ತಮ್ಮ ಹುಟ್ಟುಹಬ್ಬ ಹಾಗೂ ಮ್ಯಾಕ್ಸ್ ಚಿತ್ರದ ಕುರಿತಂತೆ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ನಟ ಸುದೀಪ್ ಅವರಿಗೆ ದರ್ಶನ್ ಕುರಿತ ಪ್ರಶ್ನೆಗಳೇ ಎದುರಾದವು.ಮ್ಯಾಕ್ಸ್ ಚಿತ್ರದ ಪ್ರಚಾರ, ಹುಟ್ಟುಹಬ್ಬದ ಬಗ್ಗೆ ಸುದೀಪ್ ಹೇಳಿದ್ದನ್ನು ಬಿಟ್ಟರೆ, ಸುದ್ದಿಗೋಷ್ಟಿ ದರ್ಶನ್ ಸುತ್ತಲೇ ಸುತ್ತುತ್ತಿತ್ತು.
ದರ್ಶನ್ ವಿಷಯಕ್ಕೆ ಮಾತನಾಡಿದ ಸುದೀಪ ತಾವಿಬ್ಬರೂ ಮಿತ್ರರಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಲೇ.. ನಾವಿಬ್ಬರೂ ಪರಸ್ಪರ ಶತ್ರುಗಳೂ ಅಲ್ಲ ಎಂದರು. ನಾವಿಬ್ಬರೂ ದೂರ ಇದ್ದೇವೆ. ನಾವಿಬ್ಬರೂ ಮಾತನಾಡುತ್ತಿಲ್ಲ. ನಾವು ದೂರ ಆಗಿದ್ದೇವೆ ಎಂದ ಮಾತ್ರಕ್ಕೆ ನಾನು ಸರಿ ಇಲ್ಲ. ಅವರು ಸರಿ ಇಲ್ಲ ಅಂತಲ್ಲ. ನಾವಿಬ್ಬರೂ ಒಟ್ಟಿಗಿಲ್ಲ. ಹಗಲಿನಲ್ಲಿ ಸೂರ್ಯ, ರಾತ್ರಿ ಚಂದ್ರ ಬರಬೇಕು. ಒಟ್ಟಿಗೇ ಬರುವುದಕ್ಕೆ ಆಗುವುದಿಲ್ಲ. ಹಾಗಂತ ದರ್ಶನ್ ವ್ಯಕ್ತಿತ್ವದಲ್ಲಿ ಏನೋ ಸಮಸ್ಯೆ ಇದೆ ಅಂತಾ ನಾನು ಹೇಳುತ್ತಿಲ್ಲ. ನಾನು ಬೇರೆ, ಅವರು ಬೇರೆ. ನಮ್ಮಿಬ್ಬರ ಅಭಿರುಚಿ ಮತ್ತು ಯೋಚನೆಗಳೇ ಬೇರೆ ಬೇರೆ. ಹಾಗಂತ ನಾನು ಮತ್ತು ದರ್ಶನ್ ಶತ್ರುಗಳಲ್ಲ ಎಂದಿದ್ದಾರೆ.
