ದರ್ಶನ್ ಬೇಲ್ : ʻಸುಪ್ರೀಂʼನಲ್ಲಿ ಸಮಸ್ಯೆ ಆದ್ರೆ.. ರಮ್ಯಾ, ಪ್ರಥಮ್, ರಕ್ಷಕ್ & ಫ್ಯಾನ್ಸ್ ಕಾರಣ..!
ನಟ ದರ್ಶನ್ ಅವರ ದೊಡ್ಡ ಶಕ್ತಿ ಅವರ ಫ್ಯಾನ್ಸ್. ಆದರೆ.. ಅದೇ ಹಲವು ಬಾರಿ ವಿಲನ್ ಆಗುವುದೂ ಇದೆ. ಅಭಿಮಾನಿಗಳು ಮಾಡಿದ ತಪ್ಪಿಗೆ ತಲೆಕೊಟ್ಟಿರುವ ದರ್ಶನ್, ಅದಕ್ಕೆ ಎದುರಿಸಿರುವ ಸಮಸ್ಯೆ ಒಂದೆರಡಲ್ಲ. ಈಗಲೂ ಅಷ್ಟೇ.. ದರ್ಶನ್ ಜಾಮೀನು ಅರ್ಜಿ ಮತ್ತೊಮ್ಮೆ ತೂಗುಯ್ಯಾಲೆಯಲ್ಲಿದೆ.
ಸುಪ್ರೀಂಕೋರ್ಟಿನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿರುವಾಗಲೇ.. ಹೈಕೋರ್ಟ್ ನೀಡಿರುವ ಜಾಮೀನಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸಮಯದಲ್ಲೇ.. ತೀರ್ಪು ಬರುವುದು ಇನ್ನೂ ಬಾಕಿ ಇರುವಾಗಲೇ.. ದರ್ಶನ್ ಅವರಿಗೆ ಮತ್ತೊಮ್ಮೆ ಅವರದ್ದೇ ಫ್ಯಾನ್ಸ್ ವಿಲನ್ ಆಗುತ್ತಿದ್ದಾರೆ. ಹಾಗೆ ಅಡ್ಡಿಯಾಗುತ್ತಿರುವ ಗ್ಯಾಂಗಿನಲ್ಲಿ ಬುಲೆಟ್ ರಕ್ಷಕ್ & ಗ್ಯಾಂಗ್. ಇನ್ನು ಎಂದಿನಂತೆ ಫ್ಯಾನ್ಸ್.
ಬುಲೆಟ್ ರಕ್ಷಕ್ ಗ್ಯಾಂಗ್ ಕಥೆ ಏನು..? ಪ್ರಥಮ್ ಇಷ್ಯೂ ಏನು..?
ನಟ ಪ್ರಥಮ್ ಅವರಿಗೆ ದರ್ಶನ್ ಫ್ಯಾನ್ಸ್ ಬೆದರಿಕೆ ಹಾಕಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ದೇವಸ್ಥಾನವೊಂದಕ್ಕೆ ಪ್ರಥಮ್ ಅವರು ಹೋಗಿದ್ದಾಗ ದರ್ಶನ್ ಫ್ಯಾನ್ಸ್ ಎಂದು ಹೇಳಿಕೊಂಡಿರುವ ಕೆಲವರು ಹಲ್ಲೆ ಮಾಡುವ ಪ್ರಯತ್ನ ಮಾಡಿದ್ದಾರೆ. ಅವಾಚ್ಯ ಶಬ್ಧಗಳಿಂದ ಬೈದಿದ್ದಾರೆ. ಡ್ರ್ಯಾಗರ್ ತೋರಿಸಿ ಹೆದರಿಸಿದ್ದಾರೆ. ಪ್ರಥಮ್ ಅಭಿಮಾನಿಗಳ ಎದುರು ಸೈಲೆಂಟ್ ಆಗಿ ಬಂದಿದ್ದಾರೆ. ಆದರೆ.. ಕಂಪ್ಲೇಂಟ್ ಅಗಿಲ್ಲ. ಆದರೆ ಸೈಲೆಂಟ್ ಆಗಿದ್ದ ಗಲಾಟೆಯ ವಿಷಯ ಲಾಯರ್ ಜಗದೀಶ್ ಜೊತೆಗೆ ಮಾತನಾಡುವಾಗ ಹೇಳಿಕೊಂಡಿದ್ದಾರೆ. ಈ ಬಾರಿ ದರ್ಶನ್ ರೌಡಿಸಂ ಮಾಡಿದ ಅಭಿಮಾನಿಗಳ ಹುಂಬ ಸೈನ್ಯದಲ್ಲಿ ಬುಲೆಟ್ ರಕ್ಷಕ್ ಕೂಡಾ ಇದ್ದ ಇದ್ದನಂತೆ.
