“ಯಲಹಂಕ ದೊಡ್ಡದೇನಲ್ಲ ನನಗೆ. ಬಾರಲೇ ಅಲ್ಲಿಗೆ ಬರೀನಿ ಬಾ. ಯಾವನ್ ನನ್ನತ್ರ ಗಾಂಚಾಲಿ, ಗೀಂಚಾಲಿ ನಡೆಯಲ್ಲ.ಎಲ್ಲದಕ್ಕೂ ರೆಡಿಯಾಗಿ ಬಂದಿರ್ತೀವಿ. ಸತ್ತೋಗಿರೋ ಪ್ರಾಪರ್ಟಿ ಉಳಿಸಿದ್ದೀನಿ. ಏ ಕೇಳಮ್ಮಾ ಸುಮ್ಮನೇ ಇಲ್ಲಿ”ಇದು ಸಿದ್ದರಾಮಯ್ಯ (CM siddaramaiah) ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿ.ಸುಧಾಕರ್ (Minister D Sudhakar) ಅವರು ಮಹಿಳೆಗೆ ಅವಾಜ್ ಹಾಕಿರುವ ರೀತಿ. ಸಚಿವರ ವಿರುದ್ಧ ಜಾತಿನಿಂದನೆ ಕೇಸ್ (Atrocity case) ಕೂಡಾ ದಾಖಲಾಗಿದೆ.
ಯಲಹಂಕ ನಿವಾಸಿ ಸುಬ್ಬಮ್ಮ ಎಂಬುವವರು ನೀಡಿದ ದೂರಿನ ಮೇರೆಗೆ ಸೆವೆನ್ ಹಿಲ್ಸ್ ಡೆವಲಪರ್ಸ್ ಮತ್ತು ಟ್ರೇಡರ್ಸ್ (Seven hills developers and traders) ಪಾಲುದಾರರಾದ ಸಚಿವ ಡಿ.ಸುಧಾಕರ್, ಶ್ರೀನಿವಾಸ್, ಭಾಗ್ಯಮ್ಮ ಎಂಬುವವರ ವಿರುದ್ಧ ಜಾತಿ ನಿಂದನೆ ಪ್ರಕರಣ (Atrocity case) ದಾಖಲಿಸಲಾಗಿದೆ. ಪ್ರಕರಣ ದಾಖಲಾದ ಬೆನ್ನಲ್ಲೇ ಎಸಿಪಿ ಸುಧಾಕರ್ಗೆ ಕರೆ ಮಾಡಿದ್ದು ದಾಖಲಾತಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.
ಸೆವೆನ್ ಹಿಲ್ಸ್ ಡೆವಲಪರ್ಸ್ ಮತ್ತು ಟ್ರೇಡರ್ಸ್ನವರು ಯಲಹಂಕ ಗ್ರಾಮದ ಸರ್ವೆ ನಂಬರ್ 108/1ರ 1.30 ಎಕರೆ ಜಮೀನನ್ನು ಮೋಸದಿಂದ ಕಬಳಿಕೆ ಮಾಡಿದ್ದಾರೆ. ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿರುವಾಗ ಗುಂಪು ಕಟ್ಟಿಕೊಂಡು ಬಂದು ದೌರ್ಜನ್ಯ ಎಸೆಗಿದ್ದಾರೆ. ಮಹಿಳೆಯರನ್ನು ಕರೆದುಕೊಂಡು ಬಂದು ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆದರೆ ಸರ್ಕಾರದ ಹಲವು ಸಚಿವರು ಬಹಿರಂಗವಾಗಿಯೇ ಆರೋಪಿ ಸಚಿವ ಡಿ.ಸುಧಾಕರ್ ಬೆಂಬಲಕ್ಕೆ ನಿಂತಿದ್ದಾರೆ. ಸುಧಾಕರ್ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂಬ ಹೇಳಿಕೆಯನ್ನು ನೀಡಿದ್ದಾರೆ.
ಸಚಿವ ಡಿ. ಸುಧಾಕರ್ (D Sudhakar) ವಿರುದ್ಧ ಸುಳ್ಳು ಪ್ರಕರಣ ದಾಖಲು ಮಾಡಲಾಗಿದ್ದು, ಅವರು ರಾಜೀನಾಮೆ ಕೊಡುವ ಅಗತ್ಯವಿಲ್ಲ. ಸುಧಾಕರ್ ವಿರುದ್ಧ ಸಿವಿಲ್ ಪ್ರಕರಣ ದಾಖಲಾಗಿದೆ. ಆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಅದೊಂದು ಸುಳ್ಳು ಪ್ರಕರಣ ಎಂದು ತಿಳಿದು ಬಂದಿದೆ. ಸುಧಾಕರ್ ಅವರು ಖರೀದಿ ಮಾಡಿದ್ದ ಜಮೀನನ್ನು ಬೇರೆಯವರು ಒತ್ತುವರಿ ಮಾಡಿಕೊಂಡಿದ್ದರು. ಒತ್ತುವರಿ ತೆರವು ಮಾಡಿ, ಜಾಗ ಭದ್ರ ಮಾಡಿಕೊಳ್ಳುವ ಕೆಲಸ ಮಾಡಿದ್ದಾರೆ ಅಷ್ಟೇ ಎಂದು ಹೇಳಿಕೆ ನೀಡಿರುವುದು (DCM DK Shivakumar) ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್.
ಪೊಲೀಸರು ಎಫ್ಐಆರ್ ಹಾಕಿದ ಕೂಡಲೆ ಯಾರೂ ಅಪರಾಧಿಯಾಗಲ್ಲ. ದೂರಿನಲ್ಲಿ ಹುರುಳಿದ್ದರೆ ಪೊಲೀಸರು ತನಿಖೆ ನಡೆಸಿ ದೋಷಾರೋಪಪಟ್ಟಿ ಸಲ್ಲಿಸುತ್ತಾರೆ. ತಪ್ಪಿದ್ದರೆ ಶಿಕ್ಷೆಯಾಗುತ್ತದೆ ಎಂದು ಹೇಳಿಕೆ ನೀಡಿರುವುದು ಸಚಿವ ರಾಮಲಿಂಗಾ ರೆಡ್ಡಿ (Ramalinga reddy) . ಸ್ವತಃ ಮುಖ್ಯಮಂತ್ರಿ ಕೂಡಾ ಪರಿಶೀಲಿಸುತ್ತೇನೆ. ಕರೆದು ಮಾತನಾಡುತ್ತೇನೆ ಎಂದಿದ್ದಾರೆ.
ಈ ನಡುವೆ ಸುಧಾಕರ್ ಅವರು ಬ್ರಾಹ್ಮಣ ಸಮುದಾಯದವರ (Bramhan Comunity) ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಕುರಿತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಕ್ರೋಶ ವ್ಯಕ್ತಪಡಿಸಿದೆ. ಡಿ. ಸುಧಾಕರ್ ಅವರು ಕೂಡಲೆ ಬ್ರಾಹ್ಮಣ ಸಮುದಾಯದ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.



