ಗೃಹಜ್ಯೋತಿ ವಿದ್ಯುತ್ ಫ್ರೀ ಎಂದು ಖುಷಿಯಲ್ಲಿದ್ದವರಿಗೆ ದಿಢೀರ್ ಶಾಕ್ ಬಂದಿದೆ. ರಾಜ್ಯಾದ್ಯಂತ ವಿದ್ಯುತ್ ಬಿಲ್ ಯರ್ರಾಬಿರ್ರಿ ಬರುತ್ತಿದ್ದು, ಯದ್ವಾತದ್ವಾ ಏರಿಕೆ ಯಾಗಿದೆ. ಇದಕ್ಕೆ ಕಾರಣವೇನು ಎಂದು ಹುಡುಕಹೊರಟಾಗ ಒಂದೊಂದೇ ಅಂಶಗಳು ಬೆಳಕಿಗೆ ಬರುತ್ತಿವೆ.
ಕಾರಣ ನಂ.1 : ಬಿಜೆಪಿ ಸರ್ಕಾರ ಮತ್ತು ಏಪ್ರಿಲ್`ನಿಂದಲೇ ಪೂರ್ವಾನ್ವಯವಾಗುವಂತೆ ಬಿಲ್ ನೀಡಿರುವುದು. ಈಗ ಬಂದಿರುವ ಬಿಲ್`ನಲ್ಲಿ ಏಪ್ರಿಲ್ ಮತ್ತು ಮೇ ತಿಂಗಳ ಕರೆಂಟ್ ವೆಚ್ಚವೂ ಸೇರಿದೆ.
ದರ ಹೆಚ್ಚಳದ ಕಾರಣ, ಈವರೆಗೂ ತಿಂಗಳಿಗೆ 500ರಿಂದ 600 ರು. ಬಿಲ್ ಬರುವ ಮನೆಗಳಿಗೆ ಈ ಬಾರಿ ಏಕಾಏಕಿ 1300 ರು. ಬಂದಿದೆ. ಇನ್ನು ಕೆಲವರಿಗೆ ತಿಂಗಳಿಗೆ ಸರಾಸರಿ 1000 ರು. ಬರುತ್ತಿದ್ದ ವಿದ್ಯುತ್ ಬಿಲ್ 2500 ರು.ವರೆಗೆ ಬಂದಿದೆ. ಜತೆಗೆ ಮಾಮೂಲಿಗಿಂತ ಹೆಚ್ಚಿನ ಪ್ರಮಾಣದ ಯೂನಿಟ್ ವಿದ್ಯುತ್ ಬಳಕೆ ಮಾಡಿರುವುದು ಬಿಲ್ನಲ್ಲಿ ತೋರಿಸಲಾಗಿದೆ. ಹೀಗಾಗಿ ಏಕಾಏಕಿ ಇಷ್ಟೊಂದು ದೊಡ್ಡ ಮೊತ್ತದ ಬಿಲ್ ಬಂದಿರುವುದನ್ನು ನೋಡಿ ಹೌಹಾರಿರುವ ಗ್ರಾಹಕರು ವಿದ್ಯುತ್ ಸರಬರಾಜು ಕಂಪನಿ (ಎಸ್ಕಾಂ) ಮತ್ತು ಸರ್ಕಾರಕ್ಕೆ ಹಿಡಿಶಾಪ ಹಾಕತೊಡಗಿದ್ದಾರೆ. ಕಳೆದ ಬಿಜೆಪಿ ಸರ್ಕಾರದ ಕೊನೆಯಲ್ಲಿ, ಅಂದರೆ ಮೇ 12ರಂದು ರಾಜ್ಯ ವಿಧಾನಸಭೆ ಚುನಾವಣೆಯ ಮತ ಎಣಿಕೆಯ ಮುನ್ನಾದಿನ ಎಸ್ಕಾಂಗಳು ವಿದ್ಯುತ್ ದರ ಏರಿಕೆ ಮಾಡಿದ್ದವು. ಅದು ಏಪ್ರಿಲ್ನಿಂದ ಪೂರ್ವಾನ್ವಯವಾಗಿದೆ. ಆ ಎರಡೂ ತಿಂಗಳ ಏರಿಕೆಯ ಮೊತ್ತವನ್ನು ಜೂನ್ನಲ್ಲಿ ನೀಡಿರುವ ಬಿಲ್ನಲ್ಲಿ ಸೇರಿಸಲಾಗಿದೆ. ಅದರ ಪರಿಣಾಮ ಬಿಲ್ ಮೊತ್ತ ಯದ್ವಾತದ್ವಾ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.
