ಕನ್ನಡದಲ್ಲಷ್ಟೇ ಅಲ್ಲ, ಚಿತ್ರರಂಗದದಲ್ಲಿ ನಟಿ ಮತ್ತು ನಿರ್ದೇಶಕರ ಲವ್ ಸ್ಟೋರಿ ಹೊಸದೇನಲ್ಲ. ನಟ-ನಟಿಯವರ ಪ್ರೀತಿ ಮದುವೆ ಇತ್ಯಾದಿಗಳೇ ಬೇರೆ. ನಿರ್ದೇಶಕ, ತಂತ್ರಜ್ಞರು ಹಾಗೂ ನಟಿಯರ ನಡುವಿನ ಪ್ರೇಮ ಕಥೆಗಳೇ ಬೇರೆ.
ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮತ್ತು ಆರತಿಯವರ ಲವ್ ಸ್ಟೋರಿ ಗೊತ್ತಿರುವಂತದ್ದೇ. ಗಿರೀಶ್ ಕಾಸರವಳ್ಳಿ ಮತ್ತು ವೈಶಾಲಿ ಅವರ ಪ್ರೀತಿ, ತಾರಾ ಅನುರಾಧ ಮತ್ತು ವೇಣು ಅವರ ಪ್ರಣಯ ಗೀತೆ.. ಚಿತ್ರರಂಗಕ್ಕೆ ಗೊತ್ತಿರುವಂತದ್ದೇ. ಜಯಂತಿ ಮತ್ತು ಪೇಕೆಟಿ ಶಿವರಾಮ್ ಅವರದ್ದು ಹಳೆಯ ಸ್ಟೋರಿ.
ಹಿಂದಿಯಲ್ಲಿ ರಾಣಿ ಮುಖರ್ಜಿ-ಆದಿತ್ಯ ಚೋಪ್ರಾ, ಕಲ್ಕಿ-ಅನುರಾಗ್ ಕಶ್ಯಪ್, ಉದಿತಾ ಗೋಸ್ವಾಮಿ-ಮೋಹಿತ್ ಸೂರಿ, ಸೋನಿ-ಮಹೇಶ್ ಭಟ್, ದೀಪ್ತಿ ನಾವಲ್-ಪ್ರಕಾಶ್ ಝಾ, ಸೋನಾಲಿ ಬೇಂದ್ರೆ-ಗೋಲ್ಡಿ ಬೆಹ್ಲ್, ಕಿರಣ್ ಜುನೇಜಾ-ರಮೇಶ್ ಸಿಪ್ಪಿ.. ಮೊದಲಾದ ಜೋಡಿಗಳಿವೆ. ಕನ್ನಡಕ್ಕೆ ಒಂದಿಷ್ಟು ಕಡಿಮೆ ಎನ್ನಬಹುದಾದ ಲಿಸ್ಟಿಗೆ ಈಗ ಸೇರ್ಪಡೆಯಾಗಿರುವುದು ನಟಿ ಸೋನಲ್ ಮಂಥೆರೋ ಮತ್ತು ತರುಣ್ ಸುಧೀರ್.
ತರುಣ್ ಸೋನಲ್ ಪ್ರೀತಿ, ಮದುವೆ ಫಿಕ್ಸಿಂಗ್ ಮಾಡಿದ್ದೇ ದರ್ಶನ್ ಅನ್ನೋ ಸುದ್ದಿಯೂ ಇದೆ. ಡೈರೆಕ್ಟರ್ ತರುಣ್ ಸುಧೀರ್ ಮತ್ತು ನಾಯಕಿ ನಟಿ ಸೋನಲ್ ಮಂಥೆರೋ ಮಧ್ಯೆ ಮದುವೆ ಫಿಕ್ಸ್ ಆಗಿದೆ. ಮದುವೆಯ ಸಿದ್ಧತೆಗಳೂ ನಡೆಯುತ್ತಿವೆ. ಆಗಸ್ಟ್ʻನಲ್ಲಿ ಮದುವೆ.
ತರುಣ್, ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರು. ನಟ ಸುಧೀರ್ ಮತ್ತು ಮಾಲತಿ ಸುಧೀರ್ ಅವರ ಮಗ. ತರುಣ್ ಅವರ ತಮ್ಮ ನಂದ ಕಿಶೋರ್ ಕೂಡಾ ನಿರ್ದೇಶಕರೇ. ಇರುವುದು ಬೆಂಗಳೂರಲ್ಲೇ ಆದರೂ.. ಮೂಲತಃ ಬಿಸಿಲು ನಾಡು ಹೊಸಪೇಟೆಯವರು.
ಇನ್ನು ಸೋನಲ್ ಕರಾವಳಿ ಕಡೆಯವರು. ಸಮುದ್ರದ ತಟದವರು. ತುಳು ಮಾತೃಭಾಷೆ. ಇದುವರೆಗೆ ನಟಿಸಿರುವುದು 12 ಸಿನಿಮಾ.
ಬಿಸಿಲೂರಿಗೂ.. ಕರಾವಳಿಗೂ ಲವ್ ಶುರುವಾಗಿದ್ದು ರಾಬರ್ಟ್ ಚಿತ್ರದಿಂದಲಾ.. ಅಲ್ಲ ಅಂತಾರೆ ತರುಣ್. ಆದರೆ.. ಪ್ರೀತಿ ಮೊಳಕೆಯೊಡೆದಿದ್ದೂ ಆಗಲೇ. ನನಗೆ ಸೋನಲ್ ಅವರ ಗುಣ ಇಷ್ಟವಾಯಿತು. ಅದೇ ಗೆಳೆತನಕ್ಕೂ ಕಾರಣವಾಯ್ತು. ನಮ್ಮಿಬ್ಬರ ಪ್ರೀತಿಯಲ್ಲಿ ದರ್ಶನ್ ಅವರ ಪಾತ್ರ ದೊಡ್ಡದು ಎನ್ನುವ ತರುಣ್ ಅವರಿಗೆ ಪ್ರೀತಿ ಹುಟ್ಟಿದ್ದು ಕಾಟೇರ ಹಿಟ್ ಆದ ಮೇಲೆ.
ಕಾಟೇರ ಸಕ್ಸಸ್ ನಂತರ ಟೆನ್ಷನ್ ಫ್ರೀ ಆದೆ. ಪರ್ಸನಲ್ ಲೈಫಿನ ಬಗ್ಗೆ ಯೋಚಿಸಿದೆ. ಸೋನಲ್ ಕುಟುಂಬದವರೂ ಮದುವೆ ತಯಾರಿಯಲ್ಲಿದ್ದರು. ಅಮ್ಮನೂ ಮದುವೆ ಆಗು ಎಂದು ಹೇಳ್ತಿದ್ದರು. ಆಗ ಪ್ರಪೋಸ್ ಮಾಡಿದ್ದೂ ಆಯ್ತು. ಅಮ್ಮನ ಪ್ರಪೋಸಲ್ʻಗೆ ಅವರ ಮನೆಯವರು ಒಪ್ಪಿದ್ದೂ ಆಯ್ತು ಎಂದು ಹೇಳ್ತಾರೆ ತರುಣ್.
ರಾಬರ್ಟ್ ಶೂಟಿಂಗ್ ವೇಳೆ ಇಬ್ಬರನ್ನೂ ತಮಾಷೆ ಮಾಡ್ತಿದ್ದರಂತೆ ದರ್ಶನ್. ಆ ತಮಾಷೆಯೇ ಈಗ ನಿಜವಾಗಿ ಮದುವೆಯಾಗುತ್ತಿದ್ದಾರೆ.



