ನಟ ದರ್ಶನ್ ಸದಾ ವಿವಾದದ ಕೇಂದ್ರಬಿಂದು. ನಿರ್ಮಾಪಕ ಉಮಾಪತಿ ವಿರುದ್ಧ ಗುಮ್ಮುವ ಮಾತನಾಡಿ ವಿವಾದದಿಂದ ಸುದ್ದಿಯಾಗಿರುವ ದರ್ಶನ್ ಕೆಲವೇ ದಿನಗಳ ಹಿಂದೆ ಬೆಳ್ಳಿ ಪರ್ವದಲ್ಲಿ ಮಾತನಾಡಿದ್ದ ಹೇಳಿಕೆಯೂ ಸುತ್ತಿಕೊಳ್ತಾ ಇದೆ. ದರ್ಶನ್ ವಿರುದ್ಧ ಮತ್ತೆರಡು ದೂರು ದಾಖಲಾಗಿವೆ. ಆದರೆ ಇವೆಲ್ಲದರ ಮಧ್ಯೆ ವೈರಲ್ ಆಗಿರುವ ವಿಡಿಯೋಗಳು ಹೇಳ್ತಿರೋ ಕಥೆಯೇ ಬೇರೆ.
ನಟ ದರ್ಶನ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಸ್ತ್ರೀ ಶಕ್ತಿ ಸಂಘ ದೂರು ದಾಖಲು ಮಾಡಿದೆ. ಆರ್.ಆರ್. ನಗರ ಠಾಣೆಯಲ್ಲಿಯೂ ಕೇಸ್ ದಾಖಲಿಸಲಾಗಿದ್ದು, ಎಫ್ʻಐಆರ್ ಹಾಕಲಾಗಿದೆ. ದೂರುಗಳ ಒಟ್ಟಾರೆ ಸಾರಾಂಶ ಇಷ್ಟು.
ನಟ ದರ್ಶನ್ ಕರ್ನಾಟಕದಲ್ಲಿ ಖ್ಯಾತಿ ಹೊಂದಿರುವ ನಟ. ದರ್ಶನ್ ಅವರು ಹಲವಾರು ಬಾರಿ ಮಹಿಳೆಯರ ಬಗ್ಗೆ ಹಾಗೂ ಮಹಿಳೆಯರ ಆಸ್ತಿತ್ವದ ಬಗ್ಗೆ ಅಲ್ಲದೆ ಮಹಿಳೆಯರಿಗೆ ಅವಮಾನ ಆಗುವ ರೀತಿಯಲ್ಲಿ ಮಾತನಾಡುತ್ತಾರೆ. ಟಿವಿಗಳಲ್ಲಿ, ವೇದಿಕೆಗಳಲ್ಲಿ ಮಹಿಳೆಯರನ್ನು ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ. ಹೆಂಡತಿಗೆ ಕಿರುಕುಳ ನೀಡಿ ಜೈಲಿಗೆ ಹೋಗಿ ಬಂದಿರುವ ಹಿನ್ನೆಲೆ ಇರುವ ದರ್ಶನ್, ಈ ಹಿಂದೆ ಲಕ್ಷ್ಮೀ ದೇವತೆಯ ಬಗ್ಗೆಯೂ ಅಸಹ್ಯವಾಗಿ ಮಾತನಾಡಿದ್ದರು. ಈಗ ಸ್ವಾಮೀಜಿಗಳು ಇದ್ದಂತಹ ವೇದಿಕೆಯಲ್ಲಿ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಪದೇ ಪದೇ ಮಹಿಳೆಯರಿಗೆ ಮಾನಸಿಕ ಕಿರುಕುಳ ಕೊಡುತ್ತಿರುವ ದರ್ಶನ್ ಅವರನ್ನು ಅರೆಸ್ಟ್ ಮಾಡಬೇಕು.