ಈಗ ಸಮಸ್ಯೆ ಆಗಿರುವುದು ಏನೆಂದರೆ.. ಇದು ಸುಪ್ರೀಂಕೋರ್ಟ್ ಗಮನಕ್ಕೆ ಬಂದರೆ.. ಅದು ಸೀರಿಯಸ್ ಆಗುವುದು ಖಂಡಿತಾ. ಪೊಲೀಸರು ಸುಮೊಟೋ ಕೇಸ್ ಹಾಕಿಕೊಳ್ಳಲೂ ಅವಕಾಶ ಇದೆ.
ಇನ್ನು ರಮ್ಯಾ ಪ್ರಕರಣ.. ಇರಲಾರದೆ ಇರುವೆ ಬಿಟ್ಟುಕೊಂಡಿದ್ದಾರೆ. ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಎತ್ತಿದ್ದ ಪ್ರಶ್ನೆಗಳ ಕುರಿತು ಪೋಸ್ಟ್ ಮಾಡಿದ್ದ ನಟಿ ರಮ್ಯಾ ʻಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬಹುದು ಎಂದು ನಾನು ನಂಬಿದ್ದೇನೆ. ಭಾರತದ ಸಾಮಾನ್ಯ ಪ್ರಜೆಗೂ ಸುಪ್ರೀಂ ಕೋರ್ಟ್ ಆಶಾಕಿರಣʼ ಎಂದು ಪೋಸ್ಟ್ ಮಾಡಿದ್ದರು. ರಮ್ಯಾ ಅವರು ಈ ಪೋಸ್ಟ್ ಮಾಡಿದ್ದೇ ತಡ.. ದರ್ಶನ್ ಫ್ಯಾನ್ಸ್ ರಮ್ಯಾ ಅಕೌಂಟಿಗೆ ಹೋಗಿ ಎಂದಿನಂತೆ ತಮ್ಮ ಅತ್ಯಂತ ಸಭ್ಯ, ಸಜ್ಜನ ಭಾಷೆಯಲ್ಲಿ ರಮ್ಯಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅದಕ್ಕೆ ರೊಚ್ಚಿಗೆದ್ದ ದರ್ಶನ್ ಅಭಿಮಾನಿಗಳು ಎಂದಿನಂತೆ ರಮ್ಯಾ ಅವರ ಅಕೌಂಟಿಗೆ ಹೋಗಿ ಕೆಟ್ಟ ಕೆಟ್ಟ ಬೈಗುಳಗಳ ಮಳೆ ಸುರಿಸಿದ್ದಾರೆ. ರಮ್ಯಾ ಅಂತಹ ಪೋಸ್ಟುಗಳಿಗೆ ಜೊತೆ ʻಎಲ್ಲಾ ಡಿಬಾಸ್ ಅಭಿಮಾನಿಗಳಿಗೆ ನನ್ನ ಇನ್ ಸ್ಟಾಗ್ರಾಂಗೆ ಸ್ವಾಗತ… ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ಯಾಕೆ ನ್ಯಾಯ ಸಿಗಬೇಕು ಅನ್ನೋದಕ್ಕೇ ನಿಮ್ಮ ಕಾಮೆಂಟ್ಸ್‌ಗಳೇ ಸಾಕ್ಷಿʼ ಎಂಬ ಪೋಸ್ಟ್ ಹಾಕಿದ್ದಾರೆ.
ನಟಿ ರಮ್ಯಾ ಬಡಪಟ್ಟಿಗೆ ಬಗ್ಗುವವರಲ್ಲ. ಹೆದರುವ ಕ್ಯಾರೆಕ್ಟರೂ ಅಲ್ಲ. ಸೋಲುವ ಕ್ಯಾರೆಕ್ಟರಂತೂ ಅಲ್ಲವೇ ಅಲ್ಲ. ರಮ್ಯಾ ಅವರ ಈ ಕಮೆಂಟ್ಸ್ ನೋಡಿದರೆ.. ರಮ್ಯಾ ಅವರನ್ನು ಸಭ್ಯ ಭಾಷೆಯಲ್ಲಿ ತರಾಟೆಗೆ ತೆಗೆದುಕೊಂಡಿರುವವರ ಗ್ರಹಚಾರ ಕೆಟ್ಟಿದೆಯೇ ಎಂಬ ಅನುಮಾನ ಮೂಡುತ್ತದೆ. ಏಕೆಂದರೆ ತಂಟೆಗೆ ಬಂದವರಿಗೆಲ್ಲ ತಪರಾಕಿ ಕೊಟ್ಟ ದೊಡ್ಡ ಇತಿಹಾಸವೇ ರಮ್ಯಾ ಅವರಿಗೆ ಇದೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೋ.. ದರ್ಶನ್ ಅಭಿಮಾನಿಗಳಿಗೆ ವಾಸ್ತವ ಅಥವಾ ರಿಯಾಲಿಟಿ ಯಾವಾಗ ಅರ್ಥವಾಗುತ್ತದೋ.. ಗೊತ್ತಿಲ್ಲ.



