ದರ್ಶನ್ ಅಭಿಮಾನಿಗಳು ಯಾಕ್ ಹಿಂಗೆ.. ಇದು ಹಲವರನ್ನು ಕಾಡುತ್ತಿರುವ ಪ್ರಶ್ನೆ. ಯಾಕೆಂದರೆ.. ದರ್ಶನ್ ಅಭಿಮಾನಿಗಳು ದರ್ಶನ್ ಭಾಷೆಯಲ್ಲೇ ಮಾತನಾಡುತ್ತಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿಯೂ ಅಷ್ಟೆ, ನಟ ದರ್ಶನ್ & ಗ್ಯಾಂಗ್ ಜೈಲು ಸೇರುತ್ತಿದ್ದಂತೆಯೇ, ಸುದ್ದಿ ಪ್ರಸಾರ ಮಾಡುತ್ತಿರುವ ಮಾಧ್ಯಮಗಳು ಹಾಗೂ ದರ್ಶನ್ ವಿರುದ್ಧ ನಿಂತಿದ್ದವರ ವಿರುದ್ಧ ಅಭಿಮಾನಿಗಳು ಮುಗಿ ಬೀಳುತ್ತಿದ್ದಾರೆ. ಕೆಲವರು ಡ್ಯಾಷ್ ಡ್ಯಾಷ್ ಭಾಷೆಯಲ್ಲಿ ಬಯ್ಯುತ್ತಿದ್ದಾರೆ. ಅಮ್ಮ, ಅಕ್ಕ, ಬೋ.. ಮಗ, ಸೂ.. ಮಗ.. ಎಲ್ಲವೂ ಬರುತ್ತಿವೆ. ಕೊಲೆ ಮಾಡ್ತೀನಿ, ಹೊಡೀತೀನಿ ಅಂತೆಲ್ಲ ಮಾತನಾಡುತ್ತಿದ್ದಾರೆ.
ಇದೇ ರೀತಿ ನಿರ್ಮಾಪಕ ಉಮಾಪತಿ ಗೌಡ ಮತ್ತು ನಟ ಪ್ರಥಮ್ ವಿರುದ್ಧ ಫ್ಯಾನ್ಸ್ ಕೆಂಡಾಮಂಡಲವಾಗಿದ್ದರು. ಹಾಗೆ ನೋಡಿದರೆ ಉಮಾಪತಿ ಅವರು ದರ್ಶನ್ ವಿಷಯದಲ್ಲಿ ಸ್ಥಿತಪ್ರಜ್ಞತೆಯಿಂದ ಮಾತನಾಡಿದ್ದರು. ಆದರೆ, ತಾವು ಅನುಭವಿಸಿದ್ದ ಅವಮಾನ, ನೋವು ಹೇಳಿಕೊಂಡಿದ್ದರಷ್ಟೇ. ಆದರೆ ಇದಕ್ಕೆ ರೊಚ್ಚಿಗೆದ್ದಿದ್ದ ಹಲವು ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಉಮಾಪತಿ ಗೌಡ ಮತ್ತು ಪ್ರಥಮ್‌ಗೆ ನಿಂದಿಸಿದ್ದರು ಇನ್ನೂ ಕೆಲವರು ದರ್ಶನ್ ಬಿಡುಗಡೆಯಾದ ಮೇಲೆ ನಿಮ್ಮನ್ನು ವಿಚಾರಿಸಿಕೊಳ್ತೀವಿ ಎನ್ನುವ ರೀತಿ ಬೆದರಿಕೆಗಳನ್ನು ಹಾಕಿದ್ದರು.
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಬಳಿ ಜಮಾಯಿಸಿದ್ದ ದರ್ಶನ್ ಅಭಿಮಾನಿಗಳಲ್ಲಿ ಒಬ್ಬನಂತೂ ಬಾಸ್ ಒಳಗಡೆ ಇದ್ದಾರೆ ಎಂದು ಉಮಾಪತಿ ಗೌಡ ಮತ್ತು ಪ್ರಥಮ್ ಮಾತಾಡ್ತಿದ್ದಾರೆ. ಅವರು ಆಚೆ ಬರಲಿ ಇವರಿಗೆಲ್ಲಾ ಒಂದು ಗತಿ ಕಾಣಿಸ್ತೀವಿ ಎಂದಿದ್ದ. ಆತನಿಗೆ ಪೊಲೀಸರು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ʻಒಳ್ಳೆಯ ಮಾತುʼಗಳಲ್ಲಿ ಬುದ್ದಿವಾದ ಹೇಳಿದ್ದಾರೆ. ಆನಂತರ ದರ್ಶನ್ ಅಭಿಮಾನಿ ಕ್ಷಮೆ ಕೇಳಿದ್ದಾನೆ.
ಪೊಲೀಸರು ಹೇಳಿದ ʻಬುದ್ದಿ ಮಾತುಗಳುʼ ಎಷ್ಟು ಪ್ರಭಾವ ಬೀರಿರಬಹುದು.. ಕ್ಷಮೆ ಕೇಳಿದ ದರ್ಶನ್ ಅಭಿಮಾನಿಗೇ ಗೊತ್ತು. ದರ್ಶನ್ ಅಭಿಮಾನಿ ಕ್ಷಮೆ ಕೇಳಿರುವ ವಿಡಿಯೋವನ್ನು ನಟ ಪ್ರಥಮ್ ಹಂಚಿಕೊಂಡಿದ್ದು, ನಾಲಿಗೆ ಹರಿಬಿಡುವ ಅಭಿಮಾನಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಮಾತಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ. ನಮ್ಮ ಮೊಬೈಲ್ ಅನ್ನು ಪೊಲೀಸರು ವಶಪಡಿಸಿಕೊಂಡು ಎಲ್ಲಾ ಕಮೆಂಟ್ಸ್, ಮೆಸೇಜ್‌ಗಳನ್ನು ಗಮನಿಸುತ್ತಿದ್ದಾರೆ. ಯಾರಿಗೋಸ್ಕರವೋ ದಯವಿಟ್ಟು ಜೀವನ ಹಾಳುಮಾಡಿಕೊಳ್ಳಬೇಡಿ. ಕನ್ನಡಕ್ಕಾಗಿ, ಕಾವೇರಿಗಾಗಿ ಬೇಕಿದ್ರೆ ಜೈಲಿಗೆ ಹೋಗಿ. ಪುಂಡಾಟ ಆಡ್ಕೊಂಡು ನಿಮ್ ಕುಟುಂಬ ಬೀದಿಗೆ ತರಬೇಡಿ. ನನ್ನ ಬಗ್ಗೆ ಮಾತಾಡುವಾಗ ಎಚ್ಚರಿಕೆ ಎಂದು ಸಂದೇಶ ರವಾನಿಸಿದ್ದಾರೆ. ದರ್ಶನ್ ಜುಲೈ 4ರವರೆಗೂ ನ್ಯಾಯಾಂಗ ಬಂಧನದಲ್ಲಿ ಇರಲಿದ್ದಾರೆ. ಬಳಿಕ ಮತ್ತೊಮ್ಮೆ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲಿದ್ದು, ನ್ಯಾಯಾಂಗ ಬಂಧನ ಮುಂದುವರೆಯುವ ಸಾಧ್ಯತೆ ಇದೆ.



