ದರ್ಶನ್ ಎರಡು ತಿಂಗಳಿಂದ ಪರಪ್ಪನ ಅಗ್ರಹಾರ ಜೈಲಲ್ಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅಂದರ್ ಆಗಿರುವ ನಟ ದರ್ಶನ್, ಜೈಲು ಸೇರಿ 2 ತಿಂಗಳು ಕಳೆದು ಹೋಗಿದೆ. ಪೊಲೀಸರ ಚಾರ್ಜ್‌ಶೀಟ್ ಇನ್ನೂ ಸಲ್ಲಿಕೆಯಾಗಿಲ್ಲ. 4000+ ಪುಟಗಳ ಚಾರ್ಜ್‌ಶೀಟ್ ರೆಡಿ ಆಗ್ತಿದೆಯಂತೆ. ಈ ನಡುವೆ ಪವಿತ್ರಾ ಗೌಡ, ವಿನಯ್, ಅನುಕುಮಾರ್ ಅವರೆಲ್ಲ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಮತ್ತೊಂದೆಡೆ ಮನೆ ಊಟಕ್ಕಾಗಿ ಕಾನೂನು ಹೋರಾಟ ನಡೆಯುತ್ತಿದೆ. ಈಗಾಗಲೇ ಹಲವಾರು ಚಿತ್ರನಟ ನಟಿಯರು ದರ್ಶನ್ ಭೇಟಿಗೆ ಅವಕಾಶ ಕೋರಿ ಜೈಲಿನಲ್ಲಿ ಭೇಟಿಯಾಗಿ ಬಂದಿದ್ದಾರೆ. ಈಗ 2 ತಿಂಗಳ ಬಳಿಕ ರಚಿತಾ ರಾಮ್ ಕೂಡಾ ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ. ಆದರೆ.. ರಚಿತಾ ರಾಮ್ ಅವರು ಆಡಿರುವ ಮಾತುಗಳು ದರ್ಶನ್ ಅಭಿಮಾನಿಗಳು ಥ್ರಿಲ್ ಆಗುವಂತೆ ಮಾಡಿವೆ.
ಮೂರು ಬ್ಯಾಗ್ ಹಣ್ಣುಗಳನ್ನು ಹೊತ್ತು ಮೂಲಕ ಜೈಲಿಗೆ ಆಗಮಿಸಿದ ರಚಿತಾ ರಾಮ್, ರಾಘವೇಂದ್ರ ಸ್ವಾಮಿ ಮಠದ ಪ್ರಸಾದವನ್ನೂ ತಂದು ಕೊಟ್ಟಿದ್ದಾರೆ. ಎಲ್ಲವೂ ಒಳ್ಳೆಯದಾಗುತ್ತೆ ಎಂದು ಭರವಸೆ ಹೇಳಿ ಬಂದಿದ್ದಾರೆ. ದರ್ಶನ್ ಆಪ್ತ ಸಚ್ಚಿದಾನಂದ್ ಜೊತೆಗೆ ಜೈಲಿಗೆ ಆಗಮಿಸಿದ್ದ ರಚಿತಾ ರಾಮ್ 2 ತಿಂಗಳ ಬಳಿಕ ದರ್ಶನ್ ಅವರ ದರ್ಶನ ಮಾಡಿದ್ದಾರೆ.
ದರ್ಶನ್ ನನ್ನ ಗುರು ಅಂತ ಇತ್ತೀಚಿಗೆ ಒಂದು ಪೋಸ್ಟ್ ಹಾಕಿದ್ದ ರಚಿತಾ, ದರ್ಶನ್ ಈ ಪ್ರಕರಣದಲ್ಲಿ ಭಾಗಿಯಾಗಿರೋದು ನಂಬಲು ಕಷ್ಟಸಾಧ್ಯ ಎಂದು ಬಹಿರಂಗವಾಗಿಯೇ ಹೇಳಿದ್ದರು. ಜೈಲಿನಲ್ಲಿ ಸುಮಾರು ಅರ್ಧ ಗಂಟೆ ದರ್ಶನ್ ಜೊತೆ ಮಾತುಕತೆ ನಡೆಸಿರುವ ರಚಿತಾ ರಾಮ್ ಅವರಿಗೆ ನಟ ದರ್ಶನ್ ಅವರು, ನನಗೆ ಕಾನೂನು ಮೇಲೆ ನಂಬಿಕೆ ಇದೆ. ಆದಷ್ಟು ಬೇಗ ಬರ್ತೀನಿ ಎಂದಿದ್ದಾರಂತೆ. ವಿಶೇಷ ಎಂದರೆ.. ದರ್ಶನ್ ಅವರಿಗೆ ಧೈರ್ಯ ಹೇಳಲು ಹೋದ ರಚಿತಾ ಅವರಿಗೆ ದರ್ಶನ್ ಅವರೇ ಧೈರ್ಯ ಹೇಳಿ ಕಳಿಸಿರುವುದು.
