ದರ್ಶನ್ ಅಭಿಮಾನಿಗಳ ಸಹವಾಸ ಬೇಡಪ್ಪ ಬೇಡ.. ಎಂದು ಚಿತ್ರರಂಗದ ಸ್ಟಾರ್ ನಟರೇ ಸುಮ್ಮನಿರುತ್ತಾರೆ. ದರ್ಶನ್ ವಿಷಯದಲ್ಲೂ ಅಷ್ಟೇ.. ನೋ ರಿಯಾಕ್ಷನ್. ದರ್ಶನ್ ತಮ್ಮ ಬಗ್ಗೆ ಯಾರಾದರೂ ಏನಾದರೂ ಮಾತನಾಡಿದರೆ, ಹೊಲಸು ಭಾಷೆಯಲ್ಲಿ ಬೈತಾರೆ, ಸೊಂಟದ ಕೆಳಗಿನ ಭಾಷೆಯನ್ನೇ ಬಳಸ್ತಾರೆ ಅನ್ನೋದು ಚಿತ್ರರಂಗದವರ ಅನುಭವದ ಮಾತು. ಹೀಗಾಗಿ ದರ್ಶನ್ ಪರವಾಗಿಯಾಗಲೀ, ವಿರುದ್ಧವಾಗಿಯಾಗಲೀ.. ಏನೊಂದೂ ಮಾತನಾಡಲ್ಲ. ಒಂದು ಸೇಫ್ ಝೋನ್‌ನಲ್ಲಿರುತ್ತಾರೆ. ಅಂತರ ಕಾಯ್ದುಕೊಳ್ತಾರೆ. ಇದು ವಾಸ್ತವ.
ಅಂತಹ ವ್ಯಕ್ತಿತ್ವದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕೊಲೆ ಆರೋಪದಲ್ಲಿ ಜೈಲು ಸೇರಿದ್ದಾಗಿದೆ. ಜಾಮೀನು ಸಿಕ್ಕುವುದು ಯಾವಾಗಲೋ.. ಗೊತ್ತಿಲ್ಲ. ಜೈಲಿನ ಒಳಗೆ ದರ್ಶನ್ ವರ್ತನೆ ಅತಿರೇಕಕ್ಕೆ ಹೋಗಿತ್ತು. ರೌಡಿಗಳ ಜೊತೆ ಬಿಂದಾಸ್ ಆಗಿದ್ದ ದರ್ಶನ್, ಅದೇ ಕಾರಣಕ್ಕೆ ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ. ಇದು ದರ್ಶನ್ ಕಥೆಯಾದರೆ, ದರ್ಶನ್ ಅಭಿಮಾನಿಗಳ ಕಥೆಯೇ ಬೇರೆ.
ಜೈಲಿನ ಹೊರಗೆದರ್ಶನ್ರ ಅಭಿಮಾನಿಗಳು, ದರ್ಶನ್ ಜೈಲು ಸೇರಿದಾಗಿನಿಂದಲೂ ಇತರೆ ನಟ, ನಟಿಯರಿಗಷ್ಟೇ ಅಲ್ಲ, ದರ್ಶನ್ ಅವರನ್ನು ವಿರೋಧಿಸುವವರಿಗೂ ಕೆಟ್ಟದಾಗಿ ನಿಂದಿಸುವುದು, ಸೊಂಟದ ಕೆಳಗಿನ ಭಾಷೆ ಬಳಸಿ ಬೈಯ್ಯುವುದು, ಮಹಿಳೆಯರನ್ನು ನಿಂದಿಸುವುದು ನಡೆಯುತ್ತಲೇ ಇದೆ. ಇದೀಗ ದರ್ಶನ್ ಅಭಿಮಾನಿಗಳು ಡಿ ಬಾಸ್ ಎಂದು ಕೂಗಬೇಡಿ ಎಂದ ವ್ಯಕ್ತಿಯೊಬ್ಬರ ಕುತ್ತಿಗೆಗೇ ಚಾಕು ಹಾಕಿ ಸುದ್ದಿಯಾಗಿದ್ದಾರೆ.
