ಸುಮಲತಾ ಅಂಬರೀಷ್ ಅವರಿಗೆ ಒಬ್ಬನೇ ಮಗ. ಅಭಿಷೇಕ್. ಆದರೆ, ದರ್ಶನ್ʻನನ್ನು ತಮ್ಮ ಹಿರಿಯ ಮಗ ಎಂದು ಹೇಳಿಕೊಳ್ಳುವ ಸುಮಲತಾ ಅವರು ಕಳೆದ ಒಂದು ತಿಂಗಳಿಂದ ಸೈಲೆಂಟ್ ಆಗಿದ್ದಾರೆ. ದರ್ಶನ್ & ಗ್ಯಾಂಗ್ ಮೇಲಿನ ಕೊಲೆ ಆರೋಪ, ಜೈಲು, ಕೋರ್ಟು.. ಇತ್ಯಾದಿಗಳೆಲ್ಲ ನಡೆಯುತ್ತಿರುವಾಗ ಎಲ್ಲರೂ ಕೇಳಿದ್ದ ಪ್ರಶ್ನೆ ಸುಮಲತಾ ಮೇಡಂ ಯಾಕೆ ಮಾತನಾಡ್ತಿಲ್ಲ? ಯಾಕೆ ಹೊರಗೆ ಕಾಣಿಸಿಕೊಳ್ತಿಲ್ಲ.. ಎನ್ನುವುದೇ ಆಗಿತ್ತು. ಕಾರಣ, ದರ್ಶನ್ ಬಹಿರಂಗ ವೇದಿಕೆಗಳಲ್ಲಿ ತಾಯಿ ಮೀನಾ ಅವರಿಗಿಂತಲೂ ದೊಡ್ಡ ಸ್ಥಾನವನ್ನು ಸುಮಲತಾ ಅಂಬರೀಷ್ ಅವರಿಗೆ ನೀಡುತ್ತಿದ್ದರು. ಈಗ ಸುಮಲತಾ ಅಂಬರೀಷ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಪತ್ರದ ಸಂಕ್ಷಿಪ್ತ ಸಾರಾಂಶ ನೋಡಿದರೆ.. ಅವರು ಹೇಳಿರೋದು ಇಷ್ಟೆ, ಅವರು ನಟಿಯಷ್ಟೇ ಅಲ್ಲ, ರಾಜಕಾರಣಿಯೂ ಹೌದು. ಅವರು ಬೇಜವಾಬ್ದಾರಿ ಹೇಳಿಕೆ ನೀಡುವುದಕ್ಕೆ ಆಗುವುದಿಲ್ಲ. ದರ್ಶನ್ ಅವರು ಈ ಪ್ರಕರಣದಲ್ಲಿ ಸಿಕ್ಕಿಕೊಂಡಿದ್ದು ಅವರಿಗೂ ಶಾಕ್ ಆಗಿದೆ. ದರ್ಶನ್ ತನ್ನ ಮೇಲಿನ ಆರೋಪದಿಂದ ಮುಕ್ತನಾಗಿ ಹೊರಬರುತ್ತಾನೆ ಎನ್ನುವ ವಿಶ್ವಾಸ ಇದೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ತಾನು ಬದುಕಿರುವವರೆಗೆ ದರ್ಶನ್ ತನ್ನ ಹಿರಿಯ ಮಗ. ಇದಿಷ್ಟನ್ನೂ ಹೇಳಿಕೊಂಡಿದ್ದಾರೆ ಸುಮಲತಾ.


