ಕೋರ್ಟಿಗೆ ಚಕ್ಕರ್.. ಸಿನಿಮಾಗೆ ಹಾಜರ್ ಎಂದು ಮಾಧ್ಯಮಗಳು ಸುದ್ದಿ ಮಾಡ್ತಿರೋವಾಗ್ಲೇ ನಟ ದರ್ಶನ್ ಮತ್ತೊಮ್ಮೆ ಎಡವಟ್ಟು ಮಾಡ್ಕೊಂಡಿದ್ದಾರೆ. ಧನ್ವೀರ್ ಅಭಿನಯದ ವಾಮನ ಸಿನಿಮಾವನ್ನು ಥಿಯೇಟರಿಗೆ ಬಂದು ನೋಡಿದ್ದಾರೇನೋ ನಿಜ.. ಆದರೆ ಜೊತೆಯಲ್ಲಿ ರೇಣುಕಾಸ್ವಾಮಿ ಕೊಲೆ ಕೇಸಿನ ಸಾಕ್ಷಿಯೂ ಇರುವುದು ದೊಡ್ಡ ಸಮಸ್ಯೆಯನ್ನೇ ಸೃಷ್ಟಿಸುವ ಸಾಧ್ಯತೆ ಇದೆ.
ವಾಮನ ಪ್ರೀಮಿಯರ್ ಶೋಗೆ ಬಂದು ಸಿನಿಮಾ ನೋಡಿರುವುದು ಓಕೆ, ಆದರೆ ಜೊತೆಯಲ್ಲಿ ಚಿಕ್ಕಣ್ಣ ಇದ್ದದ್ದು ಯಾಕೆ.. ಏಕೆಂದರೆ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಚಿಕ್ಕಣ್ಣ ಕೂಡಾ ಒಬ್ಬ ಪ್ರಮುಖ ಸಾಕ್ಷಿ. ಸಾಕ್ಷಿಯ ಜೊತೆ ಆರೋಪಿ ಚೆನ್ನಾಗಿರುವುದು ದರ್ಶನ್ ಕೊಲೆ ಕೇಸಿನ ವಿಚಾರಣೆಯಲ್ಲಿ ಸಮಸ್ಯೆ ಆಗಬಹುದು ಎಂಬ ವಾದ ಕಾನೂನು ಪಂಡಿತರದ್ದು. ಅದು ನಿಜವೂ ಹೌದು.
ರೇಣುಕಾಸ್ವಾಮಿ ಕೊಲೆಯಾಗುವ ಮುನ್ನ ನಟ ದರ್ಶನ್ ಪಾರ್ಟಿ ಮಾಡಿದ್ದರು. ಆ ಪಾರ್ಟಿಯಲಿ ಚಿಕ್ಕಣ್ಣ ಕೂಡಾ ಇದ್ದರು. ಹೀಗಾಗಿ ಪೊಲೀಸರು ಚಿಕ್ಕಣ್ಣ ಅವರನ್ನೂ ವಿಚಾರಣೆ ಮಾಡಿ, ಸಾಕ್ಷಿ ಹೇಳಿಸಿದ್ದಾರೆ. ಹಾಗೆ ಪೊಲೀಸರ ಎದುರು ಹೇಳಿಕೆ ಕೊಟ್ಟ ಬೆನ್ನಿಗೇ ಜೈಲಲ್ಲಿದ್ದ ದರ್ಶನ್ ಅವರನ್ನು ಭೇಟಿ ಮಾಡಿದ್ದರು ಚಿಕ್ಕಣ್ಣ. ಅದಕ್ಕೆ ಪೊಲೀಸರು ಚಿಕ್ಕಣ್ಣ ಅವರನ್ನು ಮತ್ತೆ ಠಾಣೆಗೆ ಕರೆಸಿ ವಾರ್ನಿಂಗ್ ಕೂಡಾ ಕೊಟ್ಟಿದ್ದರು. ಈಗ ನೋಡಿದರೆ.. ಚಿಕ್ಕಣ್ಣ ಜೊತೆಯಲ್ಲಿ ತಮಾಷೆ ಮಾಡುತ್ತಾ.. ಕಾಲೆಳೆಯುತ್ತಾ ಓಡಾಡಿಕೊಂಡು ಸಿನಿಮಾ ನೋಡಿದ್ದಾರೆ ನಟ ದರ್ಶನ್. ಇದು ಮುಂದೆ ಕೋರ್ಟ್ ವಿಚಾರಣೆಯಲ್ಲಿ ಸಮಸ್ಯೆ ಆದರೂ ಆಶ್ಚರ್ಯವಿಲ್ಲ.
