ನಟ ದರ್ಶನ್ ಇದೀಗ ಹೆಂಡತಿ ವಿಜಯಲಕ್ಷ್ಮಿ ಹೇಳಿದಂತೆ ಕೇಳ್ತಿದ್ದಾರಂತೆ. ಅಂದರೆ ಜೈಲು ಸೇರಿದ ಮೇಲೆ ಹೆಂಡತಿಯ ಮಾತುಗಳನ್ನು ಕಿವಿಗೊಟ್ಟು ಆಲಿಸ್ತಿದ್ದಾರಂತೆ. ಅಷ್ಟೇ ಅಲ್ಲ, ಪತ್ನಿ ವಿಜಯಲಕ್ಷ್ಮಿ ಹೇಳಿದ್ದನ್ನೆಲ್ಲ ಚಾಚೂ ತಪ್ಪದೆ ಫಾಲೋ ಮಾಡ್ತಿದ್ದಾರಂತೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಗ್ಯಾಂಗ್ ಜೈಲು ಸೇರಿ ಬರೋಬ್ಬರಿ 2 ತಿಂಗಳಾಗಿದೆ. ಬಹುತೇಕ ಆರೋಪಿಗಳು ಪರಪ್ಪನ ಅಗ್ರಹಾರದಲ್ಲಿದ್ದರೆ, ಕೆಲವರು ತುಮಕೂರು ಜೈಲಲ್ಲಿದ್ದಾರೆ. ಈ ಮಧ್ಯೆ ಎ1 ಆಗಿರುವ ಪವಿತ್ರಾ ಗೌಡ ಜಾಮೀನಿಗೆ ಅರ್ಜಿ ಹಾಕಿದ್ದಾರೆ.
ಈ ಮಧ್ಯೆ ದರ್ಶನ್ ಪವಿತ್ರಾ ಗೌಡ ನಡುವಿನ ನಂಟಿಗೆ ಎಳ್ಳು ನೀರು ಬಿಟ್ಟಾಯ್ತಾ ಅನ್ನೋ ಕುತೂಹಲ ಮೂಡಿದೆ. ಎ-1 ಆರೋಪಿ ಪವಿತ್ರಾ ಗೌಡ ಮತ್ತು ಎ-2 ಆರೋಪಿ ದರ್ಶನ್ ಪರಪ್ಪನ ಅಗ್ರಹಾರದಲ್ಲೇ ಇದ್ದರೂ, ಇಬ್ಬರೂ ಒಬ್ಬರನ್ನೊಬ್ಬರು ಭೇಟಿ ಮಾಡಿಲ್ಲ. ಜೈಲಿನಲ್ಲಿ ಸಹಖೈದಿಗಳ ಭೇಟಿಗೆ ಕಾನೂನು ಪ್ರಕಾರ ಅವಕಾಶ ಇದೆ. ಪ್ರತಿ ಗುರುವಾರ ಒಂದೇ ಕೇಸಿನ ಸಹ ಆರೋಪಿಗಳು ಪರಸ್ಪರ ಭೇಟಿಯಾಗಬಹುದು. ಯಾರಾದ್ರೂ ಒಬ್ಬರು ಹೆಸರು ಬರೆಸಿದ್ದರೂ, ಅವಕಾಶ ನೀಡಲಾಗುತ್ತದೆ.
ಜೈಲು ಮ್ಯಾನುವಲ್ ಪ್ರಕಾರ ಅವಕಾಶ ಇದ್ದರೂ ಇಬ್ಬರೂ ಭೇಟಿ ಆಗಿಲ್ಲ. ಕಳೆದ ಒಂದು ವರ್ಷದಿಂದ ದರ್ಶನ್-ಪವಿತ್ರಾಗೌಡ ಸಂಬಂಧದಲ್ಲಿ ಬಿರುಕು ಮೂಡಿತ್ತು ಎನ್ನಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ಗೂ ಮುನ್ನ ಹಲವು ಬಾರಿ ಜಗಳವಾಗುತ್ತಿತ್ತು. ಆಮೇಲೆ ಸರಿ ಹೋಗುತ್ತಿತ್ತು. ಈ ಬಾರಿ ಜೈಲು ಸೇರಿದ ಬಳಿಕ ಇಬ್ಬರ ನಡುವೆ ಸಂಬಂಧ ಸಂಪೂರ್ಣ ಕಟ್ ಆಗಿದೆ ಎನ್ನುವ ಮಾಹಿತಿ ಇದೆ.
