ನಟ ದರ್ಶನ್ (Darshan) ಅವರಿಗೂ ವಿವಾದಗಳಿಗೂ ಮುಗಿಯದ ನಂಟು. ದರ್ಶನ್ ಅವರ ಜೊತೆ ಹಲವು ನಟರು, ನಿರ್ದೇಶಕರು, ನಿರ್ಮಾಪಕರು, ಬೇರೆ ನಟರ ಅಭಿಮಾನಿಗಳು, ಟಿವಿ ಮಾಧ್ಯಮಗಳು (News media) ಆಕ್ರೋಶಗೊಂಡಿವೆ. ಟಿವಿ ಮಾಧ್ಯಮಗಳಂತೂ ಎರಡು ವರ್ಷ ದರ್ಶನ್ ಅವರನ್ನು ಮರೆತೇ ಬಿಟ್ಟಿದ್ದವು. ಚಿತ್ರರಂಗದ ಹಲವರು ದರ್ಶನ್ ಬಗ್ಗೆ ಪಾಸಿಟಿವ್ ಆಗಿಯಾಗಲೀ, ನೆಗೆಟಿವ್ ಆಗಲೀ ಮಾತನ್ನೇ ಆಡುವುದಿಲ್ಲ. ಯಾಕ್ ಬೇಕು ಸಾರ್.. ನಾವ್ ಒಂದ್ ಹೇಳಿದ್ರೆ, ಅವರು ಅರ್ಥ ಮಾಡ್ಕೊಳ್ಳೋದೇ ಒಂದು. ಅದಕ್ಕಿಂತ ಸುಮ್ಮನಿರೋದು ವಾಸಿ ಅಲ್ವಾ ಎನ್ನುತ್ತಾರೆ. ದರ್ಶನ್ ಇರೋದೇ ಹಾಗೆ.
ಆದರೆ ಕ್ರಾಂತಿ ಮಕಾಡೆ ಮಲಗಿದ ಮೇಲೆ ದರ್ಶನ್ ಅವರು ಒತ್ತಡದಿಂದಲೋ.. ಸ್ವಯಂಪ್ರೇರಿತವಾಗಿಯೋ ಒಟ್ಟಿನಲ್ಲಿ ಎಲ್ಲವನ್ನೂ ಪ್ಯಾಚ್ ಮಾಡಿಕೊಳ್ಳೋ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಟಿವಿ ಚಾನೆಲ್ಲುಗಳ ಜೊತೆ ಮಾತುಕತೆ : ಟಿವಿ ನ್ಯೂಸ್ ಚಾನೆಲ್ ಸಂಪಾದಕರ ಜೊತೆ ಮಾತುಕತೆ ನಡೆಸಿ, ಬಹಿರಂಗವಾಗಿ ಕ್ಷಮೆಯಾಚಿಸಿದ್ದ ದರ್ಶನ್, ಕೊನೆಗೂ ನ್ಯೂಸ್ ಚಾನೆಲ್ಲುಗಳಲ್ಲಿ ಸುದ್ದಿ ಬರುವಂತೆ ನೋಡಿಕೊಂಡಿದ್ದಾರೆ. ಆದರೆ ಇನ್ನೂ ರಿಪೋರ್ಟರ್‍ಗಳ ಜೊತೆ ಮಾತುಕತೆ ನಡೆಸುವುದು ಬಾಕಿ ಇದೆ. ಏಕೆಂದರೆ ದರ್ಶನ್ ಅವರು ಪದೇ ಪದೇ ಹಂಗಿಸಿದ್ದು, ಲೇವಡಿ ಮಾಡಿದ್ದು, ಕೆಣಕಿದ್ದು, ಬೈದಿದ್ದು ಎಲ್ಲವೂ ರಿಪೋರ್ಟರುಗಳಿಗೆ ಹೊರತು, ಸಂಪಾದಕರಿಗೆ ಅಲ್ಲ. ರಿಪೋರ್ಟರುಗಳು ಸಮಾಧಾನಗೊಂಡಂತಿಲ್ಲ.