ದರ್ಶನ್ ಅರೆಸ್ಟ್ ಆದ ಹೊಸದರಲ್ಲಿ ಮಾತನಾಡಿದ್ದ ಸುದೀಪ್ 2011ರಲ್ಲಿ ನಡೆದ ವಿಜಯಲಕ್ಷ್ಮಿ ಹಲ್ಲೆ ಪ್ರಕರಣವನ್ನು ನೆನಪಿಸಿಕೊಂಡಿದ್ದರು. ಆದರೆ ಅಪ್ಪಿತಪ್ಪಿಯೂ ಹೆಸರು ಹೇಳಿರಲಿಲ್ಲ. ಅವತ್ತು ಯಾರೋ ಒಬ್ಬ ಹೆಣ್ಣು ಮಗಳು ಗಂಡ ಹೊಡೀತಿದ್ದಾನೆ ಅಂತಾ ರಕ್ಷಣೆ ಕೇಳ್ಕೊಂಡು ಬರ್ತಾರೆ. ಅವರಿಗೆ ಒಬ್ಬ ನಟನ ಕುಟುಂಬ ರಕ್ಷಣೆ ಕೊಡುತ್ತೆ. ಕೊನೆಗೆ ಇವರಿವರು ಗಂಡ ಹೆಂಡ್ತಿ ಸರಿ ಹೋಗ್ತಾರೆ. ಆವತ್ತು ರಕ್ಷಣೆ ಕೊಟ್ಟ ಆ ನಟ ವಿಲನ್ ಆಗ್ತಾರೆ. ನಮಗ್ಯಾಕೆ ಬೇಕ್ ಸಾರ್ ಎಂದಿದ್ದರು ಸುದೀಪ್. ಅದು ದರ್ಶನ್ ಅವರಿಂದ ವಿಜಯಲಕ್ಷ್ಮಿ ಅವರಿಗೆ ಆಗ ರಕ್ಷಣೆ ನೀಡಿದ್ದ ಶಿವಣ್ಣ, ಆ ಘಟನೆಯ ನಂತರ ವಿಲನ್ ಆಗಿದ್ದನ್ನು ನೆನಪಿಸಿತ್ತು.
ಯಾರೋ ಹೇಳುತ್ತಾರೆ, ಯಾರನ್ನೋ ಮೆಚ್ಚಿಸಬೇಕು ಮಾಡುವವನಲ್ಲ ನಾನು. ಮನಸ್ಸಿಂದ ಬಂದರೆ ಯಾರು ಏನೇ ಅಂದುಕೊಂಡರೂ ನಾನು ಅಂಥವರ ಜತೆಗೆ ನಿಲ್ಲುತ್ತೇನೆ. ‘ದರ್ಶನ್ ವಿಚಾರವಾಗಿ ನಾನು ಹೇಳಬೇಕಿರೋದನ್ನು ಈಗಾಗಲೇ ಹೇಳಿದ್ದೇನೆ. ಮತ್ತೆ ಅದೇ ಮಾತನಾಡುವುದು ಬೇಡ. ಅವರಿಗೆ ಅಭಿಮಾನಿಗಳು ಇದ್ದಾರೆ. ಅವರದ್ದೇ ಕುಟುಂಬ ಇದೆ. ನಾನು ಮಾತನಾಡುವುದರಿಂದ ಅವರಿಗೆ ನೋವಾಗುವುದು ಬೇಡ. ಮತ್ತೊಂದು ಕಡೆ ಮಗನನ್ನು ಕಳೆದುಕೊಂಡಿರುವ ಕುಟುಂಬಕ್ಕೂ ನೋವು ಆಗೋದು ಬೇಡ ಎಂದು ಹೇಳಿದ್ದಾರೆ ಸುದೀಪ್.
ನಾನು ಮತ್ತು ದರ್ಶನ್ ಮೊದಲಿನಂತೆ ಮಾತನಾಡಿಕೊಳ್ಳುತ್ತಿದ್ದರೆ ಖಂಡಿತ ಈ ಸಂದರ್ಭದಲ್ಲಿ ಅವರನ್ನು ಜೈಲಿನಲ್ಲಿ ಭೇಟಿ ಮಾಡಿ ಬರುತ್ತಿದ್ದೆ ಎಂದಿರುವ ಸುದೀಪ್, ಹೊಸಪೇಟೆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಹೊಸಪೇಟೆಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ದರ್ಶನ್ ಅವರಿಗೆ ತೊಂದರೆ ಆದಾಗ ನಾನು ಬಹಿರಂಗವಾಗಿ ಪತ್ರ ಬರೆದು ನನ್ನ ಅಭಿಪ್ರಾಯ ಹಂಚಿಕೊಂಡೆ. ಅವತ್ತು ನಾನು ಪತ್ರ ಬರೆದಿದ್ದು ಯಾರನ್ನೋ ಮೆಚ್ಚಿಸಲು ಅಲ್ಲ. ಅಂತಹ ಘಟನೆ ಯಾವುದೇ ಕಲಾವಿದರಿಗೂ ಆಗಬಾರದು. ಕೋಪವನ್ನು ಸಾರ್ವಜನಿಕವಾಗಿ ಆ ರೀತಿ ತೋರಿಸಿಕೊಳ್ಳಬಾರದು. ಅದು ನಮ್ಮ ಸಂಸ್ಕೃತಿ ಅಲ್ಲ ಎಂದು ಹೇಳಿದ್ದೆ.
