ಇನ್ನೊಬ್ಬ ಅರ್ಚಕ ಅಧಿಕ ಪ್ರಸಂಗ ತೋರಿಸಿದ್ದು, ದೇವರ ವಿಗ್ರಹದ ಮೇಲಿಟ್ಟು ದರ್ಶನ್ ಫೋಟೋಗೆ ಪೂಜೆ ಮಾಡಿದ್ದಾರೆ. ಆದರೆ ಅದನ್ನೂ ಮೀರಿದ ಅಧಿಕ ಪ್ರಸಂಗ ಇನ್ನೊಂದು ನಡೆಯುತ್ತಿದೆ. ಅದು ಕಲಾವಿದರ ಸಂಘದ ಕಟ್ಟಡದಲ್ಲಿ. ಮೂಲಗಳ ಪ್ರಕಾರ ದರ್ಶನ್ ಬಿಡುಗಡೆಗಾಗಿಯೇ ಹೋಮ ಹವನ ನಡೆಯುತ್ತಿದೆಯಂತೆ. ಆ ಹೋಮ ಹವನಕ್ಕೆ ಚಿತ್ರರಂಗದ ಎಲ್ಲ ನಟ ನಟಿಯರೂ ಭಾಗಿಯಾಗಬೇಕಂತೆ. ಅರ್ಚಕನ ಅಧಿಕ ಪ್ರಸಂಗದಿಂದ.. ಚಿತ್ರರಂಗದಲ್ಲಿ ನಡೆಯುತ್ತಿರುವ ಅಧಿಕ ಪ್ರಸಂಗಗಳ ಪರಾಕಾಷ್ಠೆ ನೋಡುತ್ತಿದ್ದರೆ.. ಇದ್ಯಾಕೋ ಅತಿಯಾಯ್ತು ಎನ್ನಿಸುತ್ತದೆ.
ಮೊದಲಿಗೆ ಅರ್ಚಕರ ಹುಚ್ಚಾಟ ನೋಡೋಣ. ಕೇವಲ ಎರಡು ದಿನಗಳ ಹಿಂದೆ ಬಳ್ಳಾರಿ ಜಿಲ್ಲೆಯ ಐತಿಹಾಸಿಕ ಸ್ಥಳವಾದ ಕುಡಿಗೋಡು ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ಕೊಲೆ ಆರೋಪಿ ದರ್ಶನ್‌ನ ಫೋಟೋಗಳನ್ನು ಇಟ್ಟು ಪೂಜೆ ಮಾಡಲಾಗಿತ್ತು. ಈ ದೇವಸ್ಥಾನ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುತ್ತಿದ್ದ ಹಿನ್ನೆಲೆಯಲ್ಲಿ ಕೊಲೆ ಆರೋಪಿ ಪೋಟೋವನ್ನು ದೇವರ ಮುಂದಿಟ್ಟು ಪೂಜೆ ಮಾಡಿದ್ದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಕೂಡಲೇ ಎಚ್ಚೆತ್ತ ಧಾರ್ಮಿಕ ದತ್ತಿ ಇಲಾಖೆಯಿಂದ ಅರ್ಚಕ ಮಲ್ಲಿ ಎಂಬುವವರನ್ನು ಸಸ್ಪೆಂಡ್ ಮಾಡಿತ್ತು.
