ದರ್ಶನ್ ವಿರುದ್ಧ 3 ಹೊಸ ಎಫ್‌ಐಆರ್ ಆಗಿದೆ. ಪರಪ್ಪನ ಜೈಲಿನ 9 ಆಫೀಸರ್ಸ್ ಸಸ್ಪೆಂಡ್ ಆಗಿದ್ದಾರೆ. ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ದರ್ಶನ್ ಸುಧಾರಿಸುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಜೈಲಿನಲ್ಲಿದ್ದರೂ.. ದರ್ಶನ್ ದೌಲತ್ತು ಮುಂದುವರೆದಿದೆ. ವಿಶೇಷ ಅಂದ್ರೆ, ಫೋಟೋ, ವಿಡಿಯೋಗಳು ರಿಲೀಸ್ ಆಗುವ ಮೊದಲು ದರ್ಶನ್ ಅವರು ತುಂಬಾ ಸಂಕಷ್ಟದಲ್ಲಿದ್ದಾನೆ ಎಂದುಕೊಂಡಿದ್ದವರಿಗೆಲ್ಲ ಶಾಕ್ ಆಗಿದೆ. ಪರಪ್ಪನ ಅಗ್ರಹಾರಕ್ಕೆ ಹೋದ ಬಳಿಕ ದರ್ಶನ್‌ಗೆ ಕುಖ್ಯಾತ ರೌಡಿಗಳ ಜೊತೆ ನಂಟು ಹೆಚ್ಚಾಗಿದೆ. ಮೂರು ಪ್ರತ್ಯೇಕ ಎಫ್ಐಆರ್ಗಳ ಪೈಕಿ ಎರಡರಲ್ಲಿ ದರ್ಶನ್ ಎ1 ಆಗಿದ್ದಾರೆ. ನಟೋರಿಯಸ್ ರೌಡಿಶೀಟರ್ಗಳಾದ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನಾ, ಧರ್ಮ, ಸತ್ಯ ಮುಂತಾದವರ ಜೊತೆ, ದರ್ಶನ್ ಕೇಸು ಹಾಕಿಸಿಕೊಂಡಿದ್ದಾರೆ.
ಕೇಂದ್ರ ಕಾರಾಗೃಹಗಳ ಉಪನಿರ್ದೇಶಕರಾದ ಎಂ. ಸೋಮಶೇಖರ್ ಅವರಿಂದ ದೂರು ದಾಖಲಾಗಿದ್ದು, ಒಟ್ಟು ಮೂರೂ ಕೇಸ್‌ನಲ್ಲಿ ದರ್ಶನ್ ಆರೋಪಿ.
ಪ್ರಕರಣ ೦೧ :
ಕಾರಾಗೃಹ ಕಾಯಿದೆ ಅಡಿಯಲ್ಲಿ ಒಂದು ಎಫ್‌ಐಆರ್ ದಾಖಲಾಗಿದೆ. ಅದರಲ್ಲಿ ದರ್ಶನ್ A1, ಮ್ಯಾನೇಜರ್ ನಾಗರಾಜ್ A2, ವಿಲ್ಸನ್ ಗಾರ್ಡನ್ ನಾಗ A3 ಹಾಗೂ ಕುಳ್ಳ ಸೀನಾ A4 ಆಗಿದ್ದಾನೆ. ಜೈಲಿನ ಒಳಗೆ ಸಿಗರೇಟು ಸೇರಿದಂತೆ ಕಾನೂನು ಬಾಹಿರ ವಸ್ತುಗಳನ್ನು ಬಳಸಿದ್ದ ಪ್ರಕರಣ.
ಪ್ರಕರಣ ೦೨ :
ವಿಡಿಯೋ ಕಾಲ್‌ನಲ್ಲಿ ಮುಖ ದರ್ಶನ ಮಾಡಿದ ಎರಡನೇ ಎಫ್‌ಐಆರ್‌ನಲ್ಲೂ ಕೂಡ ದರ್ಶನ್ ಅವರನ್ನು A-1 ಮಾಡಲಾಗಿದೆ. ಕೈದಿ ಧರ್ಮ A-2 ಹಾಗೂ ವಿಡಿಯೋ ಕಾಲ್ ಮಾಡಿದ ಸತ್ಯ A-3 ಆಗಿದ್ದಾರೆ. ಅಂದರೆ ಜೈಲಿನ ಒಳಗೆ ಮೊಬೈಲ್ ಫೋನ್ ಬಳಸಿದ್ದ ಪ್ರಕರಣ.