ಜೋಗಿ ಪ್ರೇಮ್ ಜೊತೆ : ಉಮಾಪತಿ ವಿವಾದದಲ್ಲಿ ದರ್ಶನ್, ಅನಗತ್ಯವಾಗಿ ತಮಗೆ ಬ್ರೇಕ್ ಕೊಟ್ಟ ಪ್ರೇಮ್ (Jogi prem) ಅವರನ್ನು ಹಂಗಿಸಿದ್ದರು.ಅವನೇದು ದೊಡ್ಡ ಪುಡಂಗಾ ಎಂದಿದ್ದರು. ಆಗ ರೊಚ್ಚಿಗೆದ್ದು ಮಾತನಾಡಿದ್ದ ಪ್ರೇಮ್ ಮತ್ತು ರಕ್ಷಿತಾ ಅವರ ಜೊತೆ ಎಲ್ಲವೂ ಸರಿ ಹೋಗಿದೆ. ಪ್ರೇಮ್ ಅವರೇ ದರ್ಶನ್ ಅವರ ಚಿತ್ರವನ್ನು ಡೈರೆಕ್ಷನ್ ಮಾಡೋಕೆ ಒಪ್ಪಿದ್ದಾರೆ.
ಸುದೀಪ್ ಜೊತೆ ಸಂಧಾನ? : ಇದು ಆಗಿದೆಯೋ.. ಇಲ್ಲವೋ.. ಕನ್‍ಫರ್ಮೇಷನ್ ಇಲ್ಲವಾದರೂ, ಸುದೀಪ್ (kicchasudeep) ಜೊತೆ ಒಂದೇ ವೇದಿಕೆಯಲ್ಲಿ ದರ್ಶನ್ ಕಾಣಿಸಿಕೊಂಡಿದ್ದು ಸುಮಲತಾ (sumalatha) ಹುಟ್ಟುಹಬ್ಬದಲ್ಲಿ. ಅದಾದ ಮೇಲೆ ಮಾತಿಲ್ಲ..ಕತೆಯಿಲ್ಲ.
ರಾಜ್ ಕುಟುಂಬದ ಜೊತೆ : ಇನ್ನು ನಿರ್ಮಾಪಕ ಉಮಾಪತಿ ಶ್ರೀನಿವಾಸ್ (umapathy srinivas) ಜೊತೆಗಿನ ಗಲಾಟೆಯಲ್ಲಿ ಡಾ.ರಾಜ್ ಕುಟುಂಬವನ್ನು ವಿನಾಕಾರಣ ಎಳೆದು ತಂದಿದ್ದು, ಪ್ರಸ್ಥಾಪ ಮಾಡಿದ್ದು, ಕಾರುಗಳ ಕಥೆ, ಕ್ರಾಂತಿ ಚಿತ್ರದ ಪ್ರಚಾರದ ವೇಳೆ ದರ್ಶನ್ ಅವರ ಕೆಲ ಅಭಿಮಾನಿಗಳು ತೋರಿಸಿದ್ದ ಹುಚ್ಚಾಟ, ಅದನ್ನು ಸಮರ್ಥನೆ ಮಾಡಿಕೊಂಡಿದ್ದ ದರ್ಶನ್.. ಒಟ್ಟಿನಲ್ಲಿ ಅನಗತ್ಯವಾಗಿ ವಿವಾದಗಳನ್ನು ಅಟ್ಟಿಸಿಕೊಂಡು ಹೋಗಿ ತಗ್ಲಾಕ್ಕೊಂಡಿದ್ದರು. ಈಗ ಎಲ್ಲವನ್ನೂ ಒಂದೊಂದೇ ಪರಿಹರಿಸಿಕೊಂಡು ಬರುತ್ತಿದ್ದಾರಾ..?