ನಾನು ಅವರನ್ನು ನೋಡಿದ ಕೂಡಲೇ ಭಾವುಕಳಾದೆ. ಅವರೇ ನನಗೆ ಧೈರ್ಯ ತುಂಬಿದ್ರು. ನನಗೆ ದರ್ಶನ್ ಅವರನ್ನು ರಾಜನ ರೀತಿ ನೋಡಲು ಇಷ್ಟ. ಈ ರೀತಿ ನೋಡಲು ನನಗೆ ಇಷ್ಟವಿಲ್ಲ. ಅವರ ಬ್ಯಾನರ್‌ನಿಂದಲೇ ನಾನು ಸಿನಿಮಾಗೆ ರಂಗಕ್ಕೆ ಬಂದಿದ್ದು. ದರ್ಶನ್ ಅವರನ್ನು ಈ ಸ್ಥಿತಿಯಲ್ಲಿ ನೋಡೋಕೆ ಕಷ್ಟ ಆಗುತ್ತದೆ. ಅವರನ್ನು ನಾವೆಲ್ಲರೂ ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅವರ ಅಭಿಮಾನಿಗಳು, ಅವರು ಕುಟುಂಬದವರು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೋ ನಾನು ಕೂಡ ಅಷ್ಟೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.
ಯಾಕೆ ಭಾವುಕರಾಗಿದ್ದೀರಿ ಎಂಬ ಪ್ರಶ್ನೆಗೆ ಉತ್ತರ ನೀಡಿರುವ ರಚಿತಾ ರಾಮ್ ಎಮೋಷನಲ್ ಆಗದೇ ಇನ್ನೇನು ಮಾಡಲಿ? ನಾನೊಂದು ಮಾತು ಹೇಳುತ್ತೇನೆ. ನಾನು ದರ್ಶನ್ ಅವರ ಬ್ಯಾನರ್‌ನಿಂದ ಬಂದವಳು. ನನ್ನನ್ನು ಪರಿಚಯಿಸಿದ್ದೇ ದರ್ಶನ್ ಸರ್. ನನಗೆ ಇಂದು ಏನೇ ಹೆಸರು ಇದ್ದರೂ ದರ್ಶನ್ ಅವರಿಂದ. ಅಂದು ಅವರು ಒಂದು ಮಾತು ನೋ ಎಂದಿದ್ದರೆ ಬಿಂದ್ಯಾ ರಾಮ್ ಆಗಿದ್ದ ನಾನು ರಚಿತಾ ರಾಮ್ ಆಗೋಕೆ ಆಗುತ್ತಿರಲಿಲ್ಲ. ಅವರ ಋಣ ನನ್ನ ಮೇಲೆ ಹಾಗೂ ನನ್ನ ಇಡೀ ಕುಟುಂಬದ ಮೇಲಿದೆ. ಜೈಲಿನಲ್ಲಿ ಅವರೇ ನನಗೆ ಧೈರ್ಯ ತುಂಬಿದರು. ಆದಷ್ಟು ಬೇಗ ನಮಗೆ ಒಳ್ಳೆಯ ಸುದ್ದಿ ಸಿಗಲಿ ಎಂದಿದ್ದಾರೆ. ನಾನು ಹಾಗೂ ನನ್ನ ಇಡೀ ಕುಟುಂಬ ದರ್ಶನ್ ಅವರ ಋಣದಲ್ಲಿದೆ ಎಂದಿರುವ ಮಾತಿಗೆ ದರ್ಶನ್ ಅಭಿಮಾನಿಗಳು ಸಂತೋಷಗೊಂಡಿದ್ದಾರೆ.
‘ಬುಲ್ ಬುಲ್’, ‘ಅಂಬರೀಷ’, ‘ಜಗ್ಗುದಾದ’, ‘ಕ್ರಾಂತಿ’ ಸಿನಿಮಾಗಳಲ್ಲಿ ದರ್ಶನ್ ಜೊತೆ ರಚಿತಾ ರಾಮ್ ನಟಿಸಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ರಚಿತಾ ರಾಮ್ ನಟನೆಯ ‘ಬ್ಯಾಡ್ ಮ್ಯಾನರ್ಸ್’ ಹಾಗೂ ಈ ವರ್ಷ ತೆರೆಕಂಡ ‘ಮ್ಯಾಟ್ನಿ’ ಸಿನಿಮಾಗಳ ಪ್ರಚಾರಕ್ಕೆ ದರ್ಶನ್ ಸಹಾಯ ಮಾಡಿದ್ದರು.
ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಹತ್ಯೆ ಮಾಡಿದ ಆರೋಪ ದರ್ಶನ್ ಮೇಲಿದೆ. ಪ್ರಕರಣದ ತನಿಖೆ ಈಗ ಕೊನೇ ಹಂತಕ್ಕೆ ಬಂದಿದೆ. ಶೀಘ್ರದಲ್ಲೇ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ.
ದರ್ಶನ್ ಅವರನ್ನು ಚಿತ್ರರಂಗದ ಹಲವರು ಭೇಟಿ ಮಾಡಿದ್ದಾರೆ. ರೇಣುಕಾಸ್ವಾಮಿಗೂ ನ್ಯಾಯ ಸಿಗಲಿ.. ದರ್ಶನ್ʻಗೂ ನ್ಯಾಯ ಸಿಗಲಿ ಎಂದಿದ್ದಾರೆ. ಆದರೆ.. ದರ್ಶನ್ ಅವರ ಬಗ್ಗೆ ರಚಿತಾ ರಾಮ್ ಅವರಷ್ಟು ಭಾವುಕರಾಗಿ ಯಾರೂ ಮಾತನಾಡಿರಲಿಲ್ಲ. ಹೀಗಾಗಿ ರಚಿತಾ ರಾಮ್ ಅವರ ಒಂದೊಂದು ಮಾತಿಗೂ ದರ್ಶನ್ ಫ್ಯಾನ್ಸ್ ಜೈಜೈ ಅಂತಿದ್ದಾರೆ.



