ಕೆಲವು ಪಾತ್ರಗಳಿರುತ್ತವೆ. ಕಲಾವಿದರಾದವರು ಅಂತಹ ಪಾತ್ರ ಮಾಡುವಾಗ ಇನ್ನಿಲ್ಲದ ಎಚ್ಚರಿಕೆ ವಹಿಸುತ್ತಾರೆ. ಡಾ.ರಾಜ್ ಕುಮಾರ್ ರಾಘವೇಂದ್ರನ ಪಾತ್ರ ಮಾಡುವಾಗ ಹಾಗೂ ಬೇರೆ ಬೇರೆ ಭಕ್ತ, ದೇವರ ಪಾತ್ರಗಳನ್ನು ಮಾಡುವಾಗ ಕೆಲವೊಂದು ನಿಯಮಗಳನ್ನು ತಪ್ಪದೆ ಪಾಲಿಸುತ್ತಿದ್ದರು. ಅವರಷ್ಟೇ ಅಲ್ಲ, ಇತ್ತೀಚಿನ ಉದಾಹರಣೆ ಹೇಳಬೇಕೆಂದರೆ ರಿಷಬ್ ಶೆಟ್ಟಿ ಕಾಂತಾರ ಚಿತ್ರ ಮಾಡುವಾಗ ಅವರಷ್ಟೇ ಅಲ್ಲ, ಇಡೀ ಚಿತ್ರತಂಡವೇ ಅಂಥಾದ್ದೊಂದು ಶಿಸ್ತು ಪಾಲಿಸಿತ್ತು. ಕೇವಲ ಸಿನಿಮಾ ನಟರು ಮಾತ್ರ ಅಲ್ಲ, ಪ್ರತಿಯೊಬ್ಬ ಕಲಾವಿದರೂ ಕೆಲವು ಪಾತ್ರ ಮಾಡುವಾಗ ಮುಂಜಾಗ್ರತೆ ವಹಿಸುತ್ತಾರೆ.
ಹಳ್ಳಿಗಳಲ್ಲಿಯೂ ನಾಟಕಗಳು ನಡೆಯುತ್ತವೆ. ವಿಶೇಷ ಎಂದರೆ ರಾಮಾಯಣ, ಕುರುಕ್ಷೇತ್ರ, ಸತ್ಯ ಹರಿಶ್ಚಂದ್ರ, ಸತ್ಯವ್ರತ, ಶನಿ ಪ್ರಭಾವ.. ಇಂತಹ ಪೌರಾಣಿಕ ಕಥೆಗಳೇ ಹೆಚ್ಚು. ಆ ನಾಟಕಗಳಲ್ಲಿ ನಟಿಸುವವರು ವೃತ್ತಿ ರಂಗಭೂಮಿ ಕಲಾವಿದರೂ ಅಲ್ಲ. ಹಳ್ಳಿಗಳಲ್ಲಿಯೇ ಪ್ರತಿಭೆಗಳನ್ನು ಹುಡುಕುತ್ತಾರೆ. ನಾಟಕಕ್ಕೆ ಹೆಚ್ಚು ದೇಣಿಗೆ ಕೊಟ್ಟವರಿಗೆ ದೊಡ್ಡ ದೊಡ್ಡ ಪಾತ್ರಗಳು ಸಿಗುತ್ತವೆ. ಆದರೆ, ಕೆಲವು ಪಾತ್ರಗಳು ಅಷ್ಟೇ ಬದ್ಧತೆಯನ್ನು ಬೇಡುತ್ತವೆ.