ದರ್ಶನ್ ಅರೆಸ್ಟ್ ಆದ ದಿನದಿಂದಲೂ ಈ ಬಗ್ಗೆ ಸುಮಲತಾ ಅವರು ಯಾಕೆ ಮಾತನಾಡುತ್ತಿಲ್ಲ ಎಂಬ ಪ್ರಶ್ನೆಗಳಿಗೆ ಆರಂಭದಲ್ಲೇ ಕ್ಲಾರಿಟಿ ಕೊಟ್ಟಿರುವ ಸುಮಲತಾ ನಾನು 44 ವರ್ಷಗಳಿಂದ ನಟಿಯಾಗಿ, ಕಲಾವಿದೆಯಾಗಿ ಸಾರ್ವಜನಿಕ ಜೀವನದಲ್ಲಿದ್ದೇನೆ ಮತ್ತು ಕಳೆದ 5 ವರ್ಷಗಳಿಂದ ಸಂಸದೆಯಾಗಿದ್ದೆ. ಅಲ್ಲದೇ, ನಾನು ಕಲಾವಿದೆಯಾಗಿ, ಪತ್ನಿಯಾಗಿ ಮತ್ತು ತಾಯಿಯಾಗಿ ಅಥವಾ ಸಂಸದೆಯಾಗಿ ಮತ್ತು ಒಂದು ವ್ಯಕ್ತಿಯಾಗಿ ನನ್ನ ಜೀವನದಲ್ಲಿ ಪ್ರತಿಯೊಂದು ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಸಮಾಜದಲ್ಲಿ ಜವಾಬ್ದಾರಿಯುತ ವ್ಯಕ್ತಿಯಾಗಿ, ನನ್ನ ಬಳಿ ಯಾವುದೇ ಸತ್ಯ ಅಥವಾ ಮಾಹಿತಿಯಿಲ್ಲದೆ ನಾನು ಅಸಡ್ಡೆಯ, ಅನಗತ್ಯ, ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ರೇಣುಕಾಸ್ವಾಮಿ ಕುಟುಂಬಕ್ಕೂ ಸಾಂತ್ವನದ ಮಾತುಗಳನ್ನಾಡಿರುವ ಸುಮಲತಾ ನಾನು ಮೊದಲಿಗೆ ತಮ್ಮ ಮಗ ಮತ್ತು ಪತಿಯನ್ನು ಹೃದಯವಿದ್ರಾವಕ ರೀತಿಯಲ್ಲಿ ಕಳೆದುಕೊಂಡಿರುವ ರೇಣುಕಾ ಸ್ವಾಮಿ ಅವರ ಹೆತ್ತವರು ಮತ್ತು ಪತ್ನಿಗೆ ನನ್ನ ಸಂತಾಪವನ್ನು ಸೂಚಿಸುತ್ತೇನೆ ಮತ್ತು ಈ ದುರಂತವನ್ನು ಎದುರಿಸಲು ಮತ್ತು ಆ ನೋವನ್ನು ಭರಿಸಲು ಶಕ್ತಿಯನ್ನು ದೇವರು ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನಮ್ಮ ಕಾನೂನು ವ್ಯವಸ್ಥೆಯಿಂದ ಅವರಿಗೆ ಸಿಗಬೇಕಾದ ನ್ಯಾಯ ದೊರಕಲಿ ಎಂದು ಪ್ರಾರ್ಥಿಸುತ್ತೇನೆ. ಈ ಘಟನೆಯು ನನ್ನ ಹೃದಯವನ್ನು ಛಿದ್ರಗೊಳಿಸಿತು ಮತ್ತು ನಾನು ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ಹಲವಾರು ದಿನಗಳವರೆಗೆ ಆಘಾತ ಮತ್ತು ನೋವಿನ ಸ್ಥಿತಿಯಲ್ಲಿದ್ದೆ ಎಂದಿದ್ದಾರೆ.
