2024ನೇ ಸಾಲಿನ ಫಿಲ್ಮ್ ಫೇರ್ ಅವಾರ್ಡ್ ನೀಡಲಾಗಿದೆ. ಆದರೆ ಕಾಟೇರ ಚಿತ್ರಕ್ಕೆ ಒಂದೇ ಒಂದು ಪ್ರಶಸ್ತಿಯೂ ಸಿಕ್ಕಿಲ್ಲ. ಒಟ್ಟು 5 ವಿಭಾಗಗಳಲ್ಲಿ ಕಾಟೇರ ಚಿತ್ರ ನಾಮಿನೇಟ್ ಆಗಿತ್ತು. ಕೊಲೆ ಕೇಸ್ನಲ್ಲಿ ದರ್ಶನ್ ಜೈಲು ಸೇರಿದ ಮೇಲೆ ಫಿಲ್ಮ್ ಫೇರ್ಗೆ ನಾಮಿನೇಟ್ ಆಗಿದ್ದ ಕಾರಣ, ದೊಡ್ಡ ಮಟ್ಟದಲ್ಲಿ ಸುದ್ದಿಯೂ ಆಗಿತ್ತು. ಕಾಟೇರ ಸಿನಿಮಾ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ (ತರುಣ್ ಸುಧೀರ್) ಅತ್ಯುತ್ತಮ ನಟ (ದರ್ಶನ್) ಅತ್ತುತ್ತಮ ಪೋಷಕ ಪಾತ್ರ (ಶೃತಿ) ಹಾಗೂ ಅತ್ಯುತ್ತಮ ಸಂಗೀತ (ವಿ ಹರಿಕೃಷ್ಣ) ಪ್ರಶಸ್ತಿಗೆ ನಾಮಿನೇಟ್ ಆಗಿತ್ತು. ಆದರೆ ಕಾಟೇರ ಚಿತ್ರಕ್ಕೆ ಒಂದೂ ಪ್ರಶಸ್ತಿ ಸಿಕ್ಕಿಲ್ಲ.
ಪ್ರಶಸ್ತಿಯಲ್ಲಿ ರಕ್ಷಿತ್ ಶೆಟ್ಟಿ ನಟನೆ, ನಿರ್ಮಾಣದ ಸಪ್ತಸಾಗರದಾಚೆ ಎಲ್ಲೋ ಚಿತ್ರ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಒಟ್ಟು ೬ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಅತ್ಯುತ್ತಮ ನಟ, ನಿರ್ದೇಶಕ, ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟಿ, ಹಾಡುಗಳು, ಸಂಗೀತ ಮತ್ತು ಗಾಯನಕ್ಕಾಗಿ ಸಪ್ತಸಾಗರಕ್ಕೆ ಪ್ರಶಸ್ತಿಗಳು ಲಭಿಸಿವೆ.
ಹೇಗೆ ನಡೆಯುತ್ತೆ ಫಿಲ್ಮ್ ಫೇರ್ ಪ್ರಶಸ್ತಿ ಆಯ್ಕೆ..?
ಫಿಲ್ಮ್ ಫೇರ್ ಪ್ರಶಸ್ತಿ ಪಡೆಯುವ ಸಿನಿಮಾಗಳು ಆಯಾ ವರ್ಷದ ಜನವರಿ 1ರಿಂದ ಡಿಸೆಂಬರ್ 30/31ರ ಒಂದು ವರ್ಷದ ಅಂತರದಲ್ಲಿ ಬಿಡುಗಡೆಯಾಗಿರಬೇಕು. ಪ್ರಶಸ್ತಿಗಳಿಗೆ ನಾಮಿನೇಟ್ ಆಗುವ ಚಿತ್ರಗಳನ್ನು ಪ್ರೇಕ್ಷಕರೇ ಆಯ್ಕೆ ಮಾಡುತ್ತಾರೆ. ಸಾರ್ವಜನಿಕವಾಗಿ ವೋಟಿಂಗ್ ನಡೆಯುತ್ತೆ. ಸಾರ್ವಜನಿಕರ ವೋಟಿಂಗ್ ಆಧಾರದ ಮೇಲೆಯೇ ನಾಮಿನೇಟ್ ಆಗಿರುವ ಚಿತ್ರಗಳನ್ನು ಘೋಷಿಸಲಾತ್ತದೆ. ಆದರೆ ಅದರ ಮುಂದಿನ ಆಯ್ಕೆ ಮಾಡುವುದು ಜ್ಯೂರಿಗಳು.