ಉದಾಹರಣೆ ರಾಮಾಯಣ ಮಾಡುವಾಗ ಶ್ರೀರಾಮ, ಹನುಮಂತನ ಪಾತ್ರ, ಶನಿ ಪ್ರಭಾವ ಮಾಡುವಾಗ ಶನಿ ದೇವರ ಪಾತ್ರ, ಗಂಗೆ ಗೌರಿ ನಾಟಕ ಮಾಡುವವರು ಶಿವನ ಪಾತ್ರ ಸಿಕ್ಕರೆ, ಮಹಾಭಾರತದ ನಾಟಕ ಮಾಡುವಾಗ ಶ್ರೀಕೃಷ್ಣನ ಪಾತ್ರ ಮಾಡುವವರು, ಶನಿ ಪ್ರಭಾವದಲ್ಲಿ ಶನಿದೇವರ ಪಾತ್ರ ಮಾಡುವುದು.. ಇತ್ಯಾದಿ ಪಾತ್ರ ಮಾಡುವವರು ಕಟ್ಟುನಿಟ್ಟಿನ ವ್ರತವನ್ನೂ ಪಾಲಿಸ್ತಾರೆ. ಎಂತಹ ಕುಡುಕ, ಜೂಜುಕೋರ, ದುರುಳನೇ ಆಗಿದ್ದರೂ.. ಒಮ್ಮೆ ಪಾತ್ರದ ಪ್ರಾಕ್ಟೀಸ್ ಶುರುವಾದರೆ ಎಲ್ಲವನ್ನೂ ಬಿಟ್ಟು ಬಿಡುತ್ತಾರೆ. ಮಾಂಸಾಹಾರವನ್ನೂ ಮುಟ್ಟೋದಿಲ್ಲ. ಕುಡಿತವನ್ನು ಹತ್ತಿರಕ್ಕೆ ತೆಗೆದುಕೊಳ್ಳಲ್ಲ. ಶನಿದೇವರ ಪಾತ್ರ ಮಾಡಿದವರಂತೂ.. ಎಷ್ಟೋ ಕಡೆ ಪತ್ನಿಯಿಂದಲೂ ದೂರ ಇದ್ದು, ನಾಟಕ ಮುಗಿಯುವವರೆಗೆ ಕಠಿಣ ಬ್ರಹ್ಮಚರ್ಯ ಪಾಲನೆ ಮಾಡಿ, ನಾಟಕ ಮುಗಿದ ಮೇಲೆ ಶನಿ ದೇವರ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿದ ಮೇಲೆಯೇ ಮತ್ತೆ ಸಂಸಾರಿಯಾಗುವುದು. ಅಷ್ಟು ಕಟ್ಟುನಿಟ್ಟಾಗಿ ವ್ರತ ಪಾಲಿಸ್ತಾರೆ.
ಆದರೆ, ಕೆಲವು ಪಾತ್ರಗಳಿರುತ್ತವೆ. ರಾವಣ, ದುರ್ಯೋಧನ, ಕೀಚಕನ ಪಾತ್ರಗಳು. ಅವು ಹಾಗಲ್ಲ. ನಟ ದರ್ಶನ್ ಪ್ರಕರಣದಲ್ಲೂ ಅಂತಹುದ್ದೇ ನಡೆದಿದೆಯಾ.. ಹೀಗೊಂದು ಪ್ರಶ್ನೆ ಈಗ ಉದ್ಭವವಾಗಿದೆ.
ಮಂಡ್ಯ ತಾಲೂಕಿನ ಉಪ್ಪಾರಕನಹಳ್ಳಿ ಗ್ರಾಮದ ಹಾಗೂ ಸುತ್ತಮುತ್ತಿನ ಗ್ರಾಮಗಳಲ್ಲಿ ನಾಟಕ ಮಾಡಿದ ಜನರ ಪ್ರಕಾರ ದರ್ಶನ್ ದುರ್ಯೋಧನನ ಪಾತ್ರ ಮಾಡಿದ್ದೇ ಇದಕ್ಕೆಲ್ಲ ಕಾರಣ ಎನ್ನುವ ನಂಬಿಕೆಯನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.
ನಾನೂ ನಾಟಕದಲ್ಲಿ ದುರ್ಯೋಧನ ಪಾತ್ರ ಮಾಡಿದ್ದೆ. ದುರ್ಯೋಧನನ ಪಾತ್ರ ನಿರ್ವಹಿಸಿದ ಬಳಿಕ ನಾನು, ನನ್ನದು, ನನ್ನ ಮುಂದೆ ಯಾರು, ನಾನೇ ಎಲ್ಲಾ ಎಂಬ ದುರಹಂಕರಾದ ಮನೋಭಾವ ಮೂಡಿತ್ತು. ಪಾತ್ರದ ಮನೋಭಾವ ನಮಗೂ ಬಂದಿತ್ತು. ಅನೇಕ ಸಂಕಷ್ಟಗಳನ್ನೆದುರುಸಿದೆ ಎಂದು ಹಲವರು ಹೇಳಿಕೊಂಡಿದ್ದಾರೆ.
