಿದ್ದು ಅಂಧಾಭಿಮಾನಿಗಳೇ; ನಾನೆಷ್ಟು ತಿಳುವಳಿಕೆ ಹೇಳಿದ್ರೂ ಕೇಳಲಿಲ್ಲ! ಮನೆಗೆ ಪೊಲೀಸ್ ನೋಟಿಸ್ ಬಂದಮೇಲೆ ಸ್ಟೇಷನ್‌ಗೆ ಬಂದಾಗ ನಾವು ಪ್ರಥಮ್ ಅಭಿಮಾನಿ, ಯಾರೋ ಫೇಕ್ ಪ್ರೊಫೈಲ್ ಮಾಡಿಬಿಟ್ಟಿದ್ದಾರೆ ಅಂತ ಕಾಲಿಗೆ ಬೀಳ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹಾರಾಡುವಾಗ ಇದ್ದ ಪೌರುಷ ಪೊಲೀಸ್ ಸ್ಟೇಷನ್‌ಗೆ ಬಂದಾಗ ಯಾಕಿಲ್ಲ? ನೀವು ಬುದ್ಧಿ ಕಲಿಯಲ್ಲ, ಇನ್ಮೇಲೆ ಕಾನೂನಾತ್ಮಕವಾಗಿ ಹೋಗ್ತೀನಿ ಎಂದಿದ್ದಾರೆ.
ದರ್ಶನ್ ಅಭಿಮಾನಿಗಳ ವಿರುದ್ಧ ಪ್ರಥಮ್ ದೂರು ಕೊಟ್ಟಿದ್ದರೂ ಎನ್.ಸಿ.ಆರ್. ಮಾಡಲಾಗಿದೆ. (ಎಫ್.ಐ.ಆರ್. ಅಲ್ಲ). ಎಫ್ಐಆರ್ ಆದರೆ ಅಭಿಮಾನಿಗಳನ್ನು ಅರೆಸ್ಟ್ ಮಾಡುವುದಕ್ಕೂ ಅವಕಾಶ ಇರಲಿದೆ. ಕೋರ್ಟಿಗೂ ಅಲೆಯಬೇಕಾಗಿ ಬರಬಹುದು. ದಂಡ ವಿಧಿಸಬಹುದು. ತೀರಾ ಅಶ್ಲೀಲ ಕಮೆಂಟ್ ಎಂದಾದರೆ ಜೈಲು ಶಿಕ್ಷೆಯೂ ಆಗಬಹುದು.
ಒಟ್ಟಿನಲ್ಲಿ ಅಭಿಮಾನ, ಅಭಿಮಾನವಾಗಿದ್ದರೆ ಓಕೆ. ಆದರೆ.. ಏನ್ ಬೇಕಾದ್ರೂ ಮಾಡ್ತೀವಿ, ಯಾರಿಗೆ ಏನ್ ಬೇಕಾದ್ರೂ ಬೈತೀವಿ, ಅವರ ಕುಟುಂಬದವರ ಮಾನ ಮರ್ಯಾದೆಯನ್ನೆಲ್ಲ ಬೀದಿಯಲ್ಲಿ ಹರಾಜು ಹಾಕ್ತೀವಿ ಅನ್ನೋ ಹುಚ್ಚು ಬೇಡ. ಪೊಲೀಸರ ಎದುರು ಇಂತಹ ಹುಚ್ಚಾಟಗಳು ನಡೆಯೋದಿಲ್ಲ.