ಇಂತಹ ಘಟನೆ ನಡೆದಿರುವುದು ರಾಮನಗರದಲ್ಲಿ, ದರ್ಶನ್ ಅಭಿಮಾನಿಗಳಿಗೆ ಬುದ್ಧಿ ಹೇಳಿದ್ದ ವೆಂಕಟಸ್ವಾಮಿ ಎಂಬ ವ್ಯಕ್ತಿಯೇ ಚಾಕು ಹಾಕಿಸಿಕೊಂಡವರು. ಜೀವಕ್ಕೆ ಅಪಾಯವಿಲ್ಲ ಎಂದು ಡಾಕ್ಟರ್ ಹೇಳಿದ್ದರೂ, ಸದ್ಯಕ್ಕೆ ಆಸ್ಪತ್ರೆಯಲ್ಲಿ ಟ್ರೀಟ್ ಮೆಂಟಿನಲ್ಲಿದ್ದಾರೆ.
ರಾಮನಗರದ ಸೂಲಿಕೆರೆಪಾಳ್ಯದ ಕಟ್ಟಡವೊಂದರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆ ಕಟ್ಟಡದ ಮೇಸ್ತ್ರಿಯಾಗಿದ್ದ ವೆಂಕಟಸ್ವಾಮಿ, ಕಟ್ಟಡದ ಬಳಿಯೇ ಶೆಡ್ ಹಾಕಿಕೊಂಡಿದ್ದರು. ಶುಕ್ರವಾರ ರಾತ್ರಿ ಸುಮಾರು 8 ಗಂಟೆ ವೇಳೆಗೆ ಆರೋಪಿಗಳು ಷೆಡ್ ಬಳಿ ದರ್ಶನ್ ಬಗ್ಗೆ ಡ್ರಿಂಕ್ಸ್ ಮಾಡಿಕೊಂಡು ಮಾತನಾಡುತ್ತಿದ್ದರು. ಮಾತನಾಡುತ್ತಾ ಮಾತನಾಡುತ್ತಾ.. ಕುಡಿತದ ಅಮಲಿನಲ್ಲಿ ಏಕಾ-ಏಕಿ ‘ಡಿ-ಬಾಸ್’ ‘ಡಿ-ಬಾಸ್’ ಜೈ ಡಿ-ಬಾಸ್ ಎಂದೆಲ್ಲ ಘೋಷಣೆ ಕೂಗೋಕೆ ಶುರು ಮಾಡಿಬಿಟ್ರು. ಆಗ ಷೆಡ್ನಲ್ಲಿ ಮಲಗಿದ್ದ ವೆಂಕಟಸ್ವಾಮಿ, ಯಾಕೆ ಹೀಗೆ ಕೂಗುತ್ತೀರ, ಇಲ್ಲೆಲ್ಲ ಮನೆಗಳಿವೆ, ಬೇರೆ ಕಡೆ ಹೋಗಿ ಎಂದು ಹೇಳಿದ್ದಾರೆ… ಅಷ್ಟೇ..
‘ಏನೋ ದರ್ಶನ್ ಬಗ್ಗೆ ಮಾತನಾಡುತ್ತೀಯ? ದರ್ಶನ್ ಬಗ್ಗೆ ನಿಂಗೇನೋ ಗೊತ್ತು.. ದರ್ಶನ್ ಬಗ್ಗೆ ಮಾತನಾಡಬೇಡಿ ಅನ್ನೋವಷ್ಟು ಕೊಬ್ಬಾ ನಿಂಗೆ.. ಸೂ..ಮಗನೇ.. ಬೋ..ಮಗನೇ ಎಂದೆಲ್ಲ ಬೈಯ್ಯುತ್ತಾ ಹಲ್ಲೆ ಮಾಡಿಬಿಟ್ರು. ಮಲಗಿದ್ದ ವೆಂಕಟಸ್ವಾಮಿಯನ್ನು ಹೊರಗೆ ಎಳೆದುಕೊಂಡು ಬಂದು ಹೊಡೆಯೋಕೆ ಶುರು ಮಾಡಿದ್ರು.
