ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಆರೋಪ ಮಾಡುತ್ತಿರುವ, ಪ್ರತೀ ದಿನ ಮೀಡಿಯಾಗಳ ಮೈಕ್ ಎದುರು ಬೊಬ್ಬಿರಿಯುತ್ತಿರುವ ಯತ್ನಾಳ್ ಅವರ ಪ್ರಮುಖ ಆರೋಪ ಏನೆಂದರೆ ವಿಜಯೇಂದ್ರ ಹೊಂದಾಣಿಕೆ ರಾಜಕೀಯ ಮಾಡ್ತಾರೆ ಎನ್ನುವುದು. ವಿಶೇಷ ಏನೆಂದರೆ ಯತ್ನಾಳ್ ಬಣದಲ್ಲಿರುವ ಕೆಲವು ನಾಯಕರು ಉದಾಹರಣೆಗೆ ಪ್ರತಾಪ್ ಸಿಂಹ, ಸಿಟಿ ರವಿ ಮೊದಲಾದವರೂ ಪರೋಕ್ಷವಾಗಿ ಇದೇ ಆರೋಪ ಮಾಡ್ತಾರೆ. ಇದಕ್ಕೆ ಉತ್ತರ ಕೊಟ್ಟಿರುವ ರೇಣುಕಾಚಾರ್ಯ ಯತ್ನಾಳ್ ವಿರುದ್ಧವೇ ಹೊಂದಾಣಿಕೆ ರಾಜಕೀಯದ ಆರೋಪ ಮಾಡಿದ್ದಾರೆ.
ʻʻಬಬಲೇಶ್ವರ ನಿನ್ನ ಕ್ಷೇತ್ರ. ತಾಕತ್ತಿದ್ದರೆ ಅಲ್ಲಿಂದ ಸ್ಪರ್ಧೆ ಮಾಡು. ಅದನ್ನು ಬಿಟ್ಟು ಪ್ರಭಾವಿ ಸಚಿವರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೀಯ. ಕುಟುಂಬ ರಾಜಕಾರಣ ಅಂತ ಮಾತನಾಡುತ್ತೀಯ ನಿನ್ನ ಮಕ್ಕಳನ್ನ ಸರ್ಕಾರಿ ಕಾರ್ಯಕ್ರಮದಲ್ಲಿ ಕರೆ ತರ್ತೀಯಾ. ಈ ತಿಂಗಳು 12 ತಾರೀಖು ಸಭೆ ನಿಯೋಜನೆ ಮಾಡಿದ್ವಿ. ಆದರೆ, ಅಧ್ಯಕ್ಷರು ಬೇಡ ಅಂದ್ರು ಅದಕ್ಕೆ ಸುಮ್ಮನೆ ಆದ್ವಿ. ನಾವು ಪಕ್ಷಕ್ಕೆ ಅಧ್ಯಕ್ಷರಿಗೆ ಗೌರವ ನೀಡ್ತೀವಿʼʼ ಎಂದಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಓಡಾಡಿದವರಿಗೆ ಈ ಆರೋಪದ ಮಾತು ಸಹಜವಾಗಿಯೇ ಕಿವಿಗೆ ಬೀಳುತ್ತದೆ. ವಿಜಯಪುರದಲ್ಲಿ ಬಬಲೇಶ್ವರ ಪ್ರಮುಖ ಕ್ಷೇತ್ರ. ಆ ಕ್ಷೇತ್ರದಿಂದ ಶಾಸಕರಾಗಿರುವುದು ಎಂಬಿ ಪಾಟೀಲ್. ಈಗ ಸಚಿವರೂ ಹೌದು. ಇವರಷ್ಟೇ ಅಲ್ಲದೆ ಕಾಂಗ್ರೆಸ್ಸಿನ ಹಲವು ನಾಯಕರ ಜೊತೆ ಯತ್ನಾಳ್ ಅವರಿಗೆ ಉತ್ತಮ ಬಾಂಧವ್ಯ ಇದೆ. ಹೀಗಾಗಿಯೇ ಅವರು ಯತ್ನಾಳ್ ಅವರನ್ನು ಗೆಲ್ಲುವಂತೆ ನೋಡಿಕೊಳ್ತಾರೆ. ಏಕೆಂದರೆ ಯತ್ನಾಳ್ ಎಷ್ಟು ಹಿಂದೂಪರ ಮತ್ತು ಮುಸ್ಲಿಮರ ವಿರುದ್ಧ ಮಾತನಾಡುತ್ತಾರೋ.. ಅಷ್ಟರ ಮಟ್ಟಿಗೆ ತಮ್ಮ ಮತಬ್ಯಾಂಕ್ ಗಟ್ಟಿ ಎನ್ನುವುದು ಅವರ ಲೆಕ್ಕಾಚಾರ. ಯತ್ನಾಳ್ ಅವರನ್ನು ಸೋಲಿಸಿಬಿಟ್ಟರೆ ತಮ್ಮ ಮತಬ್ಯಾಂಕ್ ಅಲುಗಾಡಬಹುದು ಎಂಬ ಆತಂಕ ಅವರದ್ದು. ಇದರ ಜೊತೆಗೆ ಯತ್ನಾಳ್ ಅವರು ಎಲ್ಲರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಆರೋಪಗಳಿವೆ. ಇದಕ್ಕೆ ತಕ್ಕಂತೆ ಇದೀಗ ರೇಣುಕಾಚಾರ್ಯ ಮಾತನಾಡಿದ್ದಾರೆ.
ಯತ್ನಾಳ್ ಅವರನ್ನಷ್ಟೇ ಅಲ್ಲ, ಕುಮಾರ್ ಬಂಗಾರಪ್ಪ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಕುಮಾರ್ ಬಂಗಾರಪ್ಪ ನೀನು ಕಾಂಗ್ರೆಸ್ ನಲ್ಲಿ ಅನಾಥ ಶಿಶು ಆಗಿದ್ದೆ. ನಿನಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದು ಯಡಿಯೂರಪ್ಪ ಅವರು. ನಿನ್ನ ಕ್ಷೇತ್ರದಲ್ಲಿ ಪಕ್ಷ ಏನು ಸಂಘಟನೆ ಮಾಡಿದ್ದೀಯಾ? ನೀನು ರಾಜ್ಯಾಧ್ಯಕ್ಷರ ಬದಲಾವಣೆ ಆಗುತ್ತೆ ಅಂತ ಹೇಳ್ತೀಯಾ. ನೀನೇನು ಪಕ್ಷದ ರಾಷ್ಟ್ರೀಯ ಅಧ್ಯಕ್ಷನಾ?. ಮಿಸ್ಟರ್ ಕುಮಾರ್ ಬಂಗಾರಪ್ಪ ನಿನಗೆ ತಾಖತ್ ಇದ್ರೆ ರಾಜ್ಯ ನಾಯಕರು ಬದಲಾವಣೆ ಮಾಡಲಿ ನೋಡೋಣ ಎಂದು ಕುಮಾರ್ ಬಂಗಾರಪ್ಪ ವಿರುದ್ಧವೂ ಗುಡುಗಿದ್ದಾರೆ.
ಇನ್ನು ಗೋವಿಂದ ಕಾರಜೋಳ ಇನ್ನು ಮುಂದೆ ಯತ್ನಾಳ್ ಹಾಗೂ ಬಿವೈ ವಿಜಯೇಂದ್ರ ಒಟ್ಟಾಗಿ ಮುಂದೆ ಸಾಗುತ್ತಾರೆ ಎಂದು ಹೇಳಿದ್ಧಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಯತ್ನಾಳ್ ಬಣದವರು ಹಾಗೂ ವಿಜಯೇಂದ್ರ ಎಲ್ಲರೂ ಸೇರಿ ಒಗ್ಗಟ್ಟಾಗಿ ಕಾಂಗ್ರೆಸ್ ವಿರುದ್ಧ ಹೋರಾಡಲಿದ್ದಾರೆ. ನಮ್ಮ ಗುರಿ ಏನೇ ಇದ್ದರು ಕಾಂಗ್ರೆಸ್ ವಿರುದ್ಧ ಹೋರಾಡೋದು. ಇನ್ನು ಮುಂದೆ ಬಿವೈ ವಿಜಯೇಂದ್ರ-ಯತ್ನಾಳ್ ಜೊತೆಯಾಗಿ ಹೋಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.