ಒಟ್ಟು 10 ವಿಭಾಗಳಲ್ಲಿ ಪ್ರಶಸ್ತಿಗೆ ನಾಮಿನೇಷನ್ ಆದ ಚಿತ್ರಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡುತ್ತಾರೆ. ಒಟ್ಟು 10 ವಿಭಾಗಗಳಲ್ಲಿ ಆಯ್ಕೆ ನಡೆಯುತ್ತದೆ. ಜನಪ್ರಿಯತೆಯೇ ಮೊದಲ ಮಾನದಂಡವಾದರೂ, ಹಿಟ್ ಆಗದ ಆದರೆ ಕಂಟೆಂಟ್ ಸ್ಟ್ರಾಂಗ್ ಇರುವ ಚಿತ್ರಗಳಿಗೆ ಜ್ಯೂರಿಗಳ ಆಯ್ಕೆಯ ವಿಶೇಷ ಪ್ರಶಸ್ತಿ ನೀಡಲಾಗುತ್ತದೆ. ಅಂದಹಾಗೆ ಜ್ಯೂರಿಗಳು ಅಥವಾ ಅವರ ಕುಟುಂಬ ಸದಸ್ಯರ ಯಾವೊಂದು ಚಿತ್ರವೂ ಪ್ರಶಸ್ತಿ ಆಯ್ಕೆಯಲ್ಲಿ ಇರುವಂತಿಲ್ಲ. ರೀಮೇಕ್ ಚಿತ್ರಕ್ಕೆ ಪ್ರಶಸ್ತಿ ಇಲ್ಲ. ಆದರೆ.. ಈ ಹಂತದಲ್ಲಿ ಯಾವ ಮಾನದಂಡದಲ್ಲಿ ಕಾಟೇರ ಚಿತ್ರಕ್ಕೆ ಪ್ರಶಸ್ತಿ ಲಭಿಸಲಿಲ್ಲ ಎನ್ನುವ ಪ್ರಶ್ನೆಗೆ ಫಿಲ್ಮ್ ಫೇರ್ ಕಮಿಟಿ ಉತ್ತರ ಕೊಟ್ಟಿಲ್ಲ. ಬಹುಶಃ ಕೊಲೆ ಕೇಸಿನಲ್ಲಿ ಚಿತ್ರದ ನಾಯಕ ನಟನೇ ಜೈಲಿನಲ್ಲಿರುವಾಗ ಆ ವ್ಯಕ್ತಿ ಅಥವಾ ಆ ನಟನ ಚಿತ್ರಕ್ಕೆ ಪ್ರಶಸ್ತಿ ನೀಡುವುದರಿಂದ ʻಪ್ರಶಸ್ತಿಯ ಘನತೆಗೆ ಡ್ಯಾಮೇಜ್ʼ ಆಗಲಿದೆ ಎಂಬ ಕಾರಣ ಇದ್ದರೂ ಇರಬಹುದು.
ಸಪ್ತಸಾಗರದಚಾಚೆ ಎಲ್ಲೋ ಚಿತ್ರಕ್ಕೆ ಸಿಕ್ಕ ಪ್ರಶಸ್ತಿಗಳನ್ನು ನೋಡುವುದಾದದರೆ..
ಅತ್ಯುತ್ತಮ ನಟ: ರಕ್ಷಿತ್ ಶೆಟ್ಟಿ , ಅತ್ಯುತ್ತಮ ನಿರ್ದೇಶಕ: ಹೇಮಂತ್ ರಾವ್, ಅತ್ಯುತ್ತಮ ನಟಿ ವಿಮರ್ಶಕರ ಆಯ್ಕೆ: ರುಕ್ಮಿಣಿ ವಸಂತ್, ಅತ್ಯುತ್ತಮ ಹಾಡುಗಳು: ಚರಣ್ ರಾಜ್, ಅತ್ಯುತ್ತಮ ಗಾಯಕ ʻನದಿಯೇ.. ಹಾಡಿಗಾಗಿ ಕಪಿಲ್ ಕಪಿಲನ್ ಹಾಗೂ ಅತ್ಯುತ್ತಮ ಗಾಯಕಿ ಕಡಲನು ಕಾಣ ಹೊರಟ.. ಹಾಡಿಗಾಗಿ ಶ್ರೀಲಕ್ಷ್ಮಿ ಬೆಲಮಣ್ಣು ಪ್ರಶಸ್ತಿ ಪಡೆದಿದ್ದಾರೆ.
