ದರ್ಶನ್ ಜೈಲಿನಲ್ಲಿ ಸೌಲಭ್ಯ ಸರಿ ಇಲ್ಲ ಎಂದು ಅರ್ಜಿ ಸಲ್ಲಿಸಿದರೂ ಕೂಡಾ ಈಗ ವರದಿ ದರ್ಶನ್ ಪರವಾಗಿ ಬಂದಿಲ್ಲ. ಜೈಲಿನ ಮ್ಯಾನುಯಲ್ ಪ್ರಕಾರ ಸೌಲಭ್ಯ ನೀಡಿದ್ದಾರೆ. ಏನೂ ಪ್ರಾಬ್ಲಂ ಇಲ್ಲ ಎಂದು ವರದಿ ಕೊಟ್ಟಿದ್ದಾರೆ. ಈ ವರದಿ ಸಿಕ್ಕಿದ್ದೇ ತಡ.. ದರ್ಶನ್ ಅಸಹಾಯಕತೆಯಿಂದ.. ಆಕ್ರೋಶದಿಂದ ಕಿರುಚಾಡಿದ್ದಾರೆ. ಕೂಗಾಡಿದ್ದಾರೆ. ದುಃಖವನ್ನು ಒಳಗೊಳಗೇ ಅದುಮಿಟ್ಟುಕೊಂಡಿದ್ದಾರೆ. ಅದಕ್ಕೆ ಕಾರಣಗಳೂ ಇವೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿರುವ ದರ್ಶನ್, ಜೈಲಿನಲ್ಲಿ ಯಾವ ಸೌಲಭ್ಯವನ್ನೂ ಕೊಟ್ಟಿಲ್ಲ ಎಂದು ದೂರಿ ಕಣ್ಣೀರಿಟಿದ್ದರು. ಪದೇ ಪದೇ ಕೋರ್ಟ್ ಮೆಟ್ಟಿಲೇರಿದ್ದ ಕಾರಣ, ನ್ಯಾಯಾಧೀಶರೇ ಖುದ್ದು ಜೈಲಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಜೈಲಿನಲ್ಲಿ ದರ್ಶನ್ ಹೇಳಿದ ಕಷ್ಟ ನಷ್ಟಗಳಿಲ್ಲ ಎಂದು ರಿಪೋರ್ಟ್ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಸೂಚಿಸಿತ್ತು. ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಬಿ. ವರದರಾಜು ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಇರುವ ಬ್ಯಾರಕ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ವರದಿಯಲ್ಲಿ ದರ್ಶನ್ ಹೇಳಿದ್ದ ಸುಳ್ಳುಗಳು ಬಯಲಾಗಿವೆ.
ದರ್ಶನ್ ಹೇಳಿದ್ದು ಬಿಸಿಲಿನ ಕೊರತೆಯಿಂದಾಗಿ ಮೈಗೆ ಫಂಗಸ್ ಉಂಟಾಗಿದೆ ಎಂದು. ವಾಸ್ತವದಲ್ಲಿ ಹಾಗೇನೂ ಆಗಿಲ್ಲ. ಚರ್ಮರೋಗ ತಜ್ಞರು ಪರೀಕ್ಷೆ ಮಾಡಿದ್ದಾರೆ. ಯಾವುದೇ ಫಂಗಸ್ ಆಗಿಲ್ಲ. ಹಿಮ್ಮಡಿ ಒಡೆದಿದೆ, ಅಷ್ಟೇ. ಇನ್ನು ಬೆನ್ನುನೋವಿಗೆ ಫಿಸಿಯೋಥೆರಪಿ ಸೌಕರ್ಯ ಇಲ್ಲ ಎನ್ನುವುದೂ ಸುಳ್ಳು. ಎರಡು ದಿನಗಳಿಗೊಮ್ಮೆ ವೈದ್ಯರು ಬರುತ್ತಿದ್ದು, ಫಿಸಿಯೋಥೆರಪಿ ಕೊಟ್ಟಿದ್ದಾರಂತೆ. ಅಲ್ಲದೆ ಇಂಡಿಯನ್ ಟಾಯ್ಲೆಟ್ ಇದೆ. ಮಂಡಿ ನೋವು. ಕೂರುವುದಕ್ಕೆ ಆಗುತ್ತಿಲ್ಲ ಎಂಬ ಆರೋಪವೂ ಸುಳ್ಳಾಗಿದ್ದು, ಬ್ಯಾರಕ್‌ನಲ್ಲಿ ಇಂಡಿಯನ್ ಮತ್ತು ವೆಸ್ಟರ್ನ್ ಎರಡೂ ಟಾಯ್ಲೆಟ್ ಸಿಸ್ಟಂ ಇದೆ. ಹಾಸಿಗೆ, ದಿಂಬು ಸೌಲಭ್ಯ ಕೊಟ್ಟಿಲ್ಲ ಎಂಬ ವಾದಕ್ಕೆ ಜೈಲಿನ ಮ್ಯಾನ್ಯುಯಲ್ ಪ್ರಕಾರ ಕೊಡುವಷ್ಟನ್ನು ಕೊಟ್ಟಿದ್ದಾರೆ. ಏಕೆಂದರೆ ಅದು ಜೈಲು. ದರ್ಶನ್ ಅಲ್ಲಿ ಸೆಲಬ್ರಿಟಿಯಲ್ಲ. ಎಲ್ಲರಂತೆಯೇ ಆತನೂ ಒಬ್ಬ ವಿಚಾರಣಾಧೀನ ಖೈದಿಯಷ್ಟೇ. ಇನ್ನು ವಿಚಾರಣಾಧೀನ ಖೈದಿಗಳಿಗೆ ಬಾಚಣಿಕೆ, ಕನ್ನಡಿ ಕೊಡಲ್ಲ. ಏನಾದರೂ ಮಾಡಿಕೊಂಡರೆ ಎಂಬ ಭಯ. ಇನ್ನು ಟಿವಿ ಸೌಲಭ್ಯವೂ ಅಷ್ಟೇ. ಎಲ್ಲ ಬ್ಯಾರಕ್ಕುಗಳಲ್ಲೂ ಕೊಡಲೇಬೇಕು ಎಂಬ ನಿಯಮ ಇಲ್ಲ. ಫೋನ್‌ನಲ್ಲಿ ಮಾತನಾಡುವಾಗ ಸ್ಪೀಕರ್ ಆನ್ ಮಾಡಿ ಕೇಳಿಸಿಕೊಳ್ಳುತ್ತಾರೆ ಎಂಬ ಆರೋಪಕ್ಕೂ ಉತ್ತರ ಇದೆ. ಆರೋಪಿಗಳ ಮೇಲೆ ನಿಗಾ ಇಡುವುದಕ್ಕೆ ಅವಕಾಶ ಇದೆ. ಫೋನ್ ರೆಕಾರ್ಡ್ ಕೂಡಾ ಮಾಡಬಹುದು. ನಿಯಮಗಳ ಪ್ರಕಾರ ಯಾವ ತಪ್ಪೂ ಇಲ್ಲ.
ಇದಿಷ್ಟನ್ನೂ ಹೇಳಿರುವ ನ್ಯಾಯಾಧೀಸರು ಬಿಸಿಲಿನಲ್ಲಿ ವಾಕಿಂಗ್ ಮಾಡುವುದಕ್ಕೆ ಅವಕಾಶ ನೀಡುತ್ತಿಲ್ಲ ಎಂಬ ವಾದವನ್ನು ಮಾತ್ರ ಪುಷ್ಠೀಕರಿಸಿದ್ದಾರೆ. ಸೆಲಬ್ರಿಟಿಯಾಗಿರುವ ದರ್ಶನ್ ಅವರಿಗೆ ಅಕ್ಕಪಕ್ಕದ ಅಪಾರ್ಟ್‌ಮೆಂಟಿಂದ ಫೋಟೋ ತೆಗೆಯಬಹುದು. ಹೀಗಾಗಿ ಅವಕಾಶ ಕೊಟ್ಟಿಲ್ಲ ಎಂಬ ಜೈಲು ಸಿಬ್ಬಂದಿ ವಾದವನ್ನು ತಳ್ಳಿ ಹಾಕಿದ್ದು, ಅವಕಾಶ ಕೊಡಬಹುದು ಎಂದಿದ್ದಾರೆ.
ಕೋರ್ಟ್ ರಿಪೋರ್ಟ್ ಗೊತ್ತಾಗುತ್ತಿದ್ದಂತೆಯೇ ದರ್ಶನ್ ಕೂಗಾಡಿದ್ದಾರೆ. ಏನೂ ಮಾಡೋಕಾಗದ ಅಸಹಾಯಕತೆಯಿಂದ ಕಿರುಚಿದ್ದಾರೆ. ನಾನು ಯಾರಿಗೆ ಏನ್ ಅನ್ಯಾಯ ಮಾಡಿದೆ, ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ. ನನಗೆ ಯಾಕೆ ಈ ಶಿಕ್ಷೆ, ನಾನು ಹೀಗೆ ಸಾಯಬೇಕ ಅಂತ ಕೂಗಾಡಿ ದರ್ಶನ್ ಸಿಟ್ಟಾಗಿದ್ದಾರೆ. ದರ್ಶನ್ ಕೋಪಗೊಂಡ ರೀತಿ ನೋಡಿ ಸಹಚರರು ಫುಲ್ ಶಾಕ್ ಆದ್ರಂತೆ. ಮ್ಯಾನೇಜರ್ ನಾಗರಾಜ್ ಮಾತ್ರ ದರ್ಶನ್ ಸಮಾಧಾನಕ್ಕೆ ಮುಂದಾಗಿದ್ರಂತೆ. ಅದು ಬಿಟ್ಟರೆ ಉಳಿದವರು ದರ್ಶನ್ ಕಡೆಯೂ ನೋಡದೆ ಸೈಲೆಂಟ್ ಆಗಿದ್ದಾರಂತೆ.