ಅದೆಲ್ಲವೂ ನನ್ನ ಮನಸ್ಸಿನಿಂದ ಬಂದ ಮಾತುಗಳು. ದರ್ಶನ್ ಅವರ ಜತೆಗೆ ನಾನು ಇದ್ದಿದ್ದರೆ ಇಂಥ ಘಟನೆ ಆಗುತ್ತಾ ಇರಲಿಲ್ಲ ಅನ್ನೋದು ತಪ್ಪು. ನಾನು ಯಾರನ್ನೂ ತಿದ್ದುವಷ್ಟು ದೊಡ್ಡ ಮನುಷ್ಯ ಅಲ್ಲ. ಸ್ನೇಹಿತರಾಗಿದ್ದಾಗ ಕೂತು ಮಾತನಾಡುತ್ತಿದ್ವಿ ಅಷ್ಟೆ ಎಂದಿದ್ದಾರೆ.
ಇದೇ ವೇಳೆ ನಟ ಸುದೀಪ್ ಅವರು ಇತ್ತೀಚೆಗೆ ಸಿನಿಮಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ‘ನೋಡದೇ ಇದ್ದವರನ್ನು ಬಿಡಿ, ನೋಡುವವರಿಗಾಗಿ ಸಿನಿಮಾ ಮಾಡಿ’ ಎಂದು ಕೇಳಿಕೊಂಡಿದ್ದರು. ಅದು ದರ್ಶನ್ ಅಭಿಮಾನಿಗಳಿಗೆ ಕೊಟ್ಟ ಟಾಂಟ್ ಎಂದೇ ಸುದ್ದಿಯಾಗಿತ್ತು. ಅದಕ್ಕೂ ಸ್ಪಷ್ಟನೆ ನೀಡಿದ ಸುದೀಪ್ ನಾನು ಯಾರಿಗೂ ಟಾಂಟ್ ಕೊಡುವವನಲ್ಲ. ಹೇಳಿದರೆ ನೇರವಾಗಿ ಹೇಳುತ್ತೇನೆ. ಕನ್ನಡ ಇಂಡಸ್ಟ್ರಿಯಲ್ಲಿ ನಿಂತು ಕನ್ನಡ ಸಿನಿಮಾ ನೋಡಿ ಎಂದು ಭಿಕ್ಷೆ ಬೇಡೋದು ತಪ್ಪು. ಬೇರೆಯವರಿಗೆ ಹೇಗೆ ಕಾಣುತ್ತೇವೆ ಯೋಚಿಸಿ. ಕರ್ನಾಟಕದಲ್ಲಿ ಕೇವಲ 30 ಲಕ್ಷ ಜನರು ಮಾತ್ರ ಸಿನಿಮಾ ನೋಡುತ್ತಿದ್ದಾರೆ. ಆ ಲೆಕ್ಕವೇ ದೊಡ್ಡ ಆಗುತ್ತದೆ. ಗತ್ತು ಬಿಟ್ಟುಕೊಡಬೇಡಿ ಎಂದು ಹೇಳಿದ್ದಾರೆ.
ದರ್ಶನ್ ಅಭಿಮಾನಿಗಳಿಗ ಬುದ್ದಿ ಹೇಳೋಕೆ ನಾನ್ಯಾರು..? ನಮ್ಮ ಫ್ಯಾನ್ಸ್ ತಪ್ಪು ಮಾಡಿದರೆ ಕರೆದು ಹೇಳಬಹುದು. ಬೇರೆಯವರ ಬಗ್ಗೆ ನಮಗೆ ಗೊತ್ತಿಲ್ಲ. ಆ ಅಧಿಕಾರವೂ ಬೇಡ ಎಂದು ಅಭಿಪ್ರಾಯ ಪಟ್ಟಿದ್ದಾರೆ.