ಘಟನೆ : ನಟ ದರ್ಶನ್ ಯುವ ಚಿತ್ರದ ಚಿತ್ರೀಕರಣ ನಡೆಯುತ್ತಿರುವ ಸ್ಥಳಕ್ಕೆ ದಿಢೀರ್ ಭೇಟಿ ಕೊಟ್ಟು ಹಿತವಾದ ಶಾಕ್ ಕೊಟ್ಟಿದ್ದಾರೆ. ಬೆಂಗಳೂರಿನ ಹೆಚ್ಎಂಟಿ ಫ್ಯಾಕ್ಟರಿಯಲ್ಲಿ ‘ಯುವ’ (Yuva) ಸಿನಿಮಾ ಚಿತ್ರೀಕರಣ ನಡೀತಿದೆ. ಸಿನಿಮಾ ಸೆಟ್ಗೆ ಇದ್ದಕ್ಕಿದ್ದಂತೆ ‘ಕಾಟೇರ’ (kaatera) ಚಿತ್ರತಂಡ ಎಂಟ್ರಿ ಕೊಟ್ಟಿದೆ. ನಟ ದರ್ಶನ್ ಹಾಗೂ ನಿರ್ದೇಶಕ ತರುಣ್ ಸುಧೀರ್ ಇಬ್ಬರು ಯುವ ರಾಜ್ಕುಮಾರ್, ಸಂತೋಷ್ ಆನಂದ್ ರಾಮ್, ಸಪ್ತಮಿ ಗೌಡ ಜೊತೆ ಕೆಲ ಹೊತ್ತು ಮಾತನಾಡಿದ್ದಾರೆ.
ಇತ್ತೀಚೆಗೆ ಕ್ರಾಂತಿ ಚಿತ್ರ ರಿಲೀಸ್ ಆಗಿದ್ದಾಗ ಒಂದರ ಹಿಂದೊಂದು ಹೇಳಿಕೆಗಳು, ತಪ್ಪು ಅಭಿಪ್ರಾಯಗಳೂ ಜೊತೆಯಾಗಿ ದರ್ಶನ್ ಮತ್ತು ರಾಜ್ ಕುಟುಂಬದ ಅಭಿಮಾನಿಗಳ ನಡುವೆ ಸೋಷಿಯಲ್ ಮೀಡಿಯಾದಲ್ಲಿ. ಸಮರವೇ ನಡೆದುಹೋಗಿತ್ತು. ಅದೆಲ್ಲಕ್ಕೂ ಫುಲ್ ಸ್ಟಾಪ್ ಇಡುವಂತೆ ಆಗಿರುವ ಈ ಬೆಳವಣಿಗೆ ಚಿತ್ರರಂಗದ ಪಾಲಿಗೆ ಶುಭ ಸುದ್ದಿ.
ಯುವ, ಡಿಸೆಂಬರಿನಲ್ಲಿ ರಿಲೀಸ್ ಆಗಬೇಕಿದ್ದು, ಯುವ ರಾಜ್`ಕುಮಾರ್ ಈ ಚಿತ್ರದ ಮೂಲಕ ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಪ್ತಮಿ ಗೌಡ (sapthamigowda) ನಾಯಕಿಯಾಗಿ ನಟಿಸುತ್ತಿದ್ದಾರೆ. ಹೊಂಬಾಳೆ ಬ್ಯಾನರ್`ನಲ್ಲಿ ನಿರ್ಮಾಣವಾಗುತ್ತಿಉರವ ಸಿನಿಮಾಗೆ ಸಂತೋಷ್ ಆನಂದರಾಮ್ ನಿರ್ದೇಶಕ.
ಎಲ್ಲ ಸರಿ ಹೋಗುತ್ತಾ..? ಸರಿ ಹೋಯ್ತಾ..?
ಅದನ್ನು ಕಾಲವೇ ನಿರ್ಧಾರ ಮಾಡಲಿದೆ.



