ಸಿನಿಮಾ ನೋಡಬೇಕು. ಇಷ್ಟ ಪಡಬೇಕು. ಆರಾಧಿಸಬೇಕು. ಆದರೆ ದರ್ಶನ್ ಅಭಿಮಾನಿಗಳು ಹಾಗಲ್ಲ, ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಈ ಹಿಂದೆ ದರ್ಶನ್ ಅವರ ವಿರುದ್ಧ ಬೇರೆ ಬೇರೆ ಕೇಸಿನಲ್ಲಿ ಸಮರ್ಥನೆ ಮಾಡಿಕೊಳ್ಳುವುದು ಬೇರೆ. ಇಲ್ಲಿರುವುದು ಕೊಲೆ ಕೇಸು. ಕೊಲೆ ಆಗಿರುವಾತ ಕೂಡ ದರ್ಶನ್ ಅಭಿಮಾನಿ. ಕೊಲೆ ಮಾಡಿ ಜೈಲು ಸೇರಿರುವವರಲ್ಲಿ ದರ್ಶನ್ ಅಭಿಮಾನಿಗಳೇ ಇದ್ದಾರೆ. ದರ್ಶನ್ ಅವರನ್ನು ನಂಬಿಕೊಂಡು ಜೈಲಿಗೆ ಹೋಗಿ ಕುಟುಂಬವನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ.
ಈ ಮಧ್ಯೆ ದರ್ಶನ್ & ಗ್ಯಾಂಗ್ʻನಿಂದ ನಡೆದಿದೆ ಎನ್ನಲಾದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹಲವು ಸೆಲೆಬ್ರಿಟಿಗಳು ದರ್ಶನ್ ಬಗೆಗಿನ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ದರ್ಶನ್ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದ ಸೆಲೆಬ್ರಿಟಿಗಳಿಗೆ ದರ್ಶನ್ ಅಭಿಮಾನಿಗಳು ಕಾಡುತ್ತಿದ್ದಾರೆ. ಕೆಲವು ಅಂದಾಭಿಮಾನಿಗಳಂತೂ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಇಂತಹ ಕಾಟ ನಟ ಪ್ರಥಮ್ ಅವರಿಗೂ ಆಗಿದ್ದು, ಪ್ರಥಮ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದು ಆರಂಭ ಅಷ್ಟೆ.
ಅಭಿಮಾನಿಗಳು ಹುಚ್ಚಾಟವಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಮಾಧ್ಯಮಗಳನ್ನಷ್ಟೇ ಅಲ್ಲ, ಪೊಲೀಸರಿಗೂ ಕೆಟ್ಟಾಕೊಳಕ ಪದ ಪ್ರಯೋಗ ಮಾಡುತ್ತಿದ್ದಾರೆ. ಮನಸ್ಸಿಗೆ ಬಂದಂತೆ ಬಯ್ಯುತ್ತಿದ್ದಾರೆ. ಕೊಲೆ ಮಾಡಿದ್ದರಲ್ಲಿ ತಪ್ಪೇನು ಅನ್ನೋದಷ್ಟೇ ಅಲ್ಲ, ದರ್ಶನ್ʻಗಾಗಿ ನಾವೂ ಕೊಲೆ ಮಾಡ್ತೇವೆ ಅನ್ನೋ ಹುಚ್ಚಾಟವೂ ಇದೆ. ಹೀಗೆ ಹೇಳುವುದನ್ನ ಪೊಲೀಸರು ಗಂಭೀರವಾಗಿಯೇ ತೆಗೆದುಕೊಳ್ತಾರೆ.
ಇತ್ತೀಚೆಗೆ ನಟ ಪ್ರಥಮ್ ಟಿವಿ ಚಾನೆಲ್ಲೊಂದರಲ್ಲಿ ಮಾತನಾಡುತ್ತಾ ʻದರ್ಶನ್ ಅನ್ನು ಬಂಧಿಸಿಟ್ಟಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಎದುರು ನಿಂತಿರುವ ದರ್ಶನ್ ಅಭಿಮಾನಿಗಳನ್ನು ಲಾಠಿ ತೆಗೆದುಕೊಂಡು ಹೊಡೆಯಬೇಕು ಅನಿಸುತ್ತದೆ. ಅಲ್ಲಿರುವ ಒಬ್ಬರೂ ಸಹ ಅವರ ಅಪ್ಪ-ಅಮ್ಮನಿಗೆ ಒಂದೊತ್ತು ಊಟ ಹಾಕುವ ಯೋಗ್ಯತೆ ಇಲ್ಲದವರು. ಮೊದಲು ಅವರನ್ನು ಭಾರಿಸಿ ಅಟ್ಟಬೇಕು’ ಎಂದಿದ್ದರು. ಅಲ್ಲದೆ, ದರ್ಶನ್ ಅನ್ನು ಸೂಪರ್ ಸ್ಟಾರ್ ಎಂದು ಕರೆದ ಬಗ್ಗೆಯೂ ಆಕ್ಷೇಪ ಎತ್ತಿದ್ದರು. ಇದು ದರ್ಶನ್ ಅಭಿಮಾನಿಗಳನ್ನು ಕೆರಳುವಂತೆ ಮಾಡಿತ್ತು.
