ಒಂದ್ ಕೋಟಿ ಸಿಕ್ ಬಿಟ್ರೆ ಸಾಕು.. ಆಮೇಲೆ ಲೈಫು ಸೆಟ್ಲ್ ಆಗಬಹುದು ಎನ್ನುವವರು ನಮ್ಮ ಜೊತೆಯಲ್ಲೇ ಇರ್ತಾರೆ. ಅಣ್ಣ, ತಮ್ಮ, ಮಗ.. ಹೀಗೆ ಎಲ್ಲರಲ್ಲೂ ಒಂದೇ ಥಿಂಕಿಂಗು. ಒಂದ್ ಕೋಟಿ ಸಿಕ್ ಬಿಟ್ರೆ.. ಅಂತಹ ಎಲ್ಲರೊಳಗೆ ಇರುವ ಕೋಟಿಯಂತಹ ಕೋಟಿ ಮನಸ್ಸಿನ ವ್ಯಕ್ತಿಯ ಕಥೆಯೇ ಕೋಟಿ.
ಡಾಲಿ ಧನಂಜಯ ಹೀರೋ ಆಗಿರುವ ಚಿತ್ರಕ್ಕೆ ಪರಮ್ ಡೈರೆಕ್ಟರ್. ಕಲರ್ಸ್ ಕನ್ನಡ ಟಿವಿಯ ಮುಖ್ಯಸ್ಥರಾಗಿದ್ದ ಪರಮ್, ಈಗ ಜಿಯೋ ಸ್ಟುಡಿಯೋಸ್ʻನ ಕನ್ನಡ ಮುಖ್ಯಸ್ಥರು. ಮೋಕ್ಷ ಕುಶಾಲ್ ಅನ್ನೋ ನಾಯಕಿಯನ್ನು ಪರಿಚಯಿಸುತ್ತಿರುವ ಪರಮ್, ಕೋಟಿಯನ್ನು ಜೂನ್ 14ರಂದು ರಿಲೀಸ್ ಮಾಡುವ ಪ್ಲಾನ್ ಮಾಡಿದ್ಧಾರೆ.
ಮೋಕ್ಷ ಕುಶಾಲ್ ಅವರಿಗೆ ಇದು ಮೊದಲ ಸಿನಿಮಾ. ಆದರೆ ಕ್ಯಾಮೆರಾ ಹೊಸದೇನಲ್ಲ. ಹಲವು ಜಾಹೀರಾತುಗಳಲ್ಲಿ ನಟಿಸಿರುವ ಕೊಡಗಿನ ಹುಡುಗಿ ಮೋಕ್ಷಾ.
ಕೋಟಿ ಟೀಸರ್ ನೋಡಿದವರಿಗೆ ಇದೊಂದು ಥ್ರಿಲ್ಲರ್ ಎಂಬ ಅಂಶ ಗೊತ್ತಾಗುತ್ತದೆ. ಥ್ರಿಲ್ಲರ್ ಅಷ್ಟೇ ಅಲ್ಲ, ಅಲ್ಲೊಂದು ಫಿಲಾಸಫಿಯೂ ಇದೆ ಎನ್ನುವ ಪರಮ್, ಟೀಸರ್ʻನ್ನು ಕುತೂಹಲ ಹುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.
ಕೆಟ್ಟ ಕೆಲಸ ಮಾಡದೇ ಕೋಟಿ ದುಡಿಯುವ ಕನಸು ಕಟ್ಟಿರುವ ನಾಯಕ, ಮತ್ತೇಕೆ ಕೆಟ್ಟ ಕೆಲಸ ಮಾಡುತ್ತಾನೆ.. ಕೋಟಿಗಾಗಿ ಕೊಲೆ ಮಾಡುವ ಸುಪಾರಿ ತಗೊಳ್ತಾನಾ.. ಜೀವನದಲ್ಲೊಂದು ಧ್ಯೇಯ ಇಟ್ಟುಕೊಂಡಿದ್ದವನು ಆ ಕೆಲಸಕ್ಕೇಕೆ ಮುಂದಾದ.. ಹೀಗೆ ಹತ್ತು ಹಲವಾರು ಪ್ರಶ್ನೆಗಳು ಮೂಡುತ್ತವೆ. ಆ ಪ್ರಶ್ನೆಗಳು ಟೀಸರ್ ನೋಡಿದವರಲ್ಲಿ ಮೂಡಿದರೆ.. ನಿರ್ಮಾಪಕರೂ ಆಗಿರುವ ಜೀ ಸ್ಟುಡಿಯೋಸ್ʻನ ಜ್ಯೋತಿ ದೇಶಪಾಂಡೆ ಗೆದ್ದ ಹಾಗೆ.
ಧನಂಜಯ್, ಮೋಕ್ಷ ಹೀರೋ ಹೀರೋಯಿನ್ ಆಗಿದ್ದರೆ, ರಂಗಾಯಣ ರಘು, ರಮೇಶ್ ಇಂದಿರಾ, ತಾರಾ, ಪೃಥ್ವಿ ಶಾಮನೂರು.. ಮೊದಲಾದವರೆಲ್ಲ ನಟಿಸಿದ್ದಾರೆ. ವಾಸುಕಿ ವೈಭವ್ ಸಂಗೀತ ನೀಡಿದ್ದರೆ, ಮೂರು ಹಾಡಿಗೆ ಸಾಹಿತ್ಯ ನೀಡಿರುವುದು ಯೋಗರಾಜ್ ಭಟ್. ಇನ್ನೆರಡು ಹಾಡುಗಳಿಗೆ ಖುದ್ದು ವಾಸುಕಿ ವೈಭವ್ ಸಾಹಿತ್ಯ ಬರೆದುಕೊಟ್ಟಿದ್ದಾರೆ. ಹಾಡುಗಳೇ ಬೇರೆ. ಹಿನ್ನೆಲೆ ಸಂಗೀತವೇ ಬೇರೆ. ಹಿನ್ನೆಲೆ ಸಂಗೀತ ನೊಬಿನ್ ಪೌಲ್ ಅವರದ್ದು.



