ಸಿನಿಮಾ ನೋಡೋ ಮಂದಿ ಈಗ ಎಲ್ಲರೂ ವಿಮರ್ಶಕರೇ ಆಗಿದ್ಧಾರೆ. ಸಿನಿಮಾ ನೋಡಿದವರು ಲ್ಯಾಗ್ ಇತ್ತು. ಆ ಡೈಲಾಗ್ ಕಟ್ ಮಾಡ್ಬೇಕಿತ್ತು. ಈ ಸೀನ್ ಚಿಕ್ಕದಾಗಿರಬೇಕಿತ್ತು. ಸುಮ್ನೆ ಎಳೀತಾರಪ್ಪ.. ಟೋಟಲ್ ಒಂದ್ ಹದಿನೈದು ನಿಮಿಷ ಕಟ್ ಆಗಿದ್ರೆ ಸಿನಿಮಾ ಬೊಂಬಾಟ್ ಆಗಿರೋದು.. ಹೀಗೆಲ್ಲ ವಿಮರ್ಶೆ ಮಾಡೋದು ಸಾಮಾನ್ಯ. ಆದರೆ ದರ್ಶನ್ ಅಭಿಮಾನಿಗಳಿಗೆ ಈಗ ಇನ್ನೊಂದು ಚಾಲೆಂಜ್ ಇದೆ.
ಸಾಮಾನ್ಯವಾಗಿ ಸಿನಿಮಾಗಳು 2 ಗಂಟೆ ಅಥವಾ 2 ಗಂಟೆ 20/30 ನಿಮಿಷಗಳಿರುತ್ತವೆ. ಹಾಲಿವುಡ್ ಸಿನಿಮಾಗಳು ಒಂದೂವರೆ ಗಂಟೆಗಳಷ್ಟು ಚಿಕ್ಕದಾಗಿರುತ್ತವೆ. ಕೆಲವು ಚಿತ್ರಗಳು ಒಂದು ಗಂಟೆಯಲ್ಲೇ ಮುಗಿಯುತ್ತವೆ. ಆದರೆ ಭಾರತೀಯ ಚಿತ್ರಗಳ ಸರಾಸರಿ ಅವಧಿ ಎರಡೂವರೆ ಗಂಟೆ. ಆದರೆ ಇತ್ತೀಚೆಗೆ ಸುದೀರ್ಘ ಸಿನಿಮಾ ಮಾಡುವ ಟ್ರೆಂಡ್ ಶುರುವಾಗಿದೆ. ಆ ಸಾಲಿಗೆ ಈಗ ದರ್ಶನ್ ಅಭಿನಯದ ಕಾಟೇರ ಕೂಡಾ ಸೇರಿದೆ.
ಕಾಟೇರ ಚಿತ್ರದ ಅವಧಿ 183 ನಿಮಿಷ. ಅಂದ್ರೆ 3 ಗಂಟೆ 3 ನಿಮಿಷ. ಇಷ್ಟೊಂದು ಸುದೀರ್ಘ ಸಿನಿಮಾನಾ ಎಂಬ ಪ್ರಶ್ನೆಗೆ, ಒಂದು ನಿಮಿಷವೂ ಪ್ರೇಕ್ಷಕರಿಗೆ ಬೋರ್ ಆಗುವುದಿಲ್ಲ ಎಂಬ ಉತ್ತರ ನಿರ್ದೇಶಕರಿಂದ ಬರುತ್ತದೆ. 3 ಗಂಟೆ 3 ನಿಮಿಷವೂ ಪ್ರೇಕ್ಷಕ ಮುಂದೇನಾಗುತ್ತದೆ ಎಂಬ ಕುತೂಹಲದಿಂದ, ತೆರೆಯ ಮೇಲೆ ಬರುವ ಪ್ರತಿ ಸನ್ನಿವೇಶವನ್ನೂ ಎಂಜಾಯ್ ಮಾಡ್ತಾನೆ ಅನ್ನೋದು ಚಿತ್ರತಂಡದವರ ಮಾತು.
ಈ ಹಿಂದೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರವೂ 3 ಗಂಟೆ ಅವಧಿಯಷ್ಟಿತ್ತು.ಕುರುಕ್ಷೇತ್ರವೂ 3 ಗಂಟೆಗೂ ಹೆಚ್ಚಿತ್ತು. ಈಗ ಕಾಟೇರ ಆ ದಾಖಲೆಯನ್ನೂ ಮುರಿದಿದೆ. ದರ್ಶನ್ ನಟಿಸಿರುವ ಚಿತ್ರಗಳಲ್ಲೇ ಸುದೀರ್ಘ ಸಿನಿಮಾ ಆಗಿದೆ ಕಾಟೇರ. ಚಿತ್ರತಂಡದವರ ಕಾನ್ಫಿಡೆನ್ಸ್ʻಗೆ ಕಾರಣವೂ ಇದೆ.
ಇತ್ತೀಚೆಗೆ ಆರ್.ಆರ್.ಆರ್. ಕೂಡಾ ಮೂರೂಕಾಲು ಗಂಟೆ ಇದ್ದು ಹಿಟ್ ಎನಿಸಿಕೊಂಡಿತ್ತು. ಹಾಗೆಯೇ ಅನಿಮಲ್ (3 ಗಂಟೆ 12 ನಿಮಿಷ), ಸಲಾರ್ (2 ಗಂಟೆ 55 ನಿಮಿಷ) ಇತ್ತು. ಸಿನಿಮಾ ಚೆನ್ನಾಗಿದ್ದರೆ ಟೈಂ ಎಷ್ಟಿದ್ದರೂ ಜನ ನೋಡ್ತಾರೆ ಅನ್ನೋ ವಿಶ್ವಾಸ ನಿರ್ಮಾಪಕ ಹಾಗೂ ನಿರ್ದೇಶಕರದ್ದು.
ದರ್ಶನ್ ತೆರೆಯ ಮೇಲಿದ್ದಷ್ಟು ಸಮಯವೂ ಶಿಳ್ಳೆ ಹಾಕೋ ಫ್ಯಾನ್ಸ್ ಇದ್ದಾರೆ. ಈ ಹಿಂದೆ ಸಂಗೊಳ್ಳಿ ರಾಯಣ್ಣ, ಕುರುಕ್ಷೇತ್ರ ಚಿತ್ರಗಳನ್ನು ಪ್ರೇಕ್ಷಕರು ಗೆಲ್ಲಿಸಿಯೂ ಇದ್ಧಾರೆ. ಈಗ ಕಾಟೇರ ಚಿತ್ರವನ್ನೂ ಗೆಲ್ಲಿಸುತ್ತಾರಾ..?



