ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದ ದಿನದಿಂದಲೂ ಸರ್ಕಾರಕ್ಕೆ ಕಾಡುತ್ತಿರುವುದು ಮಾಜಿ ಸಿಎಂ ಕುಮಾರಸ್ವಾಮಿ. 19 ಶಾಸಕರಷ್ಟೇ ಇದ್ದರೂ, ಸಿದ್ದರಾಮಯ್ಯ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿರುವುದು ಕುಮಾರಸ್ವಾಮಿ ಅನ್ನೋದರಲ್ಲಿ ಎರಡು ಮಾತಿಲ್ಲ. ಇಂತಹ ಕುಮಾರಸ್ವಾಮಿ ಅವರ ಮೇಲೆ ದೀಪಾವಳಿಯ ದಿನ ಕರೆಂಟ್ ಶಾಕ್ ಕೊಟ್ಟಿದೆ ಒಂದು ವಿಡಿಯೋ.
ಇಷ್ಟಕ್ಕೂ ನಡೆದದ್ದೇನು?
ದೀಪಾವಳಿ ಹಿನ್ನೆಲೆ ಜೆಪಿ ನಗರದಲ್ಲಿರುವ ಎಚ್‌ಡಿ ಕುಮಾರಸ್ವಾಮಿ ಅವರ ಮನೆಗೆ ದೀಪಾಲಂಕಾರ ಮಾಡುವ ಸಂದರ್ಭದಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆಯಲಾಗಿತ್ತು. ಮಾಜಿ ಸಿಎಂ ಕುಮಾರಸ್ವಾಮಿ ದೀಪಾವಳಿ ಹಬ್ಬಕ್ಕೆ ತಮ್ಮ ಮನೆಗೆ ವಿದ್ಯುತ್ ಲೈಟಿಂಗ್ಸ್ ಹಾಕಲು ಖಾಸಗಿ ಡೆಕೋರೇಟರ್ಸ್‌ಗೆ ಹೇಳಿದ್ದರು. ಆದರೆ, ಮನೆಗೆ ಅಲಂಕಾರ ಮಾಡಿದ್ದ ಲೈಟಿಂಗ್ಸ್‌ಗೆ ಕಂಬದಿಂದ ನೇರವಾಗಿ ಲೈನ್ ಎಳೆದು ವಿದ್ಯುತ್ ಸಂಪರ್ಕ ಮಾಡಿದ್ದರು. ಇದು ವಿಡಿಯೋ ಆಗಿ ಸಂಚಲನ ಸೃಷ್ಟಿಸಿತ್ತು. ಈ ಬಗ್ಗೆ ಸ್ವತಃ ಕುಮಾರಸ್ವಾಮಿ ಅವರು ತಪ್ಪಾಗಿರುವುದನ್ನು ಒಪ್ಪಿಕೊಂಡು ದಂಡ ಕಟ್ಟುವುದಾಗಿ ಹೇಳಿದ್ದರು.
ರಾಜಕೀಯ ಮಾರಾಮಾರಿ.. ಟ್ವೀಟ್ ಯುದ್ಧ
ಜಗತ್ತಿನ ಏಕೈಕ ಮಹಾಪ್ರಾಮಾಣಿಕ ಹೆಚ್.ಡಿ ಕುಮಾರಸ್ವಾಮಿಯವರ ಜೆ ಪಿ ನಗರದ ನಿವಾಸದ ದೀಪಾವಳಿಯ ದೀಪಾಲಂಕಾರಕ್ಕೆ ನೇರವಾಗಿ ವಿದ್ಯುತ್ ಕಂಬದಿಂದ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಒಬ್ಬ ಮಾಜಿ ಸಿಎಂ ಆಗಿ ವಿದ್ಯುತ್ ಕಳ್ಳತನ ಮಾಡುವ ದಾರಿದ್ರ್ಯ ಬಂದಿದ್ದು ದುರಂತ! ಹೆಚ್.