ಜೊತೆಯಲ್ಲಿ ವಿಜಯಲಕ್ಷ್ಮಿ ಕೂಡಾ ಇಬ್ಬರ ಮೇಲೂ ನಿಗಾ ವಹಿಸಿದ್ದಾರಂತೆ. ಗಂಡನನ್ನು ಉಳಿಸಿಕೊಳ್ಳಲು ವಿಜಯಲಕ್ಷ್ಮೀ ಶತಾಯ ಗತಾಯ ಪಣ ತೊಟ್ಟಿರುವ ವಿಜಯಲಕ್ಷ್ಮಿ, ದರ್ಶನ್ ತಾಯಿಯವರ ಮೂಲಕವೂ ಇದೇ ಮಾತನ್ನು ಕಟ್ಟುನಿಟ್ಟಾಗಿ ಹೇಳಿಸಿದ್ದಾರೆ ಎನ್ನಲಾಗ್ತಿದೆ.
ಅಷ್ಟೇ ಅಲ್ಲ ಪ್ರತಿ ಬೆಳಿಗ್ಗೆ 10:30ಕ್ಕೆ ಜೈಲಿಗೆ ಬರುತ್ತಿದ್ದ ವಿಜಯಲಕ್ಷ್ಮಿ, ಸಮಯವನ್ನೂ ಬದಲಿಸಿದ್ದಾರೆ. ವಿಜಯಲಕ್ಷ್ಮಿ ಜೈಲಿನ ಬಳಿ ಬರುವ ಸಮಯಕ್ಕೆ ಸರಿಯಾಗಿ ಪವಿತ್ರ ಗೌಡ ಅವರ ಕುಟುಂಬದವರು ಜೈಲಿಗೆ ಬರುತ್ತಿದ್ದರು. ಅವರ ಮುಖ ನೋಡೋಕೂ ಆಗಲ್ಲ ಎಂಬ ಕಾರಣಕ್ಕೆ ವಿಜಯಲಕ್ಷ್ಮಿ ತಮ್ಮ ಜೈಲು ಭೇಟಿ ಸಮಯ ಬದಲಿಸಿದ್ದಾರಂತೆ.
ವಿಶೇಷ ಎಂದರೆ ಇದರಿಂದ ರೊಚ್ಚಿಗೆದ್ದಿರುವ ಪವಿತ್ರಾ ಗೌಡ, ದರ್ಶನ್ ಅವರಿಗಿಂತ ಮೊದಲೇ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಚಾರ್ಜ್‌ಶೀಟ್ ಸಲ್ಲಿಸದೇ ಇದ್ದರೂ, ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಇದೂ ಕೂಡಾ ಇಬ್ಬರ ನಡುವಿನ ಬ್ರೇಕಪ್ ಸುದ್ದಿಗೆ ಜೀವ ತಂದಿದೆ. ಪವಿತ್ರಾ ಗೌಡ ಅವರು ತಮ್ಮ ಜಾಮೀನು ಅರ್ಜಿಯಲ್ಲಿ ತಮಗೂ, ಕೊಲೆ ಪ್ರಕರಣಕ್ಕೂ ಸಂಬಂಧವೇ ಇಲ್ಲ ಎಂದು ವಾದಿಸಿದರೂ ಆಶ್ಚರ್ಯ ಇಲ್ಲ.
ದರ್ಶನ್, ಈಗೇನೋ ಹೆಂಡತಿ ಮಾತು ಕೇಳ್ತಿದ್ದಾರೆ. ತಾಯಿ, ತಮ್ಮನ ಮಾತು ಕೇಳ್ತಿದ್ದಾರೆ. ಇದೇ ಕೆಲಸವನ್ನು ಸ್ವಲ್ಪ ಮುಂಚೆ ಮಾಡಿದ್ದರೆ, ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಖುದ್ದು ಅಭಿಮಾನಿಗಳೇ ಹೇಳ್ತಿದ್ದಾರೆ. ದರ್ಶನ್ ತಮ್ಮ ತಪ್ಪು ತಿದ್ದಿಕೊಂಡು ಹೊರಬಂದು ಮತ್ತೆ ಮನರಂಜನೆ ನೀಡಲಿ ಎನ್ನುವುದು ಅವರ ಹಾರೈಕೆ.