ಹೀಗಾಗಿ ಎರಡು ತಿಂಗಳ ಬಿಲ್ಲಿನಲ್ಲಿ ಮೇ ತಿಂಗಳ ಬಿಲ್ಲಿನ ಹೆಚ್ಚುವರಿ ಮೊತ್ತವನ್ನೂ ಕೂಡಾ ಸೇರಿಸಿ ಬಿಲ್ ನೀಡಲಾಗಿದೆ. ಜೊತೆಗೆ ಹೆಚ್ಚಿನ ದರ.
ಕಾರಣ ನಂ.2 : ಯುನಿಟ್`ಗೆ 71 ಪೈಸೆ ಏರಿಕೆ. ಸ್ಲಾಬ್ ಹಂಚಿಕೆ ಎರಡೇ ಸ್ಲಾಬ್`ಗಳಿಗೆ ಇಳಿಕೆ
ಪ್ರತಿ ಯೂನಿಟ್ಗೆ 70 ಪೈಸೆ ಹೆಚ್ಚಿಸಿದರೆ ಅಥವಾ ನಿಗದಿತ ಶುಲ್ಕ ಹೆಚ್ಚಿಸಿದರೂ ಇಷ್ಟೊಂದು ಬಿಲ್ ಬರಲು ಸಾಧ್ಯವೇ ಇಲ್ಲ. ಸಾಮಾನ್ಯವಾಗಿ ದರ ಹೆಚ್ಚಳ ಮಾಡಿದ ಸಂದರ್ಭದಲ್ಲಿ ಪ್ರತಿ ತಿಂಗಳು 100-200 ರು. ಮಾತ್ರ ಹೆಚ್ಚಾಗುತ್ತಿತ್ತು. ಆದರೆ ಎಂದೂ ಕೂಡಾ ಈ ಪ್ರಮಾಣದಲ್ಲಿ ಬಿಲ್ ಬಂದಿರಲಿಲ್ಲ. ಕಳೆದ ಏಪ್ರಿಲ್ನಲ್ಲಿ ಮನೆಯಲ್ಲಿ ವಿಶೇಷ ಕಾರ್ಯಕ್ರಮ ಇದ್ದಾಗ 190 ಯೂನಿಟ್ ಬಳಸಿರುವ ಬಿಲ್ ಬಂದಿತ್ತು. ಆದರೆ ಮೇ ತಿಂಗಳಲ್ಲಿ ಮನೆಯಲ್ಲಿ ಕೇವಲ ಮೂರು ಜನರಿದ್ದರೂ 200 ಯೂನಿಟ್ಗಿಂತ ಹೆಚ್ಚು ಬಳಕೆ ಮಾಡಿರುವ ಬಿಲ್ ಬಂದಿದೆ. ಇದು ಸಾರ್ವಜನಿಕರ ಆಕ್ರೋಶ. ಆದರೆ ಮೊದಲು 0-50 ಹಾಗೂ 51-100 ಹಾಗೂ 101-200 ಹೀಗೆ.. ಸ್ಲಾಬ್`ಗಳಿರುತ್ತಿದ್ದವು. ಯುನಿಟ್ ಬೆಲೆಯನ್ನು ನೀವು ಬಳಸಿದಂತೆ ಮಿತಿ ದಾಟಿದ ಮೇಲಿನ ಲೆಕ್ಕಕ್ಕೆ ಸೇರಿಸಲಾಗುತ್ತಿತ್ತು. ಅಂದರೆ 0-50ರ ಮಿತಿಯಲ್ಲಿದ್ದರೆ ಒಂದು ದರ. 50ರ ಗಡಿ ದಾಟಿದ ಮೇಲೆ ಎಷ್ಟು ಯುನಿಟ್ ಹೆಚ್ಚು ಬಳಸಿದ್ದಾರೋ.. ಅಂದರೆ 75 ಯುನಿಟ್ ಬಳಸಿದ್ದರೆ 25 ಯುನಿಟ್`ಗಳಿಗೆ ಹೆಚ್ಚವರಿ ದರ ವಿಧಿಸಲಾಗುತ್ತಿತ್ತು. ಆದರೆ ಈ ಬಾರಿ 100 ಯುನಿಟ್ ದಾಟಿದವರಿಗೆ ಹೋಲ್ ಸೇಲಾಗಿ 7 ರೂ. ದರ ವಿಧಿಸಲಾಗಿದೆ. ಇದೂ ಕೂಡಾ ಒಂದು ಕಾರಣ ಎನ್ನಲಾಗಿದೆ.