ನನ್ನ ಮೌನದ ಬಗ್ಗೆ ಕಾಮೆಂಟ್ ಮಾಡುತ್ತಿರುವ ಕೆಲವರು, ನನ್ನ ಮತ್ತು ದರ್ಶನ್, ಅವರ ಕುಟುಂಬ ಮತ್ತು ನಾವು ವರ್ಷಗಳಿಂದ ಹಂಚಿಕೊಂಡಿರುವ ಬಾಂಧವ್ಯದ ನಡುವಿನ ಅಗಾಧತೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ. ಅವರು ಸ್ಟಾರ್ ಮತ್ತು ಸೂಪರ್‌ಸ್ಟಾರ್ ಆಗುವ ಮೊದಲು ನಾನು ಅವರನ್ನು 25 ವರ್ಷಗಳಿಂದ ಬಲ್ಲೆ. ಯಾವುದೇ ಸ್ಟಾರ್‌ಡಂಗಿಂತ ಹೆಚ್ಚಾಗಿ, ಅವರು ನನ್ನ ಕುಟುಂಬದ ಸದಸ್ಯ ಮತ್ತು ಯಾವಾಗಲೂ ನನಗೆ ಮಗನಂತೆ. ಅವರು ಅಂಬರೀಶ್ ಅವರನ್ನು ಯಾವಾಗಲೂ ತಮ್ಮ ಅಪ್ಪಾಜಿ ಎಂದು ಪರಿಗಣಿಸಿದ್ದಾರೆ ಹಾಗೂ ನನಗೆ ಅವರ ತಾಯಿಯ ಗೌರವ ಮತ್ತು ಸ್ಥಾನ ಮತ್ತು ಮಗನ ಪ್ರೀತಿಯನ್ನು ನೀಡಿದ್ದಾರೆ. ಯಾವ ತಾಯಿಯೂ ತನ್ನ ಮಗುವನ್ನು ಈ ರೀತಿಯ ಪರಿಸ್ಥಿತಿಯಲ್ಲಿ ನೋಡುವುದನ್ನು ಸಹಿಸುವುದಿಲ್ಲ ಎಂದಿರುವ ಸುಮಲತಾ “ನಾನು ದರ್ಶನ್ ಅವರನ್ನು ಪ್ರೀತಿಸುವ ಹೃದಯ ಹೊಂದಿರುವ, ಅತ್ಯಂತ ಕಾಳಜಿಯುಳ್ಳ ಮತ್ತು ಉದಾರ ವ್ಯಕ್ತಿ ಎಂದು ತಿಳಿದಿದ್ದೇನೆ. ಪ್ರಾಣಿಗಳ ಬಗ್ಗೆ ಅವನ ಸಹಾನುಭೂತಿ ಮತ್ತು ಸಹಾಯ ಮಾಡುವ ಮನೋಭಾವವು ಯಾವಾಗಲೂ ಅವನ ಸ್ವಭಾವದ ಭಾಗವಾಗಿದೆ. ಈ ಕೃತ್ಯವನ್ನು ಮಾಡುವ ವ್ಯಕ್ತಿತ್ವ ದರ್ಶನ್ ಅವರದ್ದಲ್ಲ ಎಂದು ನಾನು ನಂಬಿದ್ದೇನೆ. ಈ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಈ ಬಗ್ಗೆ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ದರ್ಶನ್ ಜೊತೆಗೆ ಅವನ ಪತ್ನಿ ವಿಜಯಲಕ್ಷ್ಮಿ ಮತ್ತು ಮುಗ್ಧ ಮಗನನ್ನು ಸಾಮಾಜಿಕ ಮಾಧ್ಯಮದಲ್ಲಿ ಗುರಿಯಾಗಿಸಿಕೊಂಡಿರುವುದು ತುಂಬಾ ಅನ್ಯಾಯವಾಗಿದೆ. ಅಷ್ಟೇ ಅಲ್ಲದೆ ಇತರೆ ಆರೋಪಿಗಳ ಬಡ ಕುಟುಂಬಗಳು ಕೂಡ ಸಂಕಷ್ಟಕ್ಕೆ ಸಿಲುಕಿರುವುದು ನೋವಿನ ಸಂಗತಿಯಾಗಿದೆ. ಸೋಷಿಯಲ್ ಮೀಡಿಯಾ ಬಳಕೆದಾರರು ಮತ್ತು ಸಾರ್ವಜನಿಕರು ಸಂತ್ರಸ್ತ ಅಥವಾ ಆರೋಪಿಯ ಕುಟುಂಬಗಳು, ಈಗಾಗಲೇ ಈ ಭಯಾನಕ ಪರಿಸ್ಥಿತಿಯನ್ನು ಎದುರಿಸುತ್ತಿರುವವರ ಮೇಲೆ ತಮ್ಮ ಕಾಮೆಂಟ್ಗಳು ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಪರಿಗಣಿಸಬೇಕು” ಎಂದು ಹೇಳಿದ್ದಾರೆ.
