ವರ್ಷದ ಕೊನೆಯಲ್ಲಿ ಕನ್ನಡ ಚಿತ್ರರಂಗಕ್ಕೆ ಬೇಕಿತ್ತೋ.. ಬೇಕಿಲ್ಲದೆಯೋ.. ಫ್ಯಾನ್ಸ್ ವಾರ್ ಶುರುವಾಗಿಬಿಟ್ಟಿದೆ. ಕಿಚ್ಚ ಸುದೀಪ್ ಹುಬ್ಬಳ್ಳಿ ಈವೆಂಟಿನಲ್ಲಿ ನಡೆದ ಶೋನಲ್ಲಿ ʻಯುದ್ಧಕ್ಕೂ ಸಿದ್ಧʼ ಎಂದು ಗುಡುಗಿದ್ದಾರೆ. ಅತ್ತ ವಿಜಯಲಕ್ಷ್ಮಿ ದರ್ಶನ್ ತಮ್ಮ ಪತಿಯ ಫೇಮಸ್ ಡೈಲಾಗ್‌ನ್ನ ಅಭಿಮಾನಿಗಳ ಎದುರು ಹೊಡೆದಿದ್ದಾರೆ. ಇವರಿಬ್ಬರೂ ನಾವು ಇಂಥವರಿಗೆ ಹೇಳ್ತಿರೋದು ಅಂತಾ ನೇರಾನೇರವಾಗಿ ಅಪ್ಪಿತಪ್ಪಿಯೂ ಹೇಳಲ್ಲ. ಇಮ್ಯಾಜಿನೇಷನ್ನಿಗೆ ಬಿಡ್ತಾರೆ. ಅಕಸ್ಮಾತ್.. ವಿಪರೀತಕ್ಕೆ ಹೋದರೆ.. ಹೊಣೆಯಿಂದ ನುಣುಚಿಕೊಳ್ಳೋ ಮುಂಜಾಗ್ರತೆ ಅದು. ಇವರು ಶಿವಣ್ಣ ಅವರಿಂದ ಕಲಿಯಬೇಕಾದ್ದು ಸಾಕಷ್ಟಿದೆ. ಅದಕ್ಕೆ ಈಗ ನಡೆಯುತ್ತಿರುವ ಈ ಘಟನೆಗಳ ಜೊತೆ ಇನ್ನೂ ಎರಡು ಘಟನೆಗಳನ್ನೊಮ್ಮೆ ನೋಡೋಣ.
ಯಾವುದೇ ಅನುಮಾನ ಇಲ್ಲದೆ ಮತ್ತೊಮ್ಮೆ ಫ್ಯಾನ್ಸ್ ವಾರ್ ದೊಡ್ಡ ಮಟ್ಟದಲ್ಲೇ ಭುಗಿಲೆದ್ದಿದೆ. ಕಿಚ್ಚ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ನಡೆಯುತ್ತಿರುವ ಸೋಷಿಯಲ್ ಮೀಡಿಯಾ ಸಮರ ಇದು. ಮೊದಲಿಗೆ ಸುದೀಪ್ ಅವರ ವಿಷಯಕೆಕ ಬಂದರೆ.. ʻದಿ ಡೆವಿಲ್ʼ ಸಿನಿಮಾ ರಿಲೀಸ್ ಆದಾಗ ಸೈಲೆಂಟ್ ಆಗಿ ಶುರುವಾಗಿದ್ದ ಫ್ಯಾನ್ಸ್ ವಾರ್ ಇದು. ಬ್ಯಾಲೆನ್ಸ್ ಮಾಡೋದಕ್ಕಿಂತ ಓಪನ್ ಆಗಿ ಹೇಳೋದಾದ್ರೆ.. ಈ ಬಾರಿಯೂ ಇದರ ಕ್ರೆಡಿಟ್ಟು ದರ್ಶನ್ ಫ್ಯಾನ್ಸ್‌ಗೇ ಸಲ್ಲಬೇಕು. ಕಾರಣ ಇಷ್ಟೇ.. ಬಿಡುಗಡೆಯಾಗಿದ್ದು ದರ್ಶನ್ ಅಭಿನಯದ ಸಿನಿಮಾ. ದರ್ಶನ್ ಜೈಲಿನಲ್ಲಿದ್ದಾರೆ. ಪ್ರಚಾರದ ಹೊಣೆಯನ್ನು ಅಭಿಮಾನಿಗಳೇ ಹೊತ್ತಿದ್ದಾರೆ. ಓಕೆ.. ಆದರೆ, ಡೆವಿಲ್ ಚಿತ್ರಕ್ಕಿಂತ, ದರ್ಶನ್ ಅಭಿಮಾನಿಗಳು ಇನ್ನೊಬ್ಬ ನಟರ ಹೆಸರು ತಗೊಂಡು, ಲೇವಡಿ ಮಾಡುತ್ತಾ.. ಪ್ರಚಾರ ಮಾಡೋ ಅವಶ್ಯಕತೆ ಇತ್ತಾ.. ಡೆವಿಲ್ ಚಿತ್ರದ ಪ್ಲಸ್ಸುಗಳಿಗಿಂತ ಹೆಚ್ಚಾಗಿ, ಬೇರೆ ನಟರನ್ನು ಹೀಯಾಳಿಸುವುದೇ ಪ್ರಚಾರ ಎಂದುಕೊಂಡು.. ಕೆಣಕುತ್ತಲೇ ಹೋದರು.