ಇದೀಗ ಪ್ರಥಮ್, ದರ್ಶನ್ರ ಅಭಿಮಾನಿಗಳ ವಿರುದ್ಧ ಜ್ಞಾನ ಭಾರತಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಪ್ರಥಮ್, ‘ಕಳೆದ ಎರಡು ಮೂರು ದಿನಗಳಿಂದ ಬೆದರಿಕೆ ಕರೆಗಳು ಬರ್ತಿದ್ದವು. ಜ್ಞಾನಭಾರತಿ ಪೊಲೀಸ್ ಠಾಣೆಗೆ ಕಂಪ್ಲೀಟ್ ಮಾಡಿದ್ದೇನೆ. ಎನ್ ಸಿ ಆರ್ ಆಗಿದೆ. ಪೊಲೀಸರು ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅರೆಸ್ಟ್ ಮಾಡೋದು ಬೇಡ ವಾರ್ನ್ ಮಾಡಿ ಬಿಡಿ ಅಂಥ ಹೇಳಿದ್ದೇನೆ’ ಎಂದಿದ್ದಾರೆ.
ಅನಂತರ ದರ್ಶನ್ ಅಭಿಮಾನಿಗಳಿಗೆ ‘ಮೊದಲು ನಿಮ್ಮ ಅಪ್ಪ ಅಮ್ಮಂದಿರ ಚನ್ನಾಗಿ ನೋಡಿಕೊಳ್ಳಿ, ಕಲಾವಿದರನ್ನು ಕಲಾವಿದರಾಗಿ ಕಾಣಿ. ಬಾಸ್ ಅಂತೆಲ್ಲಾ ಕರೆದು ಮೆರಿಸಬೇಡಿ, ನಾನು ಡೆವಿಲ್ ಅಪೋಸಿಟ್ ಕರ್ನಾಟಕ ಅಳಿಯ ರಿಲೀಸ್ ಮಾಡ್ತಿನಿ, ಈ ತರ ಬೆದರಿಕೆಗಳಿಗೆ ನಾನು ಹೆದರಲ್ಲ’ ಎಂದಿದ್ದಾರೆ.
ಅಂದಹಾಗೆ ಯಾವುದೇ ನಟನ/ವ್ಯಕ್ತಿಯ ಅಭಿಮಾನಿಯಾಗಲಿ ಕೊಲೆ ಮಾಡುವ, ಹೊಡೆಯುವ ರೀತಿಯ ಬೆದರಿಕೆ ಹಾಕಬಾರದು. ಅದು ಕ್ರಿಮಿನಲ್ ಅಪರಾಧ. ಈ ಬಗ್ಗೆ ಪೊಲೀಸರೂ ಕೂಡಾ ಸೀರಿಯಸ್ ಆಗಿದ್ದಾರೆ. ಪೊಲೀಸರು ಸೋಷಿಯಲ್ ಮೀಡಿಯಾಗಳನ್ನು ಗಂಭೀರವಾಗಿಯೇ ಗಮನಿಸುತ್ತಿದ್ದಾರೆ. ಈ ರೀತಿಯ ಆಕ್ಷೇಪಾರ್ಹ ಅಥವಾ ಬೆದರಿಕೆ ಹಾಕುವಂತಹ ಪೋಸ್ಟ್ ಅಥವಾ ವಿಡಿಯೋ ಹಾಕಿದ್ದರೆ ಕ್ಷಮೆ ಕೇಳಿ, ಡಿಲೀಟ್ ಮಾಡುವುದು ಉತ್ತಮ. ದರ್ಶನ್ ಅವರನ್ನು ಅಭಿಮಾನಿಸುವುದೇ ಬೇರೆ. ಕುರುಡಾಗಿ ಅಭಿಮಾನಿಸುವುದು ಬೇರೆ. ಏಕೆಂದರೆ ಇಷ್ಟು ದೊಡ್ಡ ಅಭಿಮಾನಿ ಪಡೆಯನ್ನಿಟ್ಟುಕ್ಕೊಂಡು ದರ್ಶನ್ ಒಳ್ಳೆಯ ಸಿನಿಮಾ ಮಾಡಿ, ಒಳ್ಳೆಯ ಮನರಂಜನೆ ನೀಡಿದರೆ ಸ್ವಾಗತಿಸಬೇಕು. ಆದರೆ.. ಕೊಲೆಯಂತಹ ಆರೋಪ ಹೊತ್ತು ಜೈಲಿಗೆ ಹೋಗುವುದನ್ನು ಸಮರ್ಥನೆ ಮಾಡುವ ಅಂಧಾಭಿಮಾನಿಗಳಾಗುವುದು ಬೇಡ.



