ಮುಡಾ ಹಗರಣ ಮತ್ತು ವಾಲ್ಮೀಕಿ ಹಗರಣ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದರೆ, ಕಾಂಗ್ರೆಸ್ ಹೈಕಮಾಂಡ್ ಸಿದ್ಧರಾಮಯ್ಯ ಬೆನ್ನಿಗೆ ನಿಂತಿದೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್ ಸೇರಿದಂತೆ ಸಂಪೂರ್ಣ ಸಂಪುಟ ಹಾಗೂ ಎಲ್ಲ ಶಾಸಕರೂ ಸಿದ್ಧರಾಮಯ್ಯ ಅವರ ಬೆಂಬಲಕ್ಕೆ ನಿಂತಿದ್ದಾರೆ. ಹಲವು ಕನ್ನಡ ಪರ ಸಂಘಟನೆಗಳು ವಾಟಾಳ್ ನಾಗರಾಜ್, ಸಾರಾ ಗೋವಿಂದು, ಮರುಳ ಸಿದ್ಧಪ್ಪ, ದೇವನೂರು ಮಹಾದೇವ ಮೊದಲಾದ ಖ್ಯಾತ ಸಾಹಿತಿಗಳೂ ಸಿದ್ಧರಾಮಯ್ಯ ಅವರನ್ನು ಬೆಂಬಲಿಸಿದ್ದಾರೆ. ಇದೀಗ ಸ್ವಾಮೀಜಿಗಳ ಸರದಿ.
- ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಜಿಯವರು ಕನಕ ಪೀಠ ಕಾಗಿನೆಲೆ
- ಶ್ರೀ ಶಾಂತವೀರ ಮಹಾಸ್ವಾಮಿಗಳು ಶ್ರೀ ಜಗದ್ಗುರು ಕುಂಚಿಟಿಗ ಮಾಸಂಸ್ಥಾನ ಮಠ ಹೊಸದುರ್ಗ
- ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಗಳು ಭೋವಿ ಗುರುಪೀಠ ಚಿತ್ರದುರ್ಗ
- ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಮಹಾಸ್ವಾಮಿಗಳು ಮಾದರ ಚನ್ನಯ ಗುರುಪೀಠ ಚಿತ್ರದುರ್ಗ
- ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ಭಗಿರಥ ಪೀಠ ಮಧುರೆ
- ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು ಕನಕ ಗುರುಪೀಠ ಹೊಸದುರ್ಗ
- ಶ್ರೀ ರೇಣುಕಾನಂದ ಸ್ವಾಮಿಗಳು ನಾರಾಯಣ ಗುರುಪೀಠ ಶಿವಮೊಗ್ಗ
- ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳು ಮಡಿವಾಳ ಗುರುಪೀಠ ಚಿತ್ರದುರ್ಗ
- ಶ್ರೀ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮಿಗಳು ಹಡಪದ ಅಪ್ಪಣ್ಣ ಗುರುಪೀಠ ತಂಗಡಗಿ
- ಶ್ರೀ ಶಾಂತಮ್ಮಯ್ಯ ಸ್ವಾಮೀಜಿಗಳು ಸರೂರು ವಿಜಯನಗರ
ಇದ್ದ ಸ್ವಾಮೀಜಿಗಳ ನಿಯೋಗ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ, ಅವರಿಗೆ ಬೆಂಬಲ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರದ ಮತ್ತು ರಾಜಭವನದ ಷಡ್ಯಂತ್ರ ಮಾಡುತ್ತಿರುವುದಾಗಿ ತೀವ್ರವಾಗಿ ಖಂಡಿಸಿದ ಸ್ವಾಮೀಜಿಗಳು ಈ ಷಡ್ಯಂತ್ರದ ವಿರುದ್ಧ ಒಕ್ಕೊರಲಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ನಿಂತು ಹೋರಾಟ ನಡೆಸುವುದಾಗಿ ಭರವಸೆ ನೀಡಿದರು. ಕೃತಕವಾಗಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ತೀವ್ರವಾಗಿ ವಿರೋಧಿಸಿದರು.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ, ಎಲ್ಲ ಸ್ವಾಮೀಜಿಗಳಿಗೆ ಧನ್ಯವಾದ ಸಮರ್ಪಿಸಿದ್ದಾರೆ. ಮುಡಾ ವಿಚಾರದಲ್ಲಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿ, ನನ್ನನ್ನು ರಾಜಕೀಯವಾಗಿ ಮುಗಿಸಲು ಹೊರಟಿರುವ ಎದುರಾಳಿಗಳ ಕುಟಿಲ ಕಾರಸ್ಥಾನವನ್ನು ಅರ್ಥಮಾಡಿಕೊಂಡು ನೈತಿಕವಾಗಿ ನನ್ನ ಬೆಂಬಲಕ್ಕೆ ನಿಂತಿರುವ ಮೇಲ್ನೋಟಕ್ಕೆ ಇದು ರಾಜಕೀಯ ಸಂಘರ್ಷವೆನಿಸಿದರೂ ಆಂತರ್ಯದಲ್ಲಿ ಹಿಂದುಳಿದ ಜಾತಿಗೆ ಸೇರಿದ ನಾಯಕನೊಬ್ಬನ ಏಳಿಗೆ ಸಹಿಸದ ಪಟ್ಟಭದ್ರರು ಕುತಂತ್ರದಿಂದ ಹೆಣೆದ ಷಡ್ಯಂತ್ರ ಎಂಬುದು ಸೂರ್ಯ ಚಂದ್ರರಷ್ಟೇ ಸತ್ಯ ಎಂದು ಹೇಳಿದ್ದಾರೆ.
