ದರ್ಶನ್ ಮಾಡಿದ್ದೆಲ್ಲ ಟ್ರೆಂಡ್ ಆಗೋ ಕಾಲ ಇದು. ಅವರ ಫ್ಯಾನ್ಸೂ ಅಷ್ಟೆ, ದರ್ಶನ್ ಏನ್ ಮಾಡಿದ್ರೂ ಒಪ್ಪಿ ಅಪ್ಪಿಕೊಳ್ತಾರೆ. ಈಗ ಖೈದಿ ನಂಬರ್ 6106. ಇದೀಗ ಟ್ರೆಂಡ್ ಆಗಿದೆ. ಈ ನಂಬರ್ ಹಿಂದಿನ ಕಥೆಯನ್ನು ಬಿಡಿಸಿ ಹೇಳಬೇಕಿಲ್ಲ. ದರ್ಶನ್ ಫ್ಯಾನ್ಸ್ ಇರೋದೇ ಹೀಗೆ..
ದರ್ಶನ್ ಅಭಿನಯದ ಚಿತ್ರಗಳ ಹೆಸರನ್ನೆಲ್ಲ ಹಚ್ಚಿ ಹಾಕಿಸಿಕೊಳ್ಳೋ ಅಭಿಮಾನಿಗಳಿದ್ದಾರೆ. ದರ್ಶನ್ ಹುಟ್ಟುಹಬ್ಬಕ್ಕೆ ಸ್ವಂತ ಖರ್ಚಿನಲ್ಲಿ ಅನ್ನದಾನ ಮಾಡುವವರೂ ಇದ್ದಾರೆ. ಆಟೋ ಹಿಂದೆ, ಕಾರುಗಳ ಹಿಂದೆ ಹೆಸರು ಬರೆಸೋವ್ರೂ ಇದ್ದಾರೆ. ಹೆಂಡತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಜೈಲಿಗೆ ಹೋದಾಗಲೂ.. ಹೊಡೆದಿರೋದು ಅವರ ಹೆಂಡ್ತೀನೇ ತಾನೇ ಎಂದು ಸಮರ್ಥನೆ ಮಾಡಿಕೊಂಡಿದ್ದರು ದರ್ಶನ್ ಫ್ಯಾನ್ಸ್.
ಅಷ್ಟೇ ಏಕೆ, ದರ್ಶನ್ ಮತ್ತು ಪವಿತ್ರಾ ಗೌಡ ಅವರ ನಡುವಿನ ಸಂಬಂಧವನ್ನು ವಿಜಯಲಕ್ಷ್ಮಿ ಒಪ್ಪಿಕೊಂಡಿದ್ದಾರೋ.. ಇಲ್ಲವೋ.. ಆದರೆ ಫ್ಯಾನ್ಸ್ʻಗೆ ಅದೂ ಓಕೆ. ಕೆಲವು ಅಭಿಮಾನಿಗಳ ಪ್ರಕಾರ ವಿಜಯಲಕ್ಷ್ಮಿ ನಂ.1 ಅತ್ತಿಗೆ, ಪವಿತ್ರಾ ಗೌಡ ನಂ.2 ಅತ್ತಿಗೆ. ದರ್ಶನ್ ಕುಡಿತವನ್ನು ಸಮರ್ಥನೆ ಮಾಡ್ಕೊಳ್ಳೋ ಫ್ಯಾನ್ಸ್, ಈಗ ಕೊಲೆ ಮಾಡಿರೋದ್ರಲ್ಲಿ ಏನ್ ತಪ್ಪು ಅಂತಿದ್ದಾರೆ.
ರೇಣುಕಾಸ್ವಾಮಿ ಒಬ್ಬ ಕಾಮುಕ, ನಮ್ ಬಾಸ್ ಶಿಕ್ಷೆ ಕೊಟ್ಟಿದ್ದಾರೆ ಎನ್ನುವವರೂ ಇದ್ದಾರೆ. ಇದೀಗ ನಟ ದರ್ಶನ್ ಅವರ ಖೈದಿ ನಂಬರ್ 6106 ಸ್ಟಿಕ್ಕರ್‌ಗೆ ಫುಲ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಮೊಬೈಲ್ ಕವರ್ ಮಾಡ್ಕೊಂಡಿದ್ದಾರೆ ದರ್ಶನ್ ಫ್ಯಾನ್ಸ್. ಖೈದಿ ನಂಬರ್ 6106 ಈಗ ಬೈಕ್,ಆಟೋ ಹಾಗೂ ಕಾರುಗಳ ಹಿಂದೆ ಹಾಗು ಮುಂದೆಯೂ ಕಂಡುಬರುತ್ತಿದ್ದು ಭಾರೀ ಟ್ರೆಂಡಿಂಗ್ ಸೃಷ್ಟಿಯಾಗಿದೆ. ಕೈಗೆ ಬೇಡಿ ಹಾಕಿಸಿರುವ ಸ್ಟಿಕ್ಕರ್ ಜೊತೆಗೆ ಖೈದಿ ಹಾಕಿಸಿ ಟ್ರೆಂಡಿಂಗ್ ಮಾಡಲಾಗುತ್ತಿದೆ. 20ಕ್ಕೂ ಹೆಚ್ಚು ಅಭಿಮಾನಿಗಳು ಈ ರೀತಿಯ ಸ್ಟಿಕ್ಕರ್ ಹಾಕಿಸಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ.