ನಾಟಕ ಮಾಡುವವರು ಪಾತ್ರ ಮಾಡುವಾಗ ವಿಭೂತಿ ಧರಿಸುತ್ತಾರಂತೆ. ಆದರೆ ದುರ್ಯೋಧನನ ಪಾತ್ರ ಮಾಡುವಾಗ ಹಣೆಗೆ ಸರ್ಪ ತಿಲಕ ಇಡುತ್ತಾರಂತೆ. ಆ ಸರ್ಪ ತಿಲಕವೇ ನಮ್ಮೊಳಗೆ ಅಹಂಕಾರ, ಅಸೂಯೆ ಉದ್ಭವವಾಗುವಂತೆ ಮಾಡುತ್ತದೆ ಎಂದಿರುವ ಗ್ರಾಮೀಣ ಕಲಾವಿದರು, ದರ್ಶನ್ ಅವರಿಗೂ ಹೀಗಾಗಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದಕ್ಕೆಲ್ಲ ಪರಿಹಾರವೂ ಇದೆಯಂತೆ. ಅಂದರೆ ಮತ್ತೆ ಸೌಮ್ಯಗುಣದ ಪಾತ್ರಗಳಲ್ಲಿ ನಟಿಸುವುದು. ದುರ್ಯೋಧನನ ಪಾತ್ರ ಮಾಡುತ್ತಿದ್ದ ನಾನು ಆಮೇಲೆ ಸಂಕಷ್ಟ ಎದುರಿಸಲಾಗದೆ ಕಾಡಿಬೇಡಿ ಧರ್ಮರಾಯನ ಪಾತ್ರ ಮಾಡಿದೆ. ಅದಾದ ಮೇಲೆ ಒಂದಷ್ಟು ಕಷ್ಟಗಳು ದೂರವಾದವು ಎಂದಿದ್ದಾರೆ. ದರ್ಶನ್ ಅವರಿಗೆ ಜೈಲಿನಿಂದ ಬಿಡುಗಡೆಯಾಗಿ ಬಂದ ಮೇಲೆ ಯಾವುದಾದರೂ ಚಿತ್ರದಲ್ಲಿ ಯಾವುದಾದರೂ ಪಾಂಡವರ ಅಥವಾ ಶ್ರೀಕೃಷ್ಣನ ಪಾತ್ರ ಮಾಡಲಿ, ಒಳ್ಳೆಯದಾಗುತ್ತದೆ ಎಂದು ಸಲಹೆಯನ್ನೂ ಕೊಟ್ಟಿದ್ದಾರೆ.
ಒಟ್ಟಾರೆ ದುರ್ಯೋಧನನ ಪಾತ್ರ ಮಾಡಿದವರಿಗೆ ಸಂಕಷ್ಟ ಎದುರಾಗುತ್ತಿದ್ದು, ನಟ ದರ್ಶನ್ ಗೂ ಸಹ ದುರ್ಯೋಧನನ ಪಾತ್ರದಲ್ಲಿ ಅಭಿನಯಿಸಿದ್ದಕ್ಕೆ ಸಮಸ್ಯೆ ಎದುರಾಗಿದೆ ಎನ್ನುವುದು ಇವರ ನಂಬಿಕೆ. ದುರ್ಯೋಧನನ ಶಾಪದಿಂದ ವಿಮುಕ್ತರಾಗಬೇಕೆಂದರೆ.. ಮೊದಲಿಗೆ ದರ್ಶನ್ ಜೈಲಿಂದ ಹೊರ ಬಂದ ಮೇಲೆ ಸಾತ್ವಿಕ, ದೇವರು.. ಇತ್ಯಾದಿ ಪಾತ್ರಗಳನ್ನು ಮಾಡಬೇಕು ಎಂಬ ಸಲಹೆಯಂತೂ ಬಂದಿದೆ. ಹಾಗಂತ ದೇವರ ಪಾತ್ರ ಮಾಡಿದರೆ, ಕೇಸು ಕ್ಲಿಯರ್ ಆಗುತ್ತದೆ ಎಂದಿಲ್ಲ.