ಡಿ. ಕುಮಾರಸ್ವಾಮಿ ಅವರೇ ನಮ್ಮ ಸರ್ಕಾರ ಗೃಹಜ್ಯೋತಿಯಲ್ಲಿ 200 ಯೂನಿಟ್ ಉಚಿತ ಕೊಡುತ್ತಿದೆಯೇ ಹೊರತು 2000 ಯೂನಿಟ್ ಅಲ್ಲ! ತಮಗೆ ಅಷ್ಟೊಂದು ದಾರಿದ್ರ್ಯ ಬಂದಿದ್ದರೆ ಗೃಹಜ್ಯೋತಿ ಯೋಜನೆಗೆ ಒಂದು ಅರ್ಜಿ ಹಾಕಬಹುದಿತ್ತಲ್ಲ. ಒಹ್, ತಿಳಿದಿರಲಿಲ್ಲ ಗೃಹಜ್ಯೋತಿಯಲ್ಲಿ ಒಬ್ಬರಿಗೆ ಒಂದೇ ಮೀಟರ್ ಗೆ ಅವಕಾಶವಿದೆ, ತಮ್ಮ ಹೆಸರಲ್ಲಿ ಹಲವು ಮೀಟರ್ ಗಳಿವೆಯಲ್ಲವೇ ಎಂದು ಲೇವಡಿ ಮಾಡಿದೆ. ರಾಜ್ಯ ಸರ್ಕಾರದ ವಿರುದ್ಧ ʻಕರ್ನಾಟಕ ಕತ್ತಲಲ್ಲಿದೆʼ ಎಂದು ಟೀಕಿಸಿದ್ದನ್ನೂ ಅದೇನೋ ಪತ್ರಿಕಾಗೋಷ್ಠಿ ನಡೆಸಿ “ಕರ್ನಾಟಕ ಕತ್ತಲಲ್ಲಿದೆ“ ಎನ್ನುತ್ತಾ ಬಡಬಡಿಸಿದ್ದಿರಲ್ಲವೇ, ಈಗ ಕದ್ದ ವಿದ್ಯುತ್ತಿನಲ್ಲಿ ನಿಮ್ಮ ಮನೆಗೆ ಬೆಳಕು ಮಾಡಿಕೊಂಡಿದ್ದೀರಿ, ನಿಮ್ಮ ಮನೆ ಹೀಗೆ ಜಗಮಗ ಹೊಳೆಯುತ್ತಿರುವಾಗ ಅದ್ಯಾವ ಬಾಯಲ್ಲಿ ಕರ್ನಾಟಕ ಕತ್ತಲಲ್ಲಿದೆ ಎನ್ನುವಿರಿ ಸ್ವಾಮಿ? ಎಂದು ಝಾಡಿಸಿದೆ.
ಕುಮಾರಸ್ವಾಮಿ ಉತ್ತರ ಹೀಗಿತ್ತು..!


ಬೆಸ್ಕಾಂ ಅಧಿಕಾರಿಗಳಿಂದ ತಕ್ಷಣ ಎಫ್‌ಐಆರ್
ಅಕ್ರಮ ವಿದ್ಯುತ್ ಸಂಪರ್ಕ ಪಡೆದುಕೊಳ್ಳುವುದು ಕಾನೂನು ಬಾಹಿರ. ಈ ಹಿನ್ನೆಲೆಯಲ್ಲಿ 2003 ರ ವಿದ್ಯುತ್ ಕಾಯ್ದೆಯ ಸೆಕ್ಷನ್ 135 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಸ್ಕಾಂ ಅಧಿಕಾರಿಯೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ಜಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕಾಯ್ದೆಯಡಿ ದಂಡ ಕಟ್ಟುವುದು ಅಥವಾ 6 ತಿಂಗಳ ಜೈಲು ಶಿಕ್ಷೆ ವಿಧಿಸುವುದಕ್ಕೂ ಅವಕಾಶ ಇದೆ. ಎರಡು ಶಿಕ್ಷೆಯನ್ನೂ ವಿಧಿಸಬಹುದು. ಸದ್ಯ ಸ್ವತಃ ಮಾಜಿ ಸಿಎಂ ಕುಮಾರಸ್ವಾಮಿ ಅವರೇ ತಪ್ಪಾಗಿರುವುದನ್ನು ಒಪ್ಪಿಕೊಂಡಿರುವ ಕಾರಣಕ್ಕೆ ದಂಡದಲ್ಲಿಯೇ ಪ್ರಕರಣ ಮುಕ್ತಾಯವಾಗುವ ಸಾಧ್ಯತೆ ಇದೆ.
ಜೆಡಿಎಸ್ ಕಚೇರಿ ಮೇಲೆ ಕರೆಂಟ್ ಕಳ್ಳ ಪೋಸ್ಟರ್