ಕಿರಣ್ ಎಂಬ ದರ್ಶನ್ ಅಭಿಮಾನಿ ಚಾಕು ತೆಗೆದುಕೊಂಡು ವೆಂಕಟಸ್ವಾಮಿಯ ಕತ್ತಿಗೇ ಚುಚ್ಚಿಬಿಟ್ಟ. ಮಹದೇವ ಎಂಬ ಇನ್ನೊಬ್ಬ ದರ್ಶನ್ ಅಭಿಮಾನಿ, ವೆಂಕಟಸ್ವಾಮಿ ಮೂಳೆ ಮುರಿಯುವಂತೆ ಹೊಡೆದ. ಕುತ್ತಿಗೆಯ ಬಳಿ ರಕ್ತ ಸುರಿಯುತ್ತಿದ್ದರೂ ಅದರ ಪರಿವೆಯೇ ಇರಲಿಲ್ಲ. ಅದೃಷ್ಟವಶಾತ್ ಅಷ್ಟೊತ್ತಿಗೆ ಅಲ್ಲಿಗೆ ಬಂದ ಕಾಳಯ್ಯ ಎಂಬ ವ್ಯಕ್ತಿ ಜಗಳ ಬಿಡಿಸಿ, ಕುತ್ತಿಗೆ ಗಾಯಗೊಂಡು ರಕ್ತಸ್ರಾವವಾಗಿದ್ದ ವೆಂಕಟಸ್ವಾಮಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ತುರ್ತು ಚಿಕಿತ್ಸೆ ದೊರೆತ ಕಾರಣ, ವೆಂಕಟಸ್ವಾಮಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆ ಬಳಿಕ ಆರೋಪಿಗಳಾದ ಕಿರಣ್ ಹಾಗೂ ಮಹದೇವ್ ಇಬ್ಬರು ಪರಾರಿಯಾಗಿದ್ದಾರೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಹಿಂದೆಯೂ ದರ್ಶನ್ ಅಭಿಮಾನಿಗಳಿಂದ ಇಂತಹ ವರ್ತನೆಗಳು ಜರುಗಿದ್ದವು. ಹಿರಿಯ ನಟ ಜಗ್ಗೇಶ್, ದರ್ಶನ್ ಅವರ ಸಿನಿಮಾ ನಿರ್ಮಾಣ ಮಾಡಿದ್ದ ಉಮಾಪತಿ ಶ್ರೀನಿವಾಸ್ ಕೂಡಾ ದರ್ಶನ್ ಅಭಿಮಾನಿಗಳಿಂದ ಇದೇ ರೀತಿಯ ನಿಂದನೆಗೆ ಗುರಿಯಾಗಿದ್ದರು. ಅಷ್ಟೇ ಅಲ್ಲ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷ್ಯ ಹೇಳಿದರು ಎಂಬ ಕಾರಣಕ್ಕೆ, ಸಾಕ್ಷಿಯೊಬ್ಬರಿಗೆ ಬೆದರಿಕೆ ಹಾಕಿ, ಎನ್‌ಸಿಆರ್ ಕೂಡಾ ದಾಖಲಾಗಿದೆ. ವಿಚಿತ್ರ ಎಂದರೆ ಇದೆಲ್ಲ ಘಟನೆಗಳೂ ದರ್ಶನ್ ಅವರಿಗೆ ಜಾಮೀನು ಸಿಗುವುದಕ್ಕೆ ಅಡ್ಡಿಯಾಗಲಿವೆ ಎನ್ನುವುದು ಕಾನೂನು ತಜ್ಞರ ಅಭಿಪ್ರಾಯ.
ಏಕೆಂದರೆ ದರ್ಶನ್ ವಿರುದ್ಧ ಕೋರ್ಟಿಗೆ ಸಲ್ಲಿಸಿದ ಪ್ರತೀ ರಿಪೋರ್ಟ್ ಕಾರ್ಡಿನಲ್ಲೂ ದರ್ಶನ್ ತಮ್ಮ ಅಭಿಮಾನಿಗಳ ಮೂಲಕ ಸಾಕ್ಷಿಗಳನ್ನು ಬೆದರಿಸಬಹುದು ಎಂಬ ಮಾತನ್ನು ಪೊಲೀಸರು ಹೇಳುತ್ತಲೇ ಬಂದಿದ್ದಾರೆ. ಇನ್ನು ದರ್ಶನ್ ತಾನೆಷ್ಟು ಪ್ರಭಾವಿ ಅನ್ನೋದನ್ನು ಜೈಲಿನಲ್ಲಿಯೇ ದರ್ಬಾರ್ ಮಾಡಿ ಸಾಬೀತು ಮಾಡಿದ್ದಾರೆ. ಅದಕ್ಕೆ ತಕ್ಕಂತೆ ದರ್ಶನ್ ಅಭಿಮಾನಿಗಳ ಈ ರೀತಿಯ ವರ್ತನೆ, ಅತಿರೇಕಗಳು ದರ್ಶನ್ ಅವರು ಜಾಮೀನು ಪಡೆಯುವುದಕ್ಕೆ ಅಡ್ಡಿಯಾಗುವ ಸಾಧ್ಯತೆಗಳೇ ಹೆಚ್ಚು.