ಬುದ್ಧ, ಬಸವ, ಬಾಬಾ ಸಾಹೇಬ್, ಕನಕದಾಸರು, ನಾರಾಯಣ ಗುರುಗಳ ಆಶಯದಂತೆ ಸಮಸಮಾಜದ ಸ್ಥಾಪನೆಗಾಗಿ, ಶೋಷಿತ, ಅವಕಾಶ ವಂಚಿತ, ದೀನ ದಲಿತ, ಬಡಜನರ ಕಲ್ಯಾಣಕ್ಕಾಗಿ ದುಡಿಯುತ್ತಿರುವ ನಾನು ಪಟ್ಟಭದ್ರ ಹಿತಾಸಕ್ತಿಗಳಿಗೆ ಕಳೆದ 40 ವರ್ಷಗಳಿಂದ ಬಹುದೊಡ್ಡ ಸವಾಲಾಗಿದ್ದೇನೆ. ನನ್ನನ್ನು ಮೂಲೆಗೆ ಸರಿಸುವ ಮೂಲಕ ಸಮಾಜದ ಬಹುಸಂಖ್ಯಾತ ಜನರ ಧ್ವನಿಯನ್ನು ಅಡಗಿಸುವ ಪ್ರಯತ್ನ ಇಂದು ನಡೆಯುತ್ತಿದೆ. ಬಹಳಷ್ಟು ಮಂದಿ ಪೂಜ್ಯ ಸ್ವಾಮೀಜಿಗಳು ಇದನ್ನು ಅರಿತು ನನ್ನ ಬೆಂಬಲಕ್ಕೆ ನಿಂತು, ಇಡೀ ಸಮಾಜಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಸತ್ಯ ನನ್ನ ಜತೆ ಇದೆ, ನಾನು ಸತ್ಯದ ಜತೆ ನಾನಿದ್ದೇನೆ. “ಸತ್ಯಮೇವ ಜಯತೇ” ಎಂದು ತಿಳಿಸಿದ್ದಾರೆ.
ಈ ಹಿಂದೆ ಯಡಿಯೂರಪ್ಪ ರಾಜೀನಾಮೆ ನೀಡುವ ಸಮಯದಲ್ಲಿ ಲಿಂಗಾಯತ ಸ್ವಾಮೀಜಿಗಳು ಬಹಿರಂಗವಾಗಿ ಬೆಂಬಲಸಿದ್ದರು. ಡಿವಿ ಸದಾನಂದ ಗೌಡ ಅವರಿಗೆ ಒಕ್ಕಲಿಗ ಸ್ವಾಮೀಜಿಗಳ ಬೆಂಬಲ ಸಿಕ್ಕಿತ್ತು. ಇನ್ನು ಕುಮಾರಸ್ವಾಮಿ ಅವರ ಪರವಾಗಿ ಒಕ್ಕಲಿಗ, ಶ್ರೀರಾಮುಲು ಅವರ ಪರವಾಗಿ ನಾಯಕ ಸಮುದಾಯದ ಸ್ವಾಮಿಗಳು ಬ್ಯಾಟಿಂಗ್ ಮಾಡಿದ್ದರು. ಇತ್ತೀಚೆಗೆ ಲಿಂಗಾಯತ ಸ್ವಾಮೀಜಿಗಳ ನಡುವಿನ ತಿಕ್ಕಾಟದ ಫಲಶ್ರುತಿಯಾಗಿ ಸ್ವಾಮೀಜಿಗಳು ಹಲವು ನಾಯಕರ ಬೆಂಬಲಿಗರಾಗಿ ಒಡೆದು ಹೋಗಿದ್ದಾರೆ. ಆದರೆ, ಈ ಪರಿಸ್ಥಿತಿ ಇತರೆ ಸಮುದಾಯದ ಸ್ವಾಮೀಜಿಗಳಲ್ಲಿ ಇಲ್ಲ.