ಇನ್ನು ಜಿಟಿ ಮಾಲ್‌ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ದರ್ಶನ್, ಸರಿಸುಮಾರು ವರ್ಷದ ನಂತರ ಮಾತನಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಿನಿಮಾ ಬಗ್ಗೆ ಕೇಳಿ, ಅದರ ಬಗ್ಗೆ ಮಾತ್ರ ಮಾತನಾಡ್ತೇನೆ ಎಂದು ಮಾಧ್ಯಮಗಳ ಬಾಯಿ ಮುಚ್ಚಿಸಿದ್ಧಾರೆ. ಇತ್ತೀಚೆಗಷ್ಟೇ ರೇಣುಕಾಸ್ವಾಮೀ ಕೊಲೆ ಕೇಸಿನಲ್ಲಿ ಕೋರ್ಟಿಗೆ ಹಾಜರ್ ಆಗದ ದರ್ಶನ್ʻಗೆ ನ್ಯಾಯಾಲಯ ಗರಂ ಆಗಿತ್ತು. ದರ್ಶನ್ ಪರ ವಕೀಲರಿಗೆ ವಾರ್ನಿಂಗ್ ಕೊಟ್ಟಿತ್ತು. ಕೋರ್ಟಿಗೆ ಚಕ್ಕರ್, ಸಿನಿಮಾಗೆ ಹಾಜರ್ ಯಾಕೆ ಎಂಬ ಪ್ರಶ್ನೆ ಸಹವಾಗಿಯೇ ಮೂಡಿದೆ. ಆದರೆ ದರ್ಶನ್ ನೋ ರಿಯಾಕ್ಷನ್.
ರೇಣುಕಾಸ್ವಾಮಿ ಕೇಸ್ ಸಂಬಂಧ ಏಪ್ರಿಲ್ 8 ರಂದು ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ಷರತ್ತು ವಿಧಿಸಿತ್ತು. ಜಾಮೀನು ಕೊಟ್ಟ ವೇಳೆ ಹಾಕಲಾಗಿರುವ ಷರತ್ತುಗಳಲ್ಲಿ, ಕೋರ್ಟ್ಗೆ ಕರೆದಾಗ ಬರಬೇಕು. ವಿಚಾರಣೆ ತಪ್ಪಿಸಿಕೊಳ್ಳಬಾರದು ಎನ್ನುವುದು. ಆದರೆ, ಕೋರ್ಟಿಗೆ ಬೆನ್ನುನೋವಿನ ಕಾರಣ ನೀಡಿ ತಪ್ಪಿಸಿಕೊಂಡಿದ್ದ ದರ್ಶನ್, ಗೆಳೆಯನ ಸಿನಿಮಾ ನೋಡುವುದಕ್ಕೆ ಆಗಮಿಸಿದ್ದು ಚರ್ಚೆಗೆ ಕಾರಣವಾಗಿದೆ.
ಇನ್ನು ಸಿನಿಮಾ ನೋಡಿದ ದರ್ಶನ್ ʻʻವಾಮನ ತುಂಬಾ ಚೆನ್ನಾಗಿ ಬಂದಿದೆ. ಟ್ರೇಲರ್ ನೋಡಿದಾಗ ಮಾಸ್ ಸಿನಿಮಾ ಅಂದುಕೊಳ್ಳುತ್ತಾರೆ. ಮದರ್ ಸೆಂಟಿಮೆಂಟ್ ತುಂಬಾ ಚೆನ್ನಾಗಿದೆ. ವಾಮನ ಅಂದ್ರೆ ಬಲೀ ಚಕ್ರವರ್ತಿ ಹತ್ರ ಭಿಕ್ಷೆ ಬೇಡ್ಕೊ ಬರೋನು. ಈ ವಾಮನ ಈ ಚಿತ್ರರಂಗದಲ್ಲಿ ಒಂದು ಕಾಲಿಡೋದಕ್ಕೆ ಜಾಗ ಕೇಳ್ತಿದ್ದಾನೆ. ಈ ಹೆಜ್ಜೆ ತುಂಬಾ ದೊಡ್ಡ ಹೆಜ್ಜೆʼʼಎಂದಿದ್ದಾರೆ.



