ನಟ ದರ್ಶನ್ ಈಗ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಆದರೆ, ಅಭಿಮಾನಿಗಳು ಪ್ರತಿದಿನ ಜೈಲಿನ ಬಳಿ ಹೋಗಿ, ದರ್ಶನ್ ಅವರನ್ನು ನೋಡೋಕೆ ಬಿಡಿ ಎಂದು ದುಂಬಾಲು ಬೀಳುತ್ತಿದ್ದಾರೆ. ಪೊಲೀಸರು ಏನು ಸಮಾಧಾನ ಹೇಳಿದರೂ, ಕೇಳುವ ಸ್ಥಿತಿಯಲ್ಲಿಲ್ಲ ಫ್ಯಾನ್ಸ್. ಈ ನಡುವೆ ದರ್ಶನ್ ಅವರ ಭೇಟಿಗಾಗಿ ಹೋಗಿದ್ದ ನಟ ಪ್ರೇಮ್ (ಲವ್ಲಿ ಸ್ಟಾರ್) ಹಾಗೂ ನಿರ್ದೇಶಕ ತರುಣ್ ಸುಧೀರ್ ಅವರನ್ನು ಭೇಟಿ ಮಾಡದೆ ವಾಪಸ್ ಕಳಿಸಿದ್ದಾರೆ ಎಂಬ ಮಾಹಿತಿ ಇದೆ. ಅಲ್ಲದೆ ತಾಯಿ ಮೀನಾ ತೂಗುದೀಪ್ ಹಾಗೂ ತಮ್ಮ ದಿನಕರ್ ಅವರನ್ನು ನೋಡುವ ಮಾತನಾಡುವ ಆಸೆ ವ್ಯಕ್ತಪಡಿಸಿದ್ದಾರಂತೆ.
ಅಂದಹಾಗೆ ಜೈಲಿನಲ್ಲಿರುವವರಿಗೆ ವಾರಕ್ಕೆ ಎರಡು ಬಾರಿ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಅವಕಾಶ ಇರಲಿದೆ. ಕೇವಲ ಎರಡು ಬಾರಿ. ಹೀಗಾಗಿ ದರ್ಶನ್ ಅವರ ಪತ್ನಿ ಹಾಗೂ ಮಗ ಹೋಗಿ ಬರಲಿ ಎಂಬ ನಿರ್ಧಾರಕ್ಕೆ ಬರಲಾಗಿದೆ. ಈ ನಡುವೆಯೂ ಚಿತ್ರರಂಗದಿಂದ ಹೋಗಿ ನೋಡಿ ಬಂದವರೆಂದರೆ.. ವಿನೋದ್ ಪ್ರಭಾಕರ್ ಮಾತ್ರ. ಹೊರಗಿನವರ ಭೇಟಿಗೆ ಅವಕಾಶ ಕೊಟ್ಟರೆ, ಕುಟುಂಬದವರೇ ಅವರನ್ನು ಭೇಟಿ ಮಾಡಲು ಆಗುವುದಿಲ್ಲ.