ಇದಾಗಿ ಎರಡೇ ದಿನಗಳಲ್ಲಿ ಪುನಃ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ಕುರುವತ್ತಿ ಬಸವೇಶ್ವರ ದೇವಾಲಯದಲ್ಲಿ ಮತ್ತೊಬ್ಬ ಅರ್ಚಕ ಅಧಿಕ ಪ್ರಸಂಗ ಮಾಡಿದ್ದಾರೆ. ಕುರವತ್ತಿ ಬಸವೇಶ್ವರ ದೇಗುಲ ಅರ್ಚಕ ಬಸಪ್ಪ ಪೂಜಾರಿ ಎನ್ನುವವರು ದೇವಾಲಯದ ಗರ್ಭಗುಡಿಯಲ್ಲಿರುವ ಬಸವೇಶ್ವರ ವಿಗ್ರಹದ ಕಾಲಿನ ಮೇಲೆ ಒಂದು ಫೋಟೋ ಹಾಗೂ ದೇವರ ಮುಂಭಾಗದಲ್ಲಿ ಒಂದು ಫೋಟೋವನ್ನು ಇಟ್ಟು ಪೂಜೆ ಮಾಡಿದ್ದಾನೆ. ದೇವರಿಗೆ ಅರ್ಚನೆ ಮತ್ತು ಮಂಗಳಾರತಿ ಮಾಡುವಾಗಲೇ ಕೊಲೆ ಆರೋಪಿ ದರ್ಶನ್ ಫೋಟೋಗೆ ಪೂಜೆ ಮಾಡಿದ್ದಾರೆ.
ಜೈಲು ಕುಣಿಕೆ ಭೀತಿ ಹೆಚ್ಚಾಗುತ್ತಿದ್ದಂತೆ ಅವರ ಅಭಿಮಾನಿಗಳಿಂದ ಬಿಡುಗಡೆಗಾಗಿ ಪ್ರಾರ್ಥನೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನು ಪೂಜಾರಿ ಬಸಪ್ಪ ಕೂಡ ತಮ್ಮ ನೆಚ್ಚಿನ ಹೀರೋ ಬೇಗ ಬಿಡುಗಡೆ ಆಗಲಿ ಅಂತ ಅರ್ಚನೆ ಮಾಡಿದ್ದಾರಂತೆ. ವಿರೋಧಗಳು ಹೆಚ್ಚಾದ ಹಿನ್ನೆಲೆಯಲ್ಲಿ ದರ್ಶನ್ ಫೋಟೋ ಇಟ್ಟು ಪೂಜೆ ಮಾಡಿದ್ದ ಫೋಟೋವನ್ನು ಅರ್ಚಕ ಡಿಲೀಟ್ ಮಾಡಿದ್ದಾನೆ.
ಇನ್ನು ದರ್ಶನ್ ಬಿಡುಗಡೆಗಾಗಿ ಕಲಾವಿದರ ಸಂಘದಲ್ಲಿ ಹೋಮ ಹವನ ನಡೀತಿದ್ಯಾ ಅನ್ನೋ ಪ್ರಶ್ನೆಗೆ ಹೌದು ಎಂಬ ಉತ್ತರ ಬರುತ್ತಿದೆ. ಅಧಿಕೃತವಾಗಿ ಬಹಿರಂಗವಾಗಿ ಹೇಳ್ತಿಲ್ಲ, ಅಷ್ಟೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸುವುದು ಬಾಕಿಯಿದೆ. ಅಲ್ಲಿವರೆಗೂ ದರ್ಶನ್ ಜೈಲಿನಿಂದ ಬಿಡುಗಡೆಯಾಗುವುದು ಡೌಟು. ಪೊಲೀಸರು ಚಾರ್ಜ್ ಶೀಟ್‌ನಲ್ಲಿ ಮಾಡಿರುವ ಆರೋಪಗಳನ್ನು ಮುಂದಿಟ್ಟುಕೊಂಡು ದರ್ಶನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಬೇಕು. ಇನ್ನೊಂದು ಕಡೆ ಅಭಿಮಾನಿಗಳು ಹಾಗೂ ಕನ್ನಡ ಚಿತ್ರರಂಗ ದರ್ಶನ್ ಬಿಡುಗಡೆಯಾಗಿ ಎದುರು ನೋಡುತ್ತಿದ್ದಾರೆ.