ತನಿಖೆ ನಡೆಯುತ್ತಿದೆ ಮತ್ತು ಪೊಲೀಸರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ ಮತ್ತು ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ನನಗೆ ಅಪಾರ ನಂಬಿಕೆಯಿದೆ. ದರ್ಶನ್ ಈ ಪ್ರಕರಣದಲ್ಲಿ ಆರೋಪಿಯಾಗಿದ್ದು, ಇನ್ನೂ ಯಾವುದೂ ಸಾಬೀತಾಗಿಲ್ಲ ಅಥವಾ ಶಿಕ್ಷೆಯಾಗಿಲ್ಲ. ಇದು ಕಾನೂನಿಗೆ ಬಿಟ್ಟದ್ದು ಮತ್ತು ಈ ಕುರಿತು ಈಗಾಗಲೇ ನಿರ್ಣಯಿಸುವುದು ಮತ್ತು ಶಿಕ್ಷೆ ವಿಧಿಸುವುದು ಬೇರೆ ಯಾರೂ ಅಲ್ಲ. ಈ ವಿಚಾರದಲ್ಲಿ ಅವರ ನಿಲುವು, ಸತ್ಯಾಸತ್ಯತೆಗಳನ್ನು ಸ್ಪಷ್ಟಪಡಿಸುವ ಅವಕಾಶವಾದರೂ ಇರಲಿ.ಅಪರಾಧದಲ್ಲಿ ಆರೋಪಿಯಾಗಿ ದರ್ಶನ್ ನಿಂತಿರುವುದನ್ನು ನೋಡುವುದು ನನಗೆ ತುಂಬಾ ನೋವಿನ ಸಂಗತಿ ಎಂದು ಜನರು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಆರೋಪಿಯಾಗಿರುವುದು ಎಂದರೆ ಅವನು ಅಪರಾಧಿ ಎಂದು ಅರ್ಥವಲ್ಲ ಎಂಬುದನ್ನು ನೆನಪಿನಲ್ಲಿಡೋಣ. ಬೇರೆಯವರಂತೆ ಕಾನೂನಾತ್ಮಕವಾಗಿ ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಹಕ್ಕು ಅವರಿಗೂ ಇದೆ ಎಂದಿದ್ದಾರೆ ಸುಮಲತಾ.
ಸುದೀರ್ಘವಾಗಿರುವ ಪತ್ರದ ಸಾರಾಂಶ ಇಷ್ಟೆ, ದರ್ಶನ್ ಆರೋಪಿಯೇ ಹೊರತು, ಅಪರಾಧಿ ಅಲ್ಲ. ದರ್ಶನ್ ಏನೇ ಮಾಡಿರಲಿ, ನಾನು ಬದುಕಿರುವವರೆಗೆ ಅವನು ನನ್ನ ಹಿರಿಯ ಮಗ. ಅವನು ತನ್ನನ್ನು ತಾನು ನಿರಪರಾಧಿ ಎಂದು ಸಾಬೀತುಪಡಿಸಿ ಹೊರಬರುತ್ತಾನೆ. ಅಭಿಮಾನಿಗಳೇ.. ಅಲ್ಲಿಯವರೆಗೆ ದಯವಿಟ್ಟು ಶಾಂತವಾಗಿರಿ ಎಂದು ಕೇಳಿಕೊಂಡಿದ್ದಾರೆ.