ಇದು ಸುದೀಪ್ ಅಭಿಮಾನಿಗಳನ್ನು ಕೆರಳಿಸಿದ್ದು ನಿಜ. ಅದಕ್ಕೆ ತಕ್ಕಂತೆ ಸುದೀಪ್ ಹುಬ್ಬಳ್ಳಿಯಲ್ಲಿ ನಡೆದ ಮಾರ್ಕ್ ಚಿತ್ರದ ಪ್ರೀ-ಈವೆಂಟ್‌ನಲ್ಲಿ ಒಂದು ಡೈಲಾಗ್ ಹೇಳಿದ್ದರು. ಈ ವೇದಿಕೆ ಮೇಲೆ ನಿಂತು ಹೇಳ್ತಾ ಇದ್ದೀನಿ. ಯುದ್ಧಕ್ಕೆ ಸಿದ್ಧ. ಯಾಕೆಂದರೆ ನಾವು ನಮ್ಮ ಮಾತಿಗೆ ಬದ್ಧ. ಕೆಲವೊಮ್ಮೆ ಸೈಲೆಂಟ್ ಆಗಿರೋದು ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ. ನನ್ನ ಸ್ನೇಹಿತರು ನೀವೆಲ್ಲ ಚೆನ್ನಾಗಿರಬೇಕು ಎಂಬ ಉದ್ದೇಶದಿಂದ, ನಾವೆಲ್ಲರೂ ಚೆನ್ನಾಗಿರಬೇಕು ಎಂಬ ಉದ್ದೇಶಗೋಸ್ಕರ ನಾನು ಬಾಯಿ ಮುಚ್ಚಿಕೊಂಡು ಇದ್ದೆನೇ ಹೊರತು, ಬಾಯಿ ಇಲ್ಲ ಅಂತಲ್ಲ. ಬಹಳಷ್ಟು ಕಲ್ಲಿನ ತೂರಾಟ, ನನ್ನ ಸಹನೆಯಿಂದಾಗಿ ನಿಮ್ಮ ಮೇಲೆ ಬೀಳುತ್ತಲೇ ಇರುತ್ತೆ. ಅದನ್ನು ತಾವು ತಡ್ಕೊಂಡು ಬರ್ತಾನೇ ಇದ್ದೀರಿ. ಈಗ ಹೇಳ್ತಾ ಇದ್ದೀನಿ. ಅದನ್ನು ತಡಿಯೋ ತನಕ ತಡ್ಕೊಂಡು ಇರಿ. ಮಾತನ್ನಾಡೋ ಟೈಮ್ನಲ್ಲಿ ಮಾತನ್ನಾಡಿʼʼ ಎಂದರು. ಸುದೀಪ್ ಸಮಾಧಾನ ವಹಿಸಬಹುದಿತ್ತಾ.. ಕೆಲವೊಂದ್ಸಲ ಮಾತನಾಡದೇ ಯುದ್ಧ ಗೆಲ್ಲಬಹುದು ಎನ್ನುತ್ತಿದ್ದ ಸುದೀಪ್, ಈ ಬಾರಿಯೂ ಸ್ವಲ್ಪ ತಾಳ್ಮೆ ವಹಿಸಿದ್ದರೆ ಆಗ್ತಾ ಇತ್ತು. ಆಗಲಿಲ್ಲ.
ಇದಕ್ಕೆ ವಿಜಯಲಕ್ಷ್ಮಿ ಕೌಂಟರ್ ಕೊಟ್ಟಿದ್ದಾರೆ. ʻʻದರ್ಶನ್ ಜೈಲಿನಲ್ಲಿದ್ದಾಗ ಕೆಲವರು ಅವರ ಬಗ್ಗೆ, ಅವರ ಫ್ಯಾನ್ಸ್ ಬಗ್ಗೆ, ಹೊರಗಡೆ ಹಾಗೂ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಾರೆ, ಆದರೆ ದರ್ಶನ್ ಇದ್ದಾಗ ಮಾತ್ರ ಅವರು ಗೊತ್ತೇ ಆಗದಂತೆ ಇರುತ್ತಾರೆ, ಬೆಂಗಳೂರಿನಲ್ಲಿ ಇದ್ದಾರಾ ಎಂದು ಗೊತ್ತೇ ಆಗದಂತೆ ಇರುತ್ತಾರೆ, ದರ್ಶನ್ ಟೀಕಿಸುವವರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ, ಬೇಜಾರು ಮಾಡಿಕೊಳ್ಳಲ್ಲ, ದರ್ಶನ್ ಅಭಿಮಾನಿಗಳಾದ ನೀವೂ ತಲೆಕೆಡಿಸಿಕೊಳ್ಳಬೇಡಿʼʼ ಎಂದಿದ್ದಾರೆ.