ಉಳಿದಂತೆ..
ಅತ್ಯುತ್ತಮ ಸಿನಿಮಾ: ಡೇರ್ಡೆವಿಲ್ ಮುಸ್ತಫಾ
ಅತ್ಯುತ್ತಮ ನಟಿ: ಸಿರಿ ರವಿಕುಮಾರ್ (ಸ್ವಾತಿ ಮುತ್ತಿನ ಮಳೆ ಹನಿಯೇ)
ಅತ್ಯುತ್ತಮ ಸಿನಿಮಾ ವಿಮರ್ಶಕರ ಆಯ್ಕೆ: ಪಿಂಕಿ ಎಲ್ಲಿ?
ಅತ್ಯುತ್ತಮ ನಟ ವಿಮರ್ಶಕರ ಆಯ್ಕೆ: ಮೈಸೂರು ಪೂರ್ಣ (ಆರ್ಕೆಸ್ಟ್ರಾ ಮೈಸೂರು)
ಅತ್ಯುತ್ತಮ ಪೋಷಕ ನಟ: ರಂಗಾಯಣ ರಘು (ಟಗರು ಪಲ್ಯ)
ಅತ್ಯುತ್ತಮ ಪೋಷಕ ನಟಿ: ಸುಧಾ ಬೆಳವಾಡಿ (ಕೌಸಲ್ಯ ಸುಪ್ರಜಾ ರಾಮ)
ಅತ್ಯುತ್ತಮ ಹೊಸ ನಟ: ಶಿಶಿರ್ ಬೈಕಾಡಿ (ಡೇರ್ಡೆವಿಲ್ ಮುಸ್ತಫ)
ಅತ್ಯುತ್ತಮ ಹೊಸ ನಟಿ: ಅಮೃತಾ ಪ್ರೇಮ್ (ಟಗರು ಪಲ್ಯ)
ಅತ್ಯುತ್ತಮ ಸಾಹಿತ್ಯ: ಬಿಆರ್ ಲಕ್ಷ್ಮಣರಾವ್ (ಯಾವ ಚುಂಬಕ, ಚೌಕಬಾರ)
ಪ್ರಶಸ್ತಿ ಪಡೆದಿದ್ದಾರೆ.
ಜೀವಮಾನ ಸಾಧನೆಗೆ ಶ್ರೀನಾಥ್ʻಗೆ ಫಿಲ್ಮ್ ಫೇರ್ :
ನಟ, ನಿರ್ಮಾಪಕ, ನಿರೂಪಕ ಪ್ರಣಯರಾಜ ಶ್ರೀನಾಥ್ ಅವರಿಗೆ ಈ ಬಾರಿಯ ಫಿಲ್ಮ್ ಫೇರ್ ಜೀವಮಾನ ಸಾಧನೆ ಪ್ರಶಸ್ತಿ ಲಭಿಸಿದೆ. ಶ್ರೀನಾಥ್ ಅವರಿಗೀಗ 80 ವರ್ಷ. ಬೆಸುಗೆ ಚಿತ್ರಕ್ಕಾಗಿ ಫಿಲ್ಮ್ ಫೇರ್ ಅವಾರ್ಡ್ ಪಡೆದುಕೊಂಡಿದ್ದ ಶ್ರೀನಾಥ್ ಅವರು, ಹಲವು ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ನಾಯಕ ನಟನಾಗಿ, ಪೋಷಕ ನಟನಾಗಿ ನಟಿಸಿರುವ ಚಿತ್ರಗಳು 250ಕ್ಕೂ ಹೆಚ್ಚು. ಮೊದಲ ಚಿತ್ರ ಲಗ್ನಪತ್ರಿಕೆ, ಇತ್ತೀಚೆಗೆ ಅಭಿನಯಿಸಿರುವ ಸಿನಿಮಾ ಗಾಳಿಪಟ 2.