ಪೊಲೀಸರು ಅರೆಸ್ಟ್ ಮಾಡುತ್ತಾರಾ..? ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ. ನಿರ್ಮಾಪಕರಿಗೆ ಬೆದರಿಕೆ ಹಾಕಿದರು ಎಂದು ಪ್ರಜಾಪರ ವೇದಿಕೆಯವರು ಫಿಲ್ಮ್ ಚೇಂಬರಿನಲ್ಲಿ ಈಗಾಗಲೇ ದೂರು ಕೊಟ್ಟಿದ್ದಾರೆ. ಇನ್ನು ಒಕ್ಕಲಿಗರ ಸಂಘ ಖಂಡಿಸಿದೆ. ಗೌಡತಿಯರ ಸೇನೆಯೂ ದೂರು ಕೊಟ್ಟು ಪ್ರತಿಭಟನೆ ನಡೆಸಿದೆ. ಒಟ್ಟಿನಲ್ಲಿ ದರ್ಶನ್ ಕಾಂಟ್ರವರ್ಸಿಯಲ್ಲಿಯೇ ಮುಳುಗೇಳುತ್ತಿದ್ದಾರೆ.
ಇದರ ನಡುವೆ ಗೌಡತಿಯ ಸೇನೆ ಹಾಗೂ ಹಲವು ಮಹಿಳೆಯರ ಪ್ರತಿಭಟನೆ ವಿಡಿಯೋಗಳು ವೈರಲ್ ಆಗಿವೆ. ಆ ವಿಡಿಯೋಗಳ ಪ್ರಕಾರ ಇಡೀ ಪ್ರತಿಭಟನೆಯನ್ನು ನಿರ್ಮಾಪಕ ಉಮಾಪತಿಯವರು ತಮ್ಮ ಬೆಂಬಲಿಗರ ಜೊತೆ ಸೇರಿ ಮಾಡಿಸುತ್ತಿದ್ಧಾರೆ. ಈ ಪ್ರತಿಭಟನೆಗಳು ಪ್ರಾಯೋಜಿತ ಎನ್ನಲಾಗ್ತಾ ಇದೆ. ಮತ್ತೊಂದೆಡೆ ದರ್ಶನ್ ಅವರಿಗೆ ಪರೋಕ್ಷವಾಗಿ ಬುದ್ದಿ ಹೇಳುವ ರೀತಿಯ ಆಲ್ಬಂ ಒಂದು ರಿಲೀಸ್ ಆಗಿದೆ. ಆ ಆಲ್ಬಂ ಹಿನ್ನೆಲೆಯಲ್ಲೂ ಉಮಾಪತಿ ಅವರಿದ್ಧಾರೆ. ಹಾಗಾದರೆ ಇಡೀ ಪ್ರಕರಣದ ಮತ್ತು ಪ್ರತಿಭಟನೆಗಳನ್ನೆಲ್ಲ ಉಮಾಪತಿ ಪೇಯ್ಡ್ ಮಾಡಿ ಮಾಡಿಸ್ತಿದ್ದಾರಾ ಅನ್ನೋ ಅನುಮಾನ ಮೂಡಿದೆ.ಅಷ್ಟೇ ಅಲ್ಲ, ದರ್ಶನ್ ವಿರುದ್ಧ ದೂರು ಕೊಟ್ಟಿದ್ದ ಪ್ರಜಾಪರ ವೇದಿಕೆಯ ಶಫಿ, ಬಹಿರಂಗವಾಗಿ ಕ್ಷಮೆ ಕೇಳಿರುವ ವಿಡಿಯೋ ಕೂಡಾ ರಿಲೀಸ್ ಆಗಿದೆ. ಒಟ್ಟಿನಲ್ಲಿ ದರ್ಶನ್ ವಿರುದ್ಧ ಪ್ರತಿಭಟನೆಗಳ ಹಿಂದೆ ಬೇರೆ ಏನೋ ನಡೆಯುತ್ತಿದೆ ಎಂಬ ಅನುಮಾನವಂತೂ ಮೂಡುತ್ತಿದೆ. ಹಾಗಂತ ದರ್ಶನ್ ವೇದಿಕೆಗಳಲ್ಲಿ ಬಳಸಿರುವ ಪದಗಳ ಬಳಕೆ, ಹೆಣ್ಣು ಮಕ್ಕಳ ಕುರಿತಾದ ಹೇಳಿಕೆ ಸಮರ್ಥನೀಯವಂತೂ ಖಂಡಿತಾ ಅಲ್ಲ. ದರ್ಶನ್ ಈ ವಿಷಯದಲ್ಲಿ ತಿದ್ದಿಕೊಳ್ಳಲೇಬೇಕು.