ಈ ಮಧ್ಯೆ ಕಲಾವಿದರ ಸಂಘದ ಕಟ್ಟಡದಲ್ಲಿ ದರ್ಶನ್ ಬಿಡುಗಡೆಗಾಗಿಯೇ ವಿಶೇಷ ಪೂಜೆ, ಹೋಮ ಹವನ ನಡೆಯಲಿದೆ ಎಂಬ ಮಾತುಗಳು ಕೇಳಿ ಬಂದಿವೆ. ಆಗಸ್ಟ್ 14ರಂದು ನಡೆಯುತ್ತಿರುವ ಈ ವಿಶೇಷ ಪೂಜೆಯಲ್ಲಿ ಚಿತ್ರರಂಗದ ಎಲ್ಲ ಕಲಾವಿದರೂ ಭಾಗವಹಿಸಲಿದ್ದಾರೆ. ಶಿವಣ್ಣ, ಸುದೀಪ್, ಉಪೇಂದ್ರ, ಗಣೇಶ್, ದುನಿಯಾ ವಿಜಯ್, ಯಶ್ ಸೇರಿದಂತೆ ಎಲ್ಲ ಹಿರಿಯ ಕಿರಿಯ ನಟರಿಗೂ ಕಲಾವಿದರ ಸಂಘದ ಹೋಮ ಹವನಕ್ಕೆ ಆಹ್ವಾನ ನೀಡಲಾಗಿದೆ. ಬಿ ಸರೋಜಾದೇವಿ, ಸಾಹುಕಾರ್ ಜಾನಕಿ ಸೇರಿದಂತೆ ಪ್ರಮುಖ ನಾಯಕಿಯರಿಗೂ ಆಹ್ವಾನ ನೀಡಲಾಗಿದೆ. ರಾಕ್ ಲೈನ್ ವೆಂಕಟೇಶ್ ಮತ್ತು ದೊಡ್ಡಣ್ಣ ನೇತೃತ್ವದಲ್ಲಿ ಪೂರ್ಣಾಹುತಿಗೆ ಸಿದ್ಧತೆಗಳು ನಡೆಯುತ್ತಿವೆಯಂತೆ.
ಪೂಜೆಯನ್ನಾದರೂ ಮಾಡಿಕೊಳ್ಳಲಿ.. ಹೋಮ ಹವನವನ್ನಾದರೂ ಮಾಡಿಕೊಳ್ಳಲಿ.. ಅಷ್ಟೊಂದು ಪ್ರೀತಿಯಿದ್ದರೆ ಮನೆಯಲ್ಲಿ ಮಾಡಿಕೊಳ್ಳಲಿ.. ಕಲಾವಿದರ ಸಂಘದ ಕಟ್ಟಡ ಅನ್ನೋದು ಯಾರ ಆಸ್ತಿಯೂ ಇಲ್ಲ. ಕೊಲೆ ಕೇಸಿನಲ್ಲಿ ಆರೋಪಿಯಾಗಿರುವ ವ್ಯಕ್ತಿಯ ಬಿಡುಗಡೆಗೆ ಹೋಮ ಹವನ ನಡೆಸುವಷ್ಟರಮಟ್ಟಿಗೆ ಕೆಡಬಾರದು.
ಇಷ್ಟಕ್ಕೂ ವಿಜಯಲಕ್ಷ್ಮಿ ದರ್ಶನ್, ದಿನಕರ್, ಮೀನಾ ಅವರು ಪೂಜೆ, ಹೋಮ, ಹವನ ಮಾಡಿಸಿದರೆ.. ಅದಕ್ಕೆ ಒಂದು ಅರ್ಥ ಇದೆ. ದರ್ಶನ್ ಅವರ ಕುಟುಂಬದ ಸದಸ್ಯ. ಇನ್ನು ಅಭಿಮಾನಿಗಳು ವೈಯಕ್ತಿಕವಾಗಿ ಹೋಮ, ಹವನ, ಪೂಜೆ ಮಾಡಿಸಿದರೆ..ಅದನ್ನೂ ಸಮರ್ಥನೆ ಮಾಡಿಕೊಳ್ಳಬಹುದು. ಆದರೆ.. ದೇವಸ್ಥಾನದ ಗರ್ಭಗುಡಿಗಳಲ್ಲಿ ಕೊಲೆ ಆರೋಪಿಯ ಫೋಟೋ ಇಟ್ಟು ಪೂಜೆ ಮಾಡುವುದು ಅತಿರೇಕಗಳಲ್ಲೇ ಅತಿರೇಕ.