ಇದೊಂದ್ ಥರಾ ದರ್ಶನ್ ಕಂಡ್ರೆ ಎಲ್ಲರೂ ಗಢಗಢ ನಡುಗ್ತಾರೆ, ಅವರು ಹೊರಗಡೆ ಇದ್ರೆ ತುಟಿಕ್ ಪಿಟಿಕ್ ಅನ್ನಲ್ಲ ಅನ್ನೋ ರೀತಿಯ ಹೇಳಿಕೆ ಅದು.
ವಿಜಯಲಕ್ಷ್ಮಿ ಅವರು ಒಂದು ವಾಸ್ತವ ಅರ್ಥ ಮಾಡ್ಕೋಬೇಕಿತ್ತು. ಡೆವಿಲ್ ಚಿತ್ರ ಅದೇನೇ ಪ್ರಚಾರ ಮಾಡಿದ್ರೂ ಗೆಲ್ತಾ ಇಲ್ಲ. ಡೆವಿಲ್ ಚಿತ್ರದ ಪ್ರಚಾರಕ್ಕೆ ಹೋಗಿ, ಚಿತ್ರದ ಬಗ್ಗೆ ಒಂದೇ ಒಂದು ಮಾತನಾಡದೆ.. ಬೇರೆ ನಟರನ್ನೇ ಬೈಕೊಂಡ್ ಕೂತ್ಕೊಂಡ್ರೆ ಹೇಗೆ.. ಅಲ್ವಾ..
ಇವರೆಲ್ಲ ಶಿವಣ್ಣ ಅವರನ್ನ ನೋಡಿ ಕಲೀಬೇಕು ಅಂದಿದ್ದು ಇದೇ ಕಾರಣಕ್ಕೆ. ಈಗಲೂ ಕೂಡಾ ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಅಭಿಯದ 45 ಮತ್ತು ಸುದೀಪ್ ಅಭಿನಯದ ಮಾರ್ಕ್ ಎದುರಾಬದುರು ಬರುತ್ತಿವೆ. ಸುದೀಪ್ ಚಿತ್ರಕ್ಕೆ ವಿಷ್ ಮಾಡೋ ಶಿವಣ್ಣ, ತಮ್ಮ ಚಿತ್ರದ ಪ್ರಚಾರದಲ್ಲಿ ತಮ್ಮ ಪಾತ್ರ, ನಿರ್ದೇಶಕರ ಕಥೆ, ಪ್ರೆಸೆಂಟೇಷನ್, ಉಪೇಂದ್ರ, ರಾಜ್ ಬಿ ಶೆಟ್ಟಿಯವರ ಕ್ಯಾರೆಕ್ಟರ್, ನಿರ್ಮಾಪಕರ ಬಂಡವಾಳ, ಗ್ರಾಫಿಕ್ಸ್.. ಇನ್ನಿತರ ವಿಷಯಗಳ ಬಗ್ಗೆ ಮಾತನಾಡ್ತಿದ್ದಾರೆ. ಇದರ ಮಧ್ಯೆ ಮಾರ್ಕ್ ಚಿತ್ರಕ್ಕೂ ಶುಭ ಕೋರಿದ್ದಾರೆ. 45 ಚಿತ್ರೀಕರಣ ವೇಳೆ ಬಂದಿದ್ದ ವಿನೀಶ್ ಅವರಿಗೆ ಧೈರ್ಯ ಹೇಳಿದ್ದರ ವಿಷಯದ ಬಗ್ಗೆಯೂ ಪತ್ರಕರ್ತರು ಕೇಳಿದಾಗಲಷ್ಟೇ ಉತ್ತರ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ತಮ್ಮ ಕ್ಯಾನ್ಸರ್ ಚಿಕಿತ್ಸೆ ವೇಳೆ ತಮಗೆ ಧೈರ್ಯ ಕೊಟ್ಟವರನ್ನೂ ಪ್ರೀತಿಯಿಂದ ನೆನಪಿಸಿಕೊಂಡಿದ್ದಾರೆ. ಹಾಗೆ ನೋಡಿದರೆ ಅವರ ಕುಟುಂಬದವರ ಬಗ್ಗೆ ಮಾತನಾಡಿದ್ದು ಕಡಿಮೆ ಎನ್ನಬೇಕು. ನಟರಾದವರು ಇರಬೇಕಾದ್ದೇ ಹೀಗೆ.