ಪ್ರಕರಣ ೦೩ :
ವಿಚಾರಣಾಧೀನ ಖೈದಿಗಳೇ ಆಗಲಿ, ಬೇರೆ ಯಾರೇ ಆಗಲಿ.. ಸೆಲ್ ಒಳಗೆ ಇರಬೇಕು. ಹೀಗಾಗಿ ಸೆಲ್ ಹೊರಗೆ ಮೋಜು ಮಾಡುತ್ತಾ ಕುಳಿತ ತಪ್ಪಿಗೆ ಮೂರನೇ ಎಫ್‌ಐಆರ್ ಆಗಿದೆ. ಈ ಪ್ರಕರಣದಲ್ಲಿಯೂ ದರ್ಶನ್ ಆರೋಪಿಯೇ ಆದರೂ, ಎ1 ಅಲ್ಲ.
ಗೃಹ ಸಚಿವ ಪರಮೇಶ್ವರ್ ಹಾಗೂ ಜೈಲಿನ ಡಿಜಿ ಮಾಲಿನಿ ಕೃಷ್ಣಮೂರ್ತಿ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ೯ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದಾರೆ. ಜೈಲರ್ ಶರಣಬಸವ ಅಮಿನ್‌ಘಡ್, ಪ್ರಭು ಎಸ್. ಖಂಡೇಲ್ ವಾಲ್, ಅಸಿಸ್ಟೆಂಟ್ ಜೈಲರ್ಸ್ ಶ್ರೀಕಾಂತ್ ತಳವಾರ್, ಎಲ್. ಎಸ್ ತಿಪ್ಪೇಸ್ವಾಮಿ, ಹೆಡ್ ವಾರ್ಡರ್ಸ್ ವೆಂಕಪ್ಪ, ಸಂಪತ್ ಕುಮಾರ್ ತಡಪಟ್ಟಿ, ವಾರ್ಡರ್ ಬಸ್ಸಪ್ಪ ತೇಲಿ ಅಮಾನತು ಆದವರು.
ಇನ್ನೊಂದೆಡೆ ವಿಡಿಯೋ ಕಾಲ್ʻನಲ್ಲಿ ಮಾತನಾಡಿದ ರೌಡಿ ಶೀಟರ್ ಸತ್ಯನನ್ನು ಅರೆಸ್ಟ್ ಮಾಡಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ಬಳಿಕ ಈಗ ದರ್ಶನ್ ಅವರು ಮೂರು ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಪರಪ್ಪನ ಆಗ್ರಹಾರ ಠಾಣೆಯಲ್ಲಿ ದಾಖಲಾದ ಮೂರು ಪ್ರತ್ಯೇಕ ಎಫ್‌ಐಆರ್‌ನಲ್ಲಿ ಎರಡು ಕೇಸ್‌ನಲ್ಲಿ ದರ್ಶನ್ A1 ಆಗಿದ್ದಾರೆ. ಹೀಗಾಗಿ ದರ್ಶನ್‌ಗೆ ಜಾಮೀನು ಸಿಕ್ಕ ಬಳಿಕ ರೌಡಿಶೀಟ್ ತೆಗೆಯೋ ಸಾಧ್ಯತೆ ಹೆಚ್ಚಾಗಿದೆ.
ವಿಶೇಷ ಏನಂದ್ರೆ.. ದರ್ಶನ್ ಜೈಲಿನೊಳಗೆ ಯಾವುದೇ ಟೆನ್ಷನ್ ಇಲ್ಲದೆ ಆರಾಮ್ ಇದ್ದಾರೆ ಎನ್ನುವುದು ಗೊತ್ತಾಗುತ್ತಿದೆ. ಅಭಿಮಾನಿಗಳು ಹೇಳ್ತಿರೋದೇ ಬೇರೆ.. ʻಅಣ್ಣ ಹೇಗಿದ್ದಾರೆ ಎಂದು ಕೊನೆಗೂ ತೋರಿಸಿದ ಮೀಡಿಯಾಗಳಿಗೆ ಧನ್ಯವಾದʼ ಎನ್ನುತ್ತಿದ್ದಾರೆ. ಖುಷಿಯಾಗಿಯೇ ಇದ್ದಾರೆ. ಜೈಲಿಗೆ ಹೋದ್ರೂ.. ಅಣ್ಣ ಗತ್ತು ಬಿಟ್ಟಿಲ್ಲ ಎನ್ನುತ್ತಿದ್ದಾರೆ. ಬಹಿರಂಗವಾಗಿಯಿಯೇ ಪೋಸ್ಟ್ ಹಾಕುತ್ತಿದ್ದಾರೆ. ಆದರೆ.. ದರ್ಶನ್ ಅವರ ಪರ ನಿಂತಿರುವ ಸೆಲಬ್ರಿಟಿಗಳು ಹಾಗೂ ಅಭಿಮಾನಿಗಳ ದೊಡ್ಡ ಪಡೆಯ ಇಂತಹ ಹೇಳಿಕೆಗಳು ಚಾರ್ಜ್ ಶೀಟ್ ಸಿಕ್ಕರೂ ಜಾಮೀನು ಸಿಗದಂತೆ ತಡೆಯುವ ಶಕ್ತಿ ಪಡೆದಿವೆ. ಅವುಗಳಿಗೆ ಹೊಸ ಸೇರ್ಪಡೆ ಜೈಲಿನ ಒಳಗೆ ನಡೆದಿರುವ ದಾಸನ ದರ್ಬಾರ್.
ಪೊಲೀಸ್ ಪರ ವಕೀಲರು ಏನೇನೆಲ್ಲ ವಾದ ಮಾಡಬಹುದು.?
ರೌಡಿಗಳ ಜೊತೆಯಲ್ಲಿ ದರ್ಶನ್ ಚೆನ್ನಾಗಿದ್ದಾರೆ. ಹೀಗಾಗಿ ಜಾಮೀನು ಕೊಟ್ಟರೆ ರೌಡಿಗಳ ಮೂಲಕ ಸಾಕ್ಷಿಗಳನ್ನು ಹೆದರಿಸುತ್ತಾರೆ.
ಜೈಲಿನೊಳಗೇ ಇಷ್ಟು ಪ್ರಭಾವ ಬೀರುವ ದರ್ಶನ್, ಜಾಮೀನು ಸಿಕ್ಕರೆ ಜೈಲಿನ ಹೊರಗೆ ತನಿಖೆಯ ಮೇಲೆ ಪ್ರಭಾವ ಬೀರುವ ಅಪಾಯ ಇದೆ.
ದರ್ಶನ್ ಇದೆಲ್ಲವನ್ನೂ ಹಣ, ಪ್ರಭಾವ ಬಳಸಿಯೇ ಮಾಡಿದ್ದಾರೆ. ಜಾಮೀನು ಪಡೆದು ಹೊರಬಂದರೆ ಇದನ್ನೂ ಮೀರಿದ ಪ್ರಭಾವ ಬೀರುತ್ತಾರೆ.
ದರ್ಶನ್ ಪರ ದೊಡ್ಡ ಅಭಿಮಾನಿಗಳ ಪಡೆಯೇ ಇದೆ. ದರ್ಶನ್ ಅಭಿಮಾನಿಗಳ ಮೂಲಕವೂ ಸಾಕ್ಷಿಗಳನ್ನು ಬೆದರಿಸಬಹುದು. ಈಗಾಗಲೇ ಸಾಕ್ಷಿಯನ್ನು ಹೆದರಿಸಿದ ಒಂದು ಎನ್‌ಸಿಆರ್ ದಾಖಲಾಗಿದೆ.
ದರ್ಶನ್ ಒಬ್ಬ ಸೆಲಬ್ರಿಟಿ. ಹೀಗಾಗಿ ದರ್ಶನ್ ಅವರ ಪರವಾಗಿ ದೊಡ್ಡ ಸೆಲಬ್ರಿಟಿಗಳ ಪಡೆಯೇ ಇದೆ. ರಾಜಕೀಯವಾಗಿಯೂ ಪ್ರಭಾವಿ. ಇವರೆಲ್ಲರೂ ದರ್ಶನ್ ಪರವಾಗಿ ಕೆಲಸ ಮಾಡಬಹುದು.
ಇಂತಹ ಹತ್ತು ಹಲವು ವಾದಗಳನ್ನು ವಕೀಲರು ಮಂಡಿಸುವ ಸಾಧ್ಯತೆ ಇದೆ. ಅಷ್ಟೆಲ್ಲ ಹೋಗಲಿ.. ದರ್ಶನ್ ವೀಕ್ ಆಗಿದ್ದಾರೆ. ಪೌಷ್ಠಿಕ ಊಟ ದೊರಕುತ್ತಿಲ್ಲ ಎಂಬುದೇ ಕಾಮಿಡಿಯಾಗಿ ಹೋಗಿದೆ. ಕೋರ್ಟ್ʻನಲ್ಲಿ ಏನಾದರೂ ಜಡ್ಜ್ ಇದನ್ನು ಸೀರಿಯಸ್ ಆಗಿ ತೆಗೆದುಕೊಂಡರೆ ಕಠಿಣ ಕ್ರಮಗಳು ಜಾರಿಯಾದರೂ ಆಶ್ಚರ್ಯವಿಲ್ಲ. ದರ್ಶನ್ ಸತತವಾಗಿ ತಮಗೆ ಮೇಲೆ ತಾವೇ ವಿಲನ್ ಆಗುತ್ತಿದ್ದಾರೆ.